ನನ್ನ ಪ್ರಕಾರ ಕೇವಲ ಮನೋವಿಶ್ಲೇಷಣೆ ನಮ್ಮನ್ನ ಎಲ್ಲಿಗೂ ಕರೆದೊಯ್ಯುವುದಿಲ್ಲ. ಇದು ನಮ್ಮನ್ನ ಕೊಂಚ ಕಡಿಮೆ ನ್ಯೂರಾಟಿಕ್ ಆಗಿ ಮಾಡಬಹುದು, ನಮ್ಮ ಸಂಗಾತಿಯ ಜೊತೆ, ನಮ್ಮ ನೆರೆಹೊರೆಯವರ ಜೊತೆ ಸ್ವಲ್ಪ ಅಂತಃಕರಣದಿಂದ ವ್ಯವಹರಿಸಲು ಸಹಾಯ ಮಾಡಬಹುದು, ಅಥವಾ ಇಂಥ ಮೇಲುಮೇಲಿನ ಸಂಗತಿಗಳಲ್ಲಿ ನೆರವಾಗಬಹುದು. ನನ್ನ ನಂಬಿಕೆ ಎಂದರೆ, ಸಮಯ, ವಿಶ್ಲೇಷಣೆ, ಗಮನಿಸುವವ ತಾನು ಗಮನಿಸುತ್ತಿರುವ ಸಂಗತಿಯನ್ನ ವಿಶ್ಲೇಷಿಸುವ ಹೊತ್ತಿನಲ್ಲಿಯೇ ನಡೆಯುತ್ತಿರುವ ಆಲೋಚನೆಗಳ ಚಲನೆ, ಈ ಎಲ್ಲವನ್ನೂ ಒಳಗೊಂಡಿರುವ ಮನೋವಿಶ್ಲೇಷಣೆಯ ಪ್ರಕ್ರಿಯೆ, ಸುಪ್ತ ಮನಸ್ಸಿನ ಮೇಲಿರುವ ಹೊರೆಯನ್ನು ಇಳಿಸಲಾರದು, ಆದದ್ದರಿಂದ ಇಂಥದೊಂದು ಪ್ರಯತ್ನವನ್ನ ನಾನು ಒಪ್ಪುವುದಿಲ್ಲ… ~ ಜಿಡ್ಡು ಕೃಷ್ಣಮೂರ್ತಿ । ಕನ್ನಡಕ್ಕೆ: ಚಿದಂಬರ ನರೇಂದ್ರ
ನಮ್ಮ ಅಂತರಂಗದಲ್ಲಿ, ನಮ್ಮ ಸುಪ್ತ ಪ್ರಜ್ಞೆಯಲ್ಲಿ, ನಮ್ಮ ಭೂತ ಕಾಲದ ಅಪಾರ ಹೊರೆ ಇದೆ, ಈ ಭಾರ ನಮ್ಮನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತಳ್ಳಿಕೊಂಡು ಹೋಗುತ್ತಿದೆ.
ಈಗ ನಾವು ಈ ಹೊರೆಯನ್ನೆಲ್ಲ ಇಳಿಸಿ ಹಗುರಾಗುವುದು ಹೇಗೆ? ನಮ್ಮ ಗತ ಕಾಲದ ಭಾರದಿಂದ ನಮ್ಮ ಸುಪ್ತಪ್ರಜ್ಞೆಯನ್ನು ತಕ್ಷಣ ಮುಕ್ತಗೊಳಿಸುವುದು ಹೇಗೆ? ಸುಪ್ತ ಪ್ರಜ್ಞೆಯಲ್ಲಿರುವುದನ್ನ ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ವಿಶ್ಷೇಷಣೆಯ ಮೂಲಕ, ವಿಚಾರಣೆ, ಪರೀಕ್ಷೆ, ನಿವೇದನೆ, ಕನಸುಗಳ ವಿಶ್ಲೇಷಣೆ ಮತ್ತು ಅರ್ಥೈಸುವಿಕೆ, ಇತ್ಯಾದಿಗಳ ಮೂಲಕ ನಿವಾರಿಸಿಕೊಂಡು ಮನುಷ್ಯ ಒಂದುಮಟ್ಟಿಗೆ ನಾರ್ಮಲ್ ಆಗಿ ವ್ಯವಹರಿಸುತ್ತ ಸುತ್ತಲಿನ ಪರಿಸರದೊಂದಿಗೆ ಹೊಂದಿಕೊಂಡು ಹೋಗಬಹುದೆಂದು ಮನೋವಿಜ್ಞಾನಿಗಳು ನಂಬುತ್ತಾರೆ. ಆದರೆ ಈ ಮನೋವಿಶ್ಲೇಷಣೆ ಯಾವಾಗಲೂ ಇಬ್ಬರನ್ನು ಒಳಗೊಂಡಿರುತ್ತದೆ, ಒಬ್ಬ ವಿಶ್ಲೇಷಕ ಮತ್ತು ಇನ್ನೊಂದು ವಿಶ್ಲೇಷಣೆಗೆ ಒಳಪಟ್ಟಿರುವುದು, ಒಬ್ಬ ಗಮನಿಸುವವ ಮತ್ತು ಇನ್ನೊಂದು ಗಮನಿಸಲ್ಪಡುವುದು. ಇದು duality. ಎಲ್ಲೆಲ್ಲಿ duality ಇದೆಯೋ ಅಲ್ಲೆಲ್ಲ ಸಂಘರ್ಷದ ಹಾಜರಾತಿ ಇದೆ.
ಆದ್ದರಿಂದ ನನ್ನ ಪ್ರಕಾರ ಕೇವಲ ಮನೋವಿಶ್ಲೇಷಣೆ ನಮ್ಮನ್ನ ಎಲ್ಲಿಗೂ ಕರೆದೊಯ್ಯುವುದಿಲ್ಲ. ಇದು ನಮ್ಮನ್ನ ಕೊಂಚ ಕಡಿಮೆ ನ್ಯೂರಾಟಿಕ್ ಆಗಿ ಮಾಡಬಹುದು, ನಮ್ಮ ಹೆಂಡತಿ (ಗಂಡ)ಯ ಜೊತೆ, ನಮ್ಮ ನೆರೆಹೊರೆಯವರ ಜೊತೆ ಸ್ವಲ್ಪ ಅಂತಃಕರಣದಿಂದ ವ್ಯವಹರಿಸಲು ಸಹಾಯ ಮಾಡಬಹುದು, ಅಥವಾ ಇಂಥ ಮೇಲು ಮೇಲಿನ (superficial) ಸಂಗತಿಗಳಲ್ಲಿ ನೆರವಾಗಬಹುದು. ಆದರೆ ನಾವು ಇಂಥ ಸಂಗತಿಗಳ ಬಗ್ಗೆ ಈಗ ಮಾತನಾಡುತ್ತಿಲ್ಲ. ನನ್ನ ನಂಬಿಕೆ ಎಂದರೆ, ಸಮಯ, ವಿಶ್ಲೇಷಣೆ, ಗಮನಿಸುವವ ತಾನು ಗಮನಿಸುತ್ತಿರುವ ಸಂಗತಿಯನ್ನ ವಿಶ್ಲೇಷಿಸುವ ಹೊತ್ತಿನಲ್ಲಿಯೇ ನಡೆಯುತ್ತಿರುವ ಆಲೋಚನೆಗಳ ಚಲನೆ, ಈ ಎಲ್ಲವನ್ನೂ ಒಳಗೊಂಡಿರುವ ಮನೋವಿಶ್ಲೇಷಣೆಯ ಪ್ರಕ್ರಿಯೆ, ಸುಪ್ತ ಮನಸ್ಸಿನ ಮೇಲಿರುವ ಹೊರೆಯನ್ನು ಇಳಿಸಲಾರದು, ಆದದ್ದರಿಂದ ಇಂಥದೊಂದು ಪ್ರಯತ್ನವನ್ನ ನಾನು ಒಪ್ಪುವುದಿಲ್ಲ. ವಿಶ್ಲೇಷಣೆ, ಯಾವ ಸಂದರ್ಭದಲ್ಲಿಯೂ ಸುಪ್ತ ಮನಸ್ಸಿನ ಹೊರೆಯನ್ನು ತೆಗೆದುಹಾಕುವುದಿಲ್ಲ ಎಂದು ಖಚಿತವಾಗಿ ಗ್ರಹಿಸಿದ ಕ್ಷಣದಲ್ಲಿಯೇ ನಾನು, ಈ ಅನಾಲಿಸಿಸ್ ಪ್ರಕ್ರಿಯೆಯಿಂದ ಹೊರಗೆ. ನಾನು ಈಗ ಯಾವುದನ್ನೂ ವಿಶ್ಲೇಷಿಸುವುದಿಲ್ಲ. ಹಾಗಾದರೆ ಇದರ ಪರಿಣಾಮ ಏನು? ತಾನು ವಿಶ್ಲೇಷಿಸುತ್ತಿರುವ ಸಂಗತಿಯಿಂದ ವಿಶ್ಲೇಷಕ ಯಾವಾಗ ಪ್ರತ್ಯೇಕವಾಗಿಲ್ಲವೋ ಆಗ ಆ ವಿಶ್ಲೇಷಕನೇ, ತಾನು ವಿಶ್ಲೇಷಿಸುತ್ತಿರುವ ಸಂಗತಿಯಾಗುತ್ತಾನೆ. ಅವನು ಆ ಸಂಗತಿಯಿಂದ ಬೇರೆಯಾಗಿಲ್ಲ, ಆ ಸಂಗತಿಯೇ ತಾನಾಗಿದ್ದಾನೆ. ಆಗ ಸುಪ್ತ ಮನಸ್ಸು ಎನ್ನುವುದು ತನ್ನ ಮಹತ್ವ ಕಳೆದುಕೊಳ್ಳುತ್ತದೆ.