ಮೆಹೆರ್ ಬಾಬಾ ಮತ್ತು ಮೈಂಡ್ ರೀಡರ್ : ಓಶೋ ವ್ಯಾಖ್ಯಾನ

ಪೌರಸ್ತ್ಯರ ಪ್ರಕಾರ ಕನಸುವುದು ಮತ್ತು ಆಲೋಚಿಸುವುದು ಎರಡೂ ಒಂದೇ. ಕನಸುವುದು ನಿಂತು ಹೋದರೆ, ಆಲೋಚನೆಗಳೂ ನಿಂತು ಹೋಗುತ್ತವೆ. ಆಲೋಚನೆಗಳು ನಿಂತು ಹೋದರೆ ಕನಸುಗಳೂ ಮಾಯವಾಗುತ್ತವೆ. ಇಡೀ ಪೂರ್ವದ ಪ್ರಯತ್ನವೆಂದರೆ ಹೇಗೆ ಈ ಆಲೋಚನೆ ಮತ್ತು ಕನಸುಗಳಿಂದ ಕಳಚಿಕೊಳ್ಳುವದು ಎನ್ನುವುದು. ಈ ಆಲೊಚನೆಗಳೊಂದಿಗೆ ಕನಸುಗಳೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳುವುದು, ಇವನ್ನ ಹೇಗೆ ಅರ್ಥಮಾಡಿಕೊಳ್ಳುವುದು ಎನ್ನುವುದು ನಮ್ಮ ಪ್ರಯತ್ನವಲ್ಲ, ಇವುಗಳನ್ನ ಹೇಗೆ ಡ್ರಾಪ್ ಮಾಡುವುದು ಎನ್ನುವುದೇ ನಮ್ಮ ಏಕೈಕ ಪ್ರಯತ್ನ… ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಅಮೇರಿಕೆಯಲ್ಲೊಬ್ಬ ಮೈಂಡ್ ರೀಡರ್ ಇದ್ದ, ಅವನು ಮನುಷ್ಯರ ಮೈಂಡ್ ನಲ್ಲಿ ನಡೆಯುತ್ತಿರುವ ಎಲ್ಲ ಆಲೋಚನೆಗಳನ್ನು ಚಾಚೂ ತಪ್ಪದಂತೆ ಓದಬಲ್ಲವನಾಗಿದ್ದ. ಅವನು ಸದಾ ನೂರಕ್ಕೆ ನೂರರಷ್ಟು ಮೈಂಡ್ ರೀಡಿಂಗ್ ನಲ್ಲಿ ಪರಿಣಿತನಾಗಿದ್ದ. ನೀವು ಕಣ್ಣು ಮುಚ್ಚಿಕೊಂಡು ಕುಳಿತು ಥಿಂಕ್ ಮಾಡುತ್ತಿರುವಾಗ ಆತ ನಿಮ್ಮೆದುರು ಕಣ್ಣು ಮುಚ್ಚಿಕೊಂಡು ಧ್ಯಾನ ಮಗ್ನನಾಗಿ ಕುಳಿತು, ನಿಮ್ಮ ಮನಸ್ಸಿನಲ್ಲಿ ನಡೆಯುತ್ತಿರುವುದನ್ನೆಲ್ಲ ಕಾಮೆಂಟರಿ ಥರ ವಿವರಿಸುತ್ತಿದ್ದ. ನಿಮ್ಮೊಳಗೊಂದು ಆಲೋಚನೆ ಹುಟ್ಟುತ್ತಿದ್ದಂತೆಯೇ ಆ ಆಲೋಚನೆ ಅವನಿಗೆ ವರ್ಗಾವಣೆ ಆಗುತ್ತಿತ್ತು, ಮತ್ತು ಅವನು ನಿಮ್ಮ ಆಲೋಚನೆಯನ್ನ ಸ್ಪಷ್ಟವಾಗಿ ಗ್ರಹಿಸಿ ಹೇಳಬಲ್ಲವನಾಗಿದ್ದ. ಇದು ಒಂದು ಕಲೆ. ಬಹಳಷ್ಟು ಜನ ಈ ಕಲೆಯಲ್ಲಿ ಪರಿಣಿತರಾಗಿದ್ದಾರೆ. ನೀವು ಕೂಡ ಈ ಕಲೆಯನ್ನ ಕಲಿಯಬಹುದು. ಆಲೋಚನೆಗಳು ಸೂಕ್ಷ್ಮ ವೈಬ್ರೆಶನ್ ಗಳಾಗಿರುವುದರಿಂದ, ನೀವು ಈ ವೈಬ್ರೆಶನ್ಗಳ ಫ್ರಿಕ್ವೆನ್ಸಿಯನ್ನ ಅನುಭವಿಸಿ ಯಥಾವತ್ ಆಗಿ ಅನುವಾದ ಮಾಡಿಕೊಳ್ಳಬಲ್ಲಿರಾದರೆ, ಮೈಂಡ್ ರೀಡಿಂಗ್ ಕಲೆ ನಿಮಗೂ ಸಾಧ್ಯವಾಗಬಲ್ಲದು. ನಿಮ್ಮ ಗ್ರಹಿಸುವ ಶಕ್ತಿ ಸೂಕ್ಷ್ಮವಾಗಬಹುದಾದರೆ, ಇನ್ನೊಬ್ಬರ ಮೈಂಡ್ ಬ್ರಾಡ್ ಕಾಸ್ಟಿಂಗ್ ಸ್ಟೇಷನ್ ಥರ ತನ್ನ ತರಂಗಗಳನ್ನು ನಿಮಗೆ ಬ್ರಾಡ್ ಕಾಸ್ಟ್ ಮಾಡುತ್ತ ಹೋಗುತ್ತದೆ, ನೀವು ರಿಸೀವರ್ ಥರ ಕೆಲಸ ಮಾಡುತ್ತೀರಿ. ಆಲೋಚನೆಗಳು ಸೂಕ್ಷ್ಮ ವಿದ್ಯುತ್ ತರಂಗಗಳಂತೆ ಪ್ರವಹಿಸುವುದರಿಂದ, ನಿಮ್ಮ ಮೈಂಡ್ ಪ್ರಶಾಂತವಾಗಿದ್ದರೆ, ಈ ವಿದ್ಯುತ್ ತರಂಗಗಳನ್ನು ನಿಮ್ಮೊಳಗೆ ಎಳೆದುಕೊಳ್ಳಬಹುದು.

ಒಮ್ಮೆ ಮೆಹರ್ ಬಾಬಾ ಅಮೇರಿಕೆಯಲ್ಲಿದ್ದಾಗ, ಯಾರೋ ಒಬ್ಬರು ಈ ಮೈಂಡ್ ರೀಡರ್ ನ ಮೆಹರ್ ಬಾಬಾ ಬಳಿ ಕರೆದುಕೊಂಡು ಬಂದರು. ಮೆಹರ್ ಬಾಬಾ ತಮ್ಮ ಬದುಕಿನ ಹಲವಾರು ವರ್ಷಗಳನ್ನ ಮೌನದಲ್ಲಿ ಬದುಕಿದವರು. ಅಮೇರಿಕೆಯ ಮೈಂಡ್ ರೀಡರ್, ಮೇಹರ್ ಬಾಬಾ ಎದುರು ಕುಳಿತು ಧ್ಯಾನಮಗ್ನನಾದ, ಎಷ್ಟೋ ಹೊತ್ತು ಅವನು ಮೆಡಿಟೇಟ್ ಮಾಡುತ್ತಲೇ ಹೋದ. ನಡು ನಡುವೆ ಅವನು ಕಣ್ಣು ತೆರೆದು ಮೆಹರ್ ಬಾಬಾ ಅವರನ್ನ ನೋಡಿ ಮತ್ತೆ ಕಣ್ಣು ಮುಚ್ಚಿ ಧ್ಯಾನ ಮಗ್ನನಾಗುತ್ತಿದ್ದ. ಎಷ್ಟೋ ಹೊತ್ತು ಈ ಪ್ರಕ್ರಿಯೆ ನಡೆಯುತ್ತಲೇ ಇತ್ತು. ಸುತ್ತ ಕುಳಿತ ಜನರೆಲ್ಲ ಚಿಂತಿತರಾದರು. “ ಇನ್ನೊಬ್ಬರ ಮೈಂಡ್ ರೀಡ್ ಮಾಡಲು ನೀನು ಯಾವತ್ತೂ ಇಷ್ಟು ಸಮಯ ತೆಗೆದುಕೊಂಡಿರಲಿಲ್ಲ, ಇವತ್ತು ಏನಾಗುತ್ತಿದೆ ? “ ಜನ ಮೈಂಡ್ ರೀಡರ್ ನ ಪ್ರಶ್ನೆ ಮಾಡತೊಡಗಿದರು. “ ಏನು ಮಾಡಲಿ ನಾನು, ಈ ಮನುಷ್ಯನ ಮೈಂಡ್ ನಲ್ಲಿ ಏನೂ ನಡೆಯುತ್ತಿಲ್ಲ, ಆಲೋಚನೆಗಳೇ ಹುಟ್ಟಿಕೊಳ್ಳುತ್ತಿಲ್ಲ” ಅಮೇರಿಕೆಯ ಮೈಂಡ್ ರೀಡರ್ ನಿರಾಶನಾಗಿ ಕೈ ಚೆಲ್ಲಿದ.

ಪೌರಸ್ತ್ಯರ ಪ್ರಕಾರ, “ಕನಸುವುದು” ಒಂದು ರೋಗ, ಒಂದು ಬಗೆಯ ಕಾಯಿಲೆ, ಒಂದು ಗೊಂದಲದ ಗೂಡು. ನೀವು ನಿಜವಾದ ಪ್ರಶಾಂತ ಮೌನದಲ್ಲಿದ್ದಾಗ ಹಗಲಿನಲ್ಲಿ ಆಲೋಚನೆಗಳು ಮಾಯವಾಗುತ್ತವೆ ಮತ್ತು ರಾತ್ರಿ ಕನಸುಗಳು. ಆಲೋಚನೆ ಮತ್ತು ಕನಸು ಒಂದೇ ಸಂಗತಿಯ ಎರಡು ಮುಖಗಳು. ಹಗಲಿನಲ್ಲಿ ನೀವು ಎಚ್ಚರವಾಗಿದ್ದಾಗ ಅವು ಆಲೋಚನೆಗಳ ರೂಪದಲ್ಲಿ ನಿಮ್ಮನ್ನ ತುಂಬಿಕೊಂಡರೆ, ರಾತ್ರಿ ನೀವು ನಿದ್ದೆಯಲ್ಲಿದ್ದಾಗ ಕನಸುಗಳ ರೂಪದಲ್ಲಿ ನಿಮ್ಮನ್ನ ಆವರಿಸಿಕೊಳ್ಳುತ್ತವೆ.

ಹಾಗಾಗಿ ಕನಸುವುದು ಮತ್ತು ಆಲೋಚಿಸುವುದು ಎರಡೂ ಒಂದೇ. ಕನಸುವುದು ನಿಂತು ಹೋದರೆ, ಆಲೋಚನೆಗಳೂ ನಿಂತು ಹೋಗುತ್ತವೆ. ಆಲೋಚನೆಗಳು ನಿಂತು ಹೋದರೆ ಕನಸುಗಳೂ ಮಾಯವಾಗುತ್ತವೆ. ಇಡೀ ಪೂರ್ವದ ಪ್ರಯತ್ನವೆಂದರೆ ಹೇಗೆ ಈ ಆಲೋಚನೆ ಮತ್ತು ಕನಸುಗಳಿಂದ ಕಳಚಿಕೊಳ್ಳುವದು ಎನ್ನುವುದು. ಈ ಆಲೊಚನೆಗಳೊಂದಿಗೆ ಕನಸುಗಳೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳುವುದು, ಇವನ್ನ ಹೇಗೆ ಅರ್ಥಮಾಡಿಕೊಳ್ಳುವುದು ಎನ್ನುವುದು ನಮ್ಮ ಪ್ರಯತ್ನವಲ್ಲ, ಇವುಗಳನ್ನ ಹೇಗೆ ಡ್ರಾಪ್ ಮಾಡುವುದು ಎನ್ನುವುದೇ ನಮ್ಮ ಏಕೈಕ ಪ್ರಯತ್ನ.

ಒಮ್ಮೆ ಹೀಗಾಯಿತು…….

ಒಬ್ಬ ಝೆನ್ ಮಾಸ್ಟರ್ ಮತ್ತು ಅವನ ಶಿಷ್ಯ ಒಂದು ಪರ್ವತ ಶ್ರೇಣಿಯ ಮೂಲಕ ಹಾಯ್ದು ಮುಂದಿನ ಊರಿಗೆ ಹೋಗುತ್ತಿದ್ದರು.

ದಾರಿಯುದ್ದಕ್ಕೂ ಮಾಸ್ಟರ್ ಮೌನವಾಗಿದ್ದ ಆದರೆ ಅವನ ಶಿಷ್ಯ ಮಾತ್ರ ಝೆನ್ ಬಗ್ಗೆ ಮತ್ತು ಮನಸ್ಸಿನ ಬಗ್ಗೆ ಸತತವಾಗಿ ಮಾತಾನಾಡುತ್ತಲೇ ಇದ್ದ. ಸ್ವಲ್ಪ ದೂರ ಕ್ರಮಿಸಿದ ನಂತರ ಅವರಿಬ್ಬರಿಗೂ ಒಂದು ಭಾರಿ ಬಂಡೆ ಎದುರಾಯಿತು.

ಮಾಸ್ಟರ್ ತನ್ನ ಶಿಷ್ಯನ ತಲೆ ಮೇಲೆ ಕೈಯ್ಯಾಡಿಸುತ್ತ ಕೇಳಿದ, “ ನೋಡು ಆ ಭಾರಿ ಬಂಡೆ ಇದೆಯಲ್ಲಾ, ಅದು ನಿನ್ನ ಮನಸ್ಸಿನ ಒಳಗಿದೆಯೋ ಹೊರಗಿದೆಯೋ?

ಶಿಷ್ಯ ಅತ್ಯಂತ ಆತ್ಮವಿಶ್ವಾಸದಿಂದ ಉತ್ತರಿಸಿದ, “ ಝೆನ್ ನಲ್ಲಿ ಎಲ್ಲವೂ ಮನಸ್ಸಿನ ಆಟ, ಮನಸ್ಸು ನಮ್ಮ ಎಲ್ಲ ಕ್ರಿಯೆಗಳನ್ನು ನಿಯಂತ್ರಿಸುತ್ತದೆ, ಆದ್ದರಿಂದ ಖಂಡಿತವಾಗಿ ಬಂಡೆ ನನ್ನ ಮನಸ್ಸಿನ ಒಳಗಿದೆ.

“ಹಾಗಾದರೆ ಭಾರಿ ಬಂಡೆಯನ್ನು ಹೊತ್ತ ನಿನ್ನ ತಲೆ ತುಂಬ ಭಾರವಾಗಿರಬೇಕಲ್ಲ ? “ ಮಾಸ್ಟರ್ ನಗುತ್ತ ಉತ್ತರಿಸಿದ. ಮುಂದಿನ ಹಾದಿಯನ್ನು ಇಬ್ಬರೂ ಮಾತಿಲ್ಲದೇ ಸಮಾಧಾನದಿಂದ ಕ್ರಮಿಸಿದರು.

Leave a Reply