ಅಪ್ಪನ ಅನುಮತಿ : ಸಿದ್ಧಾರ್ಥ #4

ನಮ್ಮೊಳಗೇ ಇದೆ ಅನ್ನಲಾಗುವ ಆನಂದವನ್ನು ಅನುಭವಿಸೋದು ಹೇಗೆ? ವೇದೋಪನಿಷತ್ತುಗಳನ್ನು ಅರೆದು ಕುಡಿದ ಬ್ರಾಹ್ಮಣೋತ್ತಮರು ಇನ್ನೂ ಯಾವ ಹುಡುಕಾಟದಲ್ಲಿದ್ದಾರೆ? ಅರಿವನ್ನೇ ಬದುಕುವ ನಿಜಜ್ಞಾನಿಗಳು ಯಾರಾದರೂ ಇದ್ದಾರೆಯೇ? ಇತ್ಯಾದಿ ಪ್ರಶ್ನೆಗಳನ್ನಿಟ್ಟುಕೊಂಡು ಧ್ಯಾನಕ್ಕೆ ಜಾರಿದ್ದ ಸಿದ್ಧಾರ್ಥ, ತಾನು ಸಮಣರ ಜೊತೆ ಸೇರಿ ಸಾಧನೆ ಮಾಡಲು ನಿರ್ಧರಿಸಿದ. ಅದಕ್ಕಾಗಿ ಮನೆ ಬಿಟ್ಟು ಹೊರಡಲು ತನ್ನ ಅಪ್ಪನ ಅನುಮತಿಯನ್ನೂ ಕೇಳಿದ. ಮುಂದೆ… ಮೂಲ: ಹರ್ಮನ್ ಹೆಸ್ಸ್; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ

ಹಿಂದಿನ ಸಂಚಿಕೆ ಇಲ್ಲಿ ನೋಡಿ: https://aralimara.wordpress.com/2022/04/25/sid-3/

ಬ್ರಾಹ್ಮಣ ಮೌನಕ್ಕೆ ಜಾರಿದ. ಸುದೀರ್ಘ ಮೌನ. ಕಿಟಕಿಯಾಚೆ ನಕ್ಷತ್ರಗಳು ತಮ್ಮ ದಿಕ್ಕು ಬದಲಿಸಿ ನಡೆಯತೊಡಗಿದವು.  ಅಷ್ಟು ಕಾಲದ ಮೌನ ಮುರಿಯುವವರೆಗೂ ಸಿದ್ಧಾರ್ಥ ಅಲ್ಲಾಡದೆ ಕೈಮುಗಿದುಕೊಂಡು ಅಪ್ಪನ ಮುಂದೆ ನಿಂತೇ ಇದ್ದ. ಅಪ್ಪನೂ ಮಗನ ಮುಂದೆ ಚಾಪೆಯಲ್ಲಿ ಅಲ್ಲಾಡದೆ ಕುಳಿತಿದ್ದ. ನಕ್ಷತ್ರಗಳು ದಿಕ್ಕು ಬದಲಿಸುವ ವೇಳೆಗೆ ಅಪ್ಪ ಬಾಯ್ದೆರೆದ. “ಮಗನೇ, ಬ್ರಾಹ್ಮಣರು ಕೋಪದ ಮಾತುಗಳನ್ನು ಆಡಬಾರದು. ಆದರೆ ನನ್ನ ರೋಷವನ್ನ ನನ್ನಿಂದ ಹತ್ತಿಕ್ಕಲಾಗ್ತಿಲ್ಲ. ಆದ್ದರಿಂದ ಮತ್ತೊಂದು ಸಲ ಇಂಥಾ ಮಾತು ಯಾವತ್ತೂ ಆಡಬೇಡ” ಅನ್ನುತ್ತಾ ಕುಳಿತಲ್ಲಿಂದ ಎದ್ದ. ಸಿದ್ಧಾರ್ಥ ಮಾತ್ರ ನಿಂತಲ್ಲೇ ನಿಂತ ಹಾಗೇ ಉಳಿದ. ಕೈಗಳಿನ್ನೂ ಜೊಡಿಸಿಕೊಂಡೇ ಇದ್ದವು.

“ಇನ್ನೂ ಯಾತಕ್ಕೆ ಕಾಯ್ತಿದೀಯ?” ಅಪ್ಪ ಕೇಳಿದ. “ನಿಮಗೆ ಗೊತ್ತಿದೆ” ಮಗ ಹೇಳಿದ.

ಅಪ್ಪ ಕೋಪದಿಂದ ಹೊರಗೆ ಬಂದ. ತನ್ನ ಕೋಣೆಗೆ ಬಂದು ಚಾಪೆಯ ಮೇಲೆ ಅಂಗಾತ ಮಲಗಿಬಿಟ್ಟ.

ಗಂಟೆ ಕಳೆದಿರಬಹುದು. ಬ್ರಾಹ್ಮಣನಿಗೆ ನಿದ್ದೆ ಹತ್ತುತ್ತಿಲ್ಲ. ಅತ್ತಿಂದಿತ್ತ ಓಡಾಡುತ್ತಾ ಸಾಕಾಗಿ ಹೊರಗೆ ಬಂದ. ಆಶ್ರಮದ ಕಿಟಕಿ ತೆರೆದೇ ಇತ್ತು. ಅದರೊಳಗಿಂದ ನೋಟ ತೂರಿದ. ಮಗ ಇನ್ನೂ ನಿಂತಲ್ಲೇ ನಿಂತಿದ್ದ. ಕೈ ಮೊದಲಿನಂತೇ ಜೋಡಿಸಿಕೊಂಡಿತ್ತು. ಅವನು ನಿಶ್ಚಲವಾಗಿ ನಿಂತಿದ್ದ. ಮಂದ ಗಾಳಿಗೆ ಅವನ ಮೇಲು ಹೊದಿಕೆ ಮೆಲ್ಲನೆ ಅಲ್ಲಾಡುತ್ತಿತ್ತು. ಮಗನನ್ನು ಕಂಡಿದ್ದೇ ಅಪ್ಪನ ತಳಮಳ ಮತ್ತಷ್ಟು ಹೆಚ್ಚಾಗಿ ತನ್ನ ಕೋಣೆಗೆ ಮರಳಿ ಬಂದುಬಿಟ್ಟ.

ಮತ್ತೂ ಒಂದು ಗಂಟೆ ಕಳೆಯಿತು. ಬ್ರಾಹ್ಮಣನ ನಿದ್ದೆ ಹಾರಿಹೋಗಿತ್ತು. ಮತ್ತೆ ಎದ್ದು ಕೋಣೆಯಲ್ಲೇ ಶತಪಥ ಹಾಕಿದ. ಸಮಾಧಾನವಿಲ್ಲ. ಹೊರಗೆ ಬಂದು ಆಕಾಶ ದಿಟ್ಟಿಸಿದರೆ ಚಂದ್ರ ನಡುನೆತ್ತಿಯಲ್ಲಿದ್ದ. ಅದೇ ಹಾಲ್ಬೆಳಕಲ್ಲಿ ಆಶ್ರಮದ ಕಿಟಕಿಯತ್ತ ನೋಡಿದ. ಮಗ ಅದೇ ಜಾಗದಲ್ಲಿ, ಅದೇ ಕೈಮುಗಿದ ಭಂಗಿಯಲ್ಲಿ, ಅಷ್ಟೇ ನಿಶ್ಚಲನಾಗಿ ನಿಂತಿದ್ದ! ಚಂದ್ರನ ಬೆಳಕು ಅವನ ಮೇಲೆ ಸುರಿಯುತ್ತಿತ್ತು. ಅಪ್ಪ ದಿಕ್ಕು ತೋಚದೆ ಮತ್ತೆ ಕೊಣೆ ಹೊಕ್ಕು ತಮ್ಮ ಚಾಪೆಯ ಮೇಲೆ ಮೈಚಾಚಿದ.

ಅಷ್ಟಕ್ಕೆ ಮುಗಿಯಿತೆ? ಮತ್ತೂ ಒಂದು ಗಂಟೆ ಕಳೆಯಿತು. ಅದಾಗಿ ಎರಡನೇ ಗಂಟೆಯನ್ನೂ ಕಳೆದು ಅಪ್ಪ ಆಶ್ರಮದ ಕಿಟಕಿಯ ಬಳಿ ಬಂದ. ಅದರಲ್ಲಿ ಮತ್ತದೇ ಸಿದ್ಧಾರ್ಥನ ನಿಶ್ಚಲ ಚಿತ್ರ. ಕೈಮುಗಿದು ನಿಂತ ಭಂಗಿ. ಚಂದ್ರನ ಬೆಳಕಲ್ಲಿ, ನಕ್ಷತ್ರಗಳ ಮಿಣುಕಲ್ಲಿ, ಮೋಡ ಕವಿದ ಕತ್ತಲಲ್ಲಿ, ಯಾವಾಗ ಹೇಗೆಲ್ಲ ನೋಡಿದರೂ ಅಷ್ಟೇ. ಸಿದ್ಧಾರ್ಥನ ನಿಲುವಲ್ಲಿ ಬದಲಿಲ್ಲ.

ಅಪ್ಪ ಎದೆಯಲ್ಲೀಗ ಕೋಪ, ದುಃಖ, ಹತಾಶೆ, ಸೋಲು ಎಲ್ಲದರ ಮಿಶ್ರಭಾವ ಹೊತ್ತು ಚಾಪೆಗೆ ಮರಳಿದ.

ಮತ್ತೀಗ, ಇದು ರಾತ್ರಿಯ ಕೊನೆಯ ಜಾವ. ಇನ್ನೇನು ನಸುಕು ಹರಿಯಬೇಕು, ಅಪ್ಪ ಆಶ್ರಮದ ಬಾಗಿಲಿಗೆ ಬಂದ. ಕೋಣೆಯೊಳಗೆ ಕಾಲಿಟ್ಟ. ಎದೆಯೆತ್ತರ ಬೆಳೆದ ಮಗ, ರಾತ್ರಿ ನಿಂತಲ್ಲೇ ನಿಂತ ಹಾಗೇ ನಿಂತಿದ್ದ. ಅಪ್ಪನಿಗೆ ಆ ಕ್ಷಣ ಯಾರೋ ಅಪರಿಚಿತನನ್ನು ಕಂಡ ಹಾಗಾಯ್ತು. ಸಾವರಿಸಿಕೊಂಡು ಕೇಳಿದ, “ಸಿದ್ಧಾರ್ಥ ಯಾಕಾಗಿ ಕಾಯ್ತಿದೀಯ?”

“ನಿಮಗೇ ಗೊತ್ತು”

“ಬೆಳಗಾಗಿ, ಮಧ್ಯಾಹ್ನ ಕಳೆದು, ಸಂಜೆಯಾದರೂ ನೀನು ಇಲ್ಲೇ ಹೀಗೇ ನಿಂತಿರ್ತೀಯಾ?”

“ನಾನು ನಿಂತೇ ಇರ್ತೀನಿ, ಕಾಯ್ತಾ ಇರ್ತೀನಿ” 

“ನಿನಗೆ ದಣಿವಾಗತ್ತೆ ಸಿದ್ಧಾರ್ಥ”

“ನನಗೆ ದಣಿವಾಗಲಿ”

“ನಿನಗೆ ನಿದ್ದೆ ಬರತ್ತೆ ಸಿದ್ಧಾರ್ಥ”

“ನನಗೆ ನಿದ್ದೆ ಬರಲಿ”

“ನೀನು ಸಾಯಲೂಬಹುದು ಸಿದ್ಧಾರ್ಥ”

“ನಾನು ಸಾಯಲೂ ಸಿದ್ಧ”

“ನಿನ್ನ ಅಪ್ಪನ ಮಾತು ಕೇಳೋದಕ್ಕಿಂತ ಸಾವನ್ನೇ ಆಯ್ದುಕೊಳ್ತೀಯಾ?”

“ಸಿದ್ಧಾರ್ಥ ಯಾವತ್ತೂ ಅಪ್ಪನ ಮಾತಿಗೆ ತಪ್ಪಿಲ್ಲ”

“ಹಾಗಾದ್ರೆ ನಿನ್ನ ತೀರ್ಮಾನ ಕೈಬಿಡ್ತೀಯ?”

“ಸಿದ್ಧಾರ್ಥ ತನ್ನಪ್ಪ ಹೇಳಿದಂತೇ ಮಾಡ್ತಾನೆ”

ಬೆಳಗಿನ ಮೊದಲ ಕಿರಣ ಕೋಣೆಯ ಒಳ ಹೊಕ್ಕಿತು. ಸಿದ್ಧಾರ್ಥನ ಕಾಲುಗಳು ಮೆಲ್ಲನೆ ನಡುಗುತ್ತಿದ್ದುದು ಅಪ್ಪನ ಗಮನಕ್ಕೆ ಬಂತು. ಆದರೆ ಅವನ ಮುಖಭಾವ ಮಾತ್ರ ದೃಢವಾಗೇ ಇತ್ತು. ಅವನ ಕಣ್ಣುಗಳು ದೂರದ ಶೂನ್ಯದಲ್ಲಿ ನೆಟ್ಟಿದ್ದವು. ಇಲ್ಲಿರುವುದು ಸಿದ್ಧಾರ್ಥನ ದೇಹವಷ್ಟೇ. ಅವನು ಮಾನಸಿಕವಾಗಿ ಅದಾಗಲೇ ಈ ಮನೆ ಬಿಟ್ಟು ಹೋಗಾಗಿದೆ – ಅಪ್ಪನಿಗೆ ಅರಿವಾಯ್ತು.

ಅಪ್ಪ ಮಗನ ಭುಜವನ್ನು ನಯವಾಗಿ ತಟ್ಟಿದ. “ಹೋಗು. ಕಾಡಿಗೆ ಹೋಗಿ ಸಮಣನಾಗು. ಅಲ್ಲೇನಾದರೂ ನಿನಗೆ ಪರಮಾನಂದ ಸಿಕ್ಕರೆ, ಮರಳಿ ಬಂದು ನನಗೂ ಅದನ್ನ ಪಡೆಯುವ ಬಗೆ ಕಲಿಸಿಕೊಡು. ಅಕಸ್ಮಾತ್ ಸಿಗದೇಹೋದರೂ ಮರಳಿ ಬಾ. ನಾವಿಬ್ಬರೂ ಮತ್ತೆ ಒಟ್ಟಿಗೇ ಕೂತು ಹೋಮ ಹವನ ಮಾಡೋಣ. ಈಗ ಹೋಗು. ಅಮ್ಮನ ಹಣೆಗೊಂದು ಮುತ್ತಿಟ್ಟು ಎಲ್ಲಿಗೆ ಹೋಗ್ತಿದೀಯ ಅಂತ ಹೇಳಿ ಹೋಗು. ನಾನೀಗ ಬೆಳಗಿನ ಕ್ರಿಯಾಕರ್ಮಕ್ಕೆ ನದೀತೀರಕ್ಕೆ ಹೋಗ್ಬೇಕು”  

ಅಪ್ಪ ಮಗನ ಭುಜದ ಮೇಲಿಂದ ಕೈತೆಗೆದು ಹೊರಟ. ಸಿದ್ಧಾರ್ಥ ನಡೆಯಲು ಕಾಲೆತ್ತಿದವನು ಹಾಗೇ ಮುಗ್ಗರಿಸಿದ. ಸಾವರಿಸಿಕೊಂಡು ಅಪ್ಪನಿಗೆ ಬಾಗಿ ನಮಸ್ಕಾರ ಮಾಡಿದ, ಮತ್ತು ಅವರ ಮಾತಿನಂತೆ ಅಮ್ಮನನ್ನು ಬೀಳ್ಕೊಡಲು ಕೋಣೆಯಿಂದ ಹೊರಗೆ ಬಂದ.

ನಸುಗತ್ತಲಲ್ಲಿ ಪಟ್ಟಣವಿನ್ನೂ ಮೈಮುರಿಯುತ್ತಿರುವಾಗಲೇ ಸಿದ್ಧಾರ್ಥನ ಸೆಟೆದ ಕಾಲುಗಳು ನಿಧಾನ ಹೆಜ್ಜೆಯೂರಿ ನಡೆಯತೊಡಗಿದವು. ಬೀದಿಯ ಕೊನೆಯ ಗುಡಿಸಲಿನಿಂದ ನೆರಳೊಂದು ಎದ್ದು ಬಂದು ಸಿದ್ಧಾರ್ಥನನ್ನು ಕೂಡಿಕೊಂಡಿತು.

“ನೀನು ಬಂದೇಬಿಟ್ಟೆ!” ಸಿದ್ಧಾರ್ಥ ಮುಗುಳ್ನಕ್ಕ. “ನಾನು ಬಂದೇಬಿಟ್ಟೆ” ಗೋವಿಂದ ಖಾತ್ರಿಪಡಿಸಿದ.    

(ಮೊದಲನೆ ಅಧ್ಯಾಯ ಮುಕ್ತಾಯ. ಎರಡನೇ ಅಧ್ಯಾಯದ ಆರಂಭ, ಶುಕ್ರವಾರದ ಸಂಚಿಕೆಯಲ್ಲಿ…)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.