ಮನುಷ್ಯನ ಒಂದು ನಿಗೂಢ ವಿಷಯವೆಂದರೆ ಅವನು ತನ್ನಲ್ಲಿ ಇಲ್ಲದಿರುವುದನ್ನ ಹಂಚುವ ಪ್ರಯತ್ನ ಮಾಡುತ್ತಾನೆ. ನಿಮ್ಮೊಳಗೇ ಮೊದಲು ಪ್ರೇಮ ಇಲ್ಲದಿರುವಾಗ ನೀವು ಪ್ರೇಮ ಕೊಡಲು ಮುಂದಾಗುತ್ತೀರಿ, ಯಾರ ಬಳಿಯಲ್ಲಿ ಪ್ರೇಮ ಇಲ್ಲವೋ ಅವರಿಂದ ಪ್ರೇಮ ಪಡೆಯಲು ಚಡಪಡಿಸುತ್ತೀರಿ. ಭಿಕ್ಷುಕರು ಭಿಕ್ಷುಕರಿಂದ ಭಿಕ್ಷೆ ಬೇಡುವಂತೆ : Osho, The guest talk # 5 । ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಜವಾದ ಸಂಗತಿ ಸಂಬಂಧ (Relationship ) ಅಲ್ಲ ; ನಿಜವಾದ ಸಂಗತಿಯೆಂದರೆ ಆ ಒಂದು ಸ್ಥಿತಿ ; ಇಲ್ಲಿ ಯಾರೂ ಪ್ರೇಮದಲ್ಲಿಲ್ಲ, ಅವರೇ ಸ್ವತಃ ಪ್ರೇಮವಾಗಿದ್ದಾರೆ. ನಾನು ಪ್ರೇಮದ ಇಂಥದೊಂದು ಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದೇನೆ. ಸಂಬಂಧ ಒಳ್ಳೆಯದು ನಿಜ ಆದರೆ ನೀವು ಪ್ರೇಮದ ಇಂಥ ಸ್ಥಿತಿಯಲ್ಲಿ ಇಲ್ಲವಾದರೆ, ಸಂಬಂಧ ಸುಳ್ಳಿನ ಸರಣಿಯಾಗುತ್ತದೆ. ಆಗ ಸಂಬಂಧ ಬರೀ ತೋರಿಕೆಯಷ್ಟೇ ಅಲ್ಲ ಮಹಾ ಅಪಾಯಕಾರಿ ತೋರಿಕೆ, ಏಕೆಂದರೆ ಅದು ನಿಮಗೆ ಮೋಸ ಮಾಡುತ್ತಲೇ ಹೋಗುತ್ತದೆ. ಪ್ರೇಮದ ಬಗೆಗೆ ನಿಮಗೆಲ್ಲ ಗೊತ್ತು ಎನ್ನುವ ಭಾವನೆಯನ್ನ ನಿಮ್ಮಲ್ಲಿ ತುಂಬುತ್ತದೆ ಆದರೆ ನಿಜದಲ್ಲಿ ಪ್ರೇಮದ ವಿಷಯದಲ್ಲಿ ನೀವು ಅಜ್ಞಾನಿಗಳು. ಮೂಲಭೂತವಾಗಿ ಪ್ರೇಮ ಒಂದು ಇರುವಿಕೆಯ ಸ್ಥಿತಿ, ಇಲ್ಲಿ ಯಾರೂ ಪ್ರೇಮದಲ್ಲಿಲ್ಲ, ಸ್ವತಃ ಅವರೇ ಪ್ರೇಮವಾಗಿದ್ದಾರೆ.
ಪ್ರೇಮ ಹುಟ್ಟುವುದು, ಯಾರೊಂದಿಗಾದರೂ ಪ್ರೇಮದಲ್ಲಿ ಬೀಳುವುದರಿಂದ ಅಲ್ಲ, ಪ್ರೇಮ ಹುಟ್ಟುವುದು ಪ್ರೇಮದಲ್ಲಿ ಎತ್ತರಕ್ಕೆ ಏರುವುದರಿಂದ, ನಿಮ್ಮ ಎತ್ತರವನ್ನೂ ಮೀರುವುದರಿಂದ. ಯಾವ ಮನುಷ್ಯನ ಅಸ್ತಿತ್ವ ಮೌನದಲ್ಲಿ, ಸಮಾಧಾನದಲ್ಲಿ ಒಂದಾಗಿದೆಯೋ ಆ ಮನುಷ್ಯ ಸ್ವತಃ ಪ್ರೇಮವಾಗಿದ್ದಾನೆ. ಬುದ್ಧ ಒಂದು ಪ್ರೇಮ, ಜೀಸಸ್ ಒಂದು ಪ್ರೇಮ. ಈ ಪ್ರೇಮ ಬೇರೊಬ್ಬ ವ್ಯಕ್ತಿಯೊಂದಿಗಿನ ಪ್ರೇಮವಲ್ಲ , ಸುಮ್ಮನೇ ಸರಳ ಪ್ರೇಮ. ಅವರ ವಾತಾವರಣವೇ ಪ್ರೇಮಮಯ. ಈ ಪರಿಧಿಯೊಳಗೆ ಬಂದವರೆಲ್ಲ ಬುದ್ಧನ ಪ್ರೇಮವನ್ನು ಅನುಭವಿಸುತ್ತಾರೆ, ಅವನ ಪ್ರೇಮದಲ್ಲಿ ಒದ್ದೆಯಾಗುತ್ತಾರೆ, ಯಾವ ಕರಾರುಗಳಿಗೆ ಒಳಪಡದೆ ಪ್ರೇಮದಲ್ಲಿ ಒಂದಾಗುತ್ತಾರೆ.
ಪ್ರೇಮದಲ್ಲಿ ಯಾವ ಕರಾರುಗಳಿಲ್ಲ, ಆದರೆ ಗೀದರೆ – ಗಳಿಲ್ಲ, ಹಾಗೆ – ಹೀಗೆಗಳಿಲ್ಲ. ನನ್ನ ಅವಶ್ಯಕತೆಗಳನ್ನು ಪೂರೈಸಿದ ಮೇಲಷ್ಟೇ ನಿನಗೆ ದೊರಕುತ್ತೇನೆ ಎಂದು ಪ್ರೇಮ ಯಾವತ್ತೂ ಕರಾರುಗಳನ್ನ ವಿಧಿಸುವುದಿಲ್ಲ, ಪ್ರೇಮ ಉಸಿರಾಟದ ಹಾಗೆ ಸರಾಗ. ಪ್ರೇಮ ನಿಮಗೆ ದಕ್ಕಿದಾಗ, ನೀವು ಸ್ವತಃ ಪ್ರೇಮ, ನಿಮ್ಮ ಹತ್ತಿರ ಬಂದವರು ಅವರು ಸಂತರಾಗಿರಬಹುದು, ಸೈತಾನರಾಗಿರಬಹುದು ನಿಮಗೆ ವ್ಯತ್ಯಾಸವಾಗುವುದಿಲ್ಲ, ಈಗ ನಿಮ್ಮ ಕೈ ಮೀರಿ ಹೋಗಿದೆ, ನೀವು ಎಲ್ಲರನ್ನೂ ಪ್ರೀತಿಸುತ್ತಿದ್ದೀರಿ, ಇದು ನಿಮಗೆ ಅನಿವಾರ್ಯ. ಆದರೆ ಯಾರು ಸ್ವತಃ ಪ್ರೇಮವಾಗಿದ್ದಾರೋ ಅವರು ಮಾತ್ರ ಪ್ರೇಮವನ್ನ ಕೊಡುವುದು ಸಾಧ್ಯ.
ಮನುಷ್ಯನ ಒಂದು ನಿಗೂಢ ವಿಷಯವೆಂದರೆ ಅವನು ತನ್ನಲ್ಲಿ ಇಲ್ಲದಿರುವುದನ್ನ ಹಂಚುವ ಪ್ರಯತ್ನ ಮಾಡುತ್ತಾನೆ. ನಿಮ್ಮೊಳಗೇ ಮೊದಲು ಪ್ರೇಮ ಇಲ್ಲದಿರುವಾಗ ನೀವು ಪ್ರೇಮ ಕೊಡಲು ಮುಂದಾಗುತ್ತೀರಿ, ಯಾರ ಬಳಿಯಲ್ಲಿ ಪ್ರೇಮ ಇಲ್ಲವೋ ಅವರಿಂದ ಪ್ರೇಮ ಪಡೆಯಲು ಚಡಪಡಿಸುತ್ತೀರಿ. ಭಿಕ್ಷುಕರು ಭಿಕ್ಷುಕರಿಂದ ಭಿಕ್ಷೆ ಬೇಡುವಂತೆ.
ಪ್ರೇಮ ಮೊದಲು ನಿಮ್ಮ ಇರುವಿಕೆಯ ತಿರುಳಿನಲ್ಲಿ ಅನಾವರಣಗೊಳ್ಳಬೇಕು. ಪ್ರೇಮ ಎಂದರೆ ನಿಮ್ಮ ಏಕಾಂತದ ಇರುವಿಕೆಯ, ಖುಶಿಯ, ಆನಂದದ ಗುಣಮಟ್ಟ. ಪ್ರೇಮ ಎಂದರೆ ನಿಮ್ಮ ಆಲೋಚನಾ ಮುಕ್ತ (no mind) ಇರುವಿಕೆಯ, ನಿಮ್ಮ ಮೌನದ, ಸಮಾಧಾನದ ಗುಣಮಟ್ಟ. ಅಪರಿಮಿತ ಪ್ರಜ್ಞೆಯ ಅವಕಾಶದಲ್ಲಿ, ಸಂದರ್ಭದಲ್ಲಿ ನಿಮ್ಮೊಳಗೆ ಪ್ರೇಮದ ಅವತಾರವಾಗುತ್ತದೆ.
ಯಾವಾಗ ಇಂಥ ಪ್ರೇಮ ನಿಮ್ಮೊಳಗೆ ಹುಟ್ಟಿಕೊಳ್ಳುತ್ತದೆಯೋ ಆಗ ಅದನ್ನ ಸಹಿಸುವುದು ನಿಮಗೆ ಅಸಾಧ್ಯವಾಗುತ್ತದೆ, ನಿಮ್ಮನ್ನು ಒಂದು ನೋವಿನ ಹಾಗೆ ಅದು ಕಾಡಲು ಶುರು ಮಾಡುತ್ತದೆ. ಪ್ರೇಮ ತನ್ನೊಳಗೆ ಮಳೆ ತುಂಬಿಕೊಂಡ ಮೋಡಗಳ ಹಾಗೆ ಭಾರ, ಅವು ಹಗುರಾಬೇಕಾದರೆ ಮಳೆ ಸುರಿಸಲೇ ಬೇಕು. ಯಾವಾಗ ಮೌನ ಹೃದಯದಲ್ಲಿ ಪ್ರೇಮ ಹುಟ್ಟಿಕೊಳ್ಳುತ್ತದೆಯೋ ಆಗ ನೀವು ಅದನ್ನ ಹಂಚಲೇ ಬೇಕು, ಇನ್ನೊಬ್ಬರಿಗೆ ಕೊಡಲೇ ಬೇಕು. ಈ ವಿಷಯದಲ್ಲಿ ನೀವು ಅಸಹಾಯಕರು.
ಮತ್ತು ಯಾರಿಗೆ ನೀವು ಪ್ರೇಮವನ್ನು ಹಂಚುತ್ತೀರೋ ಅವರು ನಿಮಗೆ ಯಾವ ರೀತಿಯಲ್ಲೂ ಬದ್ಧರಾಗಬೇಕಿಲ್ಲ. ಬದಲಾಗಿ ನೀವು ಅವರಿಗೆ ನಿಮ್ಮನ್ನು ಹಗುರ ಮಾಡಿಕೊಳ್ಳಲು ಸಹಾಯ ಮಾಡಿದ ಕಾರಣಕ್ಕೆ ಕೃತಜ್ಞರಾಗಿರಬೇಕಿದೆ. ಅವರು ನಿಮ್ಮೊಳಗೆ ತುಂಬಿ ತುಳುಕುತ್ತಿದ್ದ ಭಾರವನ್ನ ಹಂಚಿಕೊಂಡು ನಿಮಗೆ ಸಹಾಯ ಮಾಡಿದ್ದಾರೆ. ಪ್ರೇೆಮದ ಅರ್ಥಶಾಸ್ತ್ರದ ಪ್ರಕಾರ ಹೆಚ್ಚು ಹೆಚ್ಚು ಪ್ರೇಮವನ್ನ ನೀವು ಹಂಚಿದಾಗ ಹೆಚ್ಚು ಹೆಚ್ಚು ಪ್ರೇಮ ಮತ್ತೆ ನಿಮ್ಮದಾಗುತ್ತದೆ, ಏಕೆಂದರೆ ನಿಮ್ಮ ಮೌನ ಅಸ್ತಿತ್ವದಲ್ಲಿ ನೀವು ಪ್ರೇಮದ ಅಪಾರ ಸಾಗರದ ಜೊತೆ, ಯಾವುದು ಎಲ್ಲ ದಿವ್ಯದ ಮೂಲವೋ ಆ ಅಪರಿಮಿತದ ಜೊತೆ, ನಿಮ್ಮನ್ನ ನೀವು ಜೋಡಿಸಿಕೊಂಡಿದ್ದೀರಿ. ನೀವು ಹಂಚಿಕೊಂಡಷ್ಟು ಪ್ರೇಮ ನಿಮ್ಮನ್ನು ತುಂಬಿಕೊಳ್ಳುತ್ತಲೇ ಹೋಗುತ್ತದೆ.
ಪ್ರೇಮ ಈ ಜಗತ್ತಿನ ಏಕೈಕ ಭರವಸೆ. ಮತ್ತು ನಾವು ಆ ಹೊರಳು ದಾರಿಯನ್ನ ಸಮೀಪಿಸುತ್ತಿದ್ದೇವೆ ; ಪೂರ್ಣ ಯುದ್ಧ ಅಥವಾ ಸಂಪೂರ್ಣ ಪ್ರೇಮ. ಬೇರೆ ಪರ್ಯಾಯವಿಲ್ಲ ನಮಗೆ ಯುದ್ಧ ಮತ್ತು ಪ್ರೇಮದ ನಡುವೆ. ಈ ಎರಡರಲ್ಲಿ ನಾವು ಒಂದನ್ನ ಆಯ್ಕೆ ಮಾಡಿಕೊಳ್ಳಲೇ ಬೇಕು. ಇದು ಮನುಷ್ಯನ ಸಾವು ಬದುಕಿನ ಪ್ರಶ್ನೆ. ಯುದ್ಧ ಎಂದರೆ ಸಾವು, ಪ್ರೇಮ ಎಂದರೆ ಬದುಕು.
ನಿಜ ಎಲ್ಲಾ ಸಂತರ ವಾಣಿಯೇ ಇದು…”ಪ್ರೇಮವೇ ನೀವು”