ಸಿಟ್ಟು ಬಂದಾಗ ನಾವು ಯಾರ ಮೇಲೆ ಸಿಟ್ಟುಕೊಂಡಿರ್ತೇವೋ ಅವರು ಹತ್ತಿರದಲ್ಲೇ ಇದ್ದರೂ ನಾವು ಜೋರಾಗಿ ಕಿರುಚಿ ಮಾತಾಡೋದು ಯಾಕೆ? ಇದಕ್ಕೆ ಝೆನ್ ಮಾಸ್ಟರ್ ಕೊಡುವ ಸಮಾಧಾನದ ಉತ್ತರ ಹೀಗಿದೆ… । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಒಮ್ಮೆ ಝೆನ್ ಮಾಸ್ಟರ್ ತನ್ನ ಶಿಷ್ಯರ ಜೊತೆಗೂಡಿ ಸ್ನಾನ ಮಾಡಲು ಒಂದು ನದಿ ತೀರಕ್ಕೆ ಬಂದಿದ್ದ. ನದಿಯ ದಂಡೆಯಲ್ಲಿ ಸ್ನಾನ ಮಾಡಲು ಬಂದಿದ್ದ ಕುಟುಂಬದ ಸದಸ್ಯರು ಜೋರು ದನಿಯಲ್ಲಿ ಜಗಳಾಡುತ್ತಿದ್ದರು. ಈ ಜಗಳ ನೋಡಿ ಮಾಸ್ಟರ್ ತನ್ನ ಶಿಷ್ಯರಿಗೆ ಪ್ರಶ್ನೆ ಮಾಡಿದ, “ ಸಿಟ್ಟು ಬಂದಾಗ ಯಾಕೆ ಜನ ಹೀಗೆ ಜೋರಾಗಿ ಕಿರಿಚಾಡುತ್ತಾರೆ? “
ಒಂದು ಕ್ಷಣ ಯೋಚನೆ ಮಾಡಿ ಒಬ್ಬ ಶಿಷ್ಯ ಉತ್ತರ ಕೊಡುವ ಪ್ರಯತ್ನ ಮಾಡಿದ, “ ನಮಗೆ ಸಿಟ್ಟು ಬಂದಾಗ ನಮ್ಮ ಸಮಾಧಾನ ನಾಶವಾಗಿರುತ್ತದೆ ಹಾಗಾಗಿ ನಾವು ಜೋರು ದನಿಯಲ್ಲಿ ಮಾತನಾಡುತ್ತೇವೆ. “
“ ಹೌದು ಆದರೆ, ಅಷ್ಟು ಜೋರು ದನಿ ಯಾಕೆ? ನೀನು ಜಗಳ ಆಡುತ್ತಿರುವ ಮನುಷ್ಯ ನಿನ್ನ ಹತ್ತಿರದಲ್ಲೇ ಇದ್ದಾನೆ. ಯಾಕೆ ನೀನು ನಿನ್ನ ಸಿಟ್ಟನ್ನ ಅವನಿಗೆ ಸಮಾಧಾನದಿಂದ ತಿಳಿಸಿ ಹೇಳಬಾರದು? ಯಾಕೆ ಮನುಷ್ಯ ಜಗಳ ಮಾಡುವಾಗ ಕಿರಿಚಾಡುತ್ತಾನೆ? “ ಮಾಸ್ಟರ್ ಮತ್ತೆ ಶಿಷ್ಯರನ್ನ ಪ್ರಶ್ನೆ ಮಾಡಿದ. ಶಿಷ್ಯರು ಬೇರೆ ಬೇರೆ ಉತ್ತರ ಕೊಟ್ಟರಾದರೂ ಯಾರಿಗೂ ಸಮಾಧಾನಕರ ಉತ್ತರ ಸಿಗಲಿಲ್ಲ.
ಕೊನೆಗೆ ಮಾಸ್ಟರ್ ತಾನೇ ಉತ್ತರ ಕೊಟ್ಟ,
“ ಯಾವಾಗ ಇಬ್ಬರು ಮನುಷ್ಯರು ಒಬ್ಬರ ಮೇಲೊಬ್ಬರು ಕೆಂಡ ಕಾರುತ್ತಿದ್ದಾರೋ ಆಗ ಅವರ ಹೃದಯಗಳು ಪರಸ್ಪರರಿಂದ ಬಹಳ ದೂರವಾಗಿರುತ್ತವೆ. ಈ ಅಪಾರ ಅಂತರವನ್ನು ದಾಟಿ ಅವರು ಪರಸ್ಪರರ ಮಾತುಗಳನ್ನ ಕೇಳಿಸಿಕೊಳ್ಳಬೇಕಾದರೆ ಜೋರು ದನಿಯಲ್ಲಿ ಮಾತನಾಡುವುದು ಅವಶ್ಯಕವಾಗುತ್ತದೆ. ಸಿಟ್ಟು ಹೆಚ್ಚಾದಂತೆಲ್ಲ ಅವರ ಹೃದಯಗಳ ನಡುವಿನ ದೂರ ಹೆಚ್ಚಾಗುತ್ತ ಹೋಗುತ್ತದೆ, ಆವಾಗ ಆ ದೂರವನ್ನು ದಾಟಿ ಇನ್ನೊಬ್ಬರನ್ನು ಮುಟ್ಟಲು ಇನ್ನೂ ಜೋರು ದನಿಯಲ್ಲಿ ಮಾತನಾಡಬೇಕಾಗುತ್ತದೆ. “
“ ಇಬ್ಬರು ಪ್ರೇಮಿಸುತ್ತಿರುವಾಗ ಏನಾಗುತ್ತದೆ? ಅವರು ಜೋರು ದನಿಯಲ್ಲಿ ಮಾತನಾಡುವುದಿಲ್ಲ, ತುಂಬಾ ಮೆಲುದನಿಯಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಪ್ರೇಮದಲ್ಲಿ ಅವರ ಹೃದಯಗಳು ತೀರ ಹತ್ತಿರದಲ್ಲಿವೆ. ಪ್ರೇಮ ಹೆಚ್ಚಾಗುತ್ತ ಹೋದಂತೆ ಪಿಸು ಮಾತಿನಲ್ಲಿ ಎಲ್ಲ ಸಂಭಾಷಣೆಗಳು ಮುಗಿದುಹೋಗುತ್ತವೆ. ಪ್ರೀತಿ ಇನ್ನೂ ಗಾಢವಾದಾಗ, ಅವರಿಬ್ಬರ ಹೃದಯಗಳು ಒಂದಾದಾಗ, ಮಾತುಗಳು ನಿಂತು ಹೋಗುತ್ತವೆ, ಕೇವಲ ಅವರ ಕಣ್ಣುಗಳು ಮಾತನಾಡುತ್ತವೆ. ಅವರು ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಗಂಟೆಗಟ್ಟಲೇ ಸುಮ್ಮನೇ ಕುಳಿತುಬಿಡಬಲ್ಲರು. ಆಗಲೂ ಅವರ ನಡುವೆ ಒಂದು ಸಂಭಾಷಣೆ ನಡೆಯುತ್ತಿದೆ ಆದರೆ ಅದಕ್ಕೀಗ ಮಾತಿನ ಅವಶ್ಯಕತೆಯಿಲ್ಲ. “
“ ನೀವು ಜಗಳಾಡುವಾಗ, ನಿಮ್ಮ ನಡುವೆ ಸಿಟ್ಟು ಹುಟ್ಟಿಕೊಂಡಾಗ, ನೀವು ವಾದ ಮಾಡುವಾಗ, ನಿಮ್ಮ ಹೃದಯಗಳು ದೂರ ಆಗುವಂಥ ಯಾವ ಮಾತುಗಳನ್ನೂ ಆಡಬೇಡಿ. ಒಂದೊಮ್ಮೆ ನೀವು ಅಂಥ ಮಾತುಗಳನ್ನ ಆಡಿದಿರಾದರೆ, ಅಂಥ ಸಮಯವೊಂದು ನಿಮಗೆ ಎದುರಾಗಬಹುದು, ಆಗ ನಿಮ್ಮ ಹೃದಯಗಳ ನಡುವಿನ ದೂರ ಅಪಾರ, ಆ ದೂರವನ್ನು ಕ್ರಮಿಸುವುದು ನಿಮಗೆ ಸಾಧ್ಯವಿಲ್ಲ ಮತ್ತು ನೀವು ದಾರಿ ತಪ್ಪಿಬಿಡುತ್ತೀರಿ. “