ಸಂತರ ಕಾವ್ಯದಲ್ಲಿ ಪ್ರೇಮ ಮಾಧುರ್ಯದ ರಾಮ ನಾಮ

ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಪಾಲಿಗೆ ರಾಮ ನಮ್ಮೊಳಗೆ ಬೆರೆತುಹೋಗಿರುವ ಉದ್ಗಾರ! ರಾಮನ ಹೆಸರೆತ್ತಿ ಮಾತಾಡುವುದು, ಶುಭ ಕೋರುವುದು, ವಂದಿಸುವುದು, ಹಲಬುವುದು ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕು. ಅಷ್ಟರಮಟ್ಟಿಗೆ ಈ ‘ಪುರುಷೋತ್ತಮ’ ನಮ್ಮಲ್ಲಿ ಬೆರೆತುಹೋಗಿದ್ದಾನೆ. ~ ಗಾಯತ್ರಿ


ರಾಮ, ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ನಾಮ. ದೇವರಾಗಿ ಪೂಜೆಗೊಳ್ಳುವುದಕ್ಕಿಂತ, ಕಥೆಯಾಗಿ, ಆದರ್ಶವಾಗಿ, ವಿಮರ್ಶೆಗೆ ಒಳಗಾಗಿ ಮತ್ತೆಮತ್ತೆ ಪ್ರಸ್ತುತವಾಗುತ್ತಲೇ ಇರುವ ಪುರಾಣೈತಿಹಾಸಿಕ ವ್ಯಕ್ತಿ; ಅಥವಾ ಅವತಾರಿ ಶ್ರೀ ರಾಮ. ಅವೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಪಾಲಿಗೆ ರಾಮ ನಮ್ಮೊಳಗೆ ಬೆರೆತುಹೋಗಿರುವ ಉದ್ಗಾರ! ರಾಮನ ಹೆಸರೆತ್ತಿ ಮಾತಾಡುವುದು, ಶುಭ ಕೋರುವುದು, ವಂದಿಸುವುದು, ಹಲಬುವುದು ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕು. ಅಷ್ಟರಮಟ್ಟಿಗೆ ಈ ‘ಪುರುಷೋತ್ತಮ’ ನಮ್ಮಲ್ಲಿ ಬೆರೆತುಹೋಗಿದ್ದಾನೆ.

ನಮ್ಮ ದೇಶದ ಸಂತ ಪರಂಪರೆಯಂತೂ ರಾಮನಾಮಕ್ಕೆ ತನ್ನನ್ನು ಅರ್ಪಿಸಿಕೊಂಡಿತ್ತು. ಎಷ್ಟೆಂದರೆ, “ಸ್ವತಃ ರಾಮ ಕರೆದಾಗಲೂ ನಾನು ಹೋಗಲಿಲ್ಲ. ರಾಮನಾಮದ ಮುಂದೆ ಶ್ರೀರಾಮನಲ್ಲೂ ರುಚಿಯಿಲ್ಲ” ಎಂದು ಕಬೀರ ಹಾಡುವಷ್ಟು! ರಾಮನಾಮವೆಂದರೆ ಅವರ ಪಾಲಿಗೆ, ಅದೊಂದು ಶಕ್ತಿ. ಅದು ರಾಮನಿಗಿಂತಲೂ ಹೆಚ್ಚು. ಈ ಸಂತರ ಪಾಲಿನ ರಾಮ ‘ಅವತಾರಿ ರಾಮ’ನಲ್ಲ, ಆತ ನಿರ್ಗುಣ ರಾಮ. ಸರ್ವಾಂತರ್ಯಾಮಿಯಾದ ಶಕ್ತಿಮೂಲವನ್ನೇ ಅವರು ರಾಮನೆಂದು ಕರೆದು ಜಪಿಸಿದರು. ನಿರ್ಗುಣ ರಾಮನಲ್ಲಿ ಪ್ರೇಮವನ್ನು ತುಂಬಿ ತಮ್ಮ ತಮ್ಮ ರಾಮಂದಿರನ್ನು ತಾವು ಸೃಷ್ಟಿಸಿಕೊಂಡು, ಆ ರಾಮನ ಮೂಲಕ ಜಗತ್ತಿಗೆ ಪ್ರೇಮವನ್ನು ಹಂಚಿದರು. ರಾಮಪ್ರೇಮ ಅವರ ಸಾಧನೆಯ ಹಾದಿಯೇ ಆಗಿತ್ತು.

ಉದಾಹರಣೆಗೆ, ಸಂತ ನಾಮದೇವರ ‘ಎಂತಾದರೂ ನಿಂದಿಸಲಿ ಮಂದಿ ನನ್ನ / ತನುಮನವೆಲ್ಲ ರಾಮಪ್ರೇಮದಲಿ ಮಗ್ನ’ ಎಂಬ ಸಾಲುಗಳನ್ನೇ ತೆಗೆದುಕೊಳ್ಳಿ. ಇಲ್ಲಿ ಪ್ರಧಾನವಾಗಿ ತೋರುವುದು ಮಾಧುರ್ಯ ಭಾವ. ಇನ್ನು ಹೆಸರಿನಲ್ಲೇ ರಾಮನನ್ನು ಹೊಂದಿದ್ದ ಸಂತ ರಾಮಾನಂದರಂತೂ ಸದಾ ರಾಮನಾಮದಲ್ಲಿ ಉನ್ಮತ್ತರಾಗಿರುತ್ತದ್ದರು. ಹಾಗೆಂದೇ ಕಬೀರ ಅವರನ್ನು ಕುರಿತು ‘ರಾಮಾನಂದ ರಾಮರಸ ಮಾತೇ/ ಹಮ್ ಕಹಿಕಹಿ ಥಾಕೇ’ – ‘ರಾಮಾನಂದರು ಸದಾ ರಾಮರಸ ಮತ್ತರು, ಅವರ ಗುಣಗಾನ ಮಾಡಿದಷ್ಟೂ ನನಗೆ ತೃಪ್ತಿಯಿಲ್ಲ’ ಎಂದು ಹೇಳಿರುವುದು. ಸೇನಾ ನಾಯೀ (ನಾಯೀ – ಕ್ಷೌರಿಕ) ಕೂಡಾ ರಾಮಾನಂದರನ್ನು ಕುರಿತು “ರಾಮಭಕುತಿಯ ರಾಮಾನಂದರೇ ಬಲ್ಲರು/ಪೂರ್ಣ ಪರಮಾನಂದದಲಿ ರಾಮನ ಕರೆವರು” ಎಂದು ತಮ್ಮ ಅಭಂಗದಲ್ಲಿ ಹಾಡಿ ಹೊಗಳಿದ್ದಾರೆ.

ಇನ್ನು, ಸ್ವತಃ ಕಬೀರರ ರಾಮಪ್ರೇಮ ಬಣ್ಣಿಸಿದಷ್ಟೂ ಮುಗಿಯದ್ದು. ತಮ್ಮದೊಂದು ದೋಹೆಯಲ್ಲಿ ಅವರು ‘ಕಬೀರಾ ಕೂತಾ ರಾಮಕಾ ಮುತಿಯಾ ಮೇರಾ ನಾಉ/ಗಲೈ ರಾಮಕೀ ಜೇವಡೀ ಜಿತ ಖೀಂಚೈ ತಿತ ಜಾಂಉ’ ಎಂದು ಹೇಳಿಕೊಂಡಿದ್ದಾರೆ. “ಕಬೀರನೆಂಬುವನು ರಾಮನ ನಾಯಿ, ಮುತಿಯಾ ನನ್ನ ಹೆಸರು/ಕೊರಳಲಿಹುದು ರಾಮನ ಉರುಳು, ಅವನೆಳೆದತ್ತ ಸಾಗುವೆ ನಾನು” ಎಂದು ಅದರ ಅರ್ಥ! ಇಲ್ಲಿ ಕಬೀರರ ದಾಸ್ಯ ಭಕ್ತಿಯ ಔನ್ನತ್ಯವನ್ನು ನಾವು ಕಾಣಬಹುದು. ಹಾಗೆಯೇ ಕಬೀರ ಮಾಧುರ್ಯ ಭಕ್ತಿಯಲ್ಲೂ ಹಿಂದೆ ಬಿದ್ದವನಲ್ಲ, ತನ್ನನ್ನು ರಾಮನ ಪ್ರಿಯತಮೆಯಾಗಿ ಭಾವಿಸಿಕೊಂಡು “ಹರಿ ಮೋರಾ ಪಿಯಾ/ಮೈಂ ರಾಮ್ ಕೀ ಬಹುರಿಯಾ” ಎಂದು ತಮ್ಮ ರಾಮಪ್ರೇಮವನ್ನು ತೋರ್ಪಡಿಸಿಕೊಂಡಿದ್ದಾರೆ.

ಅದು “ಕಾಯದಲೇ ದೇವ/ಕಾಯದಲೇ ಜೀವ/ಕಾಯದಲೇ ಜಂಗಮ ಪ್ರಾಣಿ// ಬರಲಿಲ್ಲವೇನೂ, ಹೋಗಲಿಲ್ಲವೇನೂ ರಾಮನಾಣೆ!” ಎಂದ ಸಂತ ಪೀಪಾ ಇರಬಹುದು; “ಪೂಜೆಯನರಿಯೆ, ಅರ್ಚನೆಯರಿಯೆ, ಭಕುತನನುದ್ಧರಿಸೋ ರಾಮ” ಎಂದು ದೀನ ಭಕ್ತಿ ತೋರಿದ ರೈದಾಸರಿರಬಹುದು; ರಾಮನ ಜೊತೆ ಸೀತೆಯನ್ನೂ ಸೇರಿಸಿಕೊಂಡು “ನಮ್ಮ ಮತಕ್ಕೆ ಯಾರು ಬೇಕಾದರೂ ಬರಬಹುದು/ಸೀತಾರಾಮರ ನಾಮಜಪ ಹಾಡಿ ಸುಖ ಹೊಂದಬಹುದು” ಎಂದು ತಮ್ಮ ಸಿಕ್ಖ್ ಮತಕ್ಕೆ ಆಹ್ವಾನ ನೀಡಿದ ಗುರು ನಾನಕರೇ ಇರಬಹುದು… ಇವರೆಲ್ಲರೂ ರಾಮನಾಮಪ್ರೇಮಿಗಳು. ರಾಮನ ನಾಮ ಜಪದಲ್ಲಿ ಸಾಕ್ಷಾತ್ಕಾರದ, ಮುಕ್ತಿಯ, ಜ್ಞಾನೋದಯದ ದಾರಿಯನ್ನು ಕಂಡುಕೊಂಡವರು.

ಇನ್ನು ನಮ್ಮ ದಕ್ಷಿಣದ ದಾಸ ಪರಂಪರೆಯ ಪಾಲಿಗೆ ರಾಮನಾಮ ಪಾಯಸದಷ್ಟು ಸವಿ! ಹಾಗೆಂದೇ ಪುರಂದರ ದಾಸರು “ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ…” ಎಂದು ಹಾಡಿದರು. “ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ/ ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ” ಎಂದು ಸಕಲೆಂಟರಲ್ಲೂ ರಾಮನನ್ನೆ ಕಾಣುತ್ತಾ; “ಅವನಿಗೆ ಇವ ರಾಮ ಇವನಿಗೆ ಅವ ರಾಮ/ ಅವನಿಯೊಳೀಪರಿ ರೂಪವುಂಟೇ?” ಎಂದು ನಾವೆಲ್ಲರೂ ಪರಸ್ಪರರಲ್ಲಿ ರಾಮನನ್ನೇ ಕಾಣುವ ಬಗೆಯನ್ನು ಬೆರಗಿಂದ ಹೇಳಿದರು. ನಮ್ಮ ಕನಕದಾಸರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಎಲ್ಲಿ ನೋಡಿದರಲ್ಲಿ ರಾಮ ಇದ ಬಲ್ಲ ಜಾಣರ ದೇಹದೊಳಗೆ ನೋಡಣ್ಣ…” ಅನ್ನುತ್ತಾ ಪರಮಾತ್ಮನಿಗೆ ರಾಮನನ್ನೆ ಪರ್ಯಾಯ ಮಾಡಿದರು!

ಅಷ್ಟಲ್ಲದೆ “ಕೂಜನ್ತಮ್ ರಾಮ ರಾಮೇತಿರಾಮೇತಿ ಮಧುರಮ್ ಮಧುರಾಕ್ಷರಮ್, ಆರೂಹ್ಯ ಕವಿತಾ ಶಾಖಾಮ್ ವನ್ದೇ ವಾಲ್ಮೀಕಿ ಕೋಕಿಲಮ್” ಎಂದು ಬುಧಕೌಶಿಕ ಋಷಿ ಸಕಲರಲ್ಲೂ ರಾಮ ನಾಮ ಪ್ರೇಮ ಬಿತ್ತಿದ ವಾಲ್ಮೀಕಿಗಳನ್ನು ವಂದಿಸಿದ್ದೇ? “ಕಾವ್ಯದ ಕೊಂಬೆಯನ್ನೇರಿ ರಾಮ, ರಾಮಾ ಅನ್ನುವ ಅತ್ಯಂತ ಮಧುರವಾದ ಪದಗಳನ್ನು ಉಲಿಯುತ್ತಿರುವ ವಾಲ್ಮೀಕಿಯೆಂಬ ಕೋಗಿಲೆಗೆ ನಮಸ್ಕಾರ” ಎಂದು ಇದರ ಅರ್ಥ.

ಇಂಥಾ ಮಧುರವಾದ, ಪ್ರೇಮ ತುಂಬಿದ ರಾಮನಾಮ ನಮ್ಮೆಲ್ಲರನ್ನೂ ಬೆಸೆಯಲಿ, ನಮ್ಮೆಲರನ್ನೂ ಕಾಯಲಿ!

(ಚಿತ್ರಕೃಪೆ: ಗೂಗಲ್ । ವಿಶಾಲ್ ಗುರ್ಜರ್)

Leave a Reply