‘ಪ್ರೀತಿ ಮತ್ತು ಶ್ರಮ’ಗಳನ್ನು ಬೇರ್ಪಡಿಸಲಾಗದು… । Art of love #13

ಆದರೆ ಪ್ರೀತಿಯಲ್ಲಿ ಮಾತ್ರ ಕೊಡುವುದೆಂದರೆ ಸ್ವೀಕರಿಸುವುದು ಎಂದಲ್ಲ. ಒಬ್ಬ ಟೀಚರ್ ವಿದ್ಯಾರ್ಥಿಗಳಿಂದ ಕಲಿಯುತ್ತಾನೆ, ಒಬ್ಬ ನಟ, ತನ್ನ ಪ್ರೇಕ್ಷಕರಿಂದ ಪ್ರೇರಿತನಾಗುತ್ತಾನೆ, ಒಬ್ಬ ಮನೋವೈದ್ಯ ತನ್ನ ರೋಗಿಯಿಂದ ಗುಣಮುಖನಾಗುತ್ತಾನೆ, ಆದರೆ ಇದು ಸಾಧ್ಯವಾಗುವುದು, ಅವರು ಪರಸ್ಪರರನ್ನ ಕೇವಲ ಜಡ ವಸ್ತುಗಳೆಂದು ತಿಳಿಯದೇ, ತಾವಿಬ್ಬರೂ ಒಂದು ನೈಜ ಸೃಜನಶೀಲ ಸಂಬಂಧದ ಭಾಗಿದಾರರು ಎಂದು ತಿಳಿದುಕೊಂಡಾಗ ಮಾತ್ರ… । ಎರಿಕ್ ಫ್ರೋಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2022/04/09/love-25/

ಕೊಡುವ ಕ್ರಿಯೆಯಲ್ಲಿ ಏನೋ ಒಂದು ಸೃಷ್ಟಿಯಾಗುತ್ತದೆ, ಹಾಗು ಈ ಕೊಡು ಕೊಳ್ಳುವಿಕೆಯಲ್ಲಿ ತೊಡಗಿಕೊಂಡಿರುವ ಇಬ್ಬರೂ ತಮ್ಮಿಬ್ಬರ ಕಾರಣದಿಂದ ಹುಟ್ಟಿದ ಹೊಸ ಬದುಕಿಗೆ ಕೃತಜ್ಞರು. ನಿರ್ದಿಷ್ಟವಾಗಿ ಪ್ರೀತಿಗೆ ಸಂಬಂಧಿಸಿದಂತೆ ಇದರ ಅರ್ಥ : ಪ್ರೀತಿ ಎಂದರೆ, ಪ್ರೀತಿಯನ್ನು ಸೃಷ್ಟಿಮಾಡುವ ಒಂದು ಸಾಮರ್ಥ್ಯ; ಮತ್ತು ಯಾವುದು ಪ್ರೀತಿಯನ್ನು ಹುಟ್ಟು ಹಾಕುವುದಕ್ಕೆ ಅಸಮರ್ಥವೋ ಅದು ಶಕ್ತಿ ಹೀನತೆ. ಈ ವಿಚಾರವನ್ನ ಮಾರ್ಕ್ಸ್ ತುಂಬ ಸುಂದರವಾಗಿ ಹೇಳುತ್ತಾನೆ :

“ ಮನುಷ್ಯನನ್ನ ಕೇವಲ ಮನುಷ್ಯ ಎಂದು, ಮತ್ತು ಜಗತ್ತಿನೊಡನೆಯ ಅವನ ಸಂಬಂಧವನ್ನ ಮಾನವೀಯ ಎಂದು, ಹಾಗು ಪ್ರೀತಿಗೆ ಬದಲಾಗಿ ಕೇವಲ ಪ್ರೀತಿಯನ್ನ , ವಿಶ್ವಾಸಕ್ಕೆ ಬದಲಾಗಿ ವಿಶ್ವಾಸವನ್ನ …ಇತ್ಯಾದಿಯಾಗಿ….. ವಿನಿಮಯ ಮಾಡಿಕೊಳ್ಳಬಹುದು ಅಂದುಕೊಳ್ಳಿ. ಕಲೆಯನ್ನ ನೀವು ಆನಂದಿಸಬೇಕಾದರೆ, ನೀವು ಕಲಾ ಪ್ರಕಾರದಲ್ಲಿ ತರಬೇತಿ ಪಡೆದಿರಬೇಕು; ನೀವು ಇತರರನ್ನು ಪ್ರಭಾವಿಸಬೇಕಾದರೆ, ನಿಮ್ಮಲ್ಲಿ ಇತರರನ್ನು ಪ್ರಭಾವಿಸಬೇಕಾದ ಸೂಕ್ಷ್ಮ ಹಾಗು ಚಾಕಚಕ್ಯತೆ ಇರಬೇಕು. ಪ್ರಕೃತಿ ಮತ್ತು ಮನುಷ್ಯನೊಡನೆಯ ನಿಮ್ಮ ಪ್ರತಿ ಸಂಬಂಧವೂ ನಿಮ್ಮ ಮನಸ್ಸಿನ ಸಂಗತಿಗೆ ಸಂಬಂಧಿಸಿದಂತೆ ನಿಮ್ಮ ನೈಜ, ವೈಯಕ್ತಿಕ ಬದುಕಿನ ನಿಖರ ಅಭಿವ್ಯಕ್ತಿಯಾಗಿರಬೇಕು. ನೀವು ಪ್ರೀತಿಯನ್ನ ಬಯಸದೇ ಪ್ರೀತಿಸುವವರಾದರೆ, ನಿಮ್ಮ ಪ್ರೀತಿ ಇನ್ನೊಬ್ಬರಲ್ಲಿ ತಾನಾಗಿ ಪ್ರೀತಿಯನ್ನ ಹುಟ್ಟಿಸದೇ ಹೋದರೆ, ಪ್ರೀತಿಸುವ ಮನುಷ್ಯನಾಗಿ ನಿಮ್ಮ ಬದುಕಿನ ಅಭಿವ್ಯಕ್ತಿ ನಿಮ್ಮನ್ನ ಪ್ರೀತಿಸಲ್ಪಡುವ ವ್ಯಕ್ತಿಯನ್ನಾಗಿ ಮಾಡದಿದ್ದರೆ, ನಿಮ್ಮದು ನತದೃಷ್ಟ, ಸೃಜನಶೀಲವಲ್ಲದ ಪ್ರೀತಿ (5). “

ಆದರೆ ಪ್ರೀತಿಯಲ್ಲಿ ಮಾತ್ರ ಕೊಡುವುದೆಂದರೆ ಸ್ವೀಕರಿಸುವುದು ಎಂದಲ್ಲ. ಒಬ್ಬ ಟೀಚರ್ ವಿದ್ಯಾರ್ಥಿಗಳಿಂದ ಕಲಿಯುತ್ತಾನೆ, ಒಬ್ಬ ನಟ, ತನ್ನ ಪ್ರೇಕ್ಷಕರಿಂದ ಪ್ರೇರಿತನಾಗುತ್ತಾನೆ, ಒಬ್ಬ ಮನೋವೈದ್ಯ ತನ್ನ ರೋಗಿಯಿಂದ ಗುಣಮುಖನಾಗುತ್ತಾನೆ, ಆದರೆ ಇದು ಸಾಧ್ಯವಾಗುವುದು, ಅವರು ಪರಸ್ಪರರನ್ನ ಕೇವಲ ಜಡ ವಸ್ತುಗಳೆಂದು ತಿಳಿಯದೇ, ತಾವಿಬ್ಬರೂ ಒಂದು ನೈಜ ಸೃಜನಶೀಲ ಸಂಬಂಧದ ಭಾಗಿದಾರರು ಎಂದು ತಿಳಿದುಕೊಂಡಾಗ ಮಾತ್ರ.

ಪ್ರೀತಿ ಎನ್ನುವುದು, ಕೊಡುವ ಸಾಮರ್ಥ್ಯವಾಗುವುದು ಮನುಷ್ಯನ ವ್ಯಕ್ತಿತ್ವದ ಬೆಳವಣಿಗೆಯನ್ನ ಅವಲಂಬಿಸಿದೆ ಎನ್ನುವುದನ್ನ ಒತ್ತಿ ಹೇಳುವ ಅವಶ್ಯಕತೆಯಿಲ್ಲ. ಅದು ಬಹುಮುಖ್ಯವಾಗಿ ಸೃಜನಶೀಲ ಮನೋಭಾವನೆಯನ್ನ ಮೊದಲೇ ಖಾತ್ರಿ ಮಾಡಿಕೊಂಡಿರುತ್ತದೆ. ಈ ಸೃಜನಶೀಲ ಭೂಮಿಕೆಯಲ್ಲಿ ಮನುಷ್ಯ, ಶರಣಾಗತಿಯ ಭಾವದಿಂದ, ತಾನೇ ಎಲ್ಲ- ತನ್ನಿಂದಲೇ ಎಲ್ಲ ಎನ್ನುವ ಅಹಂನಿಂದ, ಇನ್ನೊಬ್ಬರನ್ನ ಶೋಷಣೆ ಮಾಡುವ ಬಯಕೆಯಿಂದ, ಅಥವಾ ಕೂಡಿಡುವ ಸಂಕುಚಿತತೆಯಿಂದ ಹೊರ ಬಂದಿದ್ದಾನೆ ಮತ್ತು ತನ್ನ ಮನುಷ್ಯ ಸಾಮರ್ಥ್ಯದಲ್ಲಿ ನಂಬುಗೆಯನ್ನ, ಹಾಗು ಸ್ವಂತದ ಗುರಿ ಸಾಧನೆಗಾಗಿ ತನ್ನ ಸಾಮರ್ಥ್ಯವನ್ನೇ ಅವಲಂಬಿಸುವ ಧೈರ್ಯವನ್ನ ಗಟ್ಟಿ ಮಾಡಿಕೊಂಡಿದ್ದಾನೆ. ತನ್ನಲ್ಲಿ ಈ ಗುಣ ಸಾಮರ್ಥ್ಯಗಳ ಕೊರತೆ ಕಂಡಾಗಲೆಲ್ಲ ಅವನು ತನ್ನನ್ನು ತಾನು ನೀಡಲು ಹಿಂದೆ ಮುಂದೆ ನೋಡುತ್ತಾನೆ – ಮತ್ತು ಈ ಕಾರಣಕ್ಕಾಗಿಯೇ ಪ್ರೀತಿಸಲು ಹಿಂಜರಿಯುತ್ತಾನೆ.

ಕೊಡುವ ಅಂಶವನ್ನು ಹೊರತುಪಡಿಸಿ, ಪ್ರೀತಿಯ ಕ್ರಿಯಾತ್ಮಕ ಸ್ವಭಾವ ಸ್ಪಷ್ಟಗೊಳ್ಳುವುದು ಅದು ಎಲ್ಲ ಬಗೆಯ ಪ್ರೀತಿಗಳಿಗೂ ಕಾಮನ್ ಆದ ಕೆಲವು ಮೂಲಭೂತ ಅಂಶಗಳನ್ನು ಹೊದಿರುವ ಕಾರಣಕ್ಕಾಗಿ. ಈ ಮೂಲಭೂತ ಅಶಗಳೆಂದರೆ, ಆರೈಕೆ-ಗಮನ, ಜವಾಬ್ದಾರಿ, ಗೌರವ ಮತ್ತು ತಿಳುವಳಿಕೆ.

ಪ್ರೀತಿಸುವುದೆಂದರೆ ಗಮನ ನೀಡುವುದು, ಆರೈಕೆ ಮಾಡುವುದು ಎನ್ನುವುದು ಮಗುವಿಗಾಗಿಯ ತಾಯಿಯ ಪ್ರೀತಿಯಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅವಳು ಮಗುವಿನ ಆರೈಕೆಯಲ್ಲಿ ಕೊರತೆ ಮಾಡಿದರೆ, ಮಗುವಿಗೆ ಹಾಲುಣಿಸದೇ ಹೋದರೆ, ಸ್ನಾನ ಮಾಡಿಸದೇ ಹೋದರೆ, ಮಗುವನ್ನು ಬೆಚ್ಚಗೆ ಅಪ್ಪಿಕೊಂಡು ಸಾಂತ್ವನ ನೀಡದೇ ಹೋದರೆ, ಆಕೆ ಪ್ರೀತಿಯ ಬಗ್ಗೆ ಎಷ್ಟು ಮಾತನಾಡಿದರೂ ನಮಗೆ ಅದು ಪ್ರಾಮಾಣಿಕ ಅನಿಸುವುದಿಲ್ಲ. ಆದರೆ ಅವಳು ಮಗುವನ್ನು ಲಕ್ಷವಿಟ್ಟು ಆರೈಕೆ ಮಾಡುವುದನ್ನ ಕಂಡಾಗ ನಮಗೆ ಅವಳ ಪ್ರೀತಿಯ ಬಗ್ಗೆ ಖಾತ್ರಿ ಆಗುತ್ತದೆ. ಪ್ರಾಣಿಗಳ ಬಗ್ಗೆ, ಹೂವುಗಳ ಬಗೆಗಿನ ನಮ್ಮ ಪ್ರೀತಿಯೂ ಇದೇ ರೀತಿಯದು. ಹೂವಿನ ಗಿಡಗಳಿಗೆ ನೀರುಣಿಸದ ವ್ಯಕ್ತಿಯ ಹೂವಿನ ಪ್ರೀತಿಯ ಬಗ್ಗೆ ನಮಗೆ ನಂಬಿಕೆ ಹುಟ್ಟುವುದಿಲ್ಲ. ಪ್ರೀತಿಯೆಂದರೆ ಬದುಕಿನ ಬಗ್ಗೆ ಮತ್ತು ನಾವು ಪ್ರೀತಿಸುವುದರ ಬೆಳವಣಿಗೆಯ ಬಗೆಗಿನ ನಮ್ಮ ಕ್ರಿಯಾತ್ಮಕ ಕಾಳಜಿ. ಎಲ್ಲಿ ಈ ಕ್ರಿಯಾತ್ಮಕ ಕಾಳಜಿಯ ಕೊರತೆ ಇದೆಯೋ ಅದು ಪ್ರೀತಿ ಅಲ್ಲ. ಪ್ರೀತಿಯ ಕುರಿತಾದ ಈ ಅಂಶವನ್ನು ಜೋನಾಹ್ ನ ಪುಸ್ತಕದಲ್ಲಿ ಸುಂದರವಾಗಿ ವಿವರಿಸಲಾಗಿದೆ.

ಭಗವಂತ, ಜೋನಾಹ್ ಗೆ ನಿನೆವ್ಹ್ ಗೆ ಹೋಗಿ ಅಲ್ಲಿನ ವಾಸಿಗಳಿಗೆ ಅವರು ತಮ್ಮ ಕೇಡಿನ ಗುಣಗಳನ್ನು ತಿದ್ದಿಕೊಳ್ಳದಿದ್ದರೆ ಅವರನ್ನು ತಾನು ಶಿಕ್ಷಿಸುವುದಾಗಿ ಹೇಳಲು ತಿಳಿಸಿದ. ಆದರೆ ಜೋನಾಹ್ ಈ ಕೆಲಸದಿಂದ ಹಿಂದೆ ಸರಿದ. ಅವನಿಗೆ ನಿನೆವ್ಹ್ ನ ಜನ ಕೊನೆಗೆ ಪಶ್ಚಾತಾಪಪಡುತ್ತಾರೆ ಮತ್ತು ದೇವರು ಅವರನ್ನು ಕ್ಷಮಿಸಿಬಿಡುತ್ತಾನೆ ಎನ್ನುವ ಭಯ. ಜೋನಾಹ್ ಗೆ ನಿಯಮಗಳ ಬಗ್ಗೆ ಕಾನೂನಿನ ಬಗ್ಗೆ ಬಲವಾದ ನಂಬಿಕೆ ಆದರೆ ಅವನಲ್ಲಿ ಪ್ರೀತಿಯ ಅಭಾವವಿತ್ತು. ಭಗವಂತನ ಆದೇಶವನ್ನು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅವನು ತಿಮಿಂಗಿಲದ ಹೊಟ್ಟೆಯೊಳಗೆ ಸಿಕ್ಕಿಹಾಕಿಕೊಂಡ. ಇದು ಪ್ರೀತಿ ಮತ್ತು ಸ್ಥೈರ್ಯದ ಕೊರತೆ ಅವನಲ್ಲಿ ಉಂಟು ಮಾಡಿರುವ ಪ್ರತ್ಯೇಕತೆ ಮತ್ತು ಬಂಧನದ ಸ್ಥಿತಿಯನ್ನ ಸೂಚಿಸುವ ಸಂಕೇತ. ಆದರೆ ದೇವರು ಅವನನ್ನು ತಿಮಿಂಗಿಲಿನಿಂದ ರಕ್ಷಿಸಿದ ಮತ್ತು ಜೋನಾಹ್, ನಿನೆವ್ಹ್ ಗೆ ಹೋಗಿ ಅಲ್ಲಿನ ವಾಸಿಗಳಿಗೆ ದೇವರು ಹೇಳಿದಂತೆ ಉಪದೇಶ ಮಾಡಿದ. ಆದರೆ ಜೋನಾಹ್ ಗೆ ಯಾವುದರ ಬಗ್ಗೆ ಭಯವಿತ್ತೋ ಹಾಗೇ ಆಯಿತು, ನಿನೆವ್ಹ್ ನ ವಾಸಿಗಳು ತಮ್ಮ ಪಾಪಗಳಿಗಾಗಿ ಪಶ್ಚಾತಾಪಪಟ್ಟರು ಮತ್ತು ತಮ್ಮ ಕೇಡಿನ ಗುಣಗಳನ್ನು ತಿದ್ದಿಕೊಳ್ಳಲು ನಿರ್ಧರಿಸಿದರು. ಇದರಿಂದ ಸಂಪ್ರೀತನಾದ ದೇವರು ನಿನೆವ್ಹ್ ನ ಜನರನ್ನ ಕ್ಷಮಿಸಿ ನಗರವನ್ನು ನಾಶಮಾಡುವ ತನ್ನ ಯೋಜನೆಯನ್ನು ಕೈಬಿಟ್ಟ. ಇದರಿಂದಾಗಿ ಜೋನಾಹ್ ಗೆ ತೀವ್ರ ನಿರಾಶೆಯಾಯಿತು, ಅವನು ಸಿಟ್ಟಿಗೆದ್ದ. ಜೋನಾಹ್ ಗೆ, ದೇವರು ನಿನೆವ್ಹ್ ನ ಜನರನ್ನ ಕ್ಷಮಿಸುವುದು ಬೇಕಾಗಿರಲಿಲ್ಲ, ಅವರ ತಪ್ಪಿಗಾಗಿ ತಕ್ಕ ಶಿಕ್ಷೆಮಾಡಿ ನ್ಯಾಯ ಪ್ರದಾನ ಮಾಡುವುದು ಬೇಕಾಗಿತ್ತು. ಕೊನೆಗೆ ಈ ಎಲ್ಲದರಿಂದ ಬೇಸತ್ತ ಜೋನಾಹ್, ದೇವರು ತನಗಾಗಿ ಸೃಷ್ಟಿ ಮಾಡಿದ್ದ ಮರದ ಕೆಳಗೆ ಹೋಗಿ ಕುಳಿತು ವಿಶ್ರಾಂತಿ ಪಡೆಯತೊಡಗಿದ. ಆದರೆ ದೇವರು ಯಾವಾಗ ಆ ಮರವನ್ನು ಕೊಂಚ ಬಾಗಿಸಿದನೋ, ಆಗ ಮತ್ತೆ ಖಿನ್ನನಾದ ಜೋನಾಹ್ ಸಿಟ್ಟಿಗೆದ್ದು ದೇವರ ಎದುರು ತನ್ನ ದೂರು ಸಲ್ಲಿಸಿದ. ಆಗ ದೇವರು ಜೋನಾಹ್ ಗೆ ಉತ್ತರಿಸಿದ,

“ ನೀನು ಸೃಷ್ಟಿಸದ, ಬೆಳೆಯಲು ಶ್ರಮ ಪಡದ , ಯಾವುದು ರಾತ್ರಿ ಹುಟ್ಟಿ ರಾತ್ರಿಯೇ ನಾಶವಾಗುತ್ತದೋ ಆ ಸೋರೆಕಾಯಿಯ ಮೇಲೆ ನಿನಗೆ ಅಪಾರ ಕರುಣೆ. ಆದರೆ ನಾನು, ನೂರ ಇಪ್ಪತ್ತು ಸಾವಿರ ಜನ ವಾಸಿಸುವ ನಿನೆವ್ಹ್ ಮಹಾ ನಗರವನ್ನು, ಅಲ್ಲಿನ ಜನರನ್ನು, ಯಾರಿಗೆ ಯಾವುದು ತಮ್ಮ ಬಲಗೈ ಯಾವುದು ಎಡಗೈ ಎನ್ನುವುದು ಗೊತ್ತಿಲ್ಲವೋ ಅಂಥ ಸಾಮಾನ್ಯರನ್ನು ಮತ್ತು ಅಲ್ಲಿನ ಅಪಾರ ಸಂಖ್ಯೆಯ ಜಾನುವಾರುಗಳನ್ನ ಕ್ಷಮಿಸಬಾರದೇಕೆ? “

ಜೋನಾಹ್ ಗೆ ದೇವರು ನೀಡಿದ ಉತ್ತರವನ್ನು ಸಾಂಕೇತಿಕವಾಗಿ ಗ್ರಹಿಸಬೇಕು. ದೇವರು, ಜೋನಾಹ್ ಗೆ ಹೇಳುತ್ತಿದ್ದಾನೆ, ಪ್ರೀತಿಯ ತಿರುಳು ಎಂದರೆ ಯಾವುದನ್ನಾದರೂ ರೂಪಿಸಲು “ಶ್ರಮಿಸುವುದು “ ಮತ್ತು ಅದರ “ಬೆಳವಣಿಗೆಯ ಜವಾಬ್ದಾರಿಯನ್ನ ಹೊತ್ತುಕೊಳ್ಳುವುದು”. ಪ್ರೀತಿ ಮತ್ತು ಶ್ರಮ ಎರಡನ್ನೂ ಪರಸ್ಪರ ಬೇರ್ಪಡಿಸಲಾಗದು. ಮನುಷ್ಯ ಯಾವುದಕ್ಕಾಗಿ ಶ್ರಮ ಪಡುತ್ತಾನೋ ಅದನ್ನು ಪ್ರೀತಿಸುತ್ತಾನೆ, ಮತ್ತು ಯಾವುದನ್ನ ಪ್ರೀತಿಸುತ್ತಾನೋ ಅದಕ್ಕಾಗಿ ಶ್ರಮ ಪಡುತ್ತಾನೆ.

Leave a Reply