ಬಂಡೆಯಾಗುವುದೇ ಅರಿವಿನ ದಾರಿಯಾಗಿರಲೂ ಸಾಕು! : New Zen

ಬಂಡೆಗಲ್ಲಿಗೆ ತಿಳಿವು ಮೂಡಿಲ್ಲವೆಂದು ಹೇಳಿದವರು ಯಾರು! ಮನುಷ್ಯ ಜನ್ಮವೇ ದೊಡ್ಡದೆಂದು ಹೇಳಿದವರು ಯಾರು?ಅಲಾವಿಕಾ

ಹೇಳುತ್ತಾರೆ ಧ್ಯಾನ ತರಬೇತುದಾರರು;

ಸುಮ್ಮನೆ ಕುಳಿತರೆ ಸತ್ಯ ಸೃಷ್ಟಿಯಾಗೋದಿಲ್ಲ, ಧ್ಯಾನ ಕಾಣ್ಕೆ ಉಂಟುಮಾಡೋದಿಲ್ಲ.

ಹೂವಿನ ಘಮಲು ಇದ್ದ ಮಾತ್ರಕ್ಕೆ ಅದು ಸುಗಂಧವಾಗೋದಿಲ್ಲ.

ಹೂವಿನ ಘಮಲು ಮೊದಲೂ ಇತ್ತು, ಸಾಗುತ್ತ ಬಂದವರು ನಾವು ನಿಲ್ಲಬೇಕಷ್ಟೆ. ಅದನ್ನು ಮುತ್ತಿಕ್ಕಿ ಬಂದ ಗಾಳಿಯುಣ್ಣಬೇಕಷ್ಟೆ

ಆಗಷ್ಟೆ; ನಮ್ಮ ಮೂಗು ಸಹಕರಿಸಿದರೆ ಮಾತ್ರ, ಹೂವಿನ ಘಮಲು ನಮ್ಮ ಪಾಲಿಗೆ!

ಸುಮ್ಮನೆ ಕೂರುವುದು, ಅದೊಂದು ಅವಕಾಶ ಮಾತ್ರ.

ಕಲಕದೆ ಬಿಟ್ಟ ಬಿಂದಿಗೆಯಲ್ಲಿ ಚಂದ್ರಬಿಂಬ ನಿಚ್ಚಳ ಕಾಣುವಂತೆ; ಚಂದ್ರ ದಕ್ಕುವುದಿಲ್ಲ!

ಹೇಳುತ್ತಾರೆ ಅವರು ಮತ್ತೂ;

ಆಲೋಚನೆಗಳೇ ಮೂಡದಂತೆ ಸಾಧನೆ ಮಾಡುವುದೇ ಗುರಿಯಾಗಿದ್ದರೆ ಈ ಹೊತ್ತು ಬಂಡೆಗಲ್ಲುಗಳಿಗೂ ಜ್ಞಾನೋದಯವಾಗಿರುತ್ತಿತ್ತು!

ಕೇಳಬೇಕಿತ್ತು ಅವರನ್ನು,

ಬಂಡೆಗಲ್ಲಿಗೆ ತಿಳಿವು ಮೂಡಿಲ್ಲವೆಂದು ಹೇಳಿದವರು ಯಾರು!

ಮನುಷ್ಯ ಜನ್ಮವೇ ದೊಡ್ಡದೆಂದು ಹೇಳಿದವರು ಯಾರು?

ನಗುತ್ತಿರಬಹುದು ಬಂಡೆಗಲ್ಲೂ ಕ್ಷಣಚಿತ್ತ ಕ್ಷಣಪಿತ್ಥದ ಮನುಕುಲವ ಕಂಡು.

ನಗುತ್ತಿರಬಹುದು ಕಾಲಗಟ್ಟಲೆ ಬೇರೂರಿ ನಿಂತ ಮರ ಮಳೆಚಳಿಗೆ ನಡುಗಿ, ಬಿಸಿಲಲ್ಲಿ ಬಳಲುವ ಮನುಕುಲವ ಕಂಡು

ನಗುತ್ತಿರಬಹುದು ನಾವು ಯಕಶ್ಚಿತವೆನ್ನುವ ಹಲ್ಲಿ, ಬೆಕ್ಕಿನ ಕೈಗೆ ಸಿಕ್ಕೂ ಬಾಲ ಕಳಚಿ ನಯಾಪೈಸೆ ನೋವಿಲ್ಲದೆ ಓಡಿ ಹೋಗುವಾಗ –

ಕಳಚಿಕೊಳ್ಳಲಾಗದೆ ತೊಳಲುವ ಮನುಕುಲವ ಕಂಡು!

ಧ್ಯಾನದ ಉದ್ದೇಶವೇ ಯೋಚನೆಗಳ ತಂತು  ಕಡಿಯುವುದು. ಯೋಚನೆಯೇ ಮೂಡದ ಬಂಡೆಗಲ್ಲಿನ ಅಸ್ತಿತ್ವ ಕಡಿಮೆ ಎಂದೇಕೆ ತಿಳಿಯಬೇಕು?

ಸುಮ್ಮನೆ ಕೂರುವುದೇ ಧ್ಯಾನವಾಗಿದ್ದರೆ, ಅದೇ ಆಗಿರಲಿ, ನಷ್ಟವೇನಿಲ್ಲ.

ಹೂವಿನ ಘಮಲು ಅದರ ಪಾಡಿಗೇ ಇರಲಿ, ಅದನ್ನು ಮೂಸುವವರು ಇರಲಿ, ಇಲ್ಲದಿರಲಿ; ಘಮಲು ಹೊತ್ತು ಗಾಳಿ ಸುಳಿದಾಡಲಿ, ಆಡದಿರಲಿ

ಚಂದ್ರನ್ನ ದಕ್ಕಿಸಿಕೊಳ್ಳುವ ಮಾತೇಕೆ? ಬಿಂಬವೇ ಸಾಕಿರಲಿ ನಮ್ಮ ಪಾಲಿಗೆ!

ನಿಜದ ಚಂದ್ರನ್ನ ಯಾರಾದರೂ ಹಿಡಿದಾರೇ? ಬಿಂಬವಾದರೂ ಕೆನ್ನೆ ಜಾರುವ ಕಣ್ಣ ಹನಿಯಲ್ಲೂ ತುಂಬುವುದು, ವಿಶಾಲ ಸಾಗರದಲ್ಲೂ!

ಮಂಕುತಿಮ್ಮನ ವನಸುಮವೇ ಆಗಿರಲಿ ಹೂ,

ದಕ್ಕಿದರೆ, ದಕ್ಕಿಸಿಕೊಂಡರಷ್ಟೇ ಮುಖ್ಯವೇ ಯಾವುದಾದರೂ?

ಅವನೊಬ್ಬನಿದ್ದನಂತೆ ಝೆನ್ ಗುರು, ಜ್ಞಾನೋದಯ ಪಡೆದವನು.

ಹಗಲಾಗೆದ್ದು ನೀರು ಸೇದಿ, ಅಂಗಳ ಗುಡಿಸಿ, ತರಕಾರಿ ಬೆಳೆದು, ಬೆಳೆದಿದ್ದು ತಿಂದು ಮಲಗುತ್ತಿದ್ದನಂತೆ; ಮತ್ತೆ ಮರುದಿನ ಹಗಲಾಗೆದ್ದು ಅದದೇ ಕೆಲಸ ಪುನರಾವರ್ತಿಸಲು.

ಹಾಗೇ ಹಕ್ಕಿ, ಹಾವು, ಹುಲಿ, ಹುಳು ಹುಪ್ಪಟೆಗಳೂ – ಏಳುತ್ತವೆ, ತಿನ್ನುತ್ತವೆ, ಕೂಡುತ್ತವೆ, ಮಲಗುತ್ತವೆ; ಮತ್ತೆ ಏಳಲಿಕ್ಕೆ, ತಿನ್ನಲಿಕ್ಕೆ, ಕೂಡಲಿಕ್ಕೆ, ಮಲಗಲಿಕ್ಕೆ!

ಝೆನ್ ಗುರುವಿನಂತೆ ಇವೆಲ್ಲವೂ ಜ್ಞಾನೋದಯ ಪಡೆದಿಲ್ಲವೆಂದು ಖಾತ್ರಿಯೇನು?

ನಮ್ಮ ಪಾಡಿಗೆ ನಾವು ಸೃಷ್ಟಿಯ ತೂಕ ಕಾಯುವುದೇ ‘ಅರಿವಿನ ಬದುಕು’.

ವಿಪರೀತ ಬುದ್ಧಿಯ ಮನುಷ್ಯರು, ಬುದ್ಧಿಯ ಬಾಲ ಕತ್ತರಿಸಿ ಬಂಡೆಯಾಗುವುದೊಂದೇ ಅರಿವಿನ ದಾರಿಯಾಗಿರಲೂ ಸಾಕು! 

Leave a Reply