ಅನುಪಸ್ಥಿತಿಯ ಅನುಭವ : ಓಶೋ ವ್ಯಾಖ್ಯಾನ

ನಿಮಗೆ ಸಂಗೀತ ಸಂವೇದನೆಯ ಕಿವಿಗಳಿವೆಯಾದರೆ ಹಕ್ಕಿಯ ಹಾಡನ್ನ ಏಕಾಗ್ರತೆಯಿಂದ ಕೇಳಿಸಿಕೊಳ್ಳುತ್ತ ಧ್ಯಾನಿಸಿ. ಆಮೇಲೆ ಹಕ್ಕಿ ಹಾರಿಹೋದಾಗ ಅದರ ಅನುಪಸ್ಥಿತಿಯಲ್ಲಿಯೂ ಹಾಡನ್ನ ಅನುಭವಿಸುವುದು ನಿಮಗೆ ಸಾಧ್ಯವಾದಾಗ ನೀವು ಬೆರಗಾಗುತ್ತೀರಿ. ಥಟ್ಟನೇ ಹಕ್ಕಿಯ ಹಾಡಿನ ಸಂಗತಿ ಸೂಕ್ಷ್ಮವಾಗಿದೆ, ಹಕ್ಕಿಯ ಹಾಡನ್ನ ಅದರ ಉಪಸ್ಥಿತಿಯಲ್ಲಿ ಅನುಭವಿಸುವದಕ್ಕೆ ಬೇಕಾಗುವ ಏಕಾಗ್ರತೆ ಮತ್ತು ಅರಿವಿಗಿಂತ ಹೆಚ್ಚಿನ ಸೂಕ್ಷ್ಮತೆ, ಏಕಾಗ್ರತೆ ಮತ್ತು ಅರಿವು ಅದೇ ಹಾಡನ್ನ ಹಕ್ಕಿಯ ಅನುಪಸ್ಥಿತಿಯಲ್ಲಿ ಅನುಭವಿಸಲು ಬೇಕಾಗುತ್ತದೆ… । ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

ಬುದ್ಧನ ಸಾವು ಹತ್ತಿರವಾಗುತ್ತಿದ್ದಂತೆಯೇ ಸುತ್ತ ವಿಷಾದ ಆವರಿಸಿಕೊಂಡಿತು. ಶಿಷ್ಯ ಆನಂದನಂತೂ ತುಂಬ ದುಃಖಿತನಾದ, “ ಗುರುವೇ ನೀನು ಇರುವಾಗ ನಮಗೆ ಜ್ಞಾನೋದಯ ಸಾಧ್ಯವಾಗಲಿಲ್ಲ , ಇನ್ನು ನೀನು ಇಲ್ಲದಿರುವಾಗ ನಮ್ಮ ಗತಿ ಏನು? “

ಆಗ ಬುದ್ಧ ಹೇಳಿದನಂತೆ, “ ನನ್ನ ಅನುಪಸ್ಥಿತಿಯನ್ನ ಪ್ರೀತಿಸಿ, ನನ್ನ ಅನುಪಸ್ಥಿಯನ್ನ ಸೂಕ್ಷ್ಮವಾಗಿ ಗಮನಿಸಿರಿ “
ಬುದ್ಧನ ನಂತರ ಸುಮಾರು ಐದು ನೂರು ವರ್ಷಗಳ ಕಾಲ ಅವನ ಮೂರ್ತಿಗಳಿಗೆ ಅವಕಾಶ ಇರಲ್ಲಿಲ್ಲ, ಅವನ ಅನುಪಸ್ಥಿತಿಯನ್ನ ಧ್ಯಾನಿಸಲಾಗುತ್ತಿತ್ತು. ಬುದ್ಧನ ಬದಲಾಗಿ ಕೇವಲ ಬೋಧಿವೃಕ್ಷವನ್ನ ಚಿತ್ರಿಸಲಾಗುತ್ತಿತ್ತು. ದೇವಸ್ಥಾನಗಳಿದ್ದವು ಆದರೆ ಬುದ್ಧನ ಮೂರ್ತಿಗಳಿರಲಿಲ್ಲ, ಕೇವಲ ಕಲ್ಲಿನಿಂದ ಕೆತ್ತಿದ ಬೋಧಿವೃಕ್ಷಗಳಿದ್ದವು. ಮತ್ತು ಆ ಕಲ್ಲಿನ ವೃಕ್ಷಗಳ ಕೆಳಗೆ ಬುದ್ಧ ತನ್ನ ಅನುಪಸ್ಥಿತಿಯಲ್ಲಿ. ಜನ ಬೋಧಿವೃಕ್ಷದ ಎದುರು ಕುಳಿತುಕೊಂಡು ಬುದ್ಧನ ಅನುಪಸ್ಥಿತಿಯನ್ನ ಧ್ಯಾನಿಸುವ ಪ್ರಯತ್ನ ಮಾಡುತ್ತಿದ್ದರು. ಈ ಪರಿಸ್ಥಿತಿಯಲ್ಲಿಯೇ ಹಲವಾರು ಸಾಧಕರಿಗೆ ಆಳ ಮೌನ ಮತ್ತು ಧ್ಯಾನ ಸಾಧ್ಯವಾಯಿತು.

ದಿನಗಳು ಕಳೆದಂತೆ ಜನರಲ್ಲಿ ಸಹನೆ ಮತ್ತು ಸೂಕ್ಷ್ಮತೆ ಮಾಯವಾಗತೊಡಗಿತು, “ ಬೋಧಿವೃಕ್ಷ ಬುದ್ಧ ಹೇಗಾದೀತು ? ಬುದ್ಧನ ಚಿತ್ರದ ಸಹಾಯವಿಲ್ಲದೆ ಅವನನ್ನು ತುಂಬಿಕೊಳ್ಳುವುದು ಹೇಗೆ? “ ಜನ ಗೊಂದಲಕ್ಕೊಳಗಾಗತೊಡಗಿದರು. ಜನರದೂ ಅಂಥ ತಪ್ಪೇನಿರಲಿಲ್ಲ, ಬುದ್ಧನನ್ನು ಅವನ ಅನುಪಸ್ಥಿತಿಯಲ್ಲಿ ಅನುಭವಿಸಲು ಆಪಾರ ಏಕಾಗ್ರತೆ, ಸ್ಪಷ್ಟ ತಿಳುವಳಿಕೆಯ ಅವಶ್ಯಕತೆಯಿತ್ತು. ಜನರಲ್ಲಿ ಈ ಗೊಂದಲ ಹೆಚ್ಚಾಗುತ್ತ ಹೋದಂತೆ, ಎಲ್ಲಕಡೆ ಬುದ್ಧನ ಮೂರ್ತಿಗಳು ಹುಟ್ಟಿಕೊಂಡವು. ಜನ ಬುದ್ಧನ ಸುಂದರ ಮೂರ್ತಿಗಳನ್ನ ಪೂಜಿಸತೊಡಗಿದರು.

ನೀವು ಹೀಗೆ ಅನುಪಸ್ಥಿತಿಯನ್ನ ನಿಮ್ಮ ಯಾವ ಇಂದ್ರಿಯದೊಂದಿಗೆಯೂ ಪರೀಕ್ಷೆ ಮಾಡಬಹುದು. ಏಕೆಂದರೆ ಜನರಿಗೆ ಬೇರೆ ಬೇರೆ ಸಾಮರ್ಥ್ಯ ಬೇರೆ ಬೇರೆ ವಿಶಿಷ್ಟ ಸಂವೇಂದನೆಗಳಿರುತ್ತವೆ. ನಿಮಗೆ ಸಂಗೀತ ಸಂವೇದನೆಯ ಕಿವಿಗಳಿವೆಯಾದರೆ ಹಕ್ಕಿಯ ಹಾಡನ್ನ ಏಕಾಗ್ರತೆಯಿಂದ ಕೇಳಿಸಿಕೊಳ್ಳುತ್ತ ಧ್ಯಾನಿಸಿ. ಆಮೇಲೆ ಹಕ್ಕಿ ಹಾರಿಹೋದಾಗ ಅದರ ಅನುಪಸ್ಥಿತಿಯಲ್ಲಿಯೂ ಹಾಡನ್ನ ಅನುಭವಿಸುವುದು ನಿಮಗೆ ಸಾಧ್ಯವಾದಾಗ ನೀವು ಬೆರಗಾಗುತ್ತೀರಿ. ಥಟ್ಟನೇ ಹಕ್ಕಿಯ ಹಾಡಿನ ಸಂಗತಿ ಸೂಕ್ಷ್ಮವಾಗಿದೆ, ಹಕ್ಕಿಯ ಹಾಡನ್ನ ಅದರ ಉಪಸ್ಥಿತಿಯಲ್ಲಿ ಅನುಭವಿಸುವದಕ್ಕೆ ಬೇಕಾಗುವ ಏಕಾಗ್ರತೆ ಮತ್ತು ಅರಿವಿಗಿಂತ ಹೆಚ್ಚಿನ ಸೂಕ್ಷ್ಮತೆ, ಏಕಾಗ್ರತೆ ಮತ್ತು ಅರಿವು ಬೇಕಾಗುತ್ತದೆ, ಅದೇ ಹಾಡನ್ನ ಹಕ್ಕಿಯ ಅನುಪಸ್ಥಿತಿಯಲ್ಲಿ ಅನುಭವಿಸಲು.

ಒಮ್ಮೆ ಮುಲ್ಲಾ ನಸ್ರುದ್ದೀನ್ ತನ್ನ ಗೆಳೆಯನೊಡನೆ ಮಾತನಾಡುತ್ತಿದ್ದ.

“ ನಸ್ರುದ್ದೀನ್, ನಾನು ಈ ಊರು ಬಿಟ್ಟು ನಾನು ಬೇರೆ ಊರಿಗೆ ಹೋಗುತ್ತಿದ್ದೇನೆ. ನಿನ್ನ ಗುರುತಿಗಾಗಿ ನೀನು ಯಾಕೆ ನಿನ್ನ ಉಂಗುರ ನನಗೆ ಕೊಡಬಾರದು? ಆ ಉಂಗುರ ನೋಡಿದಾಗಲೆಲ್ಲ ನಾನು ನಿನ್ನ ನೆನಪಿಸಿಕೊಳ್ಳುತ್ತೇನೆ “

ಮುಲ್ಲಾ ನಸ್ರುದ್ದೀನ್ ನ ಗೆಳೆಯ ಕೇಳಿಕೊಂಡ.

“ ಉಂಗುರ ನೀನು ಕಳೆದುಕೊಂಡು ಬಿಡಬಹುದು ಆಗ ನೀನು ನನ್ನ ಮರತೇಬಿಡುತ್ತೀಯ, ಹೀಗೆ ಮಾಡಿದರೆ ಹೇಗೆ? ನಾನು ನಿನಗೆ ಉಂಗುರ ಕೊಡುವುದಿಲ್ಲ, ನೀನು ಉಂಗುರವಿಲ್ಲದ ಖಾಲಿ ಬೆರಳು ನೋಡಿಕೊಂಡಾಗಲೆಲ್ಲ ನಿನಗೆ ನನ್ನ ನೆನಪಾಗುತ್ತದೆ. ನನ್ನ ಮರೆಯುವ ಸಾಧ್ಯತೆಯೇ ಇರುವುದಿಲ್ಲ.“ ಮುಲ್ಲಾ ನಗುತ್ತ ಉತ್ತರಿಸಿದ.

Leave a Reply