ಆಕರ್ಷಣೆ : Art of love #2

ಗಂಡಸಿಗೆ ಆಕರ್ಷಕ ಹೆಣ್ಣು ಮತ್ತು ಹೆಣ್ಣಿಗೆ ಆಕರ್ಷಕ ಗಂಡು ಅವರ ಅತ್ಯಂತ ಆಪ್ತ ಬಹುಮಾನ. “ಆಕರ್ಷಕ” ಎಂದರೆ ವ್ಯಕ್ತಿತ್ವಗಳ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮತ್ತು ಅತ್ಯಂತ ಬೇಡಿಕೆಯಲ್ಲಿರುವ ಅತ್ಯುತ್ತಮ ಗುಣಲಕ್ಷಣಗಳ ಪ್ಯಾಕೇಜ್. ಒಬ್ಬ ವ್ಯಕ್ತಿ ಆಕರ್ಷಕ ಹೌದೋ ಅಲ್ಲವೋ ಎನ್ನುವುದನ್ನ ಆಯಾ ಕಾಲದ ಫ್ಯಾಶನ್ ನಿರ್ಧಾರ ಮಾಡುತ್ತದೆ, ದೈಹಿಕ ಮತ್ತು ಮಾನಸಿಕ ಎರಡೂ ಮಾನದಂಡಗಳಲ್ಲಿ… ~ Erich Fromm | ಕನ್ನಡಕ್ಕೆ: ಚಿದಂಬರ ನರೇಂದ್ರ

Is Love an Art ? – 2

ಪ್ರೀತಿಸುವುದಕ್ಕೆ ಯಾವ ಕಲಿಕೆಯ ಅವಶ್ಯಕತೆಯಿಲ್ಲ ಎನ್ನುವ ಜನರ ತಿಳುವಳಿಕೆಯ ಹಿಂದಿರುವ ಇನ್ನೊಂದು ಆಧಾರ ಎಂದರೆ, ಪ್ರೀತಿಯ ಸಮಸ್ಯೆ ಪ್ರೀತಿಸಲ್ಪಡುವ ವ್ಯಕ್ತಿಯ ಸಮಸ್ಯೆಯೇ ಹೊರತು ಪ್ರೀತಿಸುವವನ ಸಮಸ್ಯೆ ಅಲ್ಲ ಎನ್ನುವ ಖಚಿತ ಅನಿಸಿಕೆ. ಜನರ ಪ್ರಕಾರ ಪ್ರೀತಿ ತುಂಬ ಸರಳ, ಆದರೆ ಪ್ರೀತಿಸುವುದಕ್ಕೆ ಸರಿಯಾದ ವ್ಯಕ್ತಿಯ ಹುಡುಕಾಟ ಅಥವಾ ತಮ್ಮನ್ನು ಪ್ರೀತಿಸುವುದಕ್ಕೆ ಅರ್ಹರಾದ ವ್ಯಕ್ತಿಯ ಶೋಧ ತುಂಬ ಕಠಿಣ ಎನ್ನುವ ನಂಬಿಕೆ. ಜನಗಳ ಈ ತಿಳುವಳಿಕೆ, ಅನಿಸಿಕೆ, ನಂಬಿಕೆಗೆ ಆಧುನಿಕ ಸಮಾಜದ ಬೆಳವಣಿಗೆಯಲ್ಲೇ ಬೇರುಗಳನ್ನು ಗುರುತಿಸಬಹುದು.

ಒಂದು ಪ್ರಮುಖ ಕಾರಣ, ಇಪ್ಪತ್ತನೇ ಶತಮಾನದಲ್ಲಿ “ಪ್ರೀತಿಸಲ್ಪಡುವ ವ್ಯಕ್ತಿಯ” ಆಯ್ಕೆಯ ಪ್ರಕ್ರಿಯೆಯಲ್ಲಿ ನಡೆದ ಪ್ರಮುಖ ಬದಲಾವಣೆ. ವಿಕ್ಟೋರಿಯನ್ ಯುಗದಲ್ಲಿ, ಬೇರೆ ಎಲ್ಲ ಸಾಂಪ್ರದಾಯಿಕ ಸಂಸ್ಕೃತಿಗಳಲ್ಲಿದ್ದಂತೆ, ಪ್ರೀತಿ ಬಹುತೇಕ ಮುಂದೆ ಮದುವೆಯಲ್ಲಿ ಕೊನೆಗೊಳ್ಳಬಹುದಾದ ತಕ್ಷಣದ ಸ್ವಯಂಪ್ರೇರಿತ (spontaneous) ವೈಯಕ್ತಿಕ ಅನುಭವ ಅಲ್ಲ. ಬದಲಾಗಿ ಮದುವೆ ಎರಡು ಕುಟುಂಬಗಳು ಅಥವಾ ಮ್ಯಾರೇಜ್ ಬ್ರೋಕರ್ ಗಳು (ಅಥವಾ ಕೆಲವೊಮ್ಮೆ ಇವರ ಅನುಪಸ್ಥಿತಿಯಲ್ಲಿಯೂ ) ಏರ್ಪಡಿಸುವ ಒಂದು ಕರಾರುಬದ್ಧ ಒಪ್ಪಂದ. ಈ ಒಪ್ಪಂದವನ್ನು ನಿರ್ಧರಿಸಲಾಗಿರುವುದು ಸಾಮಾಜಿಕ ಕಾರಣಗಳನ್ನು ಅವಲಂಬಿಸಿ, ಹಾಗೂ, ಜೋಡಿಯ ನಡುವೆ ಪ್ರೀತಿ ಹುಟ್ಟಬೇಕಾದದ್ದು ಮದುವೆಯ ನಂತರವಷ್ಟೇ.

ಕಳೆದ ಕೆಲವು ಪೀಳಿಗೆಗಳಲ್ಲಿ, ರೋಮ್ಯಾಂಟಿಕ್ ಪ್ರೀತಿಯ ಕುರಿತಾದ ಕಲ್ಪನೆಯೇ ಪಶ್ಚಿಮ ಜಗತ್ತಿನಲ್ಲಿ ಬಹುತೇಕ ಸಾರ್ವತ್ರಿಕವಾಗಿದೆ. ಅಮೇರಿಕೆಯಲ್ಲಿ ಮದುವೆ, ಪ್ರೀತಿಯ ಕುರಿತಾದ ರೂಢಿಗತ ಅಭಿಪ್ರಾಯಗಳು ನಶಿಸಿ ಹೋಗಿಲ್ಲವಾದರೂ, ಬಹಳಷ್ಟು ಜನರು “ರೋಮ್ಯಾಂಟಿಕ್ ಪ್ರೀತಿ” ಯ ಹುಡುಕಾಟದಲ್ಲಿ ಮತ್ತು ಆ ಮೂಲಕ ತಮಗೆ ದೊರಕಬಹುದಾದ ವೈಯಕ್ತಿಕ ಪ್ರೀತಿಯ ಅನುಭವವನ್ನು ಮದುವೆಯತ್ತ ಕರೆದೊಯ್ಯುವಲ್ಲಿ ಆಸಕ್ತರಾಗಿದ್ದಾರೆ. ಪ್ರೀತಿಯಲ್ಲಿ ಸ್ವಾತಂತ್ರ್ಯದ ಕುರಿತಾದ ಈ ಹೊಸ ಪರಿಕಲ್ಪನೆ ‘ಪ್ರೀತಿಸಲ್ಪಡುವ ವ್ಯಕ್ತಿಯ’ ಆಯ್ಕೆಯ ಪ್ರಾಮುಖ್ಯತೆಯನ್ನ ‘ಪ್ರೀತಿ’ ಗಿಂತ ಹೆಚ್ಚು ನಿರ್ಣಾಯಕವಾಗಿಸಿದೆ.

ಈ ಸ್ಥಿತಿಗೆ ತುಂಬ ಹತ್ತಿರವಾಗಿರುವುದು ಸಮಕಾಲಿನ ಸಂಸ್ಕೃತಿಯ ಇನ್ನೊಂದು ಗುಣಲಕ್ಷಣ. ನಮ್ಮ ಇಡೀ ಸಂಸ್ಕೃತಿ ಅವಲಂಬಿತವಾಗಿರುವುದು ನಮ್ಮ ಕೊಳ್ಳುವ ಹಸಿವಿನ ಮೇಲೆ, ಪರಸ್ಪರರಿಗೆ ಸಹಾಯಕವಾಗುವಂಥ ಕೊಡುಕೊಳ್ಳುವಿಕೆಯ ಐಡಿಯಾದ ಮೇಲೆ. ಆಧುನಿಕ ಮನುಷ್ಯನ ಖುಶಿಯಿರುವುದು ವಿಂಡೋ ಶಾಪಿಂಗ್ ನಲ್ಲಿ, ತನಗೆ ಸಾಧ್ಯವಾಗುವ ಎಲ್ಲವನ್ನೂ ಕೊಳ್ಳುವಲ್ಲಿ, ಕ್ಯಾಶ್ ಕೊಟ್ಟು ಅಥವಾ ಕಂತುಗಳಲ್ಲಿಯಾದರೂ ಸರಿ . ಹಾಗಾಗಿ ಅವನು (ಅಥವಾ ಅವಳು) ತಾನು ಪ್ರೀತಿಸಬಯಸುವವರನ್ನು ಸಹ ತನ್ನ ಇದೇ ಸ್ವಭಾವದ ಪರಿಧಿಯಲ್ಲಿ ನೋಡುತ್ತಾನೆ(ಳೆ).

ಗಂಡಸಿಗೆ ಆಕರ್ಷಕ ಹೆಣ್ಣು ಮತ್ತು ಹೆಣ್ಣಿಗೆ ಆಕರ್ಷಕ ಗಂಡು ಅವರ ಅತ್ಯಂತ ಆಪ್ತ ಬಹುಮಾನ. “ಆಕರ್ಷಕ” ಎಂದರೆ ವ್ಯಕ್ತಿತ್ವಗಳ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮತ್ತು ಅತ್ಯಂತ ಬೇಡಿಕೆಯಲ್ಲಿರುವ ಅತ್ಯುತ್ತಮ ಗುಣಲಕ್ಷಣಗಳ ಪ್ಯಾಕೇಜ್. ಒಬ್ಬ ವ್ಯಕ್ತಿ ಆಕರ್ಷಕ ಹೌದೋ ಅಲ್ಲವೋ ಎನ್ನುವುದನ್ನ ಆಯಾ ಕಾಲದ ಫ್ಯಾಶನ್ ನಿರ್ಧಾರ ಮಾಡುತ್ತದೆ, ದೈಹಿಕ ಮತ್ತು ಮಾನಸಿಕ ಎರಡೂ ಮಾನದಂಡಗಳಲ್ಲಿ. ಇಪ್ಪತ್ತರ ದಶಕದಲ್ಲಿ ಡ್ರಿಂಕ್ಸ್ ಮತ್ತು ಸ್ಮೋಕ್ ಮಾಡುವ, ಬಿರುಸಿನ ಸೆಕ್ಸಿ ಹುಡುಗಿಯರು ಆಕರ್ಷಕ ಎನಿಸಿಕೊಳ್ಳುತ್ತಿದ್ದರೆ ಇವತ್ತಿನ ಫ್ಯಾಶನ್, ಹೋಮ್ಲಿ ಮತ್ತು ಮೃದು ಸ್ವಭಾವದ ಹುಡುಗಿಯರನ್ನ ಆಕರ್ಷಕ ಎನ್ನುತ್ತದೆ. ೧೯ ನೇ ಶತಮಾನದ ಕೊನೆಯಲ್ಲಿ ಮತ್ತು ೨೦ ನೇ ಶತಮಾನದ ಆರಂಭದಲ್ಲಿ ಮಹತ್ವಾಕಾಂಕ್ಷೆಯ ಆಕ್ರಮಣಕಾರಿ ಗಂಡಸನ್ನ ಆಕರ್ಷಕ ಎಂದು ಗುರುತಿಸುತ್ತಿದ್ದರು ಆದರೆ ಇವತ್ತು ಅವನು ಸಮಾಜಪ್ರಿಯ ಸಹನಶೀಲ ವ್ಯಕ್ತಿಯಾಗಬೇಕಿದೆ, ಆಕರ್ಷಕದ ಪ್ಯಾಕೇಜಿನಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಲು. ಹೇಗೇ ಆದರೂ ನಾನು ‘ಪ್ರೀತಿಯಲ್ಲಿದ್ದೇನೆ’ ಎನ್ನುವ ಭಾವನೆ ಹುಟ್ಟಿಕೊಳ್ಳುವುದು ನಮ್ಮ ಕೊಡುಕೊಳ್ಳುವಿಕೆಗೆ ಸಾಧ್ಯವಾಗುವಂಥ ವ್ಯಾಪ್ತಿಯಲ್ಲಿರುವ ಬಹುತೇಕ ಇಂಥ ಮಾನವ ಸರಕುಗಳ ಕಾರಣವಾಗಿಯೇ.

ನಾನು ಚೌಕಾಸಿಗೆ ಸಿದ್ಧನಾಗಿರುವೆ ; ಸರಕು, ಸಾಮಾಜಿಕ ಮೌಲ್ಯಗಳ ಷರತ್ತುಗಳಿಗೆ ಅಪೇಕ್ಷಣಿಯವಾಗಿರಬೇಕು ಮತ್ತು ಅದೇ ವೇಳೆಯಲ್ಲಿ ನನ್ನನ್ನು ಬಯಸುವವರಾಗಬೇಕು, ನನ್ನ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ಸ್ವತ್ತುಗಳನ್ನ ಮತ್ತು ಸಂಭವನೀಯ ಸಾಮರ್ಥ್ಯಗಳನ್ನ ಲಕ್ಷದಲ್ಲಿಟ್ಟುಕೊಂಡು. ತಮ್ಮ ಕೊಡುಕೊಳ್ಳುವಿಕೆಯ ಸಾಮರ್ಥ್ಯದ ಮಿತಿಗಳನ್ನ ಗಮನದಲ್ಲಿಟ್ಟುಕೊಂಡು, ಯಾವಾಗ ತಮಗೆ ಅಪೇಕ್ಷಣೀಯವಾದ ಅತ್ತುತ್ತಮ ಸರಕು ಮಾರುಕಟ್ಟೆಯಲ್ಲಿ ಇದೇ ಎನ್ನುವುದು ತಮಗೆ ಮನವರಿಕೆಯಾದಾಗ ಮಾತ್ರ ಇಬ್ಬರು ಮನುಷ್ಯರು ಪ್ರೀತಿಯ ಬಂಧನವನ್ನು ಒಪ್ಪಿಕೊಳ್ಳುತ್ತಾರೆ.

ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಆಗುವಂತೆ ಇಲ್ಲೂ, ಇಂದು ಅಷ್ಟಾಗಿ ಆಕರ್ಷಕವಲ್ಲದ ಆದರೆ ಮುಂದೆ ಆಕರ್ಷಕವಾಗುವ ಎಲ್ಲ ಅವಕಾಶವುಳ್ಳ ಸಂಭಾವ್ಯ ಕಾರಣಗಳು, ಗುಣಲಕ್ಷಣಗಳು ಚೌಕಾಸಿಯಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತವೆ. ಮಾರುಕಟ್ಟೆ ಆಧಾರಿತ ಸಂಸ್ಕೃತಿಯಲ್ಲಿ ಮತ್ತು ಮೆಟಿರಿಯಲಿಸ್ಟಕ್ ಯಶಸ್ಸು ಬಹು ದೊಡ್ಡದು ಎನ್ನುವ ತಿಳುವಳಿಕೆಯ ಸಮಾಜದಲ್ಲಿ, ಮನುಷ್ಯ ಪ್ರೀತಿಯ ಸಂಬಂಧಗಳು ಕೂಡ ಸರಕು ಮತ್ತು ಕಾರ್ಮಿಕ ಮಾರುಕಟ್ಟೆಯ ನೀತಿ ನಿಯಮಗಳನ್ನೇ ಪಾಲಿಸುತ್ತವೆಯಾದರೆ ಆಶ್ಚರ್ಯವೇನಿಲ್ಲ.

(……….. ಮುಂದುವರೆಯುವುದು)

ಹಿಂದಿನ ಭಾಗ ಇಲ್ಲಿ ಓದಿ : https://aralimara.com/2022/02/14/love-12/

2 Comments

Leave a Reply