ಸೃಷ್ಟಿ ಸೂಕ್ತ ಎಂದು ಕರೆಯಲಾಗುವ ಸೂಕ್ತ ಯಾವುದು? : ಬೆಳಗಿನ ತಿಳಿವು

‘ನ ಅಸತ್’ ಎಂಬ ನಿಷೇಧ ರೂಪದಿಂದ ಆರಂಭವಾಗುವ ಸೂಕ್ತ ‘ನಾಸದೀಯ ಸೂಕ್ತ’ ಅನಿಸಿಕೊಂಡಿದೆ. ಇದು ಸೂಕ್ತಗಳಲ್ಲೇ ಅತ್ಯಂತ ಆಸಕ್ತಿಕರವಾದ ಮತ್ತು ಬಹುಚರ್ಚಿತ ಸೂಕ್ತ. ಇದನ್ನು ‘ಸೃಷ್ಟಿಯ ಸೂಕ್ತ’ ಎಂದೂ ಕರೆಯಲಾಗುತ್ತದೆ.

ಋಗ್ವೇದದ ೧೦ನೇ ಮಂಡಲದ ೧೨೯ನೇ ಸೂಕ್ತ (೧೦:೧೨೯)ವನ್ನು ನಾಸದೀಯ ಸೂಕ್ತವೆಂದು ಕರೆಯಲಾಗಿದೆ. ಈ ಸೂಕ್ತ ಅರಿವಿನ ದೃಷ್ಟಿಯಿಂದಲೂ ಕಾವ್ಯಗುಣದಿಂದಲೂ ತನ್ನ ಸತ್ವದಿಂದಲೂ ಭಾರತೀಯ ಮತ್ತು ಪಾಶ್ಚಾತ್ಯ ಅಧ್ಯಯನಕಾರರ ಗಮನ ಸೆಳೆದಿದೆ.

ಋಗ್ವೇದದ ಹತ್ತನೆಯ ಮಂಡಲದಲ್ಲಿ ಹೇಳಲಾಗಿರುವ ಒಂದುನೂರ ಇಪ್ಪತ್ತೊಂಬತ್ತನೆಯ ಸೂಕ್ತವಿದು. ಈ ಸೂಕ್ತ ಪರತತ್ತ್ವಾನ್ವೇಷಣೆಯಲ್ಲಿ ತೊಡಗಿ ತನ್ನ ಚಿಂತನೆಗಳಲ್ಲಿ ‘ನ ಅಸತ್’ ಎಂಬ ನಿಷೇಧ ರೂಪದಿಂದ ಶುರುವಾಗುತ್ತದೆ. ಆದ್ದರಿಂದಲೇ ಇದಕ್ಕೆ ‘ನಾಸದೀಯ’ ಎಂದು ಹೆಸರು. ನಿರಾಕರಣೆಯಿಂದ ಶುರುವಾಗುವ ಈ ಸೂಕ್ತವು ಕೊನೆಯಲ್ಲಿ ಏಕೈಕವಾಗಿರುವ ಪರಾತ್ಪರ ವಸ್ತುವೇ ತತ್ತ್ವವಾಗಿದ್ದಿರಬಹುದೆಂಬ ನಂಬಿಕೆಯನ್ನು ತನ್ನ ಕಡೆಯ ಭಾಗಗಳಲ್ಲಿ ವ್ಯಕ್ತಪಡಿಸುತ್ತದೆ. ಈ ಸೂಕ್ತದಲ್ಲಿ ಬಹಳ ಮುಖ್ಯವಾಗಿ ಆಕಾಶಾದಿಗಳ ಮತ್ತು ಸೃಷ್ಟಿ ಪ್ರಳಯ ಮುಂತಾದವುಗಳ ವಿಚಾರವಿದೆ. ಪರಮೇಷ್ಟಿ ಎಂಬ ಹೆಸರಿನ ಪ್ರಜಾಪತಿಯೇ ಈ ಸೂಕ್ತಕ್ಕೆ ಸಂಬಂಧಪಟ್ಟ ಋಷಿ.

ನಾಸದೀಯ ಸೂಕ್ತದಲ್ಲಿ ಏಳು ಋಕ್ಕುಗಳಿವೆ. ಮೊದಲನೆಯ ಎರಡು ಋಕ್ಕುಗಳಲ್ಲಿ ಮತ್ತು ಮೂರನೆಯದರ ಪೂರ್ವಾರ್ಧದಲ್ಲಿ ಜಗತ್ತಿನ ಸೃಷ್ಟಿಗೆ ಮುಂಚಿನ ಸ್ಥಿತಿಯ ವರ್ಣನೆ ಇದೆ. “ಆರಂಭದಲ್ಲಿ ಇಂದ್ರಿಯಗಳಿಗೆ ಗೋಚರವಾಗದ ಅಸತ್ ಮತ್ತು ಗೋಚರವಾಗುವ ಸತ್ – ಇವುಗಳಾಗಲಿ, ಲೋಕ ಅಂತರಿಕ್ಷಗಳಾಗಲಿ ಇರಲಿಲ್ಲ. ಮೃತ್ಯು ಅಮರಣಗಳಿರಲಿಲ್ಲ. ರಾತ್ರಿ ಹಗಲುಗಳ ಪರಿಜ್ಞಾನವಿರಲಿಲ್ಲ. ಆ ಏಕೈಕ ವಸ್ತು ಮಾತ್ರ ಉಸಿರಾಟವೂ ಇಲ್ಲದೆ ಸ್ವಸಾಮರ್ಥ್ಯದಿಂದ ಜೀವಂತವಾಗಿದ್ದಿತು” ಎಂದು ಈ ಋಕ್ಕು ಸಾರುತ್ತದೆ. ಆ ವಸ್ತು’ವಲ್ಲದೆ ಆಗ ಬೇರೆ ಏನೂ ಇರಲಿಲ್ಲ. ಯಾವುದನ್ನೂ ತಿಳಿಯಲು ಅಸಾಧ್ಯವಾಗುವಂತೆ ಅಂಧಕಾರಮಯ ಕತ್ತಲೋ, ಎಲ್ಲೆಡೆಯೂ ತುಂಬಿದ್ದ ನೀರೋ ಇದ್ದಿರಬೇಕು- ಎಂಬುದಾಗಿ ಈ ಸೂಕ್ತ ಊಹಿಸುತ್ತದೆ.

ಅನಂತರ ಐದನೇ ಋಕ್ಕಿನವರೆಗೆ ಸೃಷ್ಟಿಕಾರ್ಯದ ಬಗ್ಗೆ ಹೇಳಲಾಗಿದೆ. ಆರನೆಯದರಲ್ಲಿ ಜಗತ್ತಿನ ಸೃಷ್ಟಿಯ ರಹಸ್ಯವನ್ನು ಯಾರು ಅರಿತಿರುವರೆಂಬುದನ್ನು ಕುರಿತ ಸಂಶಯ ವ್ಯಕ್ತಗೊಂಡು, ದೇವತೆಗಳು ಸೃಷ್ಟಿಯ ತರುವಾಯ ಬಂದವರಾದ್ದರಿಂದ ಆ ರಹಸ್ಯವನ್ನು ನಿಜವಾಗಿ ಬಲ್ಲವರು ಯಾರೆಂಬ ಸಂಶಯ ಪುನರುಕ್ತವಾಗಿದೆ. ಸ್ವಪ್ರಕಾಶದಲ್ಲಿ ಬೆಳಗುತ್ತಿರುವ ಪರಮಾತ್ಮನಿಗೆ ಸೃಷ್ಟಿಯ ರಹಸ್ಯ ತಿಳಿದೇ ಇರಬೇಕೆಂಬುದೂ ಏಳನೆಯ ಋಕ್ಕಿನಲ್ಲಿ ಊಹಿಸಲಾಗಿದೆ.

ನಾಸದೀಯ ಸೂಕ್ತದ 7 ಋಕ್ಕುಗಳ ಸರಳಾನುವಾದ ಹೀಗಿದೆ ನೋಡಿ:

ಸತ್ತೆಂಬುದು ಇರಲಿಲ್ಲ, ಅಸತ್ತೂ ಇರಲಿಲ್ಲ; ಲೋಕ, ನೀಲಿ ಆಕಾಶ, ಅವುಗಳಾಚೆ ಎಂಬುದೂ ಇರಲಿಲ್ಲ.

ಅದನ್ನು ಯಾರು ಬಲ್ಲರು? ಯಾವ ಆಶ್ರಯದಲ್ಲಿ ಏನನ್ನು ಆಧರಿಸಿತ್ತು ಎಂದು. ಜಲಧಿಯು ಇತ್ತೆ? ಇಲ್ಲ. ||೧||

ಮೃತ್ಯುವು ಸಹ ಇರಲಿಲ್ಲ, ಅಮರತ್ವವಸಹ ಇರಲಿಲ್ಲ, ರಾತ್ರಿಹಗಲುಗಳ ಭೇದವು ಇರಲಿಲ್ಲ;

ರಾತ್ರಿಹಗಲುಗಳು ಇನ್ನೂ ಹುಟ್ಟಿರಲೇ ಇಲ್ಲದಿರಲು ಅವು ಹೇಗೆಇರುವುವು? ಆದಿಮೂಲವದೊಂದು ಉಸಿರಾಡುತಿತ್ತು: ||೨||

ಗಾಳಿಯೂ ಇಲ್ಲದೆ ಉಸಿರನ್ನು ಹೊರಸೂಸುತ್ತಿತ್ತು. ಅದರ ಹೊರತು ಬೇರೆ ಏನೂ ಇರಲಿಲ್ಲ ಈ ವಿಶ್ವದಲ್ಲಿ,

ಎಲ್ಲವೂ ಕತ್ತಲೆಯ ಕಾಳಗರ್ಭದಲ್ಲಿ ಅಡಗಿತ್ತು. ಎಲ್ಲವೂ ಅವ್ಯಕ್ತ ಕಾಣದ ಸಾಗರವಾಗಿತ್ತು. ||೩||

ಅದು ಕಾರಣಶರೀರವು, ಈ ಲೋಕ ಆಗ ಹಾಗಿತ್ತು – ಹುಟ್ಟಿದೆಲ್ಲವೂ ಶೂನ್ಯದಿಂದ ಕವಿದಿತ್ತು.

ಅದರ ತಪ- ಶಾಖ, ಅದರ ಇಚ್ಛೆಯಿಂದ ಮೇಲೆ ಎದ್ದಿತ್ತು ಅದು – ಆ ಕಾಳಗರ್ಭದ ಹೊರಗೆ ಮನಸ್ಸು ಬಂದಿತ್ತು. ||೪||

ಮನಸ್ಸು ಈ ಇಚ್ಛೆ ಎಲ್ಲಿಯದು, ಈ ಕಾಮವು- ಬಯಕೆ ಎಲ್ಲಿಯದು? ಅದರ ಎದೆಯಲ್ಲಿ ಆಡಗಿತ್ತು ಮೊಳೆತ ಬೀಜ;

ನಶಿತ- ಕಾಣದ ಲೋಕದ ಬೀಜ, ಅದು ಕಾಲಚಕ್ರದ ಬೀಜ; ಋಷಿಯ ಹೃದಯದಲ್ಲಿ ಹೊಳೆದ ಮೊದಲ ಬೀಜ.||೫||

ಏನು ಇತ್ತೇ ಯೋಚನೆ? ಮೊಲ ಶಬ್ದ- ಸದ್ದು, ಮೇಲೆಂಬುದಿಲ್ಲ, ಕೆಳಗೆ ಎಂಬುದಿಲ್ಲ –

ಯಾರು ಬಲ್ಲರು ಲೋಕಕಾರಣವು ಏನು ಎಂದು? ಭೋಕ್ತೃ ಪರವಾಗಿರಲು- ಬೇರೆಇರಲು ಭೋಗ್ಯವೂ ಬೇರೆ-
ಪರವಾಗಿತ್ತು; ಅದೇ ಗರ್ಭಬೀಜವ ಕಟ್ಟಿಸಿತು, ಅದೆ ಗರ್ಭವನ್ನು ತಾಳಿತ್ತು. ||೬||

ಅದನ್ನು ತಿಳಿದವರು ಯಾರು? ಏಕೆಂದು, ಹೇಗೆಂದು?

ಅದು ಹುಟ್ಟಿದ ನಂತರದಲ್ಲಿ ಬಂದವರು ದೇವರುಗಳು ಎನ್ನವಾಗ?
ಮೂಲವಾದ ಅದರ ಹೊರತು ಅದರ ಅರಿವು? ಯಾರಿಗೆ ಇರಬಲ್ಲುದು! ||೭||

Leave a Reply