“ಅರ್ಹತೆ” ಆಧಾರದ ಪ್ರೀತಿ ಸುಲಭವಾಗಿ ಒಂದು ಕಹಿ ಭಾವನೆಯನ್ನ ನಮ್ಮಲ್ಲಿ ಉಳಿಸುತ್ತದೆ ; ಇಲ್ಲಿ ಒಬ್ಬನನ್ನು, ಅವನು ಅವನಾಗಿರುವ ಕಾರಣಕ್ಕೆ ಪ್ರೀತಿಸಲಾಗುತ್ತಿಲ್ಲ, ಅವನು ಯಾರನ್ನೋ ಮೆಚ್ಚಿಸುತ್ತಾನೆ ಎನ್ನುವ ಕಾರಣಕ್ಕೆ ಪ್ರೀತಿಸಲಾಗುತ್ತದೆ, ಕೊನೆಗೆ ಅವನನ್ನು ಯಾರೂ ಪ್ರೀತಿಸಲೇ ಇಲ್ಲ, ಕೇವಲ ಬಳಸಿಕೊಂಡರು, ಇವೇ ಮುಂತಾದವು ಆ ಕೆಲವು ಕಹಿ ಭಾವನೆಗಳು. ನಾವು ಮಕ್ಕಳಾಗಲೀ, ವಯಸ್ಕರರಾಗಲೀ, ತಾಯಿ ರೀತಿಯ ಪ್ರೀತಿಗೆ ಅಂಟಿಕೊಳ್ಳುವುದರಲ್ಲಿ ಅಂಥ ಆಶ್ಚರ್ಯವೇನೂ ಇಲ್ಲ… । ಎರಿಕ್ ಫ್ರೋಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2022/04/30/love-31/
ಪ್ರೀತಿಸುವ ಸಾಮರ್ಥ್ಯದ ಬೆಳವಣಿಗೆಗೂ ಮತ್ತು ಪ್ರೀತಿಸುವ ವ್ಯಕ್ತಿಯ / ವಸ್ತುವಿನ ಬೆಳವಣಿಗೆಗೂ ಹತ್ತಿರದ ಸಂಬಂಧವಿದೆ. ಮಗುವಿನ ಮೊದಲ ಕೆಲ ತಿಂಗಳುಗಳು, ವರ್ಷಗಳು, ಮಗು ಮತ್ತು ತಾಯಿಯ ನಡುವಿನ ಅತ್ಯಂತ ನಿಕಟ ಬಾಂಧವ್ಯದ ದಿನಗಳು. ತಾಯಿ ಮತ್ತು ಮಗುವಿನ ನಡುವಿನ ಈ ಬಾಂಧವ್ಯ ಶುರುವಾಗೋದು ಮಗು ಹುಟ್ಟುವ ಕ್ಷಣಕ್ಕಿಂತ ಬಹಳ ಮುಂಚೆಯೇ, ತಾಯಿ ಮಗು ಇನ್ನೂ ಒಂದಾಗಿರುವಾಗ, ಅವರು ಇಬ್ಬರಾಗಿದ್ದರೂ. ಮಗುವಿನ ಹುಟ್ಟು ಕೆಲವು ಅಂಶಗಳಲ್ಲಿ ಪರಿಸ್ಥಿತಿಯನ್ನ ಬದಲಾಯಿಸುತ್ತದೆಯಾದರೂ ಕಣ್ಣಿಗೆ ಕಾಣಿಸುವಷ್ಟು ಬದಲಾವಣೆ ನಿಜವಾಗಿ ಆಗಿರುವುದಿಲ್ಲ. ಮಗು ಈಗ ತಾಯಿಯ ಗರ್ಭದಿಂದ ಹೊರಗೆ ಜೀವಿಸುತ್ತಿದೆಯಾದರೂ ಅದು ಇನ್ನೂ ತಾಯಿಯ ಮೇಲೆ ಅವಲಂಬಿತವಾಗಿದೆ. ಆದರೆ ದಿನದಿಂದ ದಿನಕ್ಕೆ ಮಗು ಹೆಚ್ಚು ಹೆಚ್ಚು ಸ್ವತಂತ್ರವಾಗುತ್ತ ಹೋಗುತ್ತದೆ : ಮಗು ನಡೆಯಲು ಕಲಿಯುತ್ತದೆ, ಮಾತನಾಡಲು ಕಲಿಯುತ್ತದೆ, ತಾನೇ ಸ್ವತಃ ಜಗತ್ತನ್ನು ಕಂಡುಕೊಳ್ಳಲು ಪ್ರಯತ್ನ ಶುರುಮಾಡುತ್ತದೆ ; ನಿಧಾನವಾಗಿ ಮಗುವಿನ ತಾಯಿಯೊಡನೆಯ ಬಾಂಧವ್ಯ ತನ್ನ ಪ್ರಮುಖ ಮಹತ್ವವನ್ನು ಕಳೆದುಕೊಳ್ಳುತ್ತ ಹೋಗುತ್ತದೆ, ಬದಲಾಗಿ ಮಗು ಮತ್ತು ತಂದೆಯ ಬಾಂಧವ್ಯ ಹೆಚ್ಚು ಮಹತ್ವ ಗಳಿಸುತ್ತ ಹೋಗುತ್ತದೆ.
ತಾಯಿಯಿಂದ ತಂದೆಯ ಕಡೆಗೆ ಶಿಫ್ಟ್ ಆಗುತ್ತಿರುವ ಮಗುವಿನ ಆಸಕ್ತಿಯನ್ನು ಅರ್ಥ ಮಾಡಿಕೊಳ್ಳಲು, ನಾವು ತಾಯಿಯ ಮತ್ತು ತಂದೆಯ ಪ್ರೀತಿಗಳ ನಡುವೆ ಇರುವ ಅವಶ್ಯಕ ವೈರುಧ್ಯಗಳನ್ನು ಮೊದಲು ಗಮನಿಸಬೇಕು. ನಾವು ಈಗಾಗಲೇ ತಾಯಿಯ ಪ್ರೀತಿಯ ಬಗ್ಗೆ ಚರ್ಚೆ ಮಾಡಿದ್ದೇವೆ. ತಾಯಿಯ ಪ್ರೀತಿ ಅತ್ಯಂತ ಸ್ವಾಭಾವಿಕವಾಗಿ ಯಾವ ಶರತ್ತೂ ಇಲ್ಲದಂಥಹದು. ತಾಯಿ ತನ್ನ ಆಗ ತಾನೇ ಹುಟ್ಟಿದ ಮಗುವನ್ನು ಪ್ರೀತಿಸುವುದು ಅದು ತಾನು ಹೆತ್ತ ಮಗುವಾಗಿರುವುದರಿಂದಲೇ ಹೊರತು, ಆ ಮಗು ಯಾವುದೇ ನಿರ್ಧಿಷ್ಟ ಶರತ್ತುಗಳನ್ನು ನಿಭಾಯಿಸಿದ ಅಥವಾ ಯಾವುದೇ ನಿರ್ಧಿಷ್ಟ ಬೇಡಿಕೆಗಳನ್ನ ಪೂರೈಸಿದ ಕಾರಣಕ್ಕಲ್ಲ. ( ಹೌದು, ಇಲ್ಲಿ ನಾನು ತಾಯಿಯ ಪ್ರೀತಿ, ತಂದೆಯ ಪ್ರೀತಿಯ ಬಗ್ಗೆ ಮಾತನಾಡುವಾಗ, ಮ್ಯಾಕ್ಸ್ ವೇಬರ್ ನ ತಿಳುವಳಿಕೆಯ ಅಥವಾ ಯೂಂಗ್ ನ ತಿಳುವಳಿಕೆಯ ಮೂಲ ಮಾದರಿಯ ಆದರ್ಶ ತಂದೆ ತಾಯಿಯ ಬಗ್ಗೆ ಮಾತನಾಡುತ್ತಿದ್ದೇನೆ. ಆದ್ದರಿಂದ ಎಲ್ಲ ತಂದೆ ತಾಯಂದಿರ ಪ್ರೀತಿಗೆ ಇದು ಅನ್ವಯ ಆಗಲಿಕ್ಕಿಲ್ಲ ಮತ್ತು ತಾಯಿಯ ಪ್ರೀತಿ ಅಥವಾ ತಂದೆಯ ಪ್ರೀತಿ ಎನ್ನುವುದು ಆಯಾ ಪಾತ್ರಗಳನ್ನು ನಿರ್ವಹಿಸುತ್ತಿರುವ ಯಾವ ವ್ಯಕ್ತಿಗಳಲ್ಲಾದರೂ ಕಂಡುಬರಬಹುದು.) ತನ್ನನ್ನು ಇನ್ನೊಬ್ಬರು ಯಾವ ಶರತ್ತೂ ಇಲ್ಲದೇ ಪ್ರೀತಿಸಬೇಕೆನ್ನುವ ಆಳ ಹಂಬಲ ಕೇವಲ ಮಗುವಿಗೆ ಮಾತ್ರ ಸಂಬಂಧಿಸಿದ್ದಲ್ಲ, ಇದು ಪ್ರತೀ ಮನುಷ್ಯನ ಬಯಕೆಯೂ ಹೌದು. ಇನ್ನೊಂದೆಡೆ, ಅರ್ಹತೆಯ ಕಾರಣಕ್ಕಾಗಿ, ಯೋಗ್ಯ ಎನ್ನುವ ಕಾರಣಕ್ಕಾಗಿ, ನನಗೆ ಪ್ರೀತಿ ಸಿಗಬೇಕು ಎನ್ನುವ ಬಗೆಯಲ್ಲಿ, ಯಾವಾಗಲೂ ಒಂದು ಸಂದೇಹ ಉಳಿದು ಹೋಗುತ್ತದೆ ; ಬಹುಶಃ ಯಾರು ನನ್ನ ಪ್ರೀತಿಸಬೇಕೆಂದು ನಾನು ಬಯಸುತ್ತೇನೆಯೋ ಅವರನ್ನು ನನಗೆ ಸರಿಯಾಗಿ ಮೆಚ್ಚಿಸಲಾಗಲಿಲ್ಲ , ಬಹುಶಃ ಹೀಗೆ , ಬಹುಶಃ ಹಾಗೆ, ಪ್ರೀತಿ ಮಾಯವಾಗುವ ಯಾವುದೋ ಒಂದು ಭಯ ನಮ್ಮನ್ನು ಕಾಡುತ್ತಿರುತ್ತದೆ.
ಮುಂದುವರೆದು ಹೇಳುವುದಾದರೆ “ಅರ್ಹತೆ” ಆಧಾರದ ಪ್ರೀತಿ ಸುಲಭವಾಗಿ ಒಂದು ಕಹಿ ಭಾವನೆಯನ್ನ ನಮ್ಮಲ್ಲಿ ಉಳಿಸುತ್ತದೆ ; ಇಲ್ಲಿ ಒಬ್ಬನನ್ನು, ಅವನು ಅವನಾಗಿರುವ ಕಾರಣಕ್ಕೆ ಪ್ರೀತಿಸಲಾಗುತ್ತಿಲ್ಲ, ಅವನು ಯಾರನ್ನೋ ಮೆಚ್ಚಿಸುತ್ತಾನೆ ಎನ್ನುವ ಕಾರಣಕ್ಕೆ ಪ್ರೀತಿಸಲಾಗುತ್ತದೆ, ಕೊನೆಗೆ ಅವನನ್ನು ಯಾರೂ ಪ್ರೀತಿಸಲೇ ಇಲ್ಲ, ಕೇವಲ ಬಳಸಿಕೊಂಡರು, ಇವೇ ಮುಂತಾದವು ಆ ಕೆಲವು ಕಹಿ ಭಾವನೆಗಳು. ನಾವು ಮಕ್ಕಳಾಗಲೀ, ವಯಸ್ಕರರಾಗಲೀ, ತಾಯಿ ರೀತಿಯ ಪ್ರೀತಿಗೆ ಅಂಟಿಕೊಳ್ಳುವುದರಲ್ಲಿ ಅಂಥ ಆಶ್ಚರ್ಯವೇನೂ ಇಲ್ಲ. ಬಹುತೇಕ ಮಕ್ಕಳು ತಾಯಿ ಪ್ರೀತಿಯನ್ನು ಪಡೆಯುವ ಅದೃಷ್ಟವಂತರಾಗಿರುತ್ತಾರೆ ( ಎಷ್ಟರಮಟ್ಟಿಗೆ ಎನ್ನುವುದನ್ನ ಮುಂದೆ ಚರ್ಚಿಸೋಣ). ವಯಸ್ಕರರಲ್ಲಿರುವ ಇಂಥ ಒಂದು ಬಯಕೆಯನ್ನು ತುಂಬಿಕೊಡುವುದು ತುಂಬಾ ಕಠಿಣ. ವ್ಯಕ್ತಿಯ ಬಹುತೇಕ ಅತ್ಯಂತ ತೃಪ್ತಿಕರ ಬೆಳವಣಿಗೆಗಳಲ್ಲಿ ಇಂಥ ಬಯಕೆ, ಸಾಮಾನ್ಯ ದೈಹಿಕ ಕಾಮಾಧಾರಿತ ಪ್ರೀತಿಯ ಅಂಶವಾಗಿ ಉಳಿದುಕೊಳ್ಳುತ್ತದೆ; ಕೆಲವೊಮ್ಮೆ ಇಂಥ ಬಯಕೆ ಧಾರ್ಮಿಕ ಸ್ವರೂಪದಲ್ಲಿ ಅಭಿವ್ಯಕ್ತಿಗೊಂಡರೆ, ಬಹಳಷ್ಟು ಬಾರಿ ವಿಕ್ಷಿಪ್ತ ನರದೌರ್ಬಲ್ಯದ ರೀತಿಯಲ್ಲಿ ಅನಾವರಣಗೊಳ್ಳುತ್ತದೆ.
ತಂದೆಯ ಜೊತೆಗಿನ ಮಗುವಿನ ಸಂಬಂಧ ತುಂಬ ವಿಭಿನ್ನವಾದುದು. ತಾಯಿ ನಮ್ಮ ತವರು ಮನೆ, ಅವಳು ಪ್ರಕೃತಿ, ಅವಳು ಭೂಮಿ, ಸಮುದ್ರ ; ಆದರೆ ತಂದೆ ಇಂಥ ಯಾವ ಸ್ವಾಭಾವಿಕ ನೆಲೆಯನ್ನೂ ಪ್ರತಿನಿಧಿಸುವುದಿಲ್ಲ. ಮಗುವಿನ ಮೊದಲ ಕೆಲವು ವರ್ಷಗಳಲ್ಲಿ ತಂದೆ ಮಗುವಿನ ಸಂಬಂಧ ತುಂಬ ಸೀಮಿತವಾದದ್ದು, ಮತ್ತು ಈ ಮೊದಲ ಅವಧಿಯಲ್ಲಿ ಮಗುವಿಗೆ ಸಂಬಂಧಿಸಿದಂತೆ ತಂದೆಯ ಪ್ರಾಮುಖ್ಯತೆಯನ್ನು ತಾಯಿಯ ಪ್ರಾಮುಖ್ಯತೆಗೆ ಹೋಲಿಸಲಾಗದು. ಆದರೆ ಈ ಸಮಯದಲ್ಲಿ ತಂದೆ, ತಾಯಿಯಂತೆ ಮಗುವಿನ ಸ್ವಾಭಾವಿಕ ಜಗತ್ತನ್ನು ಪ್ರತಿನಿಧಿಸುವುದಿಲ್ಲವಾದರೂ, ಅವನು ಮಗುವಿನ ಬದುಕಿನಲ್ಲಿ ಮಾನವ ಅಸ್ತಿತ್ವದ ಇನ್ನೊಂದು ತುದಿಯನ್ನು ಪ್ರತಿನಿಧಿಸುತ್ತಾನೆ ; ಇದು ತಿಳುವಳಿಕೆಯ, ಆಲೋಚನೆಯ , ಮನುಷ್ಯ ನಿರ್ಮಿತ ಸಂಗತಿಗಳ, ಕಾನೂನು ಮತ್ತು ವ್ವವಸ್ಥೆಯ, ಶಿಸ್ತಿನ, ಪ್ರಯಾಣ ಮತ್ತು ಸಾಹಸದ ಜಗತ್ತು. ತಂದೆಯೇ ಮಗುವಿಗೆ ಬದುಕಿನ ವಿದ್ಯಮಾನಗಳನ್ನು ಪರಿಚಯಿಸುವವ, ಜಗತ್ತಿನ ದಾರಿಯನ್ನು ತೋರಿಸುವವ. ( ಇಲ್ಲಿ ಮತ್ತೆ ನೆನಪಿಸಿಕೊಳ್ಳಬೇಕಾದ್ದೆಂದರೆ, ನಾನು ಇಲ್ಲಿ ಮಾದರಿ ತಂದೆ ತಾಯಿಯ ಬಗ್ಗೆ ಮಾತನಾಡುತ್ತಿದ್ದೇನೆ ಆದ್ದರಿಂದ ಎಲ್ಲ ತಂದೆ ತಾಯಂದಿರ ಪ್ರೀತಿಗೆ ಇದು ಅನ್ವಯ ಆಗಲಿಕ್ಕಿಲ್ಲ ಮತ್ತು ತಾಯಿಯ ಪ್ರೀತಿ ಅಥವಾ ತಂದೆಯ ಪ್ರೀತಿ ಎನ್ನುವುದು ಆಯಾ ಪಾತ್ರಗಳನ್ನು ನಿರ್ವಹಿಸುತ್ತಿರುವ ಯಾವ ವ್ಯಕ್ತಿಗಳಲ್ಲಾದರೂ ಕಂಡುಬರಬಹುದು.)
ತಂದೆಯ ಈ ಕರ್ತವ್ಯಗಳಿಗೂ, ಸಾಮಾಜಿಕ-ಆರ್ಥಿಕ ಬೆಳವಣಿಗೆಗೂ ಹತ್ತಿರದ ಸಂಬಂಧವಿದೆ. ಯಾವಾಗ ಖಾಸಗೀ ಆಸ್ತಿ ಹೊಂದುವ ಪದ್ಧತಿ ಜಾರಿಗೆ ಬರುವುದಕ್ಕೆ ಶುರುವಾಯಿತೋ, ಮತ್ತು ಸ್ವಂತ ಆಸ್ತಿಗೆ ಒಬ್ಬ ಮಗ ಉತ್ತರಾಧಿಕಾರಿಯಾಗಬಹುದು ಎನ್ನುವುದು ನಿಯಮವಾಯಿತೋ ಆಗ ತಂದೆ ತನ್ನ ಆಸ್ತಿಯನ್ನು ಯಾರಿಗೆ ವಹಿಸಬೇಕು ಎನ್ನುವ ಹುಡುಕಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ. ಸಹಜವಾಗಿ, ತಂದೆ, ತನಗೆ ಪ್ರಿಯನಾದ, ತನ್ನ ಸ್ವಭಾವಗಳನ್ನೇ ಹೊಂದಿರುವ ಮಗನನ್ನು ತನ್ನ ಆಸ್ತಿಯ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲು ಶುರುಮಾಡಿದ. ತಂದೆಯ ಪ್ರೀತಿ ಷರತ್ತು ಬದ್ಧವಾದ ಪ್ರೀತಿ. ಇಂಥ ಪ್ರೀತಿಯ ಸಿದ್ಧಾಂತವೆಂದರೆ, “ ನೀನು ನನ್ನ ಬೇಡಿಕೆಗಳನ್ನ ಈಡೇರಿಸುತ್ತಿರುವ ಕಾರಣವಾಗಿ, ನೀನು ನಿನ್ನ ಕರ್ತವ್ಯವನ್ನು ನಿಭಾಯಿಸುತ್ತಿರುವ ಕಾರಣವಾಗಿ, ನೀನು ನನ್ನ ಹಾಗೆ ಇರುವ ಕಾರಣವಾಗಿ, ನಾನು ನಿನ್ನ ಪ್ರೀತಿಸುತ್ತೇನೆ” ಎನ್ನುವುದು.
1 Comment