ವೈಫಲ್ಯಗಳ ಅವಲೋಕನ : Art of love #3

ಪ್ರೀತಿ ಮಾಡಬೇಕಾ, ಮುಂದುವರೆಸಬೇಕಾ ಎನ್ನುವ ಬಗ್ಗೆ ತಿರ್ಮಾನ ತೆಗೆದುಕೊಳ್ಳುವುದು ಅಸಾಧ್ಯವಾಗಿರುವುದರಿಂದ, ಪ್ರೀತಿಯ ವೈಫಲ್ಯತೆಯನ್ನು ನಿವಾರಿಸಿಕೊಳ್ಳುವುದು ಹೇಗೆ ಎನ್ನುವುದನ್ನ ಅಭ್ಯಾಸ ಮಾಡಲು ಇರುವ ದಾರಿ ಒಂದೇ, ಈ ವೈಫಲ್ಯತೆಯ ಕಾರಣಗಳನ್ನು ಪರೀಕ್ಷೆ ಮಾಡುವುದು ಮತ್ತು ಪ್ರೀತಿ ಎಂದರೇನು ಎನ್ನುವದನ್ನ ತಿಳಿದುಕೊಳ್ಳುವ ಪ್ರಕ್ರಿಯೆಯಲ್ಲಿ ಮುಂದುವರೆಯುವುದು… ~ Erich Fromm । ಕನ್ನಡಕ್ಕೆ: ಚಿದಂಬರ ನರೇಂದ್ರ

Is Love an Art ? – 3

ಪ್ರೀತಿಸುವುದಕ್ಕೆ ಯಾವ ಕಲಿಕೆ, ಯಾವ ಪ್ರಯತ್ನ ಬೇಕಾಗಿಲ್ಲ ಎನ್ನುವ ತಿಳುವಳಿಕೆಯ ಹಿಂದಿನ ಮೂರನೇಯ ತಪ್ಪು ಗ್ರಹಿಕೆ ಎಂದರೆ, ಪ್ರೇಮದೊಳಗೆ ಮುಳುಗಿದಾಗ ಆದ ಮೊದಲ ಅನುಭವ ಮತ್ತು ಪ್ರೇಮದೊಳಗೆ ಶಾಶ್ವತವಾಗಿ ಇರುವಿಕೆಯ ಅಥವಾ ಪ್ರೀತಿಯಲ್ಲಿ ಸ್ಥಿರವಾಗಿ ನೆಲೆ ನಿಲ್ಲುವ ಸ್ಥಿತಿಗಳ ನಡುವಿನ ಗೊಂದಲ. ಬಹುತೇಕ ನಮ್ಮೆಲ್ಲರಂತೆ ಅಪರಿಚಿತರಾಗಿರುವ ಇಬ್ಬರು, ಏಕಾಏಕಿಯಾಗಿ ತಮ್ಮ ನಡುವಿನ ಗೋಡೆಯನ್ನು ಒಡೆದುಕೊಂಡು ಪರಸ್ಪರ ಹತ್ತಿರವಾದಾಗ, ಒಂದಾದ ಅನುಭವವನ್ನು ಹೊಂದುವಾಗ, ಒಂದಾಗುವಿಕೆಯ ಈ ಕ್ಷಣ ಅವರ ಬದುಕಿನ ಅತ್ಯಂತ ಹರ್ಷದಾಯಕ , ಅತ್ಯಾಕರ್ಷಕ ಅನುಭವ ಎನಿಸಿಕೊಳ್ಳುತ್ತದೆ. ಹಾಗೆಯೇ ಬದುಕಿನಲ್ಲಿ ಜನರಿಂದ ದೂರವಾಗಿ, ಒಂಟಿತನ ಅನುಭವಿಸುತ್ತ , ಪ್ರೀತಿಯ ಸಾಮಿಪ್ಯಕ್ಕೆ, ಅನುಭವಕ್ಕೆ ಹೊರತಾಗಿ ಬದುಕುತ್ತಿರುವವರಿಗಂತೂ ಪ್ರೀತಿಯ ಈ ಮೊದಲ ಅನುಭವ ಅಧ್ಭುತ, ಮಾಂತ್ರಿಕ. ಪರಸ್ಪರರ ನಡುವೆ ಸಾಧ್ಯವಾದ ಈ ಹಟಾತ್ ಸಲಿಗೆ, ಆತ್ಮೀಯತೆ ಇನ್ನೂ ಉತ್ಕಟವಾಗಿರುತ್ತದೆ ಅಕಸ್ಮಾತ್ ಇದು ಲೈಂಗಿಕ ಆಕರ್ಷಣೆ ಮತ್ತು ಕಾಮ ತೃಪ್ತಿ ಯಿಂದ ಶುರು ಆಗಿದ್ದರೆ ಅಥವಾ ಜೊತೆಗೂಡಿದ್ದರೆ. ಆದರೆ ಈ ರೀತಿಯ ಪ್ರೀತಿ ತನ್ನ ಸಹಜ ಸ್ವಭಾವದ ಕಾರಣವಾಗಿಯೇ ಅಪೂರ್ಣ ಮತ್ತು ಬಹುಕಾಲ ಸ್ಥಿರವಾಗಿ ಉಳಿಯುವಂಥದ್ದಲ್ಲ. ಸಮಯ ಕಳೆದಂತೆ ಪರಸ್ಪರರ ನಡುವೆ ಪರಿಚಯ ಹೆಚ್ಚಾಗುತ್ತಿದ್ದಂತೆಯೇ ಅವರ ನಡುವಿನ ಇಂಟಿಮಸಿ ಕಡಿಮೆಯಾಗುತ್ತದೆ ಮತ್ತು ಆ ಆತ್ಮೀಯತೆಯ ಜೊತೆ ಹಾಸುಹೊಕ್ಕಾಗಿದ್ದ ಮಾಂತ್ರಿಕತೆ ಮಂಕಾಗುತ್ತದೆ. ಅವರ ನಡುವಿನ ವಿರೋಧಾಭಾಸಗಳು, ಅವರ ನಿರಾಶೆ, ಅತೃಪ್ತಿ, ಪರಸ್ಪರರ ನಡುವಿನ ಬೇಸರ ಕೊನೆಗೊಮ್ಮೆ ಬಾಕಿ ಉಳಿದಿರುವ ಅವರ ಪ್ರೀತಿಯ ಮೊದಲ ಅನುಭವದ ಉತ್ಸಾಹವನ್ನ ಕೊಂದು ಹಾಕುತ್ತದೆ. ಆದರೆ ಪ್ರೀತಿಗೆ ಮೊದಲು ಅವರಿಗೆ ಇದೆಲ್ಲ ಗೊತ್ತಾಗುವುದಿಲ್ಲ : ಬದಲಾಗಿ ಅವರು ಈ ವ್ಯಾಮೋಹದ ಗಾಢತೆಯನ್ನ, ಇಬ್ಬರಿಗೂ ಪರಸ್ಪರರ ಬಗ್ಗೆ ಇರುವ ಹುಚ್ಚನ್ನ ತಮ್ಮ ಪ್ರೀತಿಯ ಗಟ್ಟಿತನಕ್ಕೆ ಸಾಕ್ಷಿ ಎಂದು ತಿಳಿದುಕೊಳ್ಳುತ್ತಾರೆ, ಆದರೆ ಇದೆಲ್ಲ ಅವರ ಹಿಂದಿನ ಒಂಟಿತನದ ತೀವ್ರತೆಯನ್ನ ಸ್ಪಷ್ಟಮಾಡುತ್ತದೆ.

ಈ ತಿಳುವಳಿಕೆಯ ವಿರುದ್ಧ ಪ್ರಮಾಣ ಮಾಡುವ ಸಾಕ್ಷಿಗಳು ತುಂಬಿ ತುಳುಕುತ್ತಿರುವಾಗಲೂ, ಪ್ರೀತಿಗಿಂತ ಸುಲಭವಾದದ್ದು ಯಾವುದೂ ಇಲ್ಲ ಎನ್ನುವ ಜನರ ತಿಳುವಳಿಕೆ, ನಂಬಿಕೆಯೇ ಮುಂದುವರೆದು ಈಗ ಜನಜೀವನದಲ್ಲಿ ಪ್ರಚಲಿತವಾಗಿರುವುದು. ಪದೇಪದೇ ಪ್ರೀತಿ ಸೋಲು ಅನುಭವಿಸುತ್ತಿದೆಯಾದರೂ ಯಾವ ಸಕಾರಾತ್ಮಕ ಕ್ರಿಯೆ-ಪ್ರಯತ್ನ, ಯಾವ ಕಟ್ಟುವ ಸಾಹಸ, ಇಂಥ ಪ್ರಚಂಡ ಭರವಸೆ ಮತ್ತು ನಿರೀಕ್ಷೆಗಳ ಜೊತೆಗೆ ಶುರುವಾಗಿಲ್ಲ. ಬೇರೆ ಯಾವುದಾದರೂ ಸಂಗತಿಯೊಂದಿಗೆ ಹೀಗಾಗುತ್ತಿದ್ದರೆ ಜನ ಮುಗಿಬಿದ್ದು ಸೋಲಿನ ಕಾರಣಗಳನ್ನು ಪತ್ತೆ ಹಚ್ಚಲು, ತಿಳಿದುಕೊಳ್ಳಲು , ಈ ಸಂಗತಿಯ ಮುಂದುವರಿಕೆಯ ಬಗ್ಗೆ ಒಂದು ನಿರ್ಧಾರಕ್ಕೆ ಬರಲು ಪ್ರಯತ್ನ ಮಾಡುತ್ತಿದ್ದರು. ಪ್ರೀತಿ ಮಾಡಬೇಕಾ, ಮುಂದುವರೆಸಬೇಕಾ ಎನ್ನುವ ಬಗ್ಗೆ ತಿರ್ಮಾನ ತೆಗೆದುಕೊಳ್ಳುವುದು ಅಸಾಧ್ಯವಾಗಿರುವುದರಿಂದ, ಪ್ರೀತಿಯ ವೈಫಲ್ಯತೆಯನ್ನು ನಿವಾರಿಸಿಕೊಳ್ಳುವುದು ಹೇಗೆ ಎನ್ನುವುದನ್ನ ಅಭ್ಯಾಸ ಮಾಡಲು ಇರುವ ದಾರಿ ಒಂದೇ, ಈ ವೈಫಲ್ಯತೆಯ ಕಾರಣಗಳನ್ನು ಪರೀಕ್ಷೆ ಮಾಡುವುದು ಮತ್ತು ಪ್ರೀತಿ ಎಂದರೇನು ಎನ್ನುವದನ್ನ ತಿಳಿದುಕೊಳ್ಳುವ ಪ್ರಕ್ರಿಯೆಯಲ್ಲಿ ಮುಂದುವರೆಯುವುದು.

ಈ ದಿಸೆಯಲ್ಲಿ ನಾವು ಇಡಬೇಕಾದ ಮೊದಲ ಹೆಜ್ಜೆಯೆಂದರೆ, ಬದುಕು ಹೇಗೆ ಒಂದು ಕಲೆಯೋ ಹಾಗೆಯೇ ಪ್ರೀತಿಯೂ ಒಂದು ಕಲೆ ಎನ್ನುವ ತಿಳುವಳಿಕೆ ಬೆಳೆಸಿಕೊಳ್ಳುವುದು. ಪ್ರೀತಿಸುವುದು ಹೇಗೆ ಎನ್ನುವುದನ್ನ ಕಲಿಯಬಯಸುವೆವಾದರೆ ಬೇರೆ ಎಲ್ಲ ಕಲೆಗಳನ್ನು ಕಲಿಯುವಲ್ಲಿ ದಾಟಿಹೋಗುವ ಹಂತಗಳನ್ನೇ ಇಲ್ಲೂ ಕೂಡ ನಾವು ದಾಟಬೇಕು ಉದಾಹರಣೆಗೆ, ಪೇಂಟಿಂಗ್, ಸಂಗೀತ, ಕಾರ್ಪೆಂಟರಿ ಅಥವಾ ವೈದ್ಯಕೀಯ, ಇಂಜಿನೀಯರಿಂಗ್ ಕಲೆ ಇತ್ಯಾದಿಯಾಗಿ.

ಯಾವುದೇ ಕಲೆಯನ್ನು ಕಲಿಯುವಲ್ಲಿ ಅವಶ್ಯಕವಾದ ಹೆಜ್ಜೆಗಳು ಯಾವವು?

ಯಾವುದೇ ಒಂದು ಕಲೆಯನ್ನು ಕಲಿಯುವ ಪ್ರಕ್ರಿಯೆಯನ್ನ ಸುಲಭವಾಗಿ ಎರಡು ಭಾಗಗಳಲ್ಲಿ ವರ್ಗೀಕರಿಸಬಹುದು : ಮೊದಲನೇಯದು ಥಿಯರಿ ಮೇಲಿನ ಪ್ರಭುತ್ವ ಮತ್ತು ಎರಡನೇಯದು ಪ್ರ್ಯಾಕ್ಟೀಸ್ ಮೇಲಿನ ಹಿಡಿತ. ನಾನು ವೈದ್ಯಕೀಯ ಶಾಸ್ತ್ರದ ಕಲೆಯನ್ನ ಕಲಿಯಬಯಸುವೆನಾದರೆ, ಮೊದಲು ನಾನು ತಿಳಿದುಕೊಳ್ಳಬೇಕಾಗಿರುವುದು ಮನುಷ್ಯ ದೇಹದ ಸಂರಚನೆಯ ಸಂಗತಿಗಳನ್ನ ಮತ್ತು ಕಾಯಿಲೆಗಳ ಬಗೆಗಿನ ವಿವರವಾದ ಸತ್ಯಗಳನ್ನ. ನಾನು ಕೇವಲ ವೈದ್ಯಕೀಯ ಶಾಸ್ತ್ರದ ಥಿಯರಿಯನ್ನ ಅರೆದು ಕುಡಿದನಾದರೆ ವೈದ್ಯಕೀಯ ಕಲೆಯ ಮಾಸ್ಟರ್ ಅನಿಸಿಕೊಳ್ಳುವುದಿಲ್ಲ, ನಾನು ಮಾಸ್ಟರ್ ಎನಿಸಿಕೊಳ್ಳುವುದು ನಿರಂತರ ಸಫಲ ಪ್ರ್ಯಾಕ್ಟೀಸ್ ನ ನಂತರವಷ್ಟೇ, ನನ್ನ ಥಿಯರಿಯ ತಿಳುವಳಿಕೆ ನನ್ನ ಪ್ರ್ಯಾಕ್ಟೀಸ್ ನ ಫಲಿತಾಂಶಗಳ ಜೊತೆ ಸಮರ್ಪಕವಾಗಿ ನಾನು ಅನುಮಾನಿಸಿದಂತೆ ಸರಿ ಹೊಂದಿದಾಗಲಷ್ಟೇ. ಯಾವುದಾದರೊಂದು ಕಲೆಯಲ್ಲಿ ಪ್ರಭುತ್ವ ಸಾಧಿಸುವುದೆಂದರೆ ಹೀಗೆ. ಆದರೆ ಥಿಯರಿ ಮತ್ತು ಪ್ರ್ಯಾಕ್ಟೀಸ್ ಕಲಿಯುವುದರ ಜೊತೆ ಜೊತೆಯೇ ಯಾವುದೇ ಒಂದು ಕಲೆಯಲ್ಲಿ ಮಾಸ್ಟರ್ ಎನಿಸಿಕೊಳ್ಳಬೇಕಾದರೆ, ಕಲೆಯಲ್ಲಿ ಪ್ರಭುತ್ವ ಸಾಧಿಸುವುದು ಒಂದು ಆತ್ಯಂತಿಕ ಕಾಳಜಿಯಾಗಬೇಕು ; ಜಗತ್ತಿನಲ್ಲಿ ಕಲೆಗಿಂತ ದೊಡ್ಡದು ಬೇರೆ ಯಾವುದೂ ಇಲ್ಲ ಎನ್ನುವುದು ಮನದಟ್ಟಾಗಬೇಕು. ಇದು ಸಂಗೀತ, ವೈದ್ಯಕೀಯ, ಕಾರ್ಪೆಂಟರಿ ಕೊನೆಗೆ ಪ್ರೀತಿಯ ವಿಷಯದಲ್ಲಿಯೂ ಸತ್ಯ. ಬಹುಶಃ ಇದೇ ಕಾರಣಕ್ಕೆ ಜನ ಪ್ರೀತಿ ಎನ್ನುವ ಕಲೆಯನ್ನು ಬಹಳ ಅಪರೂಪಕ್ಕೆ ಕಲಿಯುವ ಪ್ರಯತ್ನ ಮಾಡುತ್ತಾರೆ, ಕಣ್ಣಿಗೆ ರಾಚುವಂಥ ವೈಫಲ್ಯಗಳು ಎದುರಿಗಿರುವಾಗಲೂ. ಪ್ರೀತಿಯ ಕುರಿತಾಗಿ ಆಳವಾದ ಚಡಪಡಿಕೆ ಇರುವಾಗಲೂ , ಪ್ರೀತಿಯನ್ನು ಹೊರತುಪಡಿಸಿ ಬೇರೆಲ್ಲಕ್ಕೂ ಪ್ರಾಮುಖ್ಯತೆ ನೀಡುತ್ತಾರೆ. ಯಶಸ್ಸು, ಅಭಿಮಾನ, ಹಣ, ಅಧಿಕಾರ – ಬಹುತೇಕ ನಮ್ಮ ಎಲ್ಲ ಸಾಮರ್ಥ್ಯ ಇವುಗಳನ್ನ ಸಾಧಿಸಿಕೊಳ್ಳಲು ವ್ಯಯವಾಗುತ್ತದೆಯೇ ಹೊರತು ಪ್ರೀತಿ ಎನ್ನುವ ಕಲೆಯನ್ನು ಕಲಿಯಲು ನಾವು ಬಹುಮಟ್ಟಿಗೆ ಪ್ರಯತ್ನವನ್ನೇ ಮಾಡುವುದಿಲ್ಲ.

ಹಾಗಾದರೆ ಜನ, ತಮಗೆ ಕೇವಲ ಹಣ, ಅಧಿಕಾರ, ಅಭಿಮಾನ ತಂದುಕೊಡುವ ಸಂಗತಿಗಳನ್ನ ಕಲಿಯುವ ಪ್ರಯತ್ನ ಮಾಡುತ್ತಾರೆಯೇ? ಮತ್ತು ಪ್ರೀತಿ, ಯಾವುದು ಕೇವಲ ತಮ್ಮ ಆತ್ಮವನ್ನು ಸಂತೈಸಲು ಸಹಾಯ ಮಾಡುತ್ತದೆ, ಹೊಸ ಜಗತ್ತಿನ ಭಾಷೆಯಲ್ಲಿ ಯಾವುದರಿಂದ, ಯಾವ ಲಾಭವೂ ಇಲ್ಲ, ಅದಕ್ಕಾಗಿ ತಮ್ಮ ಸಮಯ, ಸಾಮರ್ಥ್ಯವನ್ನು ಖರ್ಚು ಮಾಡುವುದು ಐಷಾರಾಮಿ ಎಂದು ತಿಳಿದುಕೊಂಡಿದ್ದಾರೆಯೇ?

ಈ ಹಿನ್ನೆಲೆಯಲ್ಲಿಯೇ ಪ್ರೀತಿ ಎನ್ನುವ ಕಲೆಯ ಕುರಿತಾದ ನಮ್ಮ ಮುಂದಿನ ಚರ್ಚೆಯನ್ನ ಹೀಗೆ ಮುಂದುವರೆಸುತ್ತಿದ್ದೇನೆ ;

ಮೊದಲು ಪ್ರೀತಿಯ ಥಿಯರಿಯನ್ನ ಚರ್ಚೆ ಮಾಡೋಣ, ಬಹುಶಃ ಇದು ಈ ಪುಸ್ತಕದ ಬಹುಭಾಗವನ್ನು ಆಕ್ರಮಿಸಬಹುದು; ಮತ್ತು ಆಮೇಲೆ ಪ್ರೀತಿಯನ್ನ ಪ್ರ್ಯಾಕ್ಟೀಸ್ ಮಾಡುವ ವಿಷಯವನ್ನ ಚರ್ಚೆಗೆ ತೆಗೆದುಕೊಳ್ಳೋಣ. ಪ್ರೀತಿಯ ವಿಷಯದಲ್ಲಿ ಪ್ರ್ಯಾಕ್ಟೀಸ್ ಬಗ್ಗೆ ಹೇಳಬಹುದಾದದ್ದು ಬಹಳ ಕಡಿಮೆ ಬೇರೆ ಎಲ್ಲ ಕ್ಷೇತ್ರಗಳಂತೆಯೇ.

(……….. ಮುಂದುವರೆಯುವುದು)

ಎರಡನೇ ಕಂತು ಇಲ್ಲಿದೆ: https://aralimara.com/2022/02/20/love-14/

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

Leave a Reply