ಆತ್ಮದ ವರಸೆ: ಜಿಬ್ರಾನನ ಒಂದು ಕಥೆ । Tea time story

Madman ಕೃತಿಯಿಂದ ಖಲೀಲ್ ಜಿಬ್ರಾನನ ಒಂದು ಕಥೆ… | ಕನ್ನಡಕ್ಕೆ: ಚಿದಂಬರ ನರೇಂದ್ರ

ನಾನು ಮತ್ತು ನನ್ನ ಆತ್ಮ ಸ್ನಾನ ಮಾಡಲು ಮಹಾ ಸಾಗರದತ್ತ ಹೆಜ್ಜೆ ಹಾಕಿದೆವು. ಸಮುದ್ರ ತೀರವನ್ನು ತಲುಪಿದಾಗ ಸ್ನಾನ ಮಾಡಲು ಅನುಕೂಲಕರವಾದಂಥ, ಹೆಚ್ಚು ಜನ ಓಡಾಡದ, ಏಕಾಂಗಿ ಜಾಗಕ್ಕಾಗಿ ಹುಡುಕಾಡತೊಡಗಿದೆವು. ಹೀಗೆ ಹುಡುಕಾಡುತ್ತಿದ್ದಾಗ ಬಂಡೆಗಲ್ಲಿನ ಮೇಲೆ ಕುಳಿತಿದ್ದ ಒಬ್ಬ ವ್ಯಕ್ತಿ ನಮ್ಮ ಕಣ್ಣಿಗೆ ಬಿದ್ದ. ಆ ವ್ಯಕ್ತಿ ತನ್ನ ಚೀಲದೊಳಗಿಂದ ಒಂದೊಂದೇ ಚಿಟಕಿ ಉಪ್ಪು ಹೊರ ತೆಗೆದು ಸಮುದ್ರಕ್ಕೆ ಹಾಕುತಿದ್ದ.

“ ಈ ಮನುಷ್ಯ ನಿರಾಶಾವಾದಿ, ಮುಂದಕ್ಕೆ ಹೋಗೋಣ. ಇಲ್ಲಿ ಸ್ನಾನ ಬೇಡ “ ನನ್ನ ಆತ್ಮ, ನನ್ನ ಕೈ ಎಳೆದುಕೊಂಡು ಮುಂದೆ ಕರೆದುಕೊಂಡು ಹೋಯಿತು.

ಮುಂದೆ ಒಂದು ನಿರ್ಜನ ಜಾಗ ಎದುರಾಯಿತು. ನಾವು ಇಲ್ಲಿಯೇ ಸ್ನಾನ ಮಾಡೋಣ ಎಂದು ತೀರ್ಮಾನಿಸಿ ನೀರಿಗಿಳಿಯುತ್ತಿದ್ದಂತೆ, ಅಲ್ಲಿ ಒಬ್ಬ ಮನುಷ್ಯ ನಮಗೆ ಕಾಣಿಸಿದ. ಅವನು ತನ್ನ ರತ್ನಖಚಿತ ಪೆಟ್ಟಿಗೆಯಿಂದ ಸಕ್ಕರೆ ಹೊರ ತೆಗೆದು ಸಮುದ್ರಕ್ಕೆ ಹಾಕುತ್ತಿದ್ದ.

“ ಈ ಮನುಷ್ಯ ಆಶಾವಾದಿ, ನಮ್ಮ ಬೆತ್ತಲೆಯನ್ನ ಇವನು ನೋಡಬಾರದು “ ಮತ್ತೆ ನನ್ನ ಆತ್ಮ ನನ್ನ ಕರೆದುಕೊಂಡು ಮುಂದೆ ಪ್ರಯಾಣ ಬೆಳೆಸಿತು.

ಸಮುದ್ರ ತೀರದಲ್ಲಿ ಹಾಗೇ ನಾವು ಮುಂದೆ ಹೋದಾಗ, ಅಲ್ಲಿ ಒಬ್ಬ ಮನುಷ್ಯ ಸಮುದ್ರ ತೀರದಲ್ಲಿ ಸತ್ತು ಬಿದ್ದಿದ್ದ ಮೀನುಗಳನ್ನ ಅಪಾರ ಅಂತಃಕರಣದಿಂದ ಮತ್ತೆ ಸಮುದ್ರಕ್ಕೆ ಎಸೆಯುತ್ತಿದ್ದ.

“ ಇಲ್ಲಿ ನಾವು ಸ್ನಾನ ಮಾಡುವಂತಿಲ್ಲ, ಈ ಮನುಷ್ಯ ಸಮಾಜ ಸೇವಕ, ಪರೋಪಕಾರಿ “ ನನ್ನ ಆತ್ಮ ಆ ಜಾಗದಲ್ಲೂ ಸ್ನಾನ ಮಾಡಲು ನಿರಾಕರಿಸಿತು, ಮತ್ತು ನಾವಿಬ್ಬರೂ ಮುಂದೆ ಹೆಜ್ಜೆ ಹಾಕಿದೆವು.

ಮುಂದೆ ನಮಗೊಬ್ಬ ಮನುಷ್ಯ ಎದುರಾದ ಅವನು ಸಮುದ್ರ ಮರಳಿನ ಮೇಲೆ ತನ್ನ ನೆರಳಿನ ಜಾಡು ಹುಡುಕುತ್ತಿದ್ದ. ಸಮುದ್ರದ ತೆರೆಗಳು ಅವನ ನೆರಳನ್ನು ಅಳಿಸಿಹಾಕಿದಾಗ ಮತ್ತೆ ಅವನು ಹೊಸದಾಗಿ ತನ್ನ ನೆರಳಿನ ಹುಡುಕಾಟ ಶುರುಮಾಡಿದ.

“ ಈ ಮನುಷ್ಯ ಅನುಭಾವಿ, ಅವನ ಪಾಡಿಗೆ ಅವನನ್ನು ಬಿಟ್ಟು ಬಿಡೋಣ “ ನನ್ನ ಆತ್ಮ ಅಲ್ಲಿಯೂ ಸ್ನಾನ ಮಾಡಲು ಒಪ್ಪಲಿಲ್ಲ.

ನಾವು ನಿರ್ಜನ ಜಾಗದ ಹುಡುಕಾಟ ಮುಂದುವರೆಸಿದೆವು. ಮುಂದೆ ಒಬ್ಬ ಮನುಷ್ಯ ಸಿಕ್ಕ. ಅವನ ಸಮುದ್ರದ ತೆರೆಗಳ ನೊರೆಯನ್ನ ಪಾರದರ್ಶಕ ಪಾತ್ರೆಯಲ್ಲಿ ತುಂಬುತ್ತಿದ್ದ.

“ ಇವನು ಆದರ್ಶವಾದಿ, ಖಂಡಿತ ಇವನು ನಮ್ಮ ಬೆತ್ತಲೆಯನ್ನು ನೋಡಬಾರದು “ ನನ್ನ ಆತ್ಮ ಮತ್ತೆ ತನ್ನ ವರಸೆ ಮುಂದುವರೆಸಿತು.

ನಾವು ಮುಂದೆ ಹೆಜ್ಜೆ ಹಾಕುತ್ತಿದ್ದಾಗ, ನಮಗೊಂದು ಅಳುತ್ತಿರುವ ದನಿ ಕೇಳಿಸಿತು, “ ಇದು ಸಾಗರ, ಇದು ಮಹಾ ಸಾಗರ, ಇದು ಆಳ ಸಮುದ್ರ “ ಒಬ್ಬ ಮನುಷ್ಯ ಸಮುದ್ರಕ್ಕೆ ಬೆನ್ನು ಮಾಡಿ ಜೋರಾಗಿ ಅಳುತ್ತಿದ್ದ. ಅವನು ಒಂದು ಸಿಂಪಿಯನ್ನ ಕಿವಿಯ ಹತ್ತಿರ ಹಿಡಿದುಕೊಂಡು ಅದರೊಳಗಿಂದ ಬರುತ್ತಿದ್ದ ಅಸ್ಪಷ್ಟ ದನಿಯನ್ನು ಕೇಳುತ್ತಿದ್ದ.

“ ಮುಂದೆ ಹೋಗೋಣ, ಇವನು ವಾಸ್ತವವಾದಿ, ಸಮಸ್ತಕ್ಕೆ ಬೆನ್ನುಮಾಡಿ ತುಣುಕುಗಳಲ್ಲಿ ಬದುಕುತ್ತಿದ್ದಾನೆ. ಇವನಿಗೆ ಅರಿಯುವ ಸಾಮರ್ಥ್ಯವಿಲ್ಲ. “ ನನ್ನ ಆತ್ಮ ಅಲ್ಲಿಯೂ ನಿಲ್ಲಲಿಲ್ಲ.

ನಾನು ಮತ್ತು ನನ್ನ ಆತ್ಮ ಮುಂದೆ ಸಾಗಿದೆವು. ಬಂಡೆಗಳ ನಡುವೆ ಅಲ್ಲೊಂದು ಕಸದ ಜಾಗದಲ್ಲಿ ಒಬ್ಬ ಮನುಷ್ಯ ಮರಳಿನಲ್ಲಿ ತನ್ನ ತಲೆ ತೂರಿಸಿಕೊಂಡು ಕುಳಿತಿದ್ದ. “ ಈ ಮನುಷ್ಯನಿಗೆ ನಮ್ಮನ್ನು ನೋಡುವುದು ಸಾಧ್ಯವಿಲ್ಲ, ಬಾ ಇಲ್ಲೇ ಸ್ನಾನ ಮಾಡೋಣ. “ ನಾನು ನನ್ನ ಆತ್ಮವನ್ನ ಸ್ನಾನಕ್ಕೆ ಆಹ್ವಾನಿಸಿದೆ.

“ ಬೇಡ ಬೇಡ, ಇಲ್ಲಿ ಬೇಡ. ಇವನು ಮಹಾ ಸಂಪ್ರದಾಯಸ್ಥ, ಅತಿ ನೈತಿಕತಾವಾದಿ. ಇವನು ಎಲ್ಲರಿಗಿಂತಲೂ ಮಹಾ ಅಪಾಯಕಾರಿ. ನನ್ನ ಆತ್ಮದ ಚೆಹರೆಯ ಮೇಲೆ ಗಾಢ ವಿಶಾದ ಆವರಿಸಿಕೊಂಡಿತು, ಆ ವಿಶಾದವನ್ನ ಅದರ ದನಿಯಲ್ಲೂ ಗುರುತಿಸಬಹುದಾಗಿತ್ತು,

“ ಬಾ ವಾಪಸ್ ಹೋಗೋಣ, ನಾವು ಸ್ನಾನ ಮಾಡುವಂಥ ಜಾಗ ಎಲ್ಲೂ ಇಲ್ಲ. ಈ ಗಾಳಿ ನನ್ನ ಬಂಗಾರದ ಕೂದಲನ್ನು ಹಾರಾಡಿಸುವುದನ್ನ ಅಥವಾ ನನ್ನ ಶ್ವೇತ ಎದೆಯನ್ನ ಬೆತ್ತಲಾಗಿಸುವುದನ್ನ ಅಥವಾ ನನ್ನ ಪವಿತ್ರ ಬೆತ್ತಲನ್ನು ಈ ಬೆಳಕು ಬಯಲು ಮಾಡುವುದನ್ನ ನಾನು ಒಪ್ಪಲಾರೆ. “ ನನ್ನ ಆತ್ಮದ ದನಿಯಲ್ಲಿ ದುಗುಡ ತುಂಬಿಕೊಂಡಿತ್ತು.

ನಾನು ಮತ್ತು ನನ್ನ ಆತ್ಮ ಈ ಸಮುದ್ರವನ್ನು ಬಿಟ್ಟು ಇನ್ನೊಂದು ಮಹಾ ಸಮುದ್ರದತ್ತ ಹೆಜ್ಜೆ ಹಾಕಿದೆವು.

1 Comment

  1. ಚಿಟಕಿ ಉಪ್ಪು ಹಾಕುವಾತ ನಿರಾಶಾವಾದಿ, ಸಮುದ್ರವೇ ಉಪ್ಪು ಆದರಿಂದ ಆತ ನಿರಾಶಾವಾದಿಯೇ? ಸಕ್ಕರೆ ಹಾಕುವಾತ ಆಶಾವಾದಿ, ಎಷ್ಟು ಸಕ್ಕರೆ ಸುರಿದರೂ ಸಮುದ್ರ ಸಿಹಿಯಾಗಲು ಅಸಾಧ್ಯ? ಹೇಗೆ ಆಶಾವಾದಿ?.
    ಈಗಾಗಲೇ ಸತ್ತ ಮೀನುಗಳನ್ನು ಸಮುದ್ರಕ್ಕೆ ಹಾಕುವಾತ ಹೇಗೆ ಸಮಾಜ ಸೇವಕ, ಪರೋಪಕಾರಿ?
    ಸಮುದ್ರದ ಅಲೆಗಳು ಮರಳಿನ ಮೇಲೆ ಮೂಡಿದ ನೆರಳನ್ನು ಹೇಗೆ ಅಳಿಸಿಹಾಕಲು ಸಾಧ್ಯ?
    ನೊರೆಯನ್ನು ತುಂಬಿಸಿದರೂ ಪ್ರಯೋಜನವಿಲ್ಲ, ಅದೇಗೆ ಆದರ್ಶವಾದಿ?

    ಈ ಕಥೆಯ ಸಾರಾಂಶ ಏನು ಎಂದು ಅರ್ಥವಾಗಲಿಲ್ಲ… ಯಾರಾದರೂ ತಿಳಿಸಬಹುದೇ?

Leave a Reply