ತಿಬ್ಬತಿ ಬುದ್ಧಪರಂಪರೆಯ ‘ಡಾಕಿಣಿ’ ದೈವದ ಪ್ರಾರ್ಥನಾ ಸ್ತುತಿ ಗೀತೆ

ಟಿಬೆಟನ್ ಬೌದ್ಧ ಪರಂಪರೆಯಲ್ಲಿ ಕಂಡುಬರುವ ಆಕಾಶ ನರ್ತಕಿ ‘ಡಾಕಿಣಿ’ಯ ಸ್ತುತಿ ಗೀತೆಯನ್ನು ಡಾಕಿಣಿ ಕುರಿತಾದ ಪುಟ್ಟ ಟಿಪ್ಪಣಿಯೊಂದಿಗೆ , ನಮ್ಮ ನಡುವಿನ ಬಹುಮುಖ್ಯ ಕಥೆಗಾರರೂ ಅನುವಾದಕರೂ ಆದ ಶ್ರೀ ಕೇಶವ ಮಳಗಿ

‘ಸಿಂಹಾವಕ್ತೃ ಡಾಕಿಣಿ’ ಅಥವಾ ತಿಬ್ಬತಿ ಭಾಷೆಯಲ್ಲಿ ‘ಖಂದ್ರೋ’, ಟಿಬೇಟಿಯನ್ ವಜ್ರಾಯನ ಪಂಥವನ್ನು ಕಾಯುವ ಹಮ್ಮು ಬಿಮ್ಮಿನ ಶಾಕ್ತ ದೇವತೆ. ಈಕೆ ಗಗನ ಗಾಮಿನಿ, ಆಕಾಶ ನರ್ತಕಿ. ಶಾಂತಿ, ರುದ್ರ, ಭೀಕರ ರೂಪಗಳಲಿ ಕಾಣಿಸಿಕೊಳ್ಳುತ್ತ, ಬುದ್ಧ ಸಿದ್ಧಾಂತವನ್ನು, ಮಾನವಕುಲವನ್ನು, ವಜ್ರಾಯನ ಪರಿಪಾಲಕರನ್ನು ಕಾಪಿಡುವ ಮಾತೃ ಹೃದಯಿ, ಕರುಣಾಮಯಿ. ಇದ್ದರೂ, ತಪ್ಪೆಸಿದಾಗ ‘ಉಗ್ರಸ್ವರೂಪಿಣಿ’.

ನಿರಂತರ ಬದಲಾವಣೆಯಲ್ಲಿರುವ ಶಕ್ತಿ -ಸಾಮರ್ಥ್ಯಗಳನು ಕೈವಶ ಮಾಡಿಕೊಳ್ಳಲು, ಸಾಕ್ಷಾತ್ಕಾರ ಪಡೆಯಲು ಯೋಗ ಸಾಧಕರು ಡಾಕಿನಿಯ ಉಪಾಸಕರಾಗದೆ ವಿಧಿಯಿಲ್ಲ!

(ವೈದಿಕ ಪಠ್ಯಗಳಲ್ಲಿ ಹೀನಾರ್ಥದಲ್ಲಿ ಕಾಣಸಿಗುವ ರಾಕ್ಷಸ ಸ್ವರೂಪಿ ಡಾಕಿಣಿಗೂ ಈಕೆಗೂ ಸಂಬಂಧವಿಲ್ಲ. ಬುಡಕಟ್ಟಿನ ದೈವಗಳನ್ನು ಕ್ಷುದ್ರ ಎಂಬಂತೆ ಚಿತ್ರಿಸಿದ ವೈದಿಕರಿಗೆ ತಮ್ಮದಲ್ಲದ್ದೆಲ್ಲವೂ ಅಪಥ್ಯ. ಅದನ್ನು ವಿಕೃಗೊಳಿಸುವ ಮೂಲಕ ಅವರು ಸಮಾಧಾನ ಕಂಡುಕೊಂಡರು. ಅಥವಾ ಹಿರಿಮೆಯನ್ನು ಮೆರೆದರು!)

~

ಡಾಕಿಣಿ ಸ್ತುತಿ ಗೀತೆ

ಸತ್ಯವೆನ್ನುವುದಕ್ಕೆ ಆಗಮನ - ನಿರ್ಗಮನಗಳೆಂಬುವವು ಇಲ್ಲ
ಆದರೂ, ನೀನಿಂದು ತ್ರಿಕಾಲ ಪದ್ಮಸಂಭವನ ನೆಲೆಯತ್ತ ಹೊರಟಿರುವೆ.

ಬಟ್ಟೆ ತೊಡದ ದಿಗಂಬರನನು ಬೆಚ್ಚಗಾಗಿಸುವವರು ಯಾರು?
ಪ್ರತಿ ಜೀವಿಯ ರೆಪ್ಪೆಗಳಯಡಿಯ ಕಣ್ಣಗಳನು ಕಿತ್ತಿದ್ದಾರೆ,
ಒಂದೇ ದಿಕ್ಕಿಗೆ ದಿಟ್ಟಿ ನೆಟ್ಟ ಕುರುಡರನು ನಡೆಸುವವರಾರು?
ಪ್ರತಿ ಜೀವಿಯ ಎದೆಯಿಂದ ಹೃದಯವನು ಒಡೆದು ಚೂರಾಗಿಸಿದ್ದಾರೆ,
ಬುದ್ಧಿಯಿರುವ ಈ ಕಳೇವರಗಳನು ಮುನ್ನಡೆಸುವವರಾರು?

ಸಕಲ ಜೀವಿಗಳ ಒಳಿತಿಗಾಗಿ ನೀನಿಲ್ಲಿ ಬಂದಿರುವೆ,
ಅದೇ ದಿಟವಾದರೆ ನೀನಿಲ್ಲಿಯೇ ನೆಲೆಯಾಗಬಾರದೇಕೆ?

ಓಹ್! ದುರ್ವಿಧಿಯೇ, ದೈವನಿಯಾಮಕವೇ
ನಾಡಿನ ಮೇಲೆ ಕಾವಳ ಕವಿದು, ಮುಸುಕು ಮುಚ್ಚಿದೆ.

ಸನ್ಯಾಸಿ ಮಠಗಳೆಲ್ಲ ಭಿಕ್ಕುಗಳಿಲ್ಲದೇ ಬಿಕೋ ಎನ್ನುವ ಕಾಲ
ಧಮ್ಮಪೀಠವು ಶೂನ್ಯವಾಗಿದೆ,
ಅರಿವಿನ ಅಕ್ಷಯ ಬೋಗುಣಿ ಬೋರಲಾಗಿದೆ,
ಮನವು ಗೋಜಲಿನ ಗೂಡಾಗಿರುವ ಕಾಲ
ಕಲಿಕೆಗಾಗಿ ಪುಸ್ತಕಗಳನ್ನು ಹುಡುಕಾಡುವ ಕಾಲ
ದೈವವನು ಮನದಲ್ಲೇ ಕೆತ್ತಿಕೊಳ್ಳುವ ಕಾಲ
ಚಿತ್ರರೂಪವ ಕಾಣುತ, ಪ್ರಮಾಣಿತ ತಾಳೆಗರಿಗಳನು ಪಠಿಸುವ ಕಾಲ
ನಮ್ಮ ಕಾಣ್ಕೆ ಕೈಗೂಡಲು ಕನಸುಗಳನೇ ನೆಮ್ಮುವ ಕಾಲ.

ನಮ್ಮೆದುರು ಪ್ರತ್ಯಕ್ಷ ನಿಂತಿರುವುದು ಇದೇ ದುರ್ಗತಿಯ ಕಾಲ.

ಓಹ್! ಸಂಕಟ ನಿವಾರಕ, ಸುಶೀಲ ದೈವವೇ,
ನಿನ್ನ ಕರುಣೆ ಕೂಸು-ಕಂದಮ್ಮರ ಯಾತನೆಗಳ 
ಸ್ವೀಕರಿಸಿ ಮಾಗಿಸುವುದು,
ನೀನು ಶುದ್ಧಾಶುದ್ಧಗಳ ನಂಬಿಕೆಯ ಆಚೆಗಿರುವವಳು,
ನೀನು ಕಲಿಕೆಯ ತಾಯಿ, ಭೂಲೋಕದ ಸಕಲ ಜೀವಿಗಳ ಅವ್ವ,
ಬುದ್ಧ ಗುರುಗಳ ಮಾತೆ, ನಿನ್ನಡಿಗೆ ಒರಗುವೆ
ನಮ್ಮತ್ತ ಕರುಣೆಯ, ಸತ್ಯ ಸಂಕಲ್ಪದ ನೋಟ ಬೀರು.

Leave a Reply