ಪ್ರೀತಿ, ಮಾನವ ಅಸ್ತಿತ್ವದ ಸಮಸ್ಯೆಗೆ ಉತ್ತರ : Art of love #4

ಮನುಷ್ಯನ ಅಸ್ತಿತ್ವದ ಬಗೆಗಿನ ಅವಶ್ಯಕ ಸಂಗತಿಯೆಂದರೆ,  ಮನುಷ್ಯ ಹೊರಬಂದಿರುವುದು ಪ್ರಾಣಿ ಪ್ರಭೇದದಿಂದ , ಪ್ರಾಣಿಗಳ ಮೂಲಭೂತ ಪ್ರವೃತ್ತಿಯ ಅನುಸರಣೆಯಿಂದ. ಮನುಷ್ಯ ಪ್ರಕೃತಿಯೊಂದಿಗೆ ಬದುಕಿದ್ದಾನಾದರೂ, ಅದನ್ನ ಬಿಟ್ಟು ಹೋಗಿಲ್ಲವಾದರೂ ಅವನು ಪ್ರಕೃತಿಯೊಡನೆ ಈಗ ಒಂದಾಗಿಲ್ಲ, ಮೀರಿ ಬಂದಿದ್ದಾನೆ. ಒಮ್ಮೆ ಪ್ರಕೃತಿಯನ್ನು ದಾಟಿ ಬಂದಮೇಲೆ ಮತ್ತೆ ಅವನಿಗೆ ಪ್ರಕೃತಿಯೊಡನೆ ಒಂದಾಗುವುದು ಸಾಧ್ಯವಿಲ್ಲ… ~ Erich Fromm । ಕನ್ನಡಕ್ಕೆ: ಚಿದಂಬರ ನರೇಂದ್ರ

The Theory of love (ಭಾಗ 1)

ಪ್ರೀತಿಯ ಯಾವ ಸಿದ್ಧಾಂತವೇ ಆಗಲಿ ಅದು ಶುರುವಾಗಬೇಕಾದದ್ದು ಮನುಷ್ಯನ ಸಿದ್ಧಾಂತದ ಮೂಲಕ, ಮಾನವ ಅಸ್ತಿತ್ವದ ಸಿದ್ಧಾಂತದ ಮೂಲಕ. ಪ್ರಾಣಿಗಳಲ್ಲಿ ನಾವು ಪ್ರೀತಿಯನ್ನ ಅಥವಾ ಪ್ರೀತಿಗೆ ಸಮಾನವಾದದ್ದನ್ನ ಕಾಣುತ್ತೇವೆಯಾದರೂ, ಪ್ರಾಣಿಗಳ ಬಾಂಧವ್ಯ ಪ್ರಮುಖವಾಗಿ ಅವುಗಳ ಮೂಲಭೂತ ಪ್ರವೃತ್ತಿಯ (instinct) ಭಾಗವಾಗಿ, ಕಾರಣವಾಗಿ; ಮನುಷ್ಯನಲ್ಲಿ ನಾವು ಈ ಬಗೆಯ ಮೂಲಭೂತ ಪ್ರವೃತ್ತಿಯ ಅವಶೇಷಗಳನ್ನು ಮಾತ್ರ ಕಾಣಬಹುದು. ಮನುಷ್ಯನ ಅಸ್ತಿತ್ವದ ಬಗೆಗಿನ ಅವಶ್ಯಕ ಸಂಗತಿಯೆಂದರೆ,  ಮನುಷ್ಯ ಹೊರಬಂದಿರುವುದು ಪ್ರಾಣಿ ಪ್ರಭೇದದಿಂದ , ಪ್ರಾಣಿಗಳ ಮೂಲಭೂತ ಪ್ರವೃತ್ತಿಯ ಅನುಸರಣೆಯಿಂದ. ಮನುಷ್ಯ ಪ್ರಕೃತಿಯೊಂದಿಗೆ ಬದುಕಿದ್ದಾನಾದರೂ, ಅದನ್ನ ಬಿಟ್ಟು ಹೋಗಿಲ್ಲವಾದರೂ ಅವನು ಪ್ರಕೃತಿಯೊಡನೆ ಈಗ ಒಂದಾಗಿಲ್ಲ, ಮೀರಿ ಬಂದಿದ್ದಾನೆ. ಒಮ್ಮೆ ಪ್ರಕೃತಿಯನ್ನು ದಾಟಿ ಬಂದಮೇಲೆ ಮತ್ತೆ ಅವನಿಗೆ ಪ್ರಕೃತಿಯೊಡನೆ ಒಂದಾಗುವುದು ಸಾಧ್ಯವಿಲ್ಲ. ಈ ಸ್ಥಿತಿಯಿಂದ ಮನುಷ್ಯ ಈಗ ಕೇವಲ ಮುಂದೆ ಸಾಗಬಹುದು ತನ್ನ ವಿವೇಕವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತ, ಹೊಸ ಮಾನವೀಯ ಸಾಮರಸ್ಯವನ್ನ ಕಂಡುಕೊಳ್ಳುತ್ತ, ಇನ್ನೆಂದೂ ಮರಳಿ ಪಡೆದುಕೊಳ್ಳಲಾಗದ ಹಳೆಯ ಮಾನವ ಸಂಲಗ್ನತೆಯನ್ನು ಹಿಂದೆ ಬಿಡುತ್ತ.

ಮನುಷ್ಯ ಹುಟ್ಟಿದಾಗ, ಇಡೀ ಮಾನವ ಜನಾಂಗ ಹಾಗೆಯೇ ವೈಯಕ್ತಿಕವಾಗಿ  ಒಬ್ಬ ವ್ಯಕ್ತಿ, ಅವನು ಒಂದು ನಿಶ್ಚಿತ ಸ್ಥಿತಿಯಿಂದ ಹೊರದೂಡಲ್ಪಡುತ್ತಾನೆ, ಇನ್ನೊಂದು ಅಪರಿಚಿತ, ಅನಿಶ್ಚಿತ ಸ್ಥಿತಿಯೊಳಗೆ. ಮನುಷ್ಯ ತನ್ನ ಮೂಲಭೂತ ಪ್ರವೃತ್ತಿಯಷ್ಟೇ ಖಚಿತವಾಗಿದ್ದ ಸ್ಥಿತಿಯಿಂದ ಹೊರಬಂದು, ಒಂದು ಅಸ್ಪಷ್ಟ , ಅನಿಶ್ಚಿತ , ಮುಕ್ತ ಸನ್ನಿವೇಶಕ್ಕೆ ತನ್ನನ್ನು ತಾನು ತೆರೆದುಕೊಳ್ಳುತ್ತಾನೆ. ಇಂಥ ಒಂದು ಸ್ಥಿತಿಯಲ್ಲಿರುವ ಮನುಷ್ಯನಿಗೆ ಕೇವಲ ಹಿಂದೆ ಆಗಿದ್ದರ ಬಗ್ಗೆ ಖಚಿತವಾಗಿ ಗೊತ್ತಿದೆ ಮತ್ತು ಭವಿಷ್ಯದ ಬಗ್ಗೆ ತನ್ನ ಸಾವಿನ ಹೊರತಾಗಿ ಗೊತ್ತಿಲ್ಲ ಬೇರೆ ಏನೂ.

ವಿವೇಚನಾ ಶಕ್ತಿ ಮನುಷ್ಯನಿಗೆ ಬಳುವಳಿಯಾಗಿ ಬಂದಿರುವಂಥದು. ತನ್ನ ಬಗ್ಗೆಯೇ ಅರಿವು ಹೊಂದಿರುವಂಥ ಬದುಕು ಅವನದು. ಅವನಿಗೆ  ತನ್ನ ಬಗ್ಗೆ, ತನ್ನ ಜೊತೆ ಇರುವವರ ಬಗ್ಗೆ, ತನ್ನ ಭೂತ ಕಾಲದ ಬಗ್ಗೆ, ತನ್ನ ಭವಿಷ್ಯದ ಸಾಧ್ಯತೆಗಳ ಬಗ್ಗೆ ತಿಳುವಳಿಕೆಯಿದೆ. ಅವನಿಗೆ ಅರಿವಿದೆ, ತಾನು ಒಂದು ಪ್ರತ್ಯೇಕ ಅಸ್ತಿತ್ವ ಎನ್ನುವ ಬಗ್ಗೆ, ತನ್ನ ಬದುಕಿನ ಹರವು ಚಿಕ್ಕದು ಎನ್ನುವ ಬಗ್ಗೆ, ತಾನು ಇಚ್ಛಿಸದೆಯೂ ಹುಟ್ಟಿರುವ ಬಗ್ಗೆ, ತನ್ನ ಇಚ್ಛೆ ಇಲ್ಲದಿರುವಾಗಲೂ ತನಗೆ ಸಾವಿನಿಂದ ಬಿಡುಗಡೆ ಇಲ್ಲ ಎನ್ನುವ ಬಗ್ಗೆ, ತನ್ನ ಪ್ರೀತಿಪಾತ್ರರಿಗಿಂತಲೂ ತಾನು ಮೊದಲು ಅಥವಾ ನಂತರ ಸಾಯುವ ಬಗ್ಗೆ, ತನ್ನ ಒಂಟಿತನದ ಬಗ್ಗೆ, ಪ್ರತ್ಯೇಕತೆಯ ಬಗ್ಗೆ, ಪ್ರಕೃತಿ ಮತ್ತು ಸಮಾಜದ ಎದುರು ತಾನು ಅಸಹಾಯಕ ಎನ್ನುವ ಬಗ್ಗೆ. ಈ ಎಲ್ಲವೂ ಅವನ  ಪ್ರತ್ಯೇಕ, ತುಂಡು ತುಂಡಾದ ಅಸ್ತಿತ್ವವನ್ನು ಸಹಿಸಲಸಾಧ್ಯವಾದ ಜೈಲು ಮಾಡಿವೆ. ಅವನು ಈ ಬಂಧನದಿಂದ ಹೊರಬಂದು,  ಒಂದಿಲ್ಲ ಒಂದು ರೀತಿಯಲ್ಲಿ ತನ್ನನ್ನು ಇತರ ಮನುಷ್ಯರೊಡನೆ, ಹೊರಗಿನ ಜಗತ್ತಿನೊಡನೆ ಒಂದಾಗಿಸಿಕೊಳ್ಳದೇ ಹೋದರೆ ಹುಚ್ಚನಾಗಿಬಿಡುವ ಎಲ್ಲ ಸಾಧ್ಯತೆಯನ್ನು ಎದುರಿಸಬೇಕಾಗಬಹುದು.

ಸುತ್ತಲ ಬದುಕಿನಿಂದ ಬೇರೆಯಾಗುವಿಕೆಯ ಅನುಭವ, ಆತಂಕವನ್ನು ಸೃಷ್ಟಿಸುತ್ತದೆ; ಇದೇ ಎಲ್ಲ ಆತಂಕಗಳ ಮೂಲ ಕೂಡ ಹೌದು. ಬೇರೆಯಾಗುವುದೆಂದರೆ, ಕತ್ತರಿಸಿಕೊಳ್ಳುವುದು, ತನ್ನ ಮನುಷ್ಯ ಸಾಮರ್ಥ್ಯವನ್ನು ಬಳಸುವ ಯಾವ ಸಾಧ್ಯತೆಯೂ ಇಲ್ಲದಿರುವುದು. ಹಾಗಾಗಿ ಬೇರೆಯಾಗುವುದೆಂದರೆ ಅಸಹಾಯಕರಾಗುವುದು, ಜಗತ್ತನ್ನ, ಜಗತ್ತಿನ ವಿದ್ಯಮಾನಗಳನ್ನ, ಜಗತ್ತಿನ ಜನರನ್ನ ಕ್ರಿಯಾತ್ಮಕವಾಗಿ ಗ್ರಹಿಸುವುದು ಸಾಧ್ಯವಾಗದೇ ಹೋಗುವುದು, ಜಗತ್ತು ತನ್ನ ಮೇಲೆ ಆಕ್ರಮಣ ಮಾಡಿದಾಗ ತನಗೆ ಪ್ರತಿರೋಧ ತೋರುವುದು ಸಾಧ್ಯವಾಗದೇ ಇರುವುದು. ಆದ್ದರಿಂದ ಬೇರೆಯಾಗುವಿಕೆ ದಟ್ಟ ಆತಂಕದ ಮೂಲ ಸ್ರೋತ.  ಇದರ ಹೊರತಾಗಿಯೂ,  ಬೇರೆಯಾಗುವಿಕೆ ಹುಟ್ಟು ಹಾಕುತ್ತದೆ ನಾಚಿಕೆ ಮತ್ತು ಅಪರಾಧದ ಭಾವನೆಯನ್ನ.  ಬೇರೆಯಾಗುವಿಕೆಯಲ್ಲಿರುವ ನಾಚಿಕೆ ಮತ್ತು ಅಪರಾಧೀ ಮನೋಭಾವದ ಅನುಭವವನ್ನ ಬೈಬಲ್ ನಲ್ಲಿ ಆ್ಯಡಂ ಮತ್ತು ಈವ್ ಕಥೆಯ ಮೂಲಕ ಹೇಳಲಾಗಿದೆ.

ಆ್ಯಡಂ ಮತ್ತು ಈವ್  ‘ಒಳಿತು ಮತ್ತು ಕೆಡಕುಗಳ ತಿಳುವಳಿಕೆಯ ಮರ’ ದಿಂದ  ಹಣ್ಣು ಕಿತ್ತು ತಿಂದು ನಿಯಮಗಳನ್ನು (ನಿಯಮಗಳನ್ನು ಮೀರುವ ಸ್ವಾತಂತ್ರ್ಯವಿರದಿದ್ದರೆ, ಒಳಿತು-ಕೆಡಕುಗಳೂ ಇರುವುದಿಲ್ಲ) ಮೀರಿದ ಮೇಲೆ, ಅವರು ಪ್ರಾಣಿ ಮತ್ತು ಪ್ರಕೃತಿಯ ನಡುವೆ ಇದ್ದ ಮೂಲ ಸಾಮರಸ್ಯದಿಂದ ಬಿಡುಗಡೆ ಪಡೆದುಕೊಂಡು ಮನುಷ್ಯರಾದ ಮೇಲೆ, ಅಂದರೆ ಮನುಷ್ಯರಾಗಿ ಅವರು ಹುಟ್ಟಿದ ಮೇಲೆ,  ಅವರು ತಾವು “ಬೆತ್ತಲೆಯಾಗಿರುವುದನ್ನ ಕಂಡು ನಾಚಿಕೆ ಪಟ್ಟುಕೊಂಡರು”.

ಹೀಗೆ ಇಷ್ಟು ಸರಳವಾಗಿ ಹೇಳಲಾದ ಪುರಾತನ ಪುರಾಣ ಕಥೆಯಲ್ಲಿ  ಹತ್ತೊಂಭತ್ತನೇ ಶತಮಾನದ ದೃಷ್ಟಿಯ ಲೈಂಗಿಕತೆಯ ಕುರಿತಾದ ಉತ್ಪ್ರೇಕ್ಷಿತ ನೈತಿಕತೆ ಇರಬಹುದೆಂದು, ಮತ್ತು ಕತೆ ಮುಖ್ಯವಾಗಿ ನಮಗೆ ಹೇಳುತ್ತಿರುವುದು ತಮ್ಮ ಜನನಾಂಗಗಳು ಕಣ್ಣಿನ ದೃಷ್ಟಿಗೆ ಬೀಳುವಂತಿರುವುದರಿಂದ ಅವರಿಗಾದ ಮುಜುಗರವನ್ನ ಎಂದು ನಾವು ಅಂದುಕೊಳ್ಳಬಹುದೆ? ಬಹುಶಃ ಹಾಗಿರಲಾರದು, ಮತ್ತು ವಿಕ್ಟೋರಿಯನ್ನರಂತೆ ಈ ಕಥೆಯನ್ನ ಗ್ರಹಿಸಿದೆವಾದರೆ ಬಹು ಮುಖ್ಯವಾದ ಸಂಗತಿಯೊಂದನ್ನ ನಾವು ನಿರ್ಲಕ್ಷಿಸಿದಂತಾಗುತ್ತದೆ. ಆ ಸಂಗತಿಯೆಂದರೆ : ಗಂಡು ಮತ್ತು ಹೆಣ್ಣು ಇಬ್ಬರೂ ತಮ್ಮ ಬಗ್ಗೆ  ಹಾಗು ಪರಸ್ಪರರ ಬಗ್ಗೆ ಅರಿವು ಮೂಡಿಸಿಕೊಂಡ ಮೇಲೆ, ಅವರು ತಾವಿಬ್ಬರೂ ಬೇರೆ ಬೇರೆ ಎಂದೂ, ವಿಭಿನ್ನ ಎಂದೂ , ತಾವಿಬ್ಬರೂ ಬೇರೆ ಲಿಂಗತ್ವಕ್ಕೆ ಸೇರಿದವರು ಎನ್ನುವುದರ ಕುರಿತಾಗಿ ಅರಿವು ಬೆಳೆಸಿಕೊಂಡರು. ಆದರೆ ಅವರು ತಮ್ಮ ಪ್ರತ್ಯೇಕತೆಯನ್ನ ಗುರುತಿಸಿಕೊಂಡರೂ ಒಬ್ಬರಿಗೊಬ್ಬರು ಅಪರಿಚಿತರಾಗಿಯೇ ಉಳಿದರು ಏಕೆೆಂದರೆ ಅವರು ಪರಸ್ಪರರನ್ನ ಪ್ರೀತಿಸುವುದನ್ನ ಇನ್ನೂ ಕಲಿತಿರಲಿಲ್ಲ ( ಆ್ಯಡಂ, ಈವ್ ಳನ್ನ ಸಮರ್ಥನೆ ಮಾಡಿಕೊಳ್ಳದೇ ತನ್ನನ್ನು ರಕ್ಷಿಸಿಕೊಳ್ಳಲು ಆಗಿ ಹೋಗಿದ್ದಕ್ಕೆ ಈವ್ ಳನ್ನೇ ದೂಷಿಸುವುದು ಇದನ್ನ ಸೂಚಿಸುತ್ತದೆ). ಮನುಷ್ಯನ ಪ್ರತ್ಯೆಕತೆಯ ಕುರಿತಾದ ಅರಿವು ಮತ್ತು ಪ್ರೀತಿಯಿಂದ ಸಾಧ್ಯವಾಗದ ಪುನರ್ಮಿಲನ, ಅವನ  ನಾಚಿಕೆ, ಅವಮಾನದ ಮೂಲ ಹಾಗು ಅದೇ ವೇಳೆಗೆ ಆತಂಕ ಮತ್ತು ಅಪರಾಧಿ ಮನೋಭಾವದ ಮೂಲ ಕೂಡ.

(… ಮುಂದುವರಿಯುವುದು)

ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2022/02/27/love-16/

1 Comment

Leave a Reply