ಹೂವಿನಿಂದ ಮಳೆಯನ್ನ ಬೇರ್ಪಡಿಸಿ ನೋಡುವುದು ಸಾಧ್ಯವಿಲ್ಲ… | The art of Living

ಬೌದ್ಧರು ಬಹುತೇಕ ಭಗವಂತನ ಬಗ್ಗೆ ಮಾತನಾಡುವುದಿಲ್ಲ ಆದರೆ ಇಲ್ಲಿ Thich Nhat Hanh, ಬ್ರಹ್ಮಾಂಡದ ಹೆಣಿಗೆಯನ್ನು ಕುರಿತ ಝೆನ್ ದೃಷ್ಟಿಯನ್ನ ಪಾಶ್ಚಿಮಾತ್ಯ ಆದ್ಯಾತ್ಮಿಕ ದೃಷ್ಟಿಕೋನದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ…| ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ನಮ್ಮ ಕಾಸ್ಮಿಕ್ ದೇಹವೇ ಬ್ರಹ್ಮಾಂಡ, ಭಗವಂತನ ಅಪರೂಪದ ಸೃಷ್ಟಿ. ಈ ಬ್ರಹ್ಮಾಂಡವನ್ನು ಆಳವಾಗಿ ನೋಡಿದಾಗ ನಮಗೆ ಕಾಣಿಸುತ್ತದೆ ಅದರ ನಿಜ ಸ್ವಭಾವ. ಆಗ ನಾವು ನಿಸ್ಸಂಶಯವಾಗಿ ಹೇಳುತ್ತೇವೆ ಬ್ರಹ್ಮಾಂಡದ ಈ ನಿಜ ಸ್ವಭಾವವೇ ಭಗವಂತ. ಸೃಷ್ಟಿಯ ಆಳವನ್ನು ಬಗೆದು ನೋಡಿದಾಗ ಕಾಣಿಸುತ್ತಾನೆ ನಮಗೆ ಸೃಷ್ಟಿಕರ್ತ.

ಮೊದಮೊದಲು ಪ್ರತಿಯೊಂದೂ ಬೇರೆ ಬೇರೆಯಾಗಿವೆ ಅನಿಸುತ್ತದೆ. ಸೂರ್ಯ ಚಂದ್ರನಲ್ಲ, ಈ ಆಕಾಶಗಂಗೆ ಆ ಆಕಾಶಗಂಗೆಯಲ್ಲ, ನೀನು ನನ್ನ ಹೊರಗೆ ಇದ್ದೀಯ, ತಾಯಿ, ಮಗನ ಹೊರಗೆ ಇದ್ದಾಳೆ. ಆದರೆ ಸೂಕ್ಷ್ಮವಾಗಿ ಆಳವಾಗಿ ನೋಡಿದಾಗ ಎಲ್ಲವೂ ಒಂದಕ್ಕೊಂದು ಹೆಣಿಗೆ ಹಾಕಿಕೊಂಡಿರುವುದು ಗೊತ್ತಾಗುತ್ತದೆ.

ನಾವು ಹೂವಿನಿಂದ ಮಳೆಯನ್ನ ಬೇರ್ಪಡಿಸಿ ನೋಡುವುದು ಸಾಧ್ಯವಿಲ್ಲ, ಮರದಿಂದ ಆಮ್ಲಜನಕವನ್ನ ಬೇರೆಯಾಗಿ ಕಾಣುವುದು ಸಾಧ್ಯವಿಲ್ಲ, ತಾಯಿಯಿಂದ ಮಗನನ್ನ ಮಗನಿಂದ ತಂದೆಯಿಂದ ಬೇರೆ ಮಾಡಿ ನೋಡುವುದು ಆಗದ ಮಾತು. ಯಾವುದನ್ನೂ ಯಾವುದರಿಂದಲೂ ಪ್ರತ್ಯೇಕ ಮಾಡುವುದು ಸಾಧ್ಯವಿಲ್ಲ. ನಾವೇ ಪರ್ವತಗಳು, ನದಿಗಳು, ನಾವೇ ಸೂರ್ಯ ನಕ್ಷತ್ರಗಳು. ಎಲ್ಲವೂ ಒಂದರೊಳಗೊಂದು ಹಾಸು ಹೊಕ್ಕಾಗಿವೆ.

ಇದನ್ನೇ ಭೌತ ಶಾಸ್ತ್ರಜ್ಞ ಡೇವಿಡ್ ಬೊಹ್ಮ “Implicate Order” ಎಂದು ಗುರುತಿಸಿದ್ದು. ಮೊದ ಮೊದಲು ಎಲ್ಲವನ್ನೂ ನಾವು “Explicate Order” ನಲ್ಲಿ ನೋಡುತ್ತೇವೆ, ಆದರೆ ಒಮ್ಮೆ ನಮಗೆ ಯಾವ ಸಂಗತಿಯೂ ಇನ್ನೊಂದರ ಹೊರಗೆ ಇಲ್ಲ ಎನ್ನುವುದು ಅರಿವಾದಾಗ ನಾವು ಬ್ರಹ್ಮಾಂಡದ ಆಳವನ್ನು ಮುಟ್ಟುತ್ತೇವೆ. ಆಗ ನಮಗೆ ಗೊತ್ತಾಗುತ್ತದೆ ತೆರೆಯಿಂದ ನೀರನ್ನೂ, ನೀರಿನಿಂದ ತೆರೆಯನ್ನೂ ಬೇರೆ ಮಾಡುವುದು ಸಾಧ್ಯವಿಲ್ಲ. ಹೇಗೆ ತೆರೆ ತಾನೇ ನೀರಾಗಿದೆಯೋ ಹಾಗೇ ನಾವೇ ಆತ್ಯಂತಿಕ (ultimate) ಆಗಿದ್ದೇವೆ.

ಬಹಳ ಜನ ಈಗಲೂ ಭಗವಂತ, ಬ್ರಹ್ಮಾಂಡದಿಂದ ಬೇರೆಯಾಗಿ ಅವನ ಸೃಷ್ಟಿಯಿಂದ ಹೊರತಾಗಿ ಅಸ್ತಿತ್ವದಲ್ಲಿದ್ದಾನೆ ಎಂದು ನಂಬುತ್ತಾರೆ. ಆದರೆ ಭಗವಂತನನ್ನು ನೀವು ನಿಮ್ಮಿಂದ ಬೇರೆ ಮಾಡುವುದು ಸಾಧ್ಯವಿಲ್ಲ; ಆತ್ಯಂತಿಕವನ್ನು ನೀವು ನಿಮ್ಮಿಂದ ತೆಗೆದು ಹಾಕುವುದು ಸಾಧ್ಯವಿಲ್ಲ ; ನಿರ್ವಾಣ ಇರುವುದು ನಿಮ್ಮೊಳಗೆಯೇ.

ಆತ್ಯಂತಿಕವನ್ನು ಮುಟ್ಟಲು ನಾವು ಹೊರಗೆ ಎಲ್ಲೂ ನೋಡಬೇಕಾಗಿಲ್ಲ, ನಮ್ನೊಳಗೆ ನಮ್ಮ ದೇಹದೊಳಗೆ ಪೂರ್ತಿಯಾಗಿ ಇಳಿದರೆ ಸಾಕು. ಒಳಗಿನಿಂದ ದೇಹವನ್ನು ಕುರಿತು ಆಳವಾಗಿ ಅವಲೋಕಿಸಿದಾಗ, ನಾವು ನಿಜವನ್ನು ನಮ್ಮೊಳಗೇ ಮುಟ್ಟಬಹುದು.

ಪ್ರಕೃತಿಯಲ್ಲಿ ನೀವು ವಾಕಿಂಗ್ ಮೆಡಿಟೇಶನ್ ಮಾಡುವಾಗ ನಿಮ್ಮ mindfulness, ನಿಮ್ಮ ಏಕಾಗ್ರತೆ ಆಳವಾಗಿದ್ದರೆ ಅಥವಾ ನೀವು ಒಂದು ಸುಂದರ ಮುಂಜಾನೆಯನ್ನು ನೋಡುತ್ತಿರುವಾಗ ಅಥವಾ ನಿಮ್ಮ ದೇಹವನ್ನು ಆಳವಾಗಿ ಅವಲೋಕಿಸುತ್ತಿರುವಾಗ , ನೀವು ಬ್ರಹ್ಮಾಂಡದ ನಿಜ ಸ್ವಭಾವವನ್ನ ಮುಟ್ಟಬಹುದು.

(ಆಕರ ~ Thich Nhat Hanh, The Art of Living)


Leave a Reply