ಪ್ರೇಮದ ಅಭಿವ್ಯಕ್ತಿ ಸೂತ್ರಗಳು : ಭಾಗ 2

ಹಲವಾರು ವರ್ಷಗಳ ಸತತ ಅಭ್ಯಾಸದ ನಂತರ ಸಂಬಂಧಗಳ ವಿಷಯದ ಪ್ರಸಿದ್ಧ ಸಲಹಾಕಾರ ಡಾ. ಗ್ಯಾರಿ ಚಾಪ್’ಮನ್ ಪ್ರೇಮಕ್ಕೆ ಸಂಬಂಧಿಸಿದಂತೆ ನಮ್ಮ ಮಧ್ಯೆ ಬಳಕೆಯಾಗುವ ಐದು ಭಾಷೆಗಳ ಬಗ್ಗೆ ತನ್ನ ಪುಸ್ತಕ ‘Five Love Languages’ ದಲ್ಲಿ ಪ್ರಸ್ತಾಪ ಮಾಡುತ್ತಾನೆ. ಈ ಪ್ರೇಮಭಾಷೆಗಳು ಯಾವುವು? ಅವುಗಳ ಪ್ರಾಮುಖ್ಯವೇನು? ಈ ಲೇಖನದ ಎರಡನೇ ಕಂತು ಇಲ್ಲಿ ನೋಡೋಣ… ~ ಚಿದಂಬರ ನರೇಂದ್ರ

ಕೊಡುವುದೇನು? ಕೊಂಬುದೇನು ? ಒಲವು, ಸ್ನೇಹ, ಪ್ರೇಮ….. ಎನ್ನುತಾರೆ ಬೇಂದ್ರೆ. ಹೌದು ಇದು ನಿಜವಾದರೂ ಪ್ರತಿಯೊಬ್ಬರ ಪ್ರೇಮ, ಸ್ನೇಹದ ಕಲ್ಪನೆ ಬೇರೆ ಬೇರೆ ಮತ್ತು ಇದರಲ್ಲಿ ಯಾವ ಸರಿ ತಪ್ಪು ಇಲ್ಲ.

ನೀವು ಯಾವ ರೀತಿಯಲ್ಲಿ ನಿಮ್ಮ ಪ್ರೇಮವನ್ನು ವ್ಯಕ್ತಪಡಿಸುತ್ತೀರಿ? ಯಾವ ರೀತಿಯಲ್ಲಿ ನಿಮ್ಮ ಸಂಗಾತಿ ನಿಮ್ಮನ್ನು ಪ್ರೇಮಿಸಬೇಕೆಂದು ಬಯಸುತ್ತೀರಿ? ಪ್ರೇಮದ ಐದು ಭಾಷೆಗಳ ಬಗ್ಗೆ ನೀವು ಈಗಾಗಲೇ ತಿಳಿದುಕೊಂಡಿರುವಿರಿ. ಆ ಐದು ಭಾಷೆಗಳಲ್ಲಿ ನಿಮ್ಮ ಮತ್ತು ನಿಮ್ಮ ಸಂಗಾತಿಯ ಆಯ್ಕೆಗಳನ್ನು ಸ್ಪಷ್ಟಪಡಿಸಿಕೊಳ್ಳಿ.

1 . ಪ್ರಮಾಣದ ಭಾಷೆ : “I love you”, “ಎಷ್ಟು
ಸುಂದರವಾಗಿ ಕಾಣ್ತಿದಿಯಾ”, “ನಾನೆಷ್ಟು
ಅದೃಷ್ಟವಂತ” ಎಂದು ಮುಂತಾಗಿ ಹೇಳುವ
ಮೂಲಕ.

 1. ಸಹಕಾರದ ಭಾಷೆ : ಸಂಗಾತಿಯ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವ ಮೂಲಕ.
 2. ಉಡುಗೊರೆಯ ಭಾಷೆ : ಉಡುಗೊರೆಗಳನ್ನು ಕೊಡುವ ಅಥವಾ ಪಡೆಯ ಬಯಸುವ ಮೂಲಕ.
 3. ಗುಣಮಟ್ಟದ ಸಮಯ : ಸಂಗಾತಿಯೊಂದಿಗೆ ಆಹ್ಲಾದಕರ ಸಮಯ ಕಳೆಯುವ ಮೂಲಕ.
 4. ಸ್ಪರ್ಶದ ಭಾಷೆ : ಸಂಗಾತಿಯನ್ನು ಸ್ಪರ್ಶಿಸುವ ಅಥವಾ ಸಂಗಾಂತಿಯಿಂದ ಸ್ಪರ್ಶ ಸುಖ ಬಯಸುವ ಮೂಲಕ.

ನೀವು ಈಗ ನಿಮ್ಮ ಪ್ರೇಮದ ಭಾಷೆ ಯಾವುದೆಂದು ತಿಳುದುಕೊಂಡಿರುವಿರಿ. ಆದರೆ ನಿಮ್ಮ ಸಂಗಾತಿಯ ಪ್ರೇಮದ ಭಾಷೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೀರಾ?

ನಿಮಗೆ, ನಿಮ್ಮಿಬ್ಬರ ನಡುವೆ ಹೊಂದಾಣಿಕೆ ಇಲ್ಲ ಎಂದೆನಿಸಬಹುದು ಆದರೆ ನೀವಿಬ್ಬರೂ ಬೇರೆ ಬೇರೆ ಬೇರೆ ಪ್ರೇಮದ ಭಾಷೆ ಹೊಂದಿರುವುದು ಅಂಥ ಜಗತ್ತು ಮುಳುಗಿ ಹೋಗವಂಥ ವಿಷಯವೇನಲ್ಲ.

ನೀವು ಓದಲೇ ಬೇಕೆಂದಿರುವ ನಿಮ್ಮ ಅತೀ ಇಷ್ಟದ ಪುಸ್ತಕವನ್ನು ಬದಿಗಿಟ್ಟು, ನೀವು ಇದೀಗ ನಿಮ್ಮ ಸಂಗಾತಿಯೊಂದಿಗೆ ಒಂದು ಇಡೀ ಸಂಜೆಯನ್ನು ಕಳೆದಿರುವಿರಿ. ಆದರೂ ನಿಮ್ಮ ಸಂಗಾತಿಗೆ ಸಮಾಧಾನವಿಲ್ಲ, ಕಳೆದ ನಾಲ್ಕು ಗಂಟೆಯಲ್ಲಿ ಒಮ್ಮೆಯೂ ನೀವು ಅವಳನ್ನು / ಅವನನ್ನು ಮುಟ್ಟಿ ಮಾತಾಡಿಸಲಿಲ್ಲ ಅನ್ನೋ ತಕರಾರು. ನೆನಪಾಗ್ತಾ ಇದೆಯಾ ಇಂಥ ಒಂದು ಸಂದರ್ಭ.
ಅಥವಾ ನೀವು ಕೇಳುತ್ತೀರಿ “ ಯಾಕೆ ಒಮ್ಮೆಯೂ ನೀನು ನನಗೆ I Love You ಹೇಳಿಲ್ಲ?” “ ಯಾಕೆ, ನಾನು ಚಾಕಲೇಟ್ ತಂದು ಕೊಡೋದು ನಿನಗೆ ಇಷ್ಟ ಆಗಲ್ವಾ? ಅನ್ನೋ ಅವರ ಉತ್ತರ ನೆನಪಿದೆಯಾ?
ನೀವು ಒಂದಕ್ಕೊಂದು ಸಂಬಂಧ ಕಲ್ಪಿಸಲಾಗದೇ ತಬ್ಬಿಬ್ಬಾಗುತ್ತೀರಿ.

ಈ ತರಹದ ಸಂದರ್ಭಗಳ ದೊಡ್ಡ ತೊಂದರೆ ಎಂದರೆ ನಿಮ್ಮ ಪ್ರೇಮ ಸಂದೇಶಗಳು ನಿಮ್ಮ ಸಂಗಾತಿಯನ್ನು ತಲುಪುತ್ತಿಲ್ಲದಿರುವುದು ಮತ್ತು ಈ ಬಗ್ಗೆ ನಿಮಗಿಬ್ಬರಿಗೂ ಅರಿವು ಇಲ್ಲದಿರುವುದು. ಆದರೂ ಚಿಂತೆಗೆ ಕಾರಣವಿಲ್ಲ, ಸಂಬಂಧಗಳ ಶುರುವಾತಿನಲ್ಲಿ ಇದು ಸರ್ವೇ ಸಾಮಾನ್ಯ. ಪ್ರತಿಯೊಬ್ಬರೂ ಒಂದೇ ಪ್ರೇಮದ ಭಾಷೆಯನ್ನ ಮಾತನಾಡುವುದು ತುಂಬ ಅಪರೂಪ. ನಿಮ್ಮ ಸಂಜ್ಞೆಗಳನ್ನ, ಸಂಕೇತಗಳನ್ನ, ಭಾಷೆಯ ಏರಿಳಿತಗಳನ್ನ ಕರಾರುವಾಕ್ ಆಗಿ ಗ್ರಹಿಸುವ ಸಂಗಾತಿ ಸಿಕ್ಕರೆ ಚೆನ್ನ ಆದರೆ ಸಿಗದಿದ್ದರೆ ಅದೇ ಬಾಳಿನ ಕೊನೆಯಲ್ಲ. ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ವಿಶಿಷ್ಟ ಎನ್ನುವುದು ನಿಜವಾದರೆ ಹೇಗೆ ನಮ್ಮ ಅರಿವು, ಗ್ರಹಿಕೆ, ಕ್ರಿಯೆ ಒಂದೇ ಥರದ್ದಾಗಿರಬಲ್ಲದು?

ನೀವು ಬೇರೆ ಬೇರೆ ಪ್ರೇಮದ ಭಾಷೆಯನ್ನು ಬಳಸುತ್ತಿರುವಾಗಲೂ ನಿಮ್ಮ ನಡುವಿನ ಸಂಬಂಧ ಆರೋಗ್ಯಕರವಾಗಿರುವುದು ಸಾಧ್ಯ.

ತಮ್ಮ ನಡುವಿನ ಸಂಬಂಧದ ಬಿಗುವಿನ ಬಗ್ಗೆ ಚಿಂತಿತರಾಗಿರುವ ಸಂಗಾತಿಗಳಿಗಾಗಿ ಕೆಲವು ಹಿತಕರ ಸಲಹೆಗಳನ್ನು ಕೆಳಗೆ ದಾಖಲಿಸಲಾಗಿದೆ. ನೀವಿಬ್ಬರೂ ಸಂಗಾತಿಗಳು ನಿಮ್ಮಿಬ್ಬರ ಬೇಕು ಬೇಡಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪವಾದರೂ ಪ್ರಯತ್ನ ಈಗ ಮಾಡಲೇ ಬೇಕಾಗಿದೆ. ಪರಸ್ಪರರ ಭಾಷೆ ಅರ್ಥ ಮಾಡಿಕೊಳ್ಳುವುದೆಂದರೆ ನೀವು ಇನ್ನೊಬ್ಬರಿಗಾಗಿ ಏನು ಮಾಡಬೇಕಾಗಿದೆ ಎನ್ನುವುದನ್ನ ನಿರ್ಧರಿಸುವುದೇ ಆಗಿದೆ.

 1. ನಿಮ್ಮ ಸಂಗಾತಿಯ ಪ್ರೇಮದ ಭಾಷೆಯನ್ನ ಸುಲಭವಾಗಿ ಗೊತ್ತು ಮಾಡಿಕೊಳ್ಳುವುದು.

ನಿಮ್ಮ ಸಂಗಾತಿ ಹೇಳುವ ಅಥವಾ ಮಾಡುವ ಸಣ್ಣಪುಟ್ಟ ಸಂಗತಿಗಳನ್ನೂ ಗಮನವಿಟ್ಟು ನೋಡಲು ಆರಂಭಿಸಿ. ಯಾವುದರಿಂದ ಅವರಿಗೆ ಖುಶಿ? ಯಾವಾಗ ಅವರು ದುಃಖಿತರಾಗುತ್ತಾರೆ ಅಥವಾ ಯಾವಾಗ ತಮ್ಮ ಸುತ್ತ ನಡೆಯುತ್ತಿರುವ ಸಂಗತಿಗಳ ಬಗ್ಗೆ ದೂರಲು ಶುರು ಮಾಡುತ್ತಾರೆ? ನೆನಪಿಟ್ಟುಕೊಳ್ಳಿ, ಪರಸ್ಪರರ ರೋಮ್ಯಾಟಿಂಕ್ ಅವಶ್ಯಕತೆಗಳ ಬಗ್ಗೆ ಇಬ್ಬರೂ ಕೂಡಿ ಮಾತನಾಡಿಕೊಳ್ಳುವುದನ್ನ ರೂಢಿ ಮಾಡಿಕೊಳ್ಳಿ. ಇತ್ಯಾದಿಯಾಗಿ….

 1. ನಿಮ್ಮ ಸಂಗಾತಿಯ ಪ್ರೇಮದ ಭಾಷೆಯನ್ನು ಮಾತನಾಡಲು ಕಲಿಯುವುದು.

ಒಮ್ಮೆ ನೀವಿಬ್ಬರೂ ಪರಸ್ಪರರ ಪ್ರೇಮದ ಭಾಷೆಯನ್ನ ಗೊತ್ತುಮಾಡಿಕೊಂಡ ಮೇಲೆ , ನಿಮ್ಮ ಸಂಗಾತಿಯ ಪ್ರೇಮದ ಭಾಷೆಯಲ್ಲಿ ಮಾತನಾಡುವುದನ್ನ ರೂಢಿ ಮಾಡಿಕೊಳ್ಳಿ. ಅವರು ಯಾವುದನ್ನ ಪ್ರೇಮ ಎಂದು ತಿಳಿದುಕೊಂಡಿದ್ದಾರೋ ಆ ಭಾಷೆಯಲ್ಲಿ ಅವರೊಂದಿಗೆ ಸಂಭಾಷಣೆ ನಡೆಸಿ. ಇದು ಬಹಳ ಕಷ್ಟವಲ್ಲದಿದ್ದರೂ ಅಷ್ಟು ಸುಲಭವೂ ಅಲ್ಲ.

ನೀವು ಈಗ ಹೊಸದೊಂದು ಭಾಷೆಯನ್ನೆ ಮಾತನಾಡುತ್ತಿದ್ದೀರಿ. ಹಾಗೆಂದರೆ ಆ ಭಾಷೆಯ ಎಲ್ಲ ಸರಿ ತಪ್ಪುಗಳನ್ನ ಅರ್ಥಮಾಡಿಕೊಳ್ಳುವುದು, ಆ ಭಾಷೆಯನ್ನ ಯಾವ ಧಾಟಿಯಲ್ಲಿ ಹೇಳಿದರೆ ಹೆಚ್ಚು ಪರಿಣಾಮಕಾರಿ ಎನ್ನುವುದನ್ನ ತಿಳಿದುಕೊಳ್ಳುವುದು. ಅಕಸ್ಮಾತ್ ನಿಮ್ಮ ಹಾಗು ನಿಮ್ಮ ಸಂಗಾತಿಯ ಪ್ರೇಮದ ಭಾಷೆ ಬೇರೆಯಾಗಿದ್ದರೆ ಆಗುವ ಸಮಸ್ಯೆಗಳನ್ವು ಪರಿಹರಿಸಿಕೊಳ್ಳಲು ಕೆಲವು ಉಪಯುಕ್ತ ಸಲಹೆಗಳು ಹೀಗಿವೆ.

 • ಸಹಕಾರದ ಭಾಷೆ : ಅವರಿಗೆ ಅನಿರೀಕ್ಷಿತ ವಾದ ಸಣ್ಣ ಪುಟ್ಟ ಸಹಾಯಗಳನ್ನು ಮಾಡಲು ಶುರು ಮಾಡಿ ಉದಾಹರಣೆಗೆ, ಅವರ ಕಾರ್/ ಸ್ಕೂಟರ್ ಸ್ವಚ್ಛ ಮಾಡುವುದು, ಅವರ ಲಂಚ್ ಪ್ಯಾಕ್ ಮಾಡುವುದು, ಅವರ ಬಟ್ಟೆಗಳನ್ನ ಇಸ್ತ್ರೀ ಮಾಡುವುದು ಮುಂತಾಗಿ.
 • ಗುಣಮಟ್ಟದ ಸಮಯ : ನಿಮ್ಮ ಮೋಬೈಲ್ ಆಫ್ ಮಾಡಿ ಅವರಿಗೆ ನಿಮ್ಮ ಸಂಪೂರ್ಣ ಗಮನವನ್ನು ಮೀಸಲಾಗಿಡುವುದು, ನೀವಿಬ್ಬರೇ ಲಾಂಗ್ ವಾಕ್/ ಡ್ರೈವ್ ಹೋಗುವುದು, ಇಬ್ಬರೇ ಆಡುವಂಥ ಚೆಸ್, ಕಾರ್ಡ್ಸ್ ಮುಂತಾದ ಆಟಗಳನ್ನ ಆಡುವುದು ಇತ್ಯಾದಿಯಾಗಿ.
 • ಪ್ರಮಾಣದ ಭಾಷೆ : ಅವರ ಕುರಿತಾಗಿ ನಿಮ್ಮೊಳಗಿರುವ ಭಾವನೆಗಳನ್ನು ಮಾತುಗಳಲ್ಲಿ ವ್ಯಕ್ತಪಡಿಸಿ, ಅವರ ಕತೆ, ಕವನ, ಚಿತ್ರ ಮುಂತಾದ ಹವ್ಯಾಸಗಳನ್ನು ಹೊಗಳಿ ಮಾತನಾಡಿ, ಅನಿರೀಕ್ಷಿತವಾಗಿ ಟೆಕ್ಸ್ಟ್ ಮಾಡಿ, ನಿಮ್ಮ ಕೈಬರಹದಲ್ಲಿರುವ ಹ್ಯಾಂಡ್ ನೋಟ್ ಅವರಿಗೆ ಕಾಣಿಸುವಂತೆ ಇಡಿ, ಹೀಗೆ ಹಲವಾರು.
 • ಉಡುಗೊರೆಯ ಭಾಷೆ : ಸಂದರ್ಭಕ್ಕನುಗುಣವಾಗಿ ಉಡುಗೊರೆಗಳನ್ನ ಕೊಡಿ. ಅವರ ಫೇವರೇಟ್ ಸಂಗತಿಗಳನ್ನ ನೆನಪಿನಲ್ಲಿಟ್ಟುಕೊಂಡು ಸರಪ್ರೈಸ್ ಮಾಡಿ, ಅವರ ಇಷ್ಟದ ಕಾಫೀ ಶಾಪ್ ಗೆ ಕರೆದುಕೊಂಡು ಹೋಗಿ, ಅವರ ಇಷ್ಟದ ಬುಕ್ ಗಳನ್ನ ಕೊಡಿಸಿ. ಯಾವ ಕಾರಣಕ್ಕೂ, ಬರ್ಥ್ ಡೇ, ಆ್ಯನಿವರ್ಸರಿ ದಿನಾಂಕಗಳನ್ನು ಮರೆಯಬೇಡಿ.
 • ಸ್ಪರ್ಶದ ಭಾಷೆ : ಅವಕಾಶವಾದಾಗಲೆಲ್ಲ ಅವರ ಕೈಗಳನ್ನ ಹಿಡಿದುಕೊಳ್ಳಿ, ಆಗಾಗ ಹಗ್ ಮಾಡಿ, ಗುಡ್ ಮಾರ್ನಿಂಗ್, ಗುಡ್ ನೈಟ್ ಕಿಸ್ ಗಳನ್ನ ಮಿಸ್ ಮಾಡಬೇಡಿ.
 1. ನಿಮ್ಮ ಸಂಗಾತಿಯೊಂದಿಗೆ ಸಂಭಾಷಣೆ ಮಾಡುವುದನ್ನ ಮತ್ತು ಕಾಂಪ್ರಮೈಸ್ ಮಾಡಿಕೊಳ್ಳುವುದನ್ನ ಅಭ್ಯಾಸಮಾಡಿ.

ನಿಮ್ಮ ಸಂಗಾತಿಯ ಪ್ರೇಮದ ಭಾಷೆಯನ್ನ ಗೊತ್ತು ಮಾಡಿಕೊಳ್ಳುವುದು ಹೇಗೆ ಎನ್ನುವ ಕುರಿತಾಗಿ ಇರುವ ಬಹುಮುಖ್ಯ ರಿಲೇಶನ್’ಶಿಪ್ ಸಲಹೆ ಯೆಂದರೆ, ಕಾಂಪ್ರಮೈಸ್. ಕಾಂಪ್ರಮೈಸ್ ಮಾಡಿಕೊಳ್ಳುವ ಕಲೆಯನ್ನ ಕಲಿತುಕೊಳ್ಳುವುದು ಅಷ್ಟು ಸುಲಭ ಅಲ್ಲ, ಸಾಕಷ್ಟು ಸಂಶಯ, ಸಂಘರ್ಷಗಳನ್ನು ದಾಟಿ ಹೋಗಬೇಕಾಗುತ್ತದೆ. ಯಾಕೆ ಹೀಗೆ? ಏಕೆಂದರೆ ಕಾಂಪ್ರಮೈಸ್ ಎಂದರೆ ನಿಮಗೆ ಇಷ್ಚವಾದದ್ದನ್ನ ಸ್ವಲ್ಪ ಬಿಟ್ಟುಕೊಡುವುದು. ಯಾರು ತಾನೇ ಇದಕ್ಕೆ ಸಿದ್ಧರಾಗಿರುತ್ತಾರೆ? ಆದರೆ ಪ್ರೇಮದ ಹೊರತಾಗಿಯೂ ಸಂಬಂಧಗಳಲ್ಲಿನ ಕೆಲವು ಅನವಶ್ಯಕ ಬಿಕ್ಕಟ್ಟುಗಳನ್ನ ನಿವಾರಿಸಿಕೊಳ್ಳಲು, ಕಾಂಪ್ರಮೈಸ್ ಬಹಳ ಮುಖ್ಯ.

ಸಂಬಂಧಗಳ ಯಶಸ್ಸು ಇರುವುದೇ ಪರಸ್ಪರರ ಕೊಡು ಕೊಳ್ಳುವಿಕೆಯಲ್ಲಿ. ಒಂದು ವೇಳೆ ನಿಮ್ಮ ಸಂಗಾತಿಯ ಪ್ರೇಮದ ಭಾಷೆ ಸ್ಪರ್ಶವಾಗಿದ್ದರೆ ಮತ್ತು ನಿಮಗೆ ಎರಡು ನಿಮಿಷಕ್ಕಿಂತ ಹೆಚ್ಚು ಅವರ ಕೈಗಳನ್ನು ಹಿಡಿದುಕೊಳ್ಳಲು ಸಾಧ್ಯವಾಗುತ್ತಿಲ್ಲವಾದರೆ ಏನು ಮಾಡುತ್ತೀರಿ? ನೀವು ನಿಮ್ಮ ಸಂಗಾತಿಯನ್ನ ಪ್ರೀತಿಸುತ್ತೀರಾದ್ದರಿಂದ ನಿಮಗೆ ಸ್ವಲ್ಪ ಇರಿಸುಮುರಿಸಾದರೂ ನೀವು ಅವರನ್ನ ಮುಟ್ಟುವುದನ್ನ, ಕೈ ಹಿಡಿದುಕೊಳ್ಳುವುದನ್ನ, ಹಗ್ ಮಾಡುವುದನ್ನ ರೂಢಿಸಿಕೊಳ್ಳಲೇ ಬೇಕು. ಇಲ್ಲವಾದರೆ ನಿಮ್ಮ ಪ್ರೇಮದ ಭಾವನೆಗಳು ಅವರಿಗೆ ಅರ್ಥವೇ ಆಗುವುದಿಲ್ಲ. ನಿಮ್ಮ ಸಂಗಾತಿಗೆ ನಿಮ್ಮೊಂದಿಗೆ ಕ್ವಾಲಿಟಿ ಟೈಮ್ ಕಳೆಯುವುದು ಇಷ್ಚವಾದರೆ, ನೀವು ನಿಮ್ಮ ಫೇವರೇಟ್ ಟೀವಿ ಕಾರ್ಯಕ್ರಮ ಪೋಸ್ಚಪೋನ್ ಮಾಡಲೇಬೇಕು.

ಪ್ರೀತಿಯ ಕುರಿತಾಗಿ ಜಗತ್ಪ್ರಸಿದ್ಧ ಮನೋ ವಿಜ್ಞಾನಿ ಎರಿಕ್ ಫ್ರಾಮ್ ಹೇಳುವ ಮಾತುಗಳನ್ನ ಜಾಗರೂಕತೆಯಿಂದ ಪರಿಶೀಲಿಸಿ ;

ಪ್ರೀತಿ ಸಹಜ ಸಂಗತಿಯಲ್ಲ. ಬದಲಾಗಿ ಪ್ರೀತಿ ಸಾಧ್ಯವಾಗುವುದಕ್ಕೆ ಶಿಸ್ತು ಬೇಕು, ಏಕಾಗ್ರತೆ, ಸಹನೆ, ನಂಬಿಕೆ ಬೇಕು. ಆತ್ಮರತಿಯನ್ನ ಮೀರುವುದು ಸಾಧ್ಯವಾಗಬೇಕು. ಪ್ರೀತಿ ಭಾವನೆಯಲ್ಲ ಅದು ಒಂದು ಆಚರಣೆ. ಪ್ರೀತಿಯೆಂದರೆ ಯಾವ ಶರತ್ತುಗಳಿಲ್ಲದೆ ಒಬ್ಬರಿಗೆ ಬದ್ಧರಾಗುವುದು, ನಮ್ಮ ಪ್ರೀತಿ, ಪ್ರೀತಿಸಲ್ಪಡುವ ವ್ಯಕ್ತಿಯಲ್ಲಿ ಪ್ರೀತಿ ಹುಟ್ಟಿಸಬಹುದೆಂಬ ಏಕೈಕ ಭರವಸೆಯಿಂದ ನಮ್ಮ ಸರ್ವಸ್ವವನ್ನು ಧಾರೆಯೆರೆಯುವುದು. ಪ್ರೀತಿ, ನಂಬಿಕೆಯ ಪ್ರಕ್ರಿಯೆ, ಯಾರಲ್ಲೆಲ್ಲ ನಂಬಿಕೆಯ ಕೊರತೆ ಎದ್ದು ಕಾಣುತ್ತದೆ ಅವರ ಪ್ರೀತಿಯಲ್ಲೂ ಕೊರತೆಯನ್ನ ನೀವು ಗಮನಿಸಬಹುದು. ಪ್ರೀತಿ ಒಂದು ನಿರ್ಧಾರ, ಒಂದು ತೀರ್ಮಾನ, ಒಂದು ವಾಗ್ದಾನ. ಪ್ರೀತಿ ಕೇವಲ ಭಾವನೆಯಾಗಿದ್ದರೆ, ನಿನ್ನ ಕೊನೆತನಕ ಪ್ರೀತಿಸುತ್ತೇನೆ ಎನ್ನುವ ನಮ್ಮ ವಚನಕ್ಕೆ ಯಾವ ತಳಹದಿಯೂ ಇರುತ್ತಿರಲಿಲ್ಲ. ಏಕೆಂದರೆ ಭಾವನೆಯ ಕೆಲಸ ಕೇವಲ ಬಂದು ಹೋಗುವುದು ಮಾತ್ರ. ನೀನು ನನಗೆ ಬೇಕು ಆದ್ದರಿಂದ ನಾನು ನಿನ್ನ ಪ್ರೀತಿಸುತ್ತೇನೆ ಎನ್ನುವುದು ಅಪ್ರಬದ್ಧ ಪ್ರೀತಿ. ನಾನು ನಿನ್ನ ಪ್ರೀತಿಸುತ್ತಿರುವ ಕಾರಣವಾಗಿ ನೀನು ನನಗೆ ಬೇಕು ಎನ್ನುವುದು ಪ್ರಬುದ್ಧ ರೀತಿ.

ಕೊನೆಗಮ ಪ್ರೀತಿಯ ಕುರಿತಾದ ರೂಮಿಯ ಪದ್ಯವೊಂದು ಗಮನಿಸಿ ……

ಪ್ರೇಮಿಯ ಖಾಸಗೀತನ
ತನ್ನ ಸುತ್ತ ಚಾಚಿಕೊಂಡಿರುವುದು
ಗೊತ್ತಾಯಿತೆಂದರೆ
ಪ್ರೇಮದಲ್ಲಿ ಮುಳುಗಿದವರಿಗೆ
ನಿದ್ದೆ ಸಾಧ್ಯವಾಗುವುದೇ ಇಲ್ಲ.

ಕೊಂಚ ಬಾಯಾರಿದ ಪ್ರೇಮಿ
ಸ್ವಲ್ಪ ಹೊತ್ತು ಮಲಗಬಹುದೇನೋ,
ಆದರೆ ಅವರಿಗೆ ನಿದ್ದೆಯಲ್ಲೂ
ನೀರಿನ ಕನಸು,
ತುಂಬಿ ಹರಿಯುವ ಹಳ್ಳದ ಪಕ್ಕ
ತಂಬಿಗೆ ತುಂಬ ನೀರು
ಅಥವಾ
ಆ ಇನ್ನೊಬ್ಬರ ಎದೆಯಿಂದ
ಚಿಮ್ಮುತ್ತಿರುವ ಆರ್ದ್ರ ಅಂತಃಕರಣ.

ಇಡೀ ರಾತ್ರಿ
ಈ ಅಪರೂಪದ ಸಂಭಾಷಣೆಗೆ ಕಿವಿಯಾಗಿರಿ,
ಇದೊಂದೇ ಕ್ಷಣ
ನಿಮಗೆ ದಕ್ಕಬಹುದಾದದ್ದು, ದಕ್ಕಬೇಕಾದದ್ದು.

(ಹಿಂದಿನ ಭಾಗ ಇಲ್ಲಿದೆ : https://aralimara.com/2022/02/25/love-8/)

Leave a Reply