ಬದುಕು ಸ್ಟ್ಯಾಟಿಕ್ ಅಲ್ಲ. ಬದುಕು ಸ್ಟ್ಯಾಟಿಕ್ ಆಗಿದ್ದರೆ, ಧ್ಯಾನದ ಅವಶ್ಯಕತೆಯೇ ಇರಲಿಲ್ಲ. ಎಲ್ಲನ್ನೂ ಮೈಂಡ್ ನಿರ್ವಹಿಸಬಹುದಾಗಿತ್ತು. ಆಗ ನೀವು ಎಷ್ಟು ಸಮಯವನ್ನಾದರೂ ತೆಗೆದುಕೊಂಡು ಆಲೋಚನೆ ಮಾಡಬಹುದಿತ್ತು… ~ Osho – “A Bird on the Wing”
ಒಮ್ಮೆ ಒಬ್ಬಳು ಹುಡುಗಿ, ಜಗತ್ತಿನ ಶ್ರೇಷ್ಠ ತತ್ವಜ್ಞಾನಿ ಇಮ್ಯಾನುಯೆಲ್ ಕ್ಯಾಂಟ್ ಎದುರು ಮದುವೆಯ ಪ್ರಸ್ತಾಪ ಮಂಡಿಸಿದಳು. ನನ್ನ ಪ್ರಕಾರ ಮದುವೆಗೆ ಹೆಣ್ಣು ಪ್ರಪೋಸ್ ಮಾಡುವುದು ಅಂಥ ಒಳ್ಳೆಯ ಸಂಗತಿಯೇನಲ್ಲ, ಯಾವಾಗಲೂ ಮದುವೆಯ ಪ್ರಸ್ತಾಪ ಗಂಡಿನ ಕಡೆಯಿಂದಲೇ ಬರಬೇಕು. ಆದರೆ ಈ ಕೇಸಿನಲ್ಲಿ ಆ ಹೆಣ್ಣು ಮಗಳು ಕ್ಯಾಂಟ್ ನಿಗಾಗಿ ಬಹಳ ಕಾಲ ಕಾಯ್ದಿರಬೇಕು, ಆದರೆ ಯಾವಾಗಲೂ ತನ್ನೊಳಗೇ ಮಗ್ನನಾಗಿರುತ್ತಿದ್ದ ಕ್ಯಾಂಟ್ ಗೆ ಇದೆಲ್ಲ ಗೊತ್ತೇ ಇರಲಿಲ್ಲ. ಕೊನೆಗೆ ಇಮ್ಯಾನುಯೆಲ್ ನಿಂದ ಯಾವ ಪ್ರಸ್ತಾಪವೂ ಬರದಿದ್ದಾಗ, ಆ ಹುಡುಗಿಯೇ ಮುಂದುವರೆದು “ ನನ್ನನ್ನು ಮದುವೆಯಾಗುತ್ತೀಯಾ ? “ ಎಂದು ಕ್ಯಾಂಟ್ ನ ಎದುರು ಮದುವೆಯ ಪ್ರಸ್ತಾಪ ಮಂಡಿಸಿದ್ದಳು.
ಮದುವೆಯ ಕುರಿತು ವಿಚಾರ ಮಾಡಿ ಹೇಳುತ್ತೇನೆ, ಎಂದು ಕ್ಯಾಂಟ್ ಆ ಹುಡುಗಿಗೆ ಉತ್ತರಿಸಿದ್ದ.
ಪ್ರೀತಿಯ ಕುರಿತು ವಿಚಾರ ಮಾಡುವುದೇನಿದೆ ? ಪ್ರೀತಿ ಇದೆ ಅಥವಾ ಇಲ್ಲ, ಇಷ್ಟೇ ಅಲ್ವಾ ವಿಷಯ ? ಇದು ಆಲೋಚನೆ ಮಾಡಿ ಬಿಡಿಸಬೇಕಾದ ಗಣಿತದ ಸಮಸ್ಯೆ ಏನಲ್ಲ. ನೀವು ಪ್ರತಿಕ್ರಯಿಸಬೇಕಾದದ್ದು ಆ ಸಂದರ್ಭಕ್ಕೆ ಮಾತ್ರ. ಈ ಪ್ರಸ್ತಾವಕ್ಕೆ, ನಿಮ್ಮ ಹೃದಯ ಹೂಂ ಅನ್ನಬಹುದು ಅಥವಾ ಉಹೂಂ ಅನ್ನಬಹುದು, ಇಲ್ಲಿಗೆ ವಿಷಯ ಇತ್ಯರ್ಥವಾದಂತೆ. ಇದರಲ್ಲಿ ವಿಚಾರ ಮಾಡಿ ಉತ್ತರಿಸುವಂಥದೇನಿದೆ ? ಇದೇನು ವ್ಯಾಪಾರದ ಪ್ರಸ್ತಾವವೇ ? ಆದರೆ ಇಮ್ಯಾನುಯೆಲ್ ಗೆ ಇದು ಒಂದು ರೀತಿಯ ಬ್ಯುಸಿನೆಸ್ ಪ್ರಪೋಸಲ್. ಎಲ್ಲ ಭಾರವನ್ನೂ ಬುದ್ಧಿಯ ಮೇಲೆ ಹಾಕಿರುವವರಿಗೆ ಎಲ್ಲವೂ ವ್ಯಾಪಾರದ ವಿಷಯವೇ. ಆದ್ದರಿಂದ ಇಮ್ಯಾನುಯೆಲ್ ಈ ಬಗ್ಗೆ ಬಹಳ ಆಳವಾಗಿ ವಿಚಾರ ಮಾಡಿದ, ಅಷ್ಟೇ ಅಲ್ಲ ಲೈಬ್ರರಿಗೆ ಹೋಗಿ ಪ್ರೀತಿ ಮತ್ತು ಮದುವೆಯ ಕುರಿತಾದ ಎಲ್ಲ ಪುಸ್ತಕಗಳನ್ನು ಅಧ್ಯಯನ ಮಾಡಿದ, ಮತ್ತು ತನ್ನ ನೋಟ್ ಬುಕ್ ನಲ್ಲಿ ಮದುವೆಯ ಪರವಾದ ಮತ್ತು ವಿರುದ್ಧ ಇದ್ದ ಎಲ್ಲ ಅಂಶಗಳನ್ನೂ ಪಟ್ಟಿ ಮಾಡಿಕೊಂಡ. ಈ ಬಗ್ಗೆ ತುಂಬ ತಲೆ ಕೆಡಿಸಿಕೊಂಡ ಮೇಲೆ, ಮದುವೆಯ ಪರ ವಿರೋಧದ ಪಾಯಿಂಟ್ಸ್ ಗಳನ್ನ ತೂಗಿ ನೋಡಿದ ಮೇಲೆ, ಹುಡುಗಿಯ ಮದುವೆಯ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸುವ ನಿರ್ಧಾರಕ್ಕೆ ಬಂದ. ಹಾಗಾಗಿ ಅವನ ಈ ನಿರ್ಧಾರ ತರ್ಕವನ್ನು ಆಧರಿಸಿದ ನಿರ್ಧಾರವಾಗಿತ್ತು.
ನಂತರ ಇಮ್ಯಾನುಯೆಲ್, ಹುಡುಗಿಯ ಮನೆಗೆ ಹೋಗಿ ಬಾಗಿಲು ತಟ್ಟಿದ. ಬಾಗಿಲು ತೆರೆದು ಹುಡುಗಿಯ ತಂದೆಗೆ ಕ್ಯಾಂಟಿ ತಾನು ಬಂದ ಕಾರಣ ವಿವರಿಸಿ ಹೇಳಿದ. “ ಆದರೆ ಅವಳಿಗೆ ಈಗಾಗಲೇ ಮದುವೆಯಾಗಿ ಮೂರು ಮಕ್ಕಳಾಗಿವೆ, ನೀನು ತುಂಬ ತಡ ಮಾಡಿಬಿಟ್ಟೆ. “ ಹುಡುಗಿಯ ಅಪ್ಪ , ಇಮ್ಯಾನುಯೆಲ್ ಗೆ ನಡೆದ ವಿಚಾರವನ್ನೆಲ್ಲ ತಿಳಿಸಿದ.
ಇಮ್ಯಾನುಯೆಲ್ ತುಂಬ ನಿರಾಶನಾಗಿ ಹುಡುಗಿಯ ಮನೆಯಿಂದ ಹೊರಬಿದ್ದ.
ಬುದ್ಧಿ ಯಾವಾಗಲೂ ಸಮಯದ ಗುಲಾಮ, ಸಮಯ ಇಲ್ಲವಾದರೆ ಬುದ್ಧಿಗೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದು ಕಷ್ಟ ಮತ್ತು ಸಮಯಕ್ಕಾಗಿ ಸಂದರ್ಭ ಯಾವಾಗಲೂ ಕಾಯುವುದಿಲ್ಲ. ಸಾಕಷ್ಟು ಸಮಯ ತೆಗೆದುಕೊಂಡ ಇಮ್ಯಾನುಯೆಲ್ ಹುಡುಗಿಯ ಮನೆ ಬಾಗಿಲು ತಟ್ಟಿದಾಗ ಸಂದರ್ಭ ದಾಟಿ ಹೋಗಿತ್ತು. ಹುಡುಗಿಗೆ ಆಗಲೇ ಮದುವೆಯಾಗಿ ಮೂರು ಮಕ್ಕಳಾಗಿತ್ತು. ಇಂಥ ಘಟನೆಗಳು ಪ್ರತಿ ಕ್ಷಣವೂ ನಡೆಯುತ್ತಿವೆ. ಸಂದರ್ಭದ ಕಾಲ ಮೀತಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳದೇ ನಿರ್ಧಾರ ಮಾಡಿಬಿಡಬೇಕು. ನೀವು ನಿರ್ಧಾರ ಮಾಡಲಿಕ್ಕೆ ಹೆಚ್ಚು ಸಮಯ ತೆಗೆದುಕೊಂಡರೆ ಸಂದರ್ಭ ನಿಮಗಾಗಿ ಕಾಯುವುದಿಲ್ಲ. ಇಮ್ಯಾನುಯೆಲ್ ರೆಡಿ ಇರಬಹುದು ಆದರೆ ಅವನು ತನ್ನ ನಿರ್ಧಾರವನ್ನು ಮೈಂಡ್ ಮೇಲೆ ಹೊರೆಸಿದ್ದರಿಂದ, ಮೈಂಡ್ ತನ್ನ ಸ್ವಭಾವದಂತೆ ಸಾಕಷ್ಟು ಸಮಯ ತೆಗೆದುಕೊಂಡು ಕೊನೆಗೆ ಒಂದು ನಿರ್ಧಾರಕ್ಕೆ ಬಂದಿತ್ತು. ಆದರೆ ಸಂದರ್ಭ, ಮೈಂಡ್ ನ ಉತ್ತರಕ್ಕೆ ಕಾಯುತ್ತ ಕೂತಿರಲಿಲ್ಲ, ಮುಂದೆ ಚಲಿಸಿಬಿಟ್ಟಿತ್ತು.
ಬದುಕು ಒಂದು ಹರಿವು, ಒಂದು ಚಲನೆ. ಅದು static ಅಲ್ಲ. ಬದುಕೇನಾದರೂ ಸ್ಟ್ಯಾಟಿಕ್ ಆಗಿದ್ದರೆ ಇಮ್ಯಾನುಯೆಲ್ ನ ಮೈಂಡ್ ನಿರ್ಧಾರಕ್ಕೆ ಬರುವವರೆಗೆ ಹುಡುಗಿ ಕಾಯುತ್ತಿದ್ದಳು. ಆದರೆ ಹಾಗಾಗಲಿಲ್ಲ, ಬದುಕು ಚಲಿಸುತ್ತಿರುವುದರಿಂದ ಹುಡುಗಿಗೆ ವಯಸ್ಸಾಗತೊಡಗಿತ್ತು, ಮನೆಯಲ್ಲಿ ಹಿರಿಯರ ಒತ್ತಡ ಜಾಸ್ತಿ ಆಗಿತ್ತು. ಅವಳು ಬದುಕನ್ನ ಮಿಸ್ ಮಾಡಿಕೊಳ್ಳತೊಡಗಿದ್ದಳು. ಅವಳು ಇಮ್ಯಾನುಯೆಲ್ ಗಾಗಿ ಕಾಯುವಂತಿರಲಿಲ್ಲ. ಅವಳು ಬದುಕಿನ ಜೊತೆ ಮುಂದುವರೆಯಬೇಕಿತ್ತು, ಒಂದು ನಿರ್ದಾರಕ್ಕೆ ಬರಲೇ ಬೇಕಿತ್ತು.
ಬದುಕು ಸ್ಟ್ಯಾಟಿಕ್ ಅಲ್ಲ. ಬದುಕು ಸ್ಟ್ಯಾಟಿಕ್ ಆಗಿದ್ದರೆ, ಧ್ಯಾನದ ಅವಶ್ಯಕತೆಯೇ ಇರಲಿಲ್ಲ. ಎಲ್ಲನ್ನೂ ಮೈಂಡ್ ನಿರ್ವಹಿಸಬಹುದಾಗಿತ್ತು. ಆಗ ನೀವು ಎಷ್ಟು ಸಮಯವನ್ನಾದರೂ ತೆಗೆದುಕೊಂಡು ಆಲೋಚನೆ ಮಾಡಬಹುದಿತ್ತು, ಎಷ್ಟೋ ಜನ್ಮಗಳ ನಂತರ ನೀವು ನಿಮ್ಮ ನಿರ್ಧಾರವನ್ನು ತಿಳಿಸಿದಾಗ ಹುಡುಗಿ ನಿಮಗಾಗಿ ಸಿದ್ಧಳಾಗಿರುತ್ತಿದ್ದಳು. ಆದರೆ ಬದುಕು ಒಂದು ಹರಿವು, ಒಂದು ಚಲನೆ. ಪ್ರತಿ ಕ್ಷಣವೂ ಬದಲಾಗುತ್ತ ಹೊಸದಾಗುತ್ತಿರುತ್ತದೆ. ಈ ಕ್ಷಣವನ್ನು ನೀವು ಕಳೆದುಕೊಂಡರೆ ಬದುಕನ್ನ ಕಳೆದುಕೊಂಡಂತೆ.