ಪ್ರತ್ಯೇಕತೆಯನ್ನು ಮೀರುವುದು… : Art of love #5

‘ಪ್ರೀತಿ’ ಮಾನವನ ಅಸ್ತಿತ್ವದ ಸಮಸ್ಯೆಗೆ ಉತ್ತರ – ಅನ್ನುವ ಎರಿಕ್ ಫ್ರಾಮ್`ನ ‘ದ ಥಿಯರಿ ಆಫ್ ಲವ್’ ಮುಂದುವರಿದ ಭಾಗ ಇಲ್ಲಿದೆ… ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2022/03/06/love-17/

The Theory of love (ಭಾಗ 2)

ಮನುಷ್ಯನಿಗೆ ಅತ್ಯಂತ ಅಗತ್ಯವಾದದ್ದು, ಅವನು ತನ್ನ ಒಂಟಿತನವನ್ನ, ಪ್ರತ್ಯೇಕತೆಯನ್ನು ಮೀರುವುದು, ತನ್ನ ಒಂಟಿತನದ ಜೈಲಿನಿಂದ ಹೊರಗೆ ಬರುವವದು. ಈ ಗುರಿಯನ್ನು ಸಾಧಿಸುವಲ್ಲಿನ ಸಂಪೂರ್ಣ ವಿಫಲತೆ ಎಂದರೆ ಅದು ಹುಚ್ಚಿನಲ್ಲಿ ಮುಗಿತಾಯಗೊಳ್ಳುವುದು. ಏಕೆಂದರೆ ಸಂಪೂರ್ಣ ಪ್ರತ್ಯೇಕತೆಯ ಕಾರಣವಾಗಿ ಹುಟ್ಟುವ ಆತಂಕ ಮತ್ತು ದಿಗಿಲನ್ನ ಮೀರುವುದೆಂದರೆ ಸುತ್ತಲಿನ ಜಗತ್ತಿನಿಂದ ಅಮೂಲಾಗ್ರವಾಗಿ ವಾಪಸ್ಸಾಗುವುದು, ಆಗ ಪ್ರತ್ಯೇಕತೆಯ ಭಾವನೆ ಮಾಯವಾಗುವುದು ಏಕೆಂದರೆ ಆಗ ಹೊರಗಿನ ಜಗತ್ತೂ ಯಾವುದರಿಂದ ಮನುಷ್ಯ ಬೇರೆಯಾಗಿದ್ದಾನೋ ಅದು ಕೂಡ ಮಾಯವಾಗಿರುತ್ತದೆ.

ಎಲ್ಲ ಪೀಳಿಗೆಯ ಮತ್ತು ಎಲ್ಲ ಸಂಸ್ಕೃತಿಯ ಮನುಷ್ಯ ಇದೇ ಒಂದು ಪ್ರಶ್ನೆಯ ಪರಿಹಾರವನ್ನು ಎದುರಿಸಬೇಕಾಗಿದೆ,  ಹೇಗೆ ಪ್ರತ್ಯೇಕತೆಯನ್ನ ಮೀರಬೇಕು ಎನ್ನುವ ಪ್ರಶ್ನೆ, ಹೇಗೆ ಮತ್ತೆ ಒಂದಾಗಬೇಕು ಎನ್ನುವ ಪ್ರಶ್ನೆ, ಒಂದು ವೈಯಕ್ತಿಕ ಬದುಕನ್ನ ದಾಟಿ ಹೇಗೆ ಒಂದಾಗುವಿಕೆಯನ್ನ ಹುಡುಕುವುದು ಎನ್ನುವ ಪ್ರಶ್ನೆ.  ಗುಹೆಯಲ್ಲಿ ವಾಸಿಸುತ್ತಿದ್ದ ಪುರಾತನ ಮನುಷ್ಯ, ತನ್ನ ಗುಂಪಿನ ಜವಾಬ್ದಾರಿಯನ್ನು ಹೊತ್ತಿದ್ದ ಅಲೆಮಾರಿ ಮನುಷ್ಯ, ಈಜಿಪ್ತಿನ ರೈತ, ಫಿನೀಷಿಯಾದ ವ್ಯಾಪಾರಿ, ರೋಮನ್ ಸೈನಿಕ, ಮಧ್ಯಯುಗದ ಸನ್ಯಾಸಿ , ಜಪಾನಿನ ಸಮುರಾಯಿ, ಆಧುನಿಕ ಜಗತ್ತಿನ ಕ್ಲರ್ಕ ಮತ್ತು ಕಾರ್ಮಿಕ ಎಲ್ಲರೂ ಎದುರಿಸುತ್ತಿರುವ ಪ್ರಶ್ನೆ ಒಂದೇ, ಹೇಗೆ ಪ್ರತ್ಯೇಕತೆಯನ್ನ ಮೀರುವುದು ಮತ್ತು ಹೇಗೆ ಒಂದಾಗುವಿಕೆಯನ್ನ ಸಾಧಿಸುವುದು. ಈ ಎಲ್ಲರೂ ಎದುರಿಸುತ್ತಿರುವ ಪ್ರಶ್ನೆ ಒಂದೇ ಏಕೆಂದರೆ ಅದು ಹುಟ್ಟಿರುವುದು ಒಂದೇ ಮೂಲದಿಂದ; ಮನುಷ್ಯ ಬದುಕಿನ ಪರಿಸರ ಮತ್ತು ಮನುಷ್ಯನ ಅಸ್ತಿತ್ವದ ಸ್ಥಿತಿ. ಆದರೆ ಈ ಪ್ರಶ್ನೆಗೆ ಉತ್ತರಗಳು ಬೇರೆ ಬೇರೆ. ಈ ಪ್ರಶ್ನೆಗೆ ಉತ್ತರವನ್ನ ಪ್ರಾಣಿ ಪೂಜೆ, ನರ ಬಲಿ ಅಥವಾ ಮಿಲಿಟರಿ ಆಕ್ರಮಣ, ಐಷಾರಾಮಿಯಲ್ಲಿ ತೊಡಗಿಸಿಕೊಳ್ಳುವುದು, ಸ್ವಯಂ ನಿಗ್ರಹ ಮತ್ತು ವೈರಾಗ್ಯ, ಉತ್ಕಟ ಉನ್ಮಾದದ ಕ್ರಿಯೆಗಳು, ಕಲಾ ಸೃಷ್ಟಿ, ಭಗವಂತನ ಪ್ರೇಮ, ಮತ್ತು ಮನುಷ್ಯ ಪ್ರೇಮಗಳ ಮೂಲಕ ಕಂಡುಕೊಳ್ಳಬಹುದು. ಮನುಷ್ಯನ ಇತಿಹಾಸ ಈ ಹಲವಾರು ಉತ್ತರಗಳನ್ನ ದಾಖಲು ಮಾಡುತ್ತದೆಯಾದರೂ, ಈ ಉತ್ತರಗಳು ಅಸಂಖ್ಯವಲ್ಲ. ಬದಲಾಗಿ, ಹೊರಗಿನ ಪರಿಧಿಯಲ್ಲಿ ಕಂಡು ಬರುವ ಸಣ್ಣ ಸಣ್ಣ ವ್ಯತ್ಯಾಸಗಳನ್ನು ಕಡೆಗಣಿಸಿ ನೋಡಿದರೆ, ನಮಗೆ ಸಿಗುವ ಉತ್ತರಗಳು ಕೆಲವೇ ಕೆಲವು ಮತ್ತು ಈ ಉತ್ತರಗಳು ವಿವಿಧ ಸಂಸ್ಕೃತಿಗಳಲ್ಲಿ ಬದುಕಿದ ಮನುಷ್ಯ ಮಾತ್ರ ಕೊಡಬಹುದಾದಂಥವು. ಧರ್ಮ ಮತ್ತು ತತ್ವಜ್ಞಾನದ ಇತಿಹಾಸವೆಂದರೆ ಈ ಉತ್ತರಗಳ ಇತಿಹಾಸ ಮತ್ತು ಸಂಖ್ಯೆಗಳಲ್ಲಿನ ಅವುಗಳ ಸೀಮಿತತೆ.

ಈ ಉತ್ತರಗಳು ಸ್ವಲ್ಪ ಮಟ್ಟಿಗೆ, ಒಬ್ಬ ವೈಯಕ್ತಿಕ ವ್ಯಕ್ತಿ ವೈಯಕ್ತೀಕರಣಗೊಂಡಿರುವ ವಿಸ್ತಾರವನ್ನ ಅವಲಂಬಿಸಿದೆ. ಹಸುಗೂಸಿನಲ್ಲಿ ‘ನಾನು’  ಎನ್ನುವ ಭಾವ  ಅಭಿವೃದ್ಧಿಗೊಂಡಿದೆಯಾದರೂ ಸ್ವಲ್ಪ ಮಟ್ಟಿಗೆ ಮಾತ್ರ ; ಮಗು ತಾಯಿಯೊಡನೆ ಇನ್ನೂ ಒಂದಾಗಿರುವ ಭಾವವನ್ನು ಅನುಭವಿಸುತ್ತಿದೆ, ತಾಯಿ ತನ್ನೊಡನೆ ಇರುವಷ್ಟು ಹೊತ್ತು ಮಗುವಿನಲ್ಲಿ ಯಾವ ಪ್ರತ್ಯೇಕತೆಯ ಭಾವನೆಯೂ ಇಲ್ಲ. ಮಗುವಿನ ಒಂಟಿತನದ ಭಾವನೆ, ತಾಯಿಯ ಭೌತಿಕ ಹಾಜರಾತಿಯಿಂದ, ಅವಳ ಮೊಲೆಗಳ, ಮೈಯ ಸ್ಪರ್ಶದಿಂದಾಗಿ ಮಾಯವಾಗಿದೆ. ಮಗು ಎಷ್ಟು ಪ್ರತ್ಯೇಕತೆಯನ್ನ ಬೆಳೆಸಿಕೊಳ್ಳುತ್ತದೆಯೆಂದರೆ ತನಗೆ ಎಷ್ಟು ತಾಯಿಯ ಸಾಮಿಪ್ಯ ಸಾಕಾಗುತ್ತಿಲ್ಲ ಮತ್ತು ಪ್ರತ್ಯೇಕತೆಯನ್ನ ಮೀರಲು ಬೇರೆ ಏನಾದರೂ ಬೇಕು ಅನ್ನುವಷ್ಟು ಮಾತ್ರ. ಇದೇ ರೀತಿ,  ತನ್ನ ಶೈಶವ ಸ್ಥಿತಿಯಲ್ಲಿರುವ ಮಾನವ ಜನಾಂಗ ಇನ್ನೂ ಪ್ರಕೃತಿಯೊಡನೆ ಒಂದಾಗಿರುವ ಭಾವ ಹೊಂದಿದೆ. ನೆಲ, ಪ್ರಾಣಿಗಳು, ಗಿಡ ಮರಗಳು ಇನ್ನೂ ಮನುಷ್ಯ ಜಗತ್ತಿನ ಭಾಗಗಳಾಗಿವೆ. ಮನುಷ್ಯ ಪ್ರಾಣಿಗಳನ್ನು ತನ್ನೊಂದಿಗೆ ಗುರುತಿಸಿಕೊಳ್ಳುತ್ತಾನೆ, ಅವನ ಈ ಭಾವನೆಯನ್ನು ಆತನ ಪ್ರಾಣಿ ಪೂಜೆಯಲ್ಲಿ, ಪ್ರಾಣಿ ಪ್ರೀತಿಯಲ್ಲಿ, ಅವನು ಪ್ರಾಣಿಗಳ ಮುಖವಾಡ ಬಳಸುವ ರೀತಿಯಲ್ಲಿ ಗುರುತಿಸಬಹುದು. ಈ ಪ್ರಾಥಮಿಕ ಬಂಧಗಳಿಂದ ಮನುಷ್ಯ ಹೊರಬಂದಂತೆಲ್ಲ, ಮನುಷ್ಯ ಜಾತಿ ಹೆಚ್ಚು ಹೆಚ್ಚು ಸಹಜ ಜಗತ್ತಿನಿಂದ ಪ್ರತ್ಯೇಕವಾಗುತ್ತ ಹೋಗುವುದು ಮತ್ತು ಈ ಕಾರಣವಾಗಿಯೇ ಪ್ರತ್ಯೇಕತೆಯನ್ನ ಮೀರುವ ಹೊಸ ಹೊಸ ವಿಧಾನಗಳ ಹುಡುಕಾಟ ಇನ್ನೂ ತೀವ್ರವಾಗಿ ಮನುಷ್ಯನನ್ನು ಕಾಡಲು ಶುರು ಮಾಡುವುದು.

Leave a Reply