ಜಗತ್ತಿನ ಅತ್ಯಂತ ಅದ್ಭುತ ಪವಾಡ ಯಾವುದು? : ಓಶೋ ವ್ಯಾಖ್ಯಾನ

“ನಿಮ್ಮ ಗುರುತಿನ ಆಳಕ್ಕೆ ತಳವೇ ಇಲ್ಲ. ಈ ಖಾಲೀತನವನ್ನ ವಿವರಿಸುವುದು ಸಾಧ್ಯವೂ ಇಲ್ಲ. ಈ ಖಾಲೀತನದೊಂದಿಗೆ ನಿಮ್ಮನ್ನ ಗುರುತಿಸಿಕೊಳ್ಳಲು ಮುಂದಾದರೆ, ಅದು ನಿಮ್ಮಲ್ಲಿ ಭಯ ಹುಟ್ಟಿಸುತ್ತದೆ, ನೀವು ಭಯಗ್ರಸ್ಥರಾಗುತ್ತೀರಿ, ಆಗ ನೀವು ಇನ್ನೊಬ್ಬರ ಹತ್ತಿರ ಸಹಾಯ ಕೇಳಿಕೊಂಡು ಹೋಗುತ್ತೀರಿ. ಆ ಇನ್ನೊಬ್ಬರು ನಿಮ್ಮನ್ನು, ನಿಮ್ಮ ಹೊರಗೆಯೇ ಸಂತೈಸುತ್ತಾರೆ, ನಿಮ್ಮನ್ನ ನಿಮ್ಮ ಒಳಗೆ ಇಳಿಯಲು ಬಿಡುವುದಿಲ್ಲ. ಯಾರೂ ನಿಮ್ಮ ಜೊತೆ ಇಲ್ಲದಿರುವಾಗ, ನೀವು ನಿಮ್ಮ ಖಾಲೀತನದ ಜೊತೆ ಏಕಾಂಗಿಯಾಗುತ್ತೀರಿ” ಅನ್ನುತ್ತಾರೆ ಓಶೋ । ಕನ್ನಡಕ್ಕೆ : ಚಿದಂಬರ ನರೇಂದ್ರ

ಯಾರೋ ಒಬ್ಬರು ಝೆನ್ ಮಾಸ್ಟರ್ ನ ಪ್ರಶ್ನೆ ಮಾಡಿದರು,

“ ಜಗತ್ತಿನ ಅತ್ಯಂತ ಅದ್ಭುತ ಪವಾಡ ಯಾವುದು? “

ಝೆನ್ ಮಾಸ್ಟರ್ ಉತ್ತರಿಸಿದ,

“ ನಾನು ಇಲ್ಲಿ ಸುಮ್ಮನೇ ನನ್ನ ಜೊತೆ ಕುಳಿತಿರುವುದು “

ಈ ಝೆನ್ ದೃಷ್ಟಾಂತ ಕಥೆಯ ಅರ್ಥವೇನು ?

ಮೊದಲನೇಯದಾಗಿ, ಇದು ದೃಷ್ಟಾಂತ ಕಥೆಯಲ್ಲ, ಇದು ಒಂದು ಸರಳ ವಾಸ್ತವ. ಈ ಸಂಭಾಷಣೆಯ ಅರ್ಥ ಹುಡುಕುವ ಅವಶ್ಯಕತೆಯಿಲ್ಲ. ಇದು ಗುಲಾಬಿ ಹೂವಿನಂತೆ – ಒಂದು ಸರಳ ಅಭಿವ್ಯಕ್ತಿ. ನೀವು ಇದರ ಅರ್ಥ ಹುಡುಕಲು ಹೊರಟರೆ, ಅರ್ಥ ನಿಮ್ಮಿಂದ ದೂರವಾಗುತ್ತ ಹೋಗುತ್ತದೆ. ಅರ್ಥ ಇದೆ, ಸ್ಪಷ್ಟವಾದ ಅರ್ಥ ಇದೆ; ಆದರೆ ಆ ಅರ್ಥದ ಹಿಂದೆ ಹೋಗುವ ಅವಶ್ಯಕತೆಯಿಲ್ಲ. ನೀವು ಇಂಥ ಸರಳ ಸತ್ಯಗಳ ಅರ್ಥ ಹುಡುಕಲು ಹೊರಟರೆ, ನೀವು ಫಿಲಾಸೊಫಿಯನ್ನ ನೇಯ್ಗೆ ಮಾಡಬೇಕಾಗುತ್ತದೆ, ಮೆಟಾ ಫಿಸಿಕ್ಸ್ ನ ಸೃಷ್ಟಿ ಮಾಡಬೇಕಾಗುತ್ತದೆ, ಹೀಗೆ ಮಾಡುತ್ತ ಮಾಡುತ್ತ ನೀವು ಸತ್ಯದಿಂದ ದೂರ ಸರಿದು ಹೋಗುತ್ತೀರಿ.

ಇದು ಎಂದು ಅತ್ಯಂತ ಸರಳ ಹೇಳಿಕೆ. ಝೆನ್ ಮಾಸ್ಟರ್ ಹೇಳಿದ, “ ನಾನು ಇಲ್ಲಿ ಸುಮ್ಮನೇ ನನ್ನ ಜೊತೆ ಕುಳಿತಿರುವುದು “ ಒಂದು ಅದ್ಭುತ ಪವಾಡ. ನಮಗೆ ಏಕಾಂಗಿಯಾಗಿ ಇರಲು ಸಾಧ್ಯವಾಗುವುದು ಒಂದು ಮಹತ್ತರ ಸಾಧನೆ. ಪ್ರತಿಯೊಬ್ಬನಿಗೂ ಸದಾ ಇನ್ನೊಬ್ಬರ ಸಹವಾಸ ಬೇಕು. ನಮ್ಮೊಳಗೆ ಇಲ್ಲದಿರುವುದನ್ನ ತುಂಬಿಕೊಳ್ಳಲು ನಾವು ಯಾವಾಗಲೂ ಇನ್ನೊಬ್ಬರನ್ನು ಅಪೇಕ್ಷಿಸುತ್ತೇವೆ. ನಮ್ಮ ಇರುವಿಕೆಯಲ್ಲಿ ರಂಧ್ರಗಳಿವೆ, ನಾವು ಈ ರಂಧ್ರಗಳನ್ನು ಇನ್ನೊಬ್ಬರ ಹಾಜರಾತಿಯಿಂದ ಮುಚ್ಚಿಕೊಳ್ಳಲು ಬಯಸುತ್ತೇವೆ. ಆ ಇನ್ನೊಬ್ಬರು ನಮ್ಮನ್ನು ಪೂರ್ಣ ಮಾಡುತ್ತಾರೆ, ಅವರ ಗೈರು ಹಾಜರಿಯಲ್ಲಿ ನಾವು ಅಪೂರ್ಣರು.

ಇನ್ನೊಬ್ಬರಿಲ್ಲದೇ ಹೋದರೆ, ನಾವು ಯಾರೆಂಬುದು ನಮಗೇ ಗೊತ್ತಾಗುವುದಿಲ್ಲ, ನಾವು ನಮ್ಮ ಅಸ್ತಿತ್ವವನ್ನು ಕಳೆದುಕೊಂಡುಬಿಡುತ್ತೇವೆ. ಆ ಇನ್ನೊಬ್ಬರು ನಮಗೆ ಕನ್ನಡಿಯಂತೆ ಕೆಲಸ ಮಾಡುತ್ತಾರೆ, ಆ ಕನ್ನಡಿಯಲ್ಲಿಯೇ ನಮ್ಮನ್ನು ನಾವು ನೋಡಿಕೊಳ್ಳುವುದು. ಆದರೆ ನಾವು ಕೇವಲ ನಮ್ಮ ಜೊತೆ ಇರುವುದೆಂದರೆ ಒಂದು ವಿಚಿತ್ರ ಸಹವಾಸದಲ್ಲಿ ಇರುವುದು, ಇದು ಅತ್ಯಂತ ಮುಜುಗರದ ಸಹವಾಸ. ನಾವು ಯಾರ ಜೊತೆ ಇದ್ದೇವೆ ಎನ್ನುವುದು ನಮಗೆ ಗೊತ್ತಿಲ್ಲ.

ಆದರೆ ನಮ್ಮ ಜೊತೆ ಇನ್ನೊಬ್ಬರಿದ್ದಾಗ ಎಲ್ಲವೂ ಸ್ಪಷ್ಟ, ನಮಗೆ ಅವರ ಹೆಸರು ಗೊತ್ತು, ಅವರ ರೂಹು ಗೊತ್ತು, ಅವರು ಗಂಡೋ ಹೆಣ್ಣೋ ಎನ್ನುವುದು ಗೊತ್ತು, ಅವರ ಧರ್ಮ ಗೊತ್ತು, ಅವರನ್ನು ವಿವರಿಸುವ ಎಲ್ಲವೂ ಗೊತ್ತು. ಆದರೆ, ನಿಮ್ಮನ್ನು ನೀವು ಹೇಗೆ ವಿವರಿಸಿಕೊಳ್ಳುತ್ತೀರ?

ನಿಮ್ಮ ಗುರುತಿನ ಆಳಕ್ಕೆ ತಳವೇ ಇಲ್ಲ. ಈ ಖಾಲೀತನವನ್ನ ವಿವರಿಸುವುದು ಸಾಧ್ಯವೂ ಇಲ್ಲ. ಈ ಖಾಲೀತನದೊಂದಿಗೆ ನಿಮ್ಮನ್ನ ಗುರುತಿಸಿಕೊಳ್ಳಲು ಮುಂದಾದರೆ, ಅದು ನಿಮ್ಮಲ್ಲಿ ಭಯ ಹುಟ್ಟಿಸುತ್ತದೆ, ನೀವು ಭಯಗ್ರಸ್ಥರಾಗುತ್ತೀರಿ, ಆಗ ನೀವು ಇನ್ನೊಬ್ಬರ ಹತ್ತಿರ ಸಹಾಯ ಕೇಳಿಕೊಂಡು ಹೋಗುತ್ತೀರಿ. ಆ ಇನ್ನೊಬ್ಬರು ನಿಮ್ಮನ್ನು, ನಿಮ್ಮ ಹೊರಗೆಯೇ ಸಂತೈಸುತ್ತಾರೆ, ನಿಮ್ಮನ್ನ ನಿಮ್ಮ ಒಳಗೆ ಇಳಿಯಲು ಬಿಡುವುದಿಲ್ಲ. ಯಾರೂ ನಿಮ್ಮ ಜೊತೆ ಇಲ್ಲದಿರುವಾಗ, ನೀವು ನಿಮ್ಮ ಖಾಲೀತನದ ಜೊತೆ ಏಕಾಂಗಿಯಾಗುತ್ತೀರಿ.

ಯಾರೂ ಏಕಾಂಗಿಯಾಗಿರಲು ಬಯಸುವುದಿಲ್ಲ. ಜಗತ್ತಿನ ಅತ್ಯಂತ ದೊಡ್ಡ ಭಯವೆಂದರೆ ನಿಮ್ಮನ್ನು ಒಂಟಿಯಾಗಿರಲು ಬಿಟ್ಟುಬಿಡುವುದು. ಜನ ಒಂಟಿಯಾಗಿರದೇ ಇರಲು ನೂರಾರು ತಂತ್ರಗಳನ್ನು ಬಳಸುತ್ತಾರೆ. ನೀವು ನಿಮ್ಮ ಸಹವರ್ತಿಗಳನ್ನು ಇಮಿಟೇಟ್ ಮಾಡಲು ಶುರು ಮಾಡುವ ಮೂಲಕ ನಿಮ್ಮಲ್ಲಿ ಅವರ ಸಹಚರ್ಯವನ್ನ ಗುರುತಿಸಿಕೊಳ್ಳುತ್ತೀರಿ. ನೀವು ನಿಮ್ಮ ವೈಯಕ್ತಿಕತೆಯನ್ನ, ಸ್ವಂತ ಅಸ್ತಿತ್ವವನ್ನು ಕಳೆದುಕೊಳ್ಳುತ್ತೀರಿ, ನಿಮ್ಮ ಅನನ್ಯತೆಯಿಂದ ದೂರಾಗುತ್ತೀರಿ, ಇಮಿಟೇಟರ್ ಗಳಾಗುತ್ತೀರಿ, ಇನ್ನೊಬ್ಬರನ್ನು ಅನುಕರಿಸದೇ ಹೋದಾಗ ಒಂಟಿತನವನ್ನು ಗಂಟು ಹಾಕಿಕೊಳ್ಳುತ್ತೀರಿ.

ನೀವು ಗುಂಪಿನ ಭಾಗವಾಗುತ್ತೀರಿ, ನೀವು ಚರ್ಚ, ಮಸೀದಿ, ಮಂದಿರದ ಭಾಗವಾಗುತ್ತೀರಿ. ನಿಮಗೆ ನೀವು ನಿರಾಳತೆಯನ್ನ ತಂದುಕೊಳ್ಳಲು ಏನೋ ಮಾಡಿ ಯಾವುದೋ ಒಂದು ಗುಂಪು ಸೇರ ಬಯಸುತ್ತೀರಿ. ನಿಮ್ಮ ಥರದ ಎಷ್ಟೋ ಕ್ರಿಶ್ಚಿಯನ್ ರಿದ್ದಾರೆ, ಮುಸ್ಲಿಂರಿದ್ದಾರೆ, ಹಿಂದೂಗಳಿದ್ದಾರೆ. ನೀವೆಲ್ಲರೂ ಭಯಗ್ರಸ್ಥರು, ಸ್ವಂತತೆಯನ್ನು ಎದುರಿಸಲಾಗದ ಅಸಹಾಯಕರು. ಆದ್ದರಿಂದಲೇ ಝೆನ್ ಮಾಸ್ಟರ್ ಹೇಳುತ್ತಾನೆ,

“ ನಾನು ಇಲ್ಲಿ ಸುಮ್ಮನೇ ನನ್ನ ಜೊತೆ ಕುಳಿತಿರುವುದು, ಜಗತ್ತಿನ ಅತ್ಯಂತ ಅದ್ಭುತ ಪವಾಡ. “

Leave a Reply