ಖುಶಿ, ಆನಂದ, ಮನುಷ್ಯನ ಪ್ರಕೃತಿಯಲ್ಲಿ ಅಂತರ್ಗತವಾಗಿರುವಂಥವು. ಅದಕ್ಕಾಗಿ ನಾವು ಹುಡುಕಾಡಬೇಕಿಲ್ಲ, ಸಾಧನೆ ಮಾಡಬೇಕಿಲ್ಲ, ಅದನ್ನು ನಾವು ಗುರುತಿಸಬೇಕಷ್ಟೇ. ನಮ್ಮ ಖುಶಿ ನಮಗೆ ಕಂಡಾಗ, ಸುತ್ತಲಿನ ಎಲ್ಲದರಲ್ಲೂ ನಮಗೆ ಖುಶಿ ಕಾಣಿಸುತ್ತದೆ, ಆಗ ನಮ್ಮ ಇಡೀ ಅಸ್ತಿತ್ವ ಖುಶಿಯಲ್ಲಿ ಮುಳುಗಿಹೋಗುತ್ತದೆ…। Little bit of heaven, Secret of Secrets by ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಕೆಲ ಬೇಟೆಗಾರರು ಒಂದು ದಟ್ಟ ಕಾಡಿನ ತುಂಬ ಒಳಗೆ ಬಂದುಬಿಟ್ಟರು. ಅಲ್ಲಿ ಅವರಿಗೆ ಒಂದು ಗುಡಿಸಲು ಕಾಣಿಸಿತು ಮತ್ತು ಕಟ್ಟಿಗೆಯ ಕ್ರಾಸ್ ಮುಂದೆ ಕುಳಿತು ಪ್ರಾರ್ಥನೆ ಮಾಡುತ್ತಿದ್ದ ಒಬ್ಬ ಸಂತ ಕಂಡ. ಸಂತನ ಮುಖದಲ್ಲಿ ಖುಶಿ ತುಂಬಿ ತುಳುಕುತ್ತಿತ್ತು. ಬೇಟೆಗಾರರು ಸಂತನನ್ನು ಮಾತನಾಡಿಸಿದರು.
“ ಇಂಥ ದಟ್ಟ ಕಾಡಿನಲ್ಲಿಯೂ ನಿಮ್ಮ ಮುಖದಲ್ಲಿ ಇಷ್ಟು ಖುಶಿ ಇದೆಯಲ್ಲ, ಇದು ಹೇಗೆ ಸಾಧ್ಯ ? “
“ ನಾನು ಯಾವಾಗಲೂ ಖುಶಿಯಾಗಿರುತ್ತೇನೆ “
“ ನಮ್ಮ ಬಳಿ ಎಲ್ಲ ಸೌಕರ್ಯಗಳಿರುವಾಗಲೂ ನಮಗೆ ಖುಶಿಯ ಭಾಗ್ಯ ಇಲ್ಲ . ಈ ಖುಶಿಯನ್ನ ನೀವು ಎಲ್ಲಿ ಪಡೆದುಕೊಂಡಿರಿ ? “
“ ಇಲ್ಲೇ ಒಂದು ಗುಹೆಯಲ್ಲಿ. ಈ ಕಿಂಡಿಯೊಳಗಿಂದ ಗುಹೆಯೊಳಗೆ ನೋಡಿ, ನಿಮಗೆ ನನ್ನ ಖುಶಿಯ ತುಣುಕು ತಾಣಿಸುತ್ತದೆ. “
ಸಂತ, ಬೇಟೆಗಾರರಿಗೆ ಗುಹೆಯ ಕಿಂಡಿಯನ್ನ ತೋರಿಸಿದ.
ಬೇಟೆಗಾರರು ಸಂತ ತೋರಿಸಿದ ಕಿಂಡಿಯೊಳಗೆ ಇಣುಕಿ ನೋಡಿದರು.
“ ನೀವು ನಮ್ಮನ್ನ ಅಪಹಾಸ್ಯ ಮಾಡುತ್ತಿದ್ದೀರಿ, ಇಲ್ಲಿ ಒಂದು ಮರದ ಕೆಲವು ರೆಂಬೆಗಳು ಮಾತ್ರ ಕಾಣಿಸುತ್ತಿವೆ. “
“ ಇನ್ನೊಮ್ಮೆ ನೋಡಿ “
“ ನಮಗೆ ಮರದ ಕೆಲವು ರೆಂಬೆಗಳು ಮತ್ತು ಒಂದು ತುಣುಕು ಆಕಾಶ ಮಾತ್ರ ಕಾಣಿಸುತ್ತಿದೆ. “
“ ಅದೇ, ಅದೇ ನನ್ನ ಖುಶಿಯ ಕಾರಣ , ಒಂದು ತುಣುಕು ಸ್ವರ್ಗ !! “
ಸಂತ ಖುಶಿಯಿಂದ ಚೀರಿದ.
ಖುಶಿ, ಆನಂದ, ಮನುಷ್ಯನ ಪ್ರಕೃತಿಯಲ್ಲಿ ಅಂತರ್ಗತವಾಗಿರುವಂಥವು. ಅದಕ್ಕಾಗಿ ನಾವು ಹುಡುಕಾಡಬೇಕಿಲ್ಲ, ಸಾಧನೆ ಮಾಡಬೇಕಿಲ್ಲ, ಅದನ್ನು ನಾವು ಗುರುತಿಸಬೇಕಷ್ಟೇ. ನಮ್ಮ ಖುಶಿ ನಮಗೆ ಕಂಡಾಗ, ಸುತ್ತಲಿನ ಎಲ್ಲದರಲ್ಲೂ ನಮಗೆ ಖುಶಿ ಕಾಣಿಸುತ್ತದೆ, ಆಗ ನಮ್ಮ ಇಡೀ ಅಸ್ತಿತ್ವ ಖುಶಿಯಲ್ಲಿ ಮುಳುಗಿಹೋಗುತ್ತದೆ.
ಅರಳಿಮರ ದ ಲೇಖನ ಗಳು ನಮ್ಮ ಅರಿವು ಪ್ರಜ್ಞೆ ಯನ್ನ ಹೆಚ್ಚಿಸಿವೆ.. ಶರಣುಗಳು