ನಿಮ್ಮನ್ನು ನೀವು ಹೇಗೆ ಗುರುತಿಸಿಕೊಳ್ಳುತ್ತೀರಿ? : ಓಶೋ ವ್ಯಾಖ್ಯಾನ

ಅಂತರಂಗದಲ್ಲಿಯಾಗಲಿ ಬಹಿರಂಗದಲ್ಲಿಯಾಗಲಿ ನಿಮ್ಮನ್ನ ನೀವು ಹೇಗೆ ಗುರುತಿಸಿಕೊಳ್ಳುತ್ತೀರಿ? ಕನ್ನಡಿಯಲ್ಲಿ ನಿಮ್ಮನ್ನು ನೀವು ನೋಡಿಕೊಂಡು, ಜನರ ಕಣ್ಣಿನ ಕನ್ನಡಿಯಲ್ಲಿ ನಿಮ್ಮನ್ನ ನೋಡಿಕೊಂಡು ? ಅಥವಾ ನಿಮ್ಮ ಬಗ್ಗೆಯ ಜನರ ಅಭಿಪ್ರಾಯಗಳ ಕನ್ನಡಿಯಲ್ಲಿ ನಿಮ್ಮನ್ನ ನೋಡಿಕೊಂಡು ? ಹೇಗೆ ಗುರುತಿಸಿಕೊಳ್ಳುತ್ತೀರಿ ನಿಮ್ಮನ್ನ ನೀವು ? ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ಒಮ್ಮೆ ಒಬ್ಬ ಸೂಫಿ ಒಂದು ಗುಂಪಿನ ಜನರೊಂದಿಗೆ ಊರಿಂದ ಊರಿಗೆ ಪ್ರಯಾಣ ಮಾಡುತ್ತಿದ್ದ. ಜನರ ಗುಂಪು ಸಂಜೆಯಾಗುತ್ತಿದ್ದಂತೆಯೇ ಹತ್ತಿರದ ಊರಿನ ಧರ್ಮಶಾಲೆಯಲ್ಲಿ ರಾತ್ರಿ ಕಳೆಯಲು ನಿರ್ಧರಿಸಿತು. ಆದರೆ ಆ ಧರ್ಮಶಾಲೆಯಲ್ಲಿ ಜಾಗ ಇಲ್ಲದ ಕಾರಣ, ಅಲ್ಲಿನ ವ್ಯವಸ್ಥಾಪಕ ಸೂಫಿಗೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಕೋಣೆ ಹಂಚಿಕೊಳ್ಳಲು ಸೂಚಿಸಿದ.

ಆದರೆ ಹಾಗೆ ಮಾಡಲು ಸೂಫಿ ಸಾರಾಸಗಟಾಗಿ ನಿರಾಕರಿಸಿದ? “ ಸಾಧ್ಯವಿಲ್ಲ, ಇದು ಸಮಸ್ಯೆಯಾಗಬಹುದು. ನಾವು ಇಬ್ಬರು ಒಂದೇ ಕೋಣೆಯಲ್ಲಿದ್ದರೆ, ನಾಳೆ ಮುಂಜಾನೆ ನಾನು ನಿದ್ದೆಯಿಂದ ಎದ್ದಾಗ, ಅಲ್ಲಿರುವ ಇಬ್ಬರಲ್ಲಿ ನಾನು ಯಾರು ಎನ್ನುವ ಕುರಿತು ನನಗೆ ಗೊಂದಲವಾಗಬಹುದು. “

ಸೂಫಿಯ ಮಾತುಗಳನ್ನ ಕೇಳಿ ಧರ್ಮಶಾಲೆಯ ವ್ಯವಸ್ಥಾಪಕನಿಗೆ ಆಶ್ಚರ್ಯವಾಯಿತು. ಅವನ ಬಹಳಷ್ಟು ಸೂಫಿಗಳ ಜೊತೆ ಮಾತನಾಡಿದ್ದನಾದರೂ ಈ ಸೂಫಿಯ ಮಾತು ಬಹಳ ವಿಲಕ್ಷಣ ಅನಿಸಿತು. ವ್ಯವಸ್ಥಾಪಕ ಸೂಫಿಯ ಜೊತೆ ಕೋಣೆ ಹಂಚಿಕೊಳ್ಳಬೇಕಾಗಿದ್ದ ವ್ಯಕ್ತಿಗೆ ಹೇಳಿದ,

“ ಈ ಸೂಫಿ ಹೇಳುವುದು ನಿಜ, ಇಬ್ಬರು ಇರುವಾಗ ಮತ್ತು ಅವರ ನಡುವೆ ಒಂದು ರಾತ್ರಿ ಹಾಯ್ದು ಹೋಗಿರುವಾಗ, ಮುಂಜಾನೆ ಯಾರು ಯಾರೆಂದು ಗುರುತಿಸಿಕೊಳ್ಳುವುದು ಹೇಗೆ? “

“ ಈ ಸಮಸ್ಯೆಯನ್ನ ಪರಿಹರಿಸಿಕೊಳ್ಳಲು ಸೂಫಿ ಒಂದು ಕೆಲಸ ಮಾಡಬಹುದು. ನಿದ್ದೆ ಹೋಗುವಾಗ ಸೂಫಿ ತನ್ನ ಕಾಲಿಗೆ ಒಂದು ಹಗ್ಗ ಕಟ್ಟಿಕೊಳ್ಳಲಿ. ಬೆಳಿಗ್ಗೆ ಎದ್ದಾಗ ಯಾರು ಕಾಲಿನಲ್ಲಿ ಹಗ್ಗ ಇರುತ್ತದೆಯೋ ಅವರು ಸೂಫಿ ಎಂದು ತೀರ್ಮಾನ ಮಾಡಬಹುದು.”ಸೂಫಿಯ ಜೊತೆ ಕೋಣೆ ಹಂಚಿಕೊಳ್ಳಲಿದ್ದ ವ್ಯಕ್ತಿ ಪರಿಹಾರ ಸೂಚಿಸಿದ.

ಸೂಫಿಗೂ ಆ ವ್ಯಕ್ತಿಯ ಮಾತು ಒಪ್ಪಿಗೆಯಾಯಿತು. ಸೂಫಿ ಆ ವ್ಯಕ್ತಿಯ ಜೊತೆ ಕೋಣೆ ಹಂಚಿಕೊಳ್ಳಲು ಒಪ್ಪಿಕೊಂಡ. ರಾತ್ರಿ ನಿದ್ದೆ ಹೋಗುವಾಗ ಸೂಫಿ ತನ್ನ ಕಾಲಿಗೆ ಒಂದು ಹಗ್ಗ ಕಟ್ಟಿಕೊಂಡು ಮಲಗಿದ. ಮಧ್ಯರಾತ್ರಿ ಸೂಫಿ ಗಾಢ ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಿದ್ದಾಗ, ಸೂಫಿಯ ಜೊತೆ ಕೋಣೆಯಲ್ಲಿದ್ದ ವ್ಯಕ್ತಿ ತುಂಟತನ ಮಾಡಲು ನಿರ್ಧರಿಸಿ, ಸೂಫಿಯ ಕಾಲಿನಲ್ಲಿದ್ದ ಹಗ್ಗ ಬಿಚ್ಚಿ ತನ್ನ ಕಾಲಿಗೆ ಕಟ್ಟಿಕೊಂಡ.

ಮರುದಿನ ಬೆಳಿಗ್ಗೆ ಅಲ್ಲೊಂದು ಆತಂಕ ಸೃಷ್ಟಿಯಾಗಿತ್ತು. ಮುಂಜಾನೆ ಸೂಫಿ ನಿದ್ದೆಯಿಂದ ಎದ್ದಾಗ ಅವನ ಜೊತೆಯಲ್ಲಿದ್ದ ವ್ಯಕ್ತಿ ಇನ್ನೂ ನಿದ್ದೆಯಲ್ಲಿದ್ದ. ಸೂಫಿ ಆ ವ್ಯಕ್ತಿಯ ಕಾಲಿನಲ್ಲಿ ಹಗ್ಗ ನೋಡಿ ಅವನನ್ನು ಎಬ್ಬಿಸಿದ,

“ ನಿನ್ನ ಕಾಲಿನಲ್ಲಿ ಹಗ್ಗ ಇದೆಯೆಂದ ಮೇಲೆ ನೀನು ಸೂಫಿ ಎನ್ನುವ ಬಗ್ಗೆ ನನಗೆ ಯಾವ ಅನುಮಾನ ಇಲ್ಲ, ಆದರೆ ನಾನು ಯಾರು, ನನಗೆ ಗೊತ್ತಾಗುತ್ತಿಲ್ಲ . ನಾನು ಛತ್ರದ ವ್ಯವಸ್ಥಾಪಕನಿಗೆ ಮೊದಲೇ ಹೇಳಿದ್ದೆ, ಕೋಣೆಯೊಳಗೆ ಇಬ್ಬರಿದ್ದರೆ ಗೊಂದಲವಾಗುತ್ತದೆಯೆಂದು, ಅವನು ನನ್ನ ಮಾತು ಕೇಳಲಿಲ್ಲ. ನೋಡು ಈಗ ಎಂಥ ಅನಾಹುತವಾಗಿದೆ. ನಾನು ಯಾರು ಎನ್ನುವ ಸಂಶಯ ನನ್ನಲ್ಲಿ ಹುಟ್ಟಿಕೊಂಡಿದೆ. “

ಈ ಸೂಫಿ ಕಥೆ ಬಹಳ ಮಹತ್ವದ್ದು. ಈ ಕಥೆ ನಿಮ್ಮ ಬಗ್ಗೆ, ನಿಮ್ಮನ್ನು ನೀವು ಗುರುತಿಸಿಕೊಳ್ಳುವ ಬಗ್ಗೆ. ಅಂತರಂಗದಲ್ಲಿಯಾಗಲಿ ಬಹಿರಂಗದಲ್ಲಿಯಾಗಲಿ ನಿಮ್ಮನ್ನ ನೀವು ಹೇಗೆ ಗುರುತಿಸಿಕೊಳ್ಳುತ್ತೀರಿ? ಕನ್ನಡಿಯಲ್ಲಿ ನಿಮ್ಮನ್ನು ನೀವು ನೋಡಿಕೊಂಡು , ಜನರ ಕಣ್ಣಿನ ಕನ್ನಡಿಯಲ್ಲಿ ನಿಮ್ಮನ್ನ ನೋಡಿಕೊಂಡು ? ಅಥವಾ ನಿಮ್ಮ ಬಗ್ಗೆಯ ಜನರ ಅಭಿಪ್ರಾಯಗಳ ಕನ್ನಡಿಯಲ್ಲಿ ನಿಮ್ಮನ್ನ ನೋಡಿಕೊಂಡು ? ಹೇಗೆ ಗುರುತಿಸಿಕೊಳ್ಳುತ್ತೀರಿ ನಿಮ್ಮನ್ನ ನೀವು ?

ಕೇವಲ ಬುದ್ಧನಾದವನು ಮಾತ್ರ ಜನರ ಅಭಿಪ್ರಾಯಗಳಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವುದಿಲ್ಲ, ಅವನಿಗೆ ತಾನು ಯಾರು ಎನ್ನುವುದು ಸ್ಪಷ್ಟವಾಗಿ ಗೊತ್ತು. ಅವನಿಗೆ ತನ್ನನ್ನು ಗುರುತಿಸಿಕೊಳ್ಳಲು ಯಾವ ಪರ್ಯಾಯ ವಿಧಾನಗಳು ಬೇಕಿಲ್ಲ, ಯಾವ ಹಗ್ಗ, ಯಾವ ಕನ್ನಡಿ, ತನ್ನ ಕುರಿತಾದ ಜನರ ಯಾವ ಅಭಿಪ್ರಾಯಗಳೂ ಬೇಕಿಲ್ಲ. ಅವನಿಗೆ ನೇರವಾಗಿ ತನ್ನ ಪರಿಚಯ ಇದೆ. ಆದರೆ ನಿಮಗೆ ಇದು ಸಾಧ್ಯವಾಗುತ್ತಿಲ್ಲ ಯಾವಾಗಲೂ ನೀವು ನಿಮ್ಮನ್ನ ಇನ್ನೊಂದು ಪರ್ಯಾಯ ನೋಟದ ಮೂಲಕ ನೋಡಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತೀರಿ, ಆದರೆ ಬುದ್ದ ಹಾಗಲ್ಲ ಅವನಿಗೆ ತನ್ನ ನೇರ ಪರಿಚಯ ಇದೆ.

1 Comment

  1. ಈ ಜನ್ಮಕ್ಕೆ ನಾನು ನಾನಾಗಲು ಸಾಧ್ಯವಿಲ್ಲವೇನೋ ಎಂದನಿಸುತ್ತದೆ 🙂

Leave a Reply