ಒಂದಾಗುವಿಕೆಗೆ ಪ್ರೀತಿಯ ಹೆಸರು ಕಾಯ್ದಿಡಬೇಕೆ? (ಭಾಗ 5) : Art of love #9

“ಮನುಷ್ಯನಿಗೆ ಅತ್ಯಂತ ಅಗತ್ಯವಾದದ್ದು, ಅವನು ತನ್ನ ಒಂಟಿತನವನ್ನ, ಪ್ರತ್ಯೇಕತೆಯನ್ನು ಮೀರುವುದು” ಎಂದು ಪ್ರತಿಪಾದಿಸುವ ಎರಿಕ್ ಫ್ರೋಮ್, ಅದನ್ನು ಸಾಧಿಸುವ ವಿಧಾನಗಳ ಬಗ್ಗೆ ‘Art of love’ ಕೃತಿಯಲ್ಲಿ ಚರ್ಚಿಸುತ್ತಾರೆ. ಈ ಅಧ್ಯಾಯದ 5ನೇ ಭಾಗ ಇಲ್ಲಿದೆ… । ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2022/03/20/love-21/

ಒಂಟಿತನ, ಪ್ರತ್ಯೇಕತೆಯಿಂದ ಹುಟ್ಟಬಹುದಾದ ಆತಂಕದ ನಿವಾರಣೆಗೆ, ಗುಂಪಿನ ವಿಧೆಯತೆಯ ಜೊತೆಗೆ ಸಮಕಾಲಿನ ಬದುಕಿನ ಇನ್ನೊಂದು ಅಂಶವನ್ನೂ ಗಣನೆಗೆ ತೆಗೆದುಕೊಳ್ಳಬೇಕು : ಮನುಷ್ಯ ಬದುಕಿನಲ್ಲಿ ಕೆಲಸದ ನಿಯತತೆ (routine) ಮತ್ತು ಸುಖದ ನಿಯತತೆ. ಮನುಷ್ಯ ‘nine to five’ ನಿಯತತೆಯಲ್ಲಿ ಮುಳುಗಿಹೋಗುತ್ತಾನೆ, ಅವನು ಕಾರ್ಮಿಕ ವರ್ಗದ ಭಾಗವಾಗಿದ್ದಾನೆ, ಅಧಿಕಾರಶಾಹಿಯ ಕ್ಲರ್ಕ್ / ಮ್ಯಾನೇಜರ್ ಗುಂಪಿನ ಭಾಗವಾಗಿದ್ದಾನೆ. ಇಲ್ಲಿ ಅವನ ಸ್ವಯಂ ಪ್ರೇರಣೆಗೆ (initiative) ಹೆಚ್ಚು ಅವಕಾಶವಿಲ್ಲ, ಎಲ್ಲವೂ ಸಂಸ್ಥೆಯ ನಿಯಮಗಳ ಪ್ರಕಾರ, ಕಂಪನಿಗಳ ವರ್ಕ್ ಬುಕ್ ಲ್ಲಿ ಬರೆದಿರುವಂತೆ ನಡೆಯಬೇಕು, ಈ ವಿಷಯದಲ್ಲಿ ಕಂಪನಿಯ ಮೇಲ್ತುದಿಯ ಮತ್ತು ಕೆಳತುದಿಯ ಕೆಲಸಗಾರರ ನಡುವೆ ಅಂಥ ವ್ಯತ್ಯಾಸವೇನಿಲ್ಲ. ಎಲ್ಲರೂ ಸಂಸ್ಥೆಯ ರಚನೆ ಹಾಕಿಕೊಟ್ಟಿರುವ ಕಾರ್ಯ ವಿಧಾನದ, ಸಮಯದ ಮಿತಿಯೊಳಗೇ ಕೆಲಸ ಮಾಡಬೇಕು. ಕೆಲವು ಸಂಸ್ಥೆಗಳಲ್ಲಿ ಭಾವನೆಗಳನ್ನೂ ಹೇರಲಾಗುತ್ತದೆ : ಉತ್ಸಾಹ, ಸಹನೆ, ವಿಶ್ವಾಸಾರ್ಹತೆ, ಮಹತ್ವಾಕಾಂಕ್ಷೆ ಮತ್ತು ಎಲ್ಲರೊಡನೆ ಯಾವ ಸಂಘರ್ಷಕ್ಕೂ ಆಸ್ಪದವಿಲ್ಲದಂತೆ ಹೊಂದಿಕೊಂಡು ಹೋಗುವ ಸಾಮರ್ಥ್ಯ, ಎಲ್ಲವನ್ನೂ ಕೆಲಸಗಾರರಿಂದ ನಿರೀಕ್ಷಿಸಲಾಗುತ್ತದೆ. ಕೆಲಸದಷ್ಟು ತೀವ್ರವಾಗಿಯಲ್ಲದಿದ್ದರೂ, ಖುಶಿ-ವಿರಾಮವನ್ನೂ ನಿರಸವಾದ ನಿಯತತೆಗೆ ಒಳಪಡಿಸವಾಗಿದೆ. ಯಾವ ಪುಸ್ತಕಗಳನ್ನು ಓದಬೇಕೆನ್ನುವುದನ್ನ ಬುಕ್ ಕ್ಲಬ್ ಗಳು ನಿರ್ಧರಿಸಿದರೆ, ಯಾವ ಸಿನೇಮಾಗಳನ್ನ ನೋಡಬೇಕೆನ್ನುವುದನ್ನ ನಿರ್ಧರಿಸುವುದು, ಸಿನೇಮಾ ನಿರ್ಮಾಪಕರು, ಥಿಯೇಟರ್ ಮಾಲಿಕರು, ಮತ್ತು ಅವರು ಖರ್ಚು ಮಾಡಿ ಸಿದ್ಧಪಡಿಸಿದ ಜಾಹೀರಾತು ಸ್ಲೋಗನ್ ಗಳು. ಬಾಕಿ ಎಲ್ಲ ಕೂಡ ಹೀಗೆಯೇ ರೂಟೀನ್ ಆಗಿ ; ರವಿವಾರ ಮುಂಜಾನೆಯ ಕಾರ್ ಡ್ರೈವ್, ಮಧ್ಯಾಹ್ನದ ಟೀವಿ ವಿಕ್ಷಣೆ, ಕಾರ್ಡ್ಸ್ ಆಡುವುದು, ಸಂಜೆಯ ಸೋಷಿಯಲ್ ಪಾರ್ಟಿಗಳು ಹೀಗೆ. ಹುಟ್ಟಿನಿಂದ ಸಾವಿನ ತನಕ, ಒಂದು ಸೋಮವಾರದಿಂದ ಮುಂದಿನ ಸೋಮವಾರದ ವರೆಗೆ, ಮುಂಜಾನೆ ಎದ್ದಾಗಿನಿಂದ ರಾತ್ರಿ ನಿದ್ದೆ ಹೋಗುವವರೆಗೆ ಎಲ್ಲ ಕೆಲಸ ಕಾರ್ಯಗಳೂ ರೂಟೀನ್ ಆಗಿ, ಪೂರ್ವ ನಿರ್ಧಾರಿತವಾಗಿ. ಈ ರೂಟೀನ್ ನ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಮನುಷ್ಯ, ತಾನೂ ಒಬ್ಬ ಮನುಷ್ಯ ಎಂದು ಹೇಗೆ ನೆನಪಿಟ್ಟುಕೊಳ್ಳುವುದು, ತಾನು ಒಬ್ಬ ವ್ಯಕ್ತಿ ವಿಶಿಷ್ಟ ಎಂದೂ, ಭರವಸೆ ನಿರಾಶೆಗಳೊಡನೆ, ಭಯ ಮತ್ತು ದುಗುಡಗಳೊಡನೆ, ಪ್ರೇಮಕ್ಕಾಗಿ ಹಾತೊರೆಯುತ್ತ, ಪ್ರತ್ಯೇಕತೆ ಮತ್ತು ಖಾಲೀತನಕ್ಕೆ ದಿಗಿಲುಗೊಳ್ಳುತ್ತ, ತನಗೆ ಸಾಧ್ಯವಾಗಿರುವ ಈ ಒಂದೇ ಒಂದು ಬದುಕುವ ಅವಕಾಶವನ್ನ ಸಾರ್ಥಕಪಡಿಸಿಕೊಳ್ಳುವುದು ಹೇಗೆ ?

ಎರಿಕ್ ಫ್ರೊಮ್

ಒಂದಾಗುವಿಕೆಯನ್ನ ಸಾಧ್ಯಮಾಡಿಕೊಳ್ಳುವ ಮೂರನೇಯ ದಾರಿ ಎಂದರೆ ಸೃಜನಶೀಲ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವುದು, ಕಲಾವಿದನಂತೆ ಕುಶಲಕರ್ಮಿಯಂತೆ. ಯಾವುದೇ ಬಗೆಯ ಸೃಜನಶೀಲ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ತನ್ನ ಸೃಷ್ಟಿಯೊಂದಿಗೆ, ಕೃತಿಯೊಂದಿಗೆ ಒಂದಾಗಿಬಿಡುತ್ತಾರೆ, ಅದು ಅವರಿಗೆ ಅವರ ಹೊರತಾದ ಇಡೀ ಜಗತ್ತು. ಬಡಿಗನೊಬ್ಬ ಮಾಡುವ ಟೇಬಲ್, ಅಕ್ಕಸಾಲಿಗನೊಬ್ಬ ಸಿದ್ಧಪಡಿಸುವ ಬಂಗಾರದ ಆಭರಣ, ರೈತ ಬೆಳೆಯುವ ಕಾಳು, ಚಿತ್ರಕಾರನೊಬ್ಬ ಮಾಡಿದ ಪೇಂಟಿಂಗ್, ಈ ಎಲ್ಲ ಸೃಜನಶೀಲ ಕೆಲಸಗಳಲ್ಲಿ ಕಲಾವಿದ ಅವನ ಕೃತಿಯೊಂದಿಗೆ ಒಂದಾಗುತ್ತಾನೆ, ಮನುಷ್ಯ ಇನ್ನೂ ಹುಟ್ಚಿಕೊಳ್ಳುತ್ತಿರುವ ಜಗತ್ತಿನೊಂದಿಗೆ ತನ್ನನ್ನು ತಾನು ಒಂದಾಗಿಸಿಕೊಳ್ಳುತ್ತಾನೆ. ಈ ವಿದ್ಯಮಾನ ನಿಜವಾದ ಪ್ರೊಡಕ್ಟಿವ್ ಕೆಲಸಕ್ಕೆ ಮಾತ್ರ ಸಂಬಂಧಿಸಿದ್ದು, ಎಲ್ಲಿ ಕೆಲಸವನ್ನ ನಾನೇ ಪ್ಲಾನ್ ಮಾಡುತ್ತೇನೆ, ನಾನೇ ಸೃಷ್ಟಿಸುತ್ತೇನೆ ಮತ್ತು ನನ್ನ ಸೃಷ್ಟಿಯ ಪರಿಣಾಮಗಳನ್ನು ನಾನೇ ಗಮನಿಸುತ್ತೇನೆಯೋ ಅಂಥಲ್ಲಿ ಮಾತ್ರ. ಕ್ಲರ್ಕಗಿರಿಯಂಥ ಆಧುನಿಕ ಕಾರ್ಯ ಪದ್ಧತಿಗಳಲ್ಲಿ ಮನುಷ್ಯ ಯಾವಾಗಲೂ ಚಲಿಸುತ್ತಿರುವ ಬೆಲ್ಟ್ ಮೇಲೆ, ಕೆಲಸದೊಂದಿಗೆ ಒಂದಾಗುವ ಗುಣಕ್ಕೆ ಇಲ್ಲಿ ಸಮಯವೇ ಇಲ್ಲ. ಕೆಲಸಗಾರ ಯಂತ್ರದ ಅಥವಾ ಅಧಿಕಾರಶಾಹಿಯ ಒಂದು ಉಪ ಭಾಗದಂತೆ ಕೆಲಸ ಮಾಡುತ್ತಾನೆ. ಇಲ್ಲಿ ಮನುಷ್ಯ ತನ್ನ ತನ್ನತನವನ್ನು ಕಳೆದುಕೊಂಡುಬಿಡುತ್ತಾನೆ, ಹಾಗಾಗಿ ಕೆಲಸದ ಜೊತೆ ಹೊಂದಿಕೊಂಡು ಹೋಗುವುದನ್ನ ಬಿಟ್ಟರೆ ಬೇರೆ ಯಾವ ಒಂದಾಗುವಿಕೆಗೂ ಇಲ್ಲಿ ಅವಕಾಶವಿಲ್ಲ.

ಪ್ರೊಡಕ್ಟಿವ್ ಕೆಲಸಗಳಲ್ಲಿ ಸಾಧ್ಯವಾಗುವ ಒಂದಾಗುವಿಕೆ ವ್ಯಕ್ತಿಗತವಾದದ್ದು, ಭಾವೋನ್ನತಿಯ ಆಚರಣೆಗಳಲ್ಲಿ ದೊರೆತ ಒಂದಾಗುವಿಕೆ ಕ್ಷಣಿಕವಾದದ್ದು, ಗುಂಪಿನ ವಿಧೆಯತೆಯಲ್ಲಿ ಕಂಡುಬಂದದ್ದು ಹುಸಿ ಒಂದಾಗುವಿಕೆ. ಆದ್ದರಿಂದ ಇವು ಮನುಷ್ಯನ ಅಸ್ತಿತ್ವದ ಸಮಸ್ಯೆಗೆ ಕೇವಲ ಭಾಗಶಃ ಪರಿಹಾರಗಳು. ಪರಸ್ಪರರ ನಡುವೆ ಸಾಧ್ಯವಾಗುವ ಒಂದಾಗುವಿಕೆಯಲ್ಲಿ ಮಾತ್ರ ಈ ಸಮಸ್ಯೆಗೆ ಪರಿಪೂರ್ಣ ಪರಿಹಾರವಿದೆ, ಇನ್ನೊಬ್ಬರೊಂದಿಗೆ ಒಂದಾಗುವುದು ಎಂದರೆ ಅದು ಪ್ರೇಮ, ಪ್ರೇಮದಲ್ಲಿ ಮಾತ್ರ ಮನುಷ್ಯನ ಅಸ್ತಿತ್ವದ ಸಮಸ್ಯೆಗಳಿಗೆಲ್ಲ, ಒಂದು
ವಿವೇಕಯುಕ್ತ ಸಮಾಧಾನಕರ ಪರಿಹಾರವಿದೆ.

ಪರಸ್ಪರರಲ್ಲಿ ಒಂದಾಗುವ ಬಯಕೆ ಮನುಷ್ಯನಲ್ಲಿ ಅತ್ಯಂತ ತೀವ್ರವಾಗಿದೆ. ಇದು ಮನುಷ್ಯನ ಮೂಲಭೂತ ಉತ್ಕಟತೆ, ಇದು ಮನುಷ್ಯ ಕುಲವನ್ನ, ಅವನ ವಂಶವನ್ನ, ಕುಟುಂಬವನ್ನ ಸಮಾಜವನ್ನ ಒಂದಾಗಿ ಹಿಡಿದಿಟ್ಟಿರುವ ಶಕ್ತಿ. ಇಂಥದೊಂದು ಒಂದಾಗುವಿಕೆಯನ್ನ ಸಾಧಿಸುವುದರಲ್ಲಿ ವಿಫಲರಾಗುವುದೆಂದರೆ, ಹುಚ್ಚುತನದತ್ತ, ತನ್ನನ್ನು ತಾನು ನಾಶ ಮಾಡಿಕೊಳ್ಳುವತ್ತ, ಇನ್ನೊಬ್ಬರನ್ನು ನಾಶ ಮಾಡುವತ್ತ ಹೆಜ್ಜೆ ಹಾಕುವುದು. ಪ್ರೀತಿಯಿಲ್ಲದೆ ಮಾನವ ಜನಾಂಗ ಒಂದು ದಿನವೂ ಬದುಕಿರಲಾರದು. ಹೀಗಿರುವಾಗಲೂ ನಾವು ಪರಸ್ಪರರ ಒಂದಾಗುವಿಕೆಯನ್ನ ‘ಪ್ರೀತಿ’ ಎಂದು ಗುರುತಿಸುವುವೆವಾದರೆ ಗಂಭೀರ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ. ಒಂದಾಗುವಿಕೆಯನ್ನ ಹಲವಾರು ವಿಧಾನಗಳಲ್ಲಿ ಸಾಧಿಸಬಹುದು ಆದರೆ ವಿವಿಧ ರೀತಿಯ ಪ್ರೀತಿಗಳಲ್ಲಿ ಕಂಡುಬರುವ ಸಮಾನತೆಗಿಂತ ಅವುಗಳ ನಡುವಿನ ವ್ಯತ್ಯಾಸಗಳು ಕಡಿಮೆ ಮಹತ್ವದ್ದೇನಲ್ಲ. ಹಾಗಾದರೆ ಅವನ್ನೆಲ್ಲ ‘ಪ್ರೀತಿ’ ಎನ್ನಬಹುದಾ? ಅಥವಾ ಒಂದು ನಿರ್ದಿಷ್ಟ ರೀತಿಯ ಒಂದಾಗುವಿಕೆಗೆ ಮಾತ್ರ, ಯಾವುದು ಪಾಶ್ಚಿಮಾತ್ಯ ಮತ್ತು ಪೌರ್ವಾತ್ಯ ಇತಿಹಾಸದ ಎಲ್ಲ ಮಹಾ ಮಾನವೀಯ ಧರ್ಮಗಳ ಮತ್ತು ತತ್ವಜ್ಞಾನ ಪದ್ಧತಿಗಳ ಆದರ್ಶ ಮೌಲ್ಯ ಎನಿಸಿಕೊಂಡಿದೆಯೋ ಆ ರೀತಿಯ ಒಂದಾಗುವಿಕೆಗೆ ಪ್ರೀತಿಯ ಹೆಸರು ಕಾಯ್ದಿಡಬೇಕಾ ?

1 Comment

Leave a Reply