Ego ದ ಬಗ್ಗೆ ಯೋಚಿಸಲೇ ಬೇಡಿ! : ಓಶೋ ವ್ಯಾಖ್ಯಾನ

ನಿಮಗೆ ನಿಮ್ಮ ನೆರಳನ್ನು ಹಿಡಿಯುವುದು ಸಾಧ್ಯವಿಲ್ಲ, ಆದರೆ ನೀವು ನಿಮ್ಮನ್ನು ಹಿಡಿದುಕೊಳ್ಳಬಹುದು. ನೀವು ನಿಮ್ಮನ್ನು ಹಿಡಿದುಕೊಂಡ ಕ್ಷಣದಲ್ಲಿಯೇ, ನಿಮ್ಮ ನೆರಳು ನಿಮ್ಮ ಕೈಗಳಲ್ಲಿ ಬಂಧಿ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ಒಮ್ಮೆ ಸ್ವಾಮಿ ರಾಮತೀರ್ಥರು ಒಬ್ಬ ಬಡ ಹಳ್ಳಿಗನ ಮನೆಯಲ್ಲಿ ತಂಗಿದ್ದರು. ಮನೆಯ ಮುಂದಿನ ಅಂಗಳದಲ್ಲಿ ಆ ಹಳ್ಳಿಗನ ಮಗು ಆಟ ಆಡುತ್ತಿತ್ತು. ಹೊರಗೆ ಬಿಸಿಲು ಚುರುಕಾಗುತ್ತಿತ್ತು, ಸೂರ್ಯ ನೆತ್ತಿಯ ಮೇಲೆ ಏರುತ್ತಿದ್ದ. ಮಗು ಕೈ ಮುಂದಕ್ಕೆ ಮಾಡಿ ತನ್ನ ನೆರಳನ್ನು ಹಿಡಿಯುವ ಪ್ರಯತ್ನ ಮಾಡುತ್ತಿತ್ತು. ನೆರಳು ಹಿಡಿಯಲು ಮಗು ಓಡಿದಂತೆಲ್ಲ, ನೆರಳು ಮುಂದೆ ಮುಂದೆ ಹೋಗುತ್ತಿತ್ತು. ಮಗುವಿಗೆ ನಿರಾಶೆಯಾಗಹತ್ತಿತು, ಮಗುವಿನ ಕಣ್ಣಲ್ಲಿ ನೀರು ತುಂಬಿಕೊಂಡಿತು. ಮಗು ತನ ನೆರಳನ್ನು ಹಿಡಿಯಲು ಹರಸಾಹಸ ಮಾಡಿದರೂ, ನೆರಳು ಮಗುವಿನ ಕೈಗೆ ಸಿಗದೆ, ಮಗುವಿನ ಅಪಾರ ಸಂಕಟಕ್ಕೆ ಕಾರಣವಾಗಿತ್ತು. ನೆರಳನ್ನು ಹಿಡಿಯುವುದು ಅಸಾಧ್ಯವೇನಲ್ಲ, ಆದರೆ ನೆರಳನ್ನು ಹಿಡಿಯಲು ಮಗು ಚಲಿಸುತ್ತಿದ್ದರಿಂದ ನೆರಳು ಕೈ ತಪ್ಪಿಸಿಕೊಳ್ಳುತ್ತಿತ್ತು. ಮಗು ಚಲಿಸುವಾಗ ನೆರಳೂ ಮುಂದೆ ಚಲಿಸುತ್ತಿತ್ತು. ನೆರಳನ್ನು ಹಿಡಿಯುವುದು ಯಾಕೆ ಸಾಧ್ಯವಿಲ್ಲವೆಂದರೆ ಅದು ವಸ್ತುವಲ್ಲ, ವಸ್ತುವಾಗಿದ್ದರೆ ಕೈಗೆ ಸಿಕ್ಕುಬಿಡುತ್ತಿತ್ತು.

ಮಗುವಿನ ಪರದಾಟ ಗಮನಿಸುತ್ತಿದ್ದ ರಾಮತೀರ್ಥರು ಮುಗುಳ್ನಗುತ್ತಿದ್ದರು. ಮಗುವಿನ ಅಳು ಹೆಚ್ಚುತ್ತಲೇ ಹೋಯಿತು. ಮಗುವನ್ನು ಸಮಾಧಾನ ಮಾಡುವುದು ಸಾಧ್ಯವಾಗದೇ ಹೋದಾಗ ಮಗುವಿನ ತಾಯಿ, ರಾಮತೀರ್ಥರ ಸಹಾಯ ಬೇಡಿದಳು, “ ಸ್ವಾಮೀಜಿ, ಈ ಮಗುವನ್ನ ಸ್ವಲ್ಪ ಸಮಾಧಾನ ಮಾಡುತ್ತೀರಾ? “

ರಾಮತೀರ್ಥರು ಎದ್ದು ಮಗುವಿನ ಹತ್ತಿರ ಹೋಗಿ ಮಗುವಿನ ಎರಡೂ ಕೈಗಳನ್ನು ಅದರ ತಲೆಯ ಮೇಲೆ ಇರಿಸಿದರು. ನೆರಳು ಮಗುವಿನ ಕೈಗೆ ಸಿಕ್ಕುಬಿಟ್ಟಿತು. ಈಗ ಮಗು ತನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡಿದ್ದರಿಂದ, ಮಗು ಚಲಿಸಿದಂತೆಲ್ಲ, ಚಲಿಸುತ್ತಿದ್ದ ನೆರಳು ಮಗುವಿನ ಕೈ ಬಿಟ್ಟು ಹೋಗುತ್ತಿರಲಿಲ್ಲ. ಮಗುವಿನ ಮುಖದಲ್ಲಿ ನಗು ಅರಳಿತು. ತನ್ನ ನೆರಳನ್ನು ತಾನು ಹಿಡಿದಿರುವುದು ಮಗುವಿಗೆ ಗೊತ್ತಾಗುತ್ತಿತ್ತು.

ನಿಮಗೆ ನಿಮ್ಮ ನೆರಳನ್ನು ಹಿಡಿಯುವುದು ಸಾಧ್ಯವಿಲ್ಲ, ಆದರೆ ನೀವು ನಿಮ್ಮನ್ನು ಹಿಡಿದುಕೊಳ್ಳಬಹುದು. ನೀವು ನಿಮ್ಮನ್ನು ಹಿಡಿದುಕೊಂಡ ಕ್ಷಣದಲ್ಲಿಯೇ, ನಿಮ್ಮ ನೆರಳು ನಿಮ್ಮ ಕೈಗಳಲ್ಲಿ ಬಂಧಿ.

ನಿಮ್ಮ ಬಳಲಾಟ (suffering) ನಿಮ್ಮ ಅಹಂನ (ego) ನೆರಳು. ನಾವೆಲ್ಲರೂ ಆ ಮಗುವಿನ ಹಾಗೆ, ನೋವು, ಆತಂಕ, ದುಗುಡ, ಬಳಲಾಟದೊಡನೆ ಹೋರಾಡಲು ಪ್ರಯತ್ನಿಸುತ್ತಿರುವವರು. ಇಂಥ ಹೋರಾಟದಲ್ಲಿ ನಮಗೆ ಜಯ ಯಾವತ್ತೂ ಸಾಧ್ಯವಿಲ್ಲ. ಇದು ನಮ್ಮ ಶಕ್ತಿ ಸಾಮರ್ಥ್ಯದ ಪ್ರಶ್ನೆಯಲ್ಲ, ಇಂಥದೊಂದು ಹೋರಾಟದ ಪ್ರಯತ್ನವೇ ಅಸಂಗತ, ಅಸಾಧ್ಯವಾದದ್ದು. ನೀವು ಹಿಡಿದುಕೊಳ್ಳಬೇಕಾದದ್ದು ನಿಮ್ಮ ಸೆಲ್ಫ್ ನ, ನಿಮ್ಮ ಅಹಂ ನ, ಆಗ ಈ ಎಲ್ಲವೂ ನಿಮ್ಮ ಹತೋಟಿಗೆ ಸಿಗುತ್ತವೆ. ಅವೆಲ್ಲ ಕೇವಲ ನಿಮ್ಮ ಆಹಂನ ನೆರಳುಗಳಷ್ಟೇ.

ಬಹಳಷ್ಟು ಜನ ತಮ್ಮ ಸೆಲ್ಫ್ ನೊಂದಿಗೆ, ತಮ್ಮ ego ದ ಜೊತೆ ಹೋರಾಡುವ ಪ್ರಯತ್ನ ಮಾಡುತ್ತಾರೆ ಆದರೆ ಯಾವುದೇ ಯಶಸ್ಸು ಇಲ್ಲದೆಯೇ. ನಿಮ್ಮ ego ದ ಜೊತೆಯ ನಿಮ್ಮ ಹೋರಾಟದ ನಿಮ್ಮ ಪ್ರಯತ್ನವೇ, ಅದನ್ನು ಪೋಷಿಸುತ್ತಿದೆ, ಅದಕ್ಕೆ ಶಕ್ತಿ ಸಾಮಾರ್ಥ್ಯಗಳನ್ನು ತುಂಬುತ್ತಿದೆ, ego ದ ಜೊತೆಗಿನ ನಿಮ್ಮ ಹೋರಾಟ ನಿಮ್ಮೊಳಗೆ ಅದರ ಅಸ್ತಿತ್ವವನ್ನು ಧೃಡೀಕರಿಸುತ್ತಿದೆ, ego ದ ಸ್ವಭಾವವೇ ಪ್ರಚೋದನೆಯಿಂದ ಬೆಳೆಯುವುದು. Ego ದ ಬಗ್ಗೆ ಯೋಚಿಸಲೇ ಬೇಡಿ, ನಿಮ್ಮ ಎಲ್ಲ ಯೋಚನೆಗಳನ್ನ, ಕ್ರಿಯೆಗಳನ್ನ, ತಲೆಯಿಂದ ಹೃದಯಕ್ಕೆ ವರ್ಗಾಯಿಸಿ, ego ನ ನಿರ್ಲಕ್ಷಿಸಿ, ಅದಕ್ಕೆ ಯಾವ ಮರ್ಯಾದೆಯನ್ನೂ ಕೊಡಬೇಡಿ. ಹೀಗಾದಾಗ ಮಹಾಸ್ವಾಭಿಮಾನಿ ego ನಿಮ್ಮನ್ನು ಬಿಟ್ಚುಹೋಗುತ್ತದೆ. ನೀವು ಸಮಾಧಾನದಲ್ಲಿ ನೆಲೆಯಾಗುತ್ತೀರಿ.

Leave a Reply