ಅಧ್ಯಾಯ 2 : ಸಮಣರೊಂದಿಗೆ ~ ಸಿದ್ಧಾರ್ಥ #5

ಅಪ್ಪನ ಅನುಮತಿ ಪಡೆದ ಸಿದ್ಧಾರ್ಥ ಸಮಣರ ಮಾರ್ಗದರ್ಶನದಲ್ಲಿ ತನ್ನನ್ನು ಕಂಡುಕೊಳ್ಳಲು ಹೊರಟ. ಜೀವದ ಗೆಳೆಯ ಗೋವಿಂದನೂ ಅವನನ್ನು ಸೇರಿಕೊಂಡ. ನಸುಗತ್ತಲಲ್ಲಿ ಪಟ್ಟಣವಿನ್ನೂ ಮೈಮುರಿಯುತ್ತಿರುವಾಗಲೇ ಅವರಿಬ್ಬರೂ ಕಾಡಿನತ್ತ ಹೊರಟರು. ಆಮೇಲೆ… । ಮೂಲ: ಹರ್ಮನ್ ಹೆಸ್ಸ್; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ

ಹಿಂದಿನ ಸಂಚಿಕೆ ಇಲ್ಲಿ ನೋಡಿhttps://aralimara.com/2022/04/28/sid-4/

ಸಂಜೆ ವೇಳೆಗೆ ಗೆಳೆಯರಿಬ್ಬರೂ ಬತ್ತಿದ ಮೈಯ ಕಠಿಣ ವ್ರತಿಗಳಾದ ಸಮಣರನ್ನು ಕೂಡಿಕೊಂಡರು. ನಾವು ನಿಮ್ಮ ನಿಯಮಗಳಿಗೆ ಬದ್ಧರಾಗಿರುತ್ತೇವೆ, ನಮ್ಮನ್ನೂ ನಿಮ್ಮ ಜೊತೆ ಕರೆದೊಯ್ಯಿರಿ ಎಂದು ಕೇಳಿಕೊಂಡರು. ಸಮಣರೂ ಅವರ ಬೇಡಿಕೆ ಮನ್ನಿಸಿದರು.

ಸಿದ್ಧಾರ್ಥ ತನ್ನ ಬಟ್ಟೆಗಳನ್ನ ಕಳಚಿ ದಾರಿಹೋಕ ಬಡಬ್ರಾಹ್ಮಣನಿಗೆ ಕೊಟ್ಟುಬಿಟ್ಟ. ಅವನ ಮೈಮೇಲೀಗ ಸೊಂಟ ಮುಚ್ಚಲೊಂದು ಹುಲಿ ಚರ್ಮದ ತುಣುಕು, ಹೊದೆಯಲೊಂದು ಮಣ್ಣಿನ ಬಣ್ಣದ ಹತ್ತಿ ಬಟ್ಟೆ; ಅಷ್ಟೇ. ಅವನೀಗ ದಿನಕ್ಕೆ ಒಂದೇ ಸಲ ಏನಾದರೂ ತಿನ್ನುತ್ತಿದ್ದುದು; ಅದೂ ಬೇಯಿಸದೇ, ಹಸಿಹಸಿಯಾಗಿ. ಕೆಲವೊಮ್ಮೆ ಅದನ್ನೂ ಬಿಟ್ಟು ನಿರಂತರವಾಗಿ ಹದಿನೈದು ದಿನ, ಇಪ್ಪತ್ತೆಂಟು ದಿನಗಳ ನಿಟ್ಟುಪವಾಸ ಮಾಡುತ್ತಿದ್ದುದೂ ಉಂಟು. ಇದರ ಪರಿಣಾಮ ಅವನ ದೇಹದ ಮೇಲೆ ಆಗೇ ಆಯಿತು. ಅವನ ತೊಡೆ ಮತ್ತು ಕೆನ್ನೆಯಿಂದ ಚರ್ಮ ಜೋತುಬಿದ್ದಿತು. ಉಷ್ಣಕ್ಕೆ ಊದಿದ ಕಣ್ಣುಗಳಲ್ಲಿ ಸದಾ ಚಿತ್ರವಿಚಿತ್ರ ಕನಸುಗಳು ಹಾದುಹೋಗುತ್ತಿದ್ದವು. ಒಡೆದು ಗಾರಾದ ಸಪೂರ ಕೈಗಳಲ್ಲಿ ಉದ್ದುದ್ದ ಉಗುರು ಬೆಳೆದುಕೊಂಡವು. ಒಣಗಿದ ಪೊದೆಗೂದಲ ಗಡ್ಡ ಅವನ ಎದೆಯುದ್ದಕ್ಕೂ ಇಳಿಯತೊಡಗಿತ್ತು.

ದಾರಿಯಲ್ಲಿ ಹೆಣ್ಣುಗಳು ಎದುರಾದರೆ ಅವನ ನೋಟ ಮರಗಟ್ಟುತ್ತಿತ್ತು. ಸುಂದರವಾದ ಬಟ್ಟೆಬರೆ ತೊಟ್ಟು ನಗರದ ಬೀದಿಗಳಲ್ಲಿ  ತಿರುಗಾಡುವ ಜನರನ್ನು ಕಂಡು ಅವನ ತುಟಿಗಳು ತಿರಸ್ಕಾರದಿಂದ ಬಿಗಿದುಕೊಳ್ಳುತ್ತಿದ್ದವು. ವ್ಯಾಪಾರ ಮಾಡುವ ವರ್ತಕರನ್ನು, ಬೇಟೆಯಾಡುವ ರಾಜಕುಮಾರರನ್ನು, ಸತ್ತವರ ಮುಂದೆ ಎದೆ ಬಡಿದು ಅಳುತ್ತಿರುವ ರುಡಾಲಿಗಳನ್ನು, ಅಂಗಸನ್ನೆ ಮಾಡುತ್ತಾ ತಮ್ಮನ್ನು ಮಾರಿಕೊಳ್ಳಲು ನಿಂತ ಗಣಿಕೆಯರನ್ನು, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು, ಬಿತ್ತನೆಗೆ ದಿನ ನಿಗದಿ ಮಾಡುತ್ತಿರುವ ಜ್ಯೋತಿಷಿಗಳನ್ನು, ಮುದ್ದಾಡುತ್ತಿರುವ ಪ್ರೇಮಿಗಳನ್ನು, ಹಾಲುಣಿಸುತ್ತಿರುವ ತಾಯಂದಿರನ್ನು – ಇವೆಲ್ಲವನ್ನೂ ಸಿದ್ಧಾರ್ಥ ಅರ್ಥಹೀನ ಅನ್ನುವಂತೆ ನೋಡುತ್ತಿದ್ದ. ಅವೆಲ್ಲವೂ ಸುಳ್ಳಾಗಿ ಕಾಣುತ್ತಿದ್ದವು. ಅವೆಲ್ಲವೂ ಕೊಳೆತು ನಾರುತ್ತಿದ್ದವು. ಅವೆಲ್ಲವೂ… ಅವೆಲ್ಲವೂ ಕೊಳೆತು ನಾರುವ ಸುಳ್ಳುಗಳೇ ಆಗಿದ್ದವು!

ನೋಡಲಿಕ್ಕೇನೋ ಅವೆಲ್ಲವೂ ಸುಂದರವಾಗಿ, ಅರ್ಥಪೂರ್ಣವಾಗಿ, ಸಂತೋಷದಾಯಕವಾಗಿ ಕಾಣಿಸುತ್ತಿದ್ದವು. ಆದರೆ ಅವೆಲ್ಲವೂ ವಾಸ್ತವವನ್ನು ಮರೆಮಾಚುವ ಹೊದಿಕೆಯಾಗಿದ್ದವು, ಅಷ್ಟೇ.

ಅವನ ಪಾಲಿಗೆ ಜಗತ್ತು ಕಹಿಯಾಗಿಯೂ ಬದುಕೊಂದು ಹಿಂಸೆಯಾಗಿಯೂ ಕಾಣತೊಡಗಿದ್ದವು.

ಸಿದ್ಧಾರ್ಥನ ಮುಂದೆ ಒಂದು ಗುರಿ ಇತ್ತು. ಒಂದೇ ಒಂದು ಗುರಿ; ಖಾಲಿಯಾಗುವುದು. ಎಲ್ಲ ಬಗೆಯ ಬಾಯಾರಿಕೆಯಿಂದ, ಬಯಕೆಯಿಂದ, ಕನಸುಗಳಿಂದ, ಸುಖದುಃಖಗಳಿಂದಲೂ ಬರಿದಾಗುವುದು. ತನ್ನ ಪಾಲಿಗೆ ತಾನೇ ಸತ್ತುಹೋಗುವುದು. ತನ್ನಿಂದ ತಾನು ಬೇರೆಯಾಗುವುದು. ತನ್ನೊಳಗಿನ ಆ ಖಾಲಿಯಲ್ಲಿ ಶಾಂತಿಯನ್ನು ಕಂಡುಕೊಳ್ಳುವುದು. ನಿಸ್ವಾರ್ಥ ಚಿಂತನೆಗಳಲ್ಲಿ ಪವಾಡ ಕಾಣುವುದು… ಇದು ಅವನ ಗುರಿಯಾಗಿತ್ತು.

“ಒಂದು ಸಲ ನನ್ನೆಲ್ಲಾ ಗುರುತನ್ನು ಮೀರಿ ಇಲ್ಲವಾಗಿಬಿಟ್ಟರೆ, ಒಂದು ಸಲ ಎದೆಯಾಳದ ಎಲ್ಲ ಬಯಕೆಗಳು ಮತ್ತು ಆಕಾಂಕ್ಷೆಗಳು ಮೌನವಾಗಿಬಿಟ್ಟರೆ; ಆಗ ನನ್ನೊಳಗಿನ ಆತ್ಯಂತಿಕ ಶಕ್ತಿ, ನನ್ನ ಅಂತರಾಳ, ನನ್ನ ಗುರುತಿಂದ ಹೊರತಾದ ಸದ್ವಸ್ತು, ಪರಮ ರಹಸ್ಯವೇನಿದೆಯೋ ಅದು – ಎಚ್ಚರಗೊಳ್ಳುವುದು” ಎಂದವನು ಯೋಚಿಸುತ್ತಿದ್ದ.  

ಸಿದ್ಧಾರ್ಥ ಮೌನವಾಗಿ ಗಂಟೆಗಟ್ಟಲೆ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ನಿಂತ. ಉರಿಯನ್ನು ಸಹಿಸಿದ, ದಣಿವನ್ನು ಸಹಿಸಿದ. ಸಹಿಸುತ್ತ ಸಹಿಸುತ್ತ ಉರಿಯಾಗಲೀ ದಣಿವಾಗಲೀ ತನ್ನನ್ನು ಕಾಡುವುದು ನಿಲ್ಲುವವರೆಗೆ ನಿಂತುಕೊಂಡೇ ಇದ್ದ.

ಅವನು ಮೌನವಾಗಿ ಬಿರುಮಳೆಗೂ ಮೈಯೊಡ್ಡಿದ. ಅವನ ತಲೆಮೇಲೆ ಸುರಿದ ಮಳೆ ನೀರು ಜಟೆಗೂದಲುದ್ದಕ್ಕೂ ಹರಿದು ಹನಿ ಹನಿ ತೊಟ್ಟಿಕ್ಕಿ ಅವನ ತೋಳುಗಳನ್ನೂ ಸೊಂಟವನ್ನೂ ಕಾಲುಗಳನ್ನೂ ತಣ್ಣಗೆ ಥರಗುಡಿಸುತ್ತ ಸಾಗಿದವು. ಮಳೆಹನಿಯ ತಂಪಿಗೆ ತನ್ನ ತೋಳುಗಳಾಗಲೀ ಸೊಂಟವಾಗಲೀ ಕಾಲಾಗಲೀ ಥರಗುಟ್ಟಿ ನಡುಗುವುದು ನಿಲ್ಲುವವರೆಗೂ ಅವನು ನಿಂತೇ  ಇದ್ದ. ಎಲ್ಲ ಅನುಭವಗಳ ಸದ್ದು ಅಡಗುವವರೆಗೆ, ನಿಶ್ಚಲವಾಗುವವರೆಗೆ ಅವನು ನಿಂತುಕೊಂಡೇ ಇದ್ದ.  

ಕೊನೆಗವನು ಮೌನವಾಗಿ ಮುಳ್ಳಿನ ಪೊದೆ ಹೊಕ್ಕ. ಅವನ ಮೈ ತರಚಿ ರಕ್ತ ಸುರಿಯತೊಡಗಿತು. ಹಸಿಗಾಯ ಕೀತು ವ್ರಣವಾಯಿತು. ಉರಿಗಾಯ, ಕೀವಿನ ಬಾವುಗಳನ್ನು ಹೊತ್ತುಕೊಂಡೇ ಸಿದ್ಧಾರ್ಥ ನಿಶ್ಚಲವಾಗಿ, ದೃಢವಾಗಿ ನಿಂತ. ಗಾಯದ ಉರಿ ಕಾಣೆಯಾಗುವವರೆಗೆ, ಕೀವಿನ ವಾಸನೆ ಬರದಂತಾಗುವವರೆಗೆ, ನೋವು ಮಾಯವಾಗುವವರೆಗೆ ನಿಂತುಕೊಂಡೇ ಇದ್ದ.

ಸಿದ್ಧಾರ್ಥ ನೇರವಾಗಿ ಕುಂತು ಪ್ರಾಣಾಯಾಮ ಮಾಡಲು ಕಲಿತ. ಕೆಲವೇ ಉಸಿರಲ್ಲಿ ಬದುಕಲು ಕಲಿತ. ಉಸಿರುಗಟ್ಟಿ ಬದುಕುವ ಕಲೆಯನ್ನೂ ಸಿದ್ಧಿಸಿಕೊಂಡ. ಉಸಿರಿನಿಂದ ಶುರುವಿಟ್ಟು ಎದೆ ಬಡಿತ ನಿಧಾನಗೊಳಿಸುವುದನ್ನೂ, ಎದೆ ಬಡಿತ  ಕಡಿಮೆ ಮಾಡುವುದನ್ನೂ ಕಲಿತ. ಎಷ್ಟೆಂದರೆ, ಎದೆ ಬಡಿಯುತ್ತಿದೆಯೋ ಇಲ್ಲವೋ ಎಂದು ಅನುಮಾನ ಬರುವಷ್ಟು ಕಡಿಮೆ!

ಹಿರಿಯ ಸಮಣನ ಮಾರ್ಗದರ್ಶನದಲ್ಲಿ ಸಿದ್ಧಾರ್ಥ ಸ್ವಯಂನಿರಾಕರಣೆಯನ್ನು ಅಭ್ಯಾಸ ಮಾಡಿದ. ಹೊಸ ಸಮಣ ನಿಯಮಗಳ ಪ್ರಕಾರ ಧ್ಯಾನ ಮಾಡತೊಡಗಿದ. ಅದೇ ವೇಳೆ ಕೊಕ್ಕರೆಯೊಂದು ಹಾರುತ್ತಾ ಬಿದಿರ ಮೆಳೆ ಹೊಕ್ಕಿತು. ಸಿದ್ಧಾರ್ಥ ತನ್ನ ಆತ್ಮವನ್ನು ಕೊಕ್ಕರೆಯೊಳಗೆ ಬಿಟ್ಟುಕೊಂಡ. ತಾನೇ ಕೊಕ್ಕರೆಯಾಗಿ ಕಾಡು – ಬೆಟ್ಟಗಳ ಮೇಲೆಲ್ಲ ಹಾರಾಡಿದ. ನದಿಯಲ್ಲಿ ಮೀನು ಹಿಡಿದು ತಿಂದ. ಕೊಕ್ಕರೆಯ ಹಸಿವನ್ನು ಅನುಭವಿಸಿದ. ಕೊಕ್ಕರೆಯಂತೇ ದನಿ ತೆಗೆದು ಕೂಗಿದ. ಕೊನೆಗೆ ಕೊಕ್ಕರೆಯ ಹಾಗೇ ಸತ್ತುಹೋದ.

ಅಲ್ಲೇ ಹೊಳೆಯ ಬುಡದಲ್ಲೊಂದು ಸತ್ತ ನರಿಯ ದೇಹವಿತ್ತು. ಸಿದ್ಧಾರ್ಥನ ಆತ್ಮ ಆ ದೇಹವನ್ನು ಹೊಕ್ಕಿತು. ನರಿಯ ಹೆಣವಾಗಿಯೇ ಮಲಗಿತು. ತನ್ನನ್ನು ಛಿದ್ರವಾಗಗೊಟ್ಟಿತು. ಹೊಳೆಯ ಹರಿವಲ್ಲಿ ತೇಲಿತು. ಕೊಳೆತು ನಾರತೊಡಗಿತು. ತೋಳಗಳು ಅದನ್ನು ಎಳೆದಾಡಿದವು. ಹದ್ದುಗಳು ಅದನ್ನು ಕುಕ್ಕಿ ಕುಕ್ಕಿ ತಿಂದವು. ಬರೀ ಮೂಳೆಚಕ್ಕಳ ಉಳಿಯಿತು. ಕೊನೆಗೆ ಅದೂ ಹುಡಿ ಎದ್ದು ಹೊಲದ ಉದ್ದಕ್ಕೂ ಹಾರಿ ಮಣ್ಣಲ್ಲಿ ಮಣ್ಣಾಯಿತು.

(ಮುಂದುವರಿಯುವುದು…)


{‘ಸಿದ್ಧಾರ್ಥ’, ಖ್ಯಾತ ಕಾದಂಬರಿಕಾರ ಹರ್ಮನ್ ಹೆಸ್ ರವರ ಬಹುಚರ್ಚಿತ ಕೃತಿ. ಈ ಕಾದಂಬರಿಯನ್ನು ಚೇತನಾ ತೀರ್ಥಹಳ್ಳಿ ಕನ್ನಡಕ್ಕೆ ಅನುವಾದಿಸಿದ್ದು, ಈ ಸ್ವೈರಾನುವಾದದ ಕಂತುಗಳು ಪ್ರತಿ ಸೋಮವಾರ ಮತ್ತು ಗುರುವಾರ ‘ಅರಳಿಮರ’ದಲ್ಲಿ ಪ್ರಕಟವಾಗಲಿದೆ…}

1 Comment

Leave a Reply