ಮನೋವಿಶ್ಲೇಷಕನ ಪ್ರಯೋಗ : ಓಶೋ ವ್ಯಾಖ್ಯಾನ

ಊಟ ತಿಂಡಿಯ ಚಿಂತೆಯಿಲ್ಲದೇ ದಿನವಿಡೀ ತನ್ನ ಆಟಗಳಲ್ಲೇ ಮುಳುಗಿ ಹೋಗಿರುವ ಮಗು ರಾತ್ರಿ ನಿದ್ದೆ ಮಾಡುವಾಗ ಎಷ್ಟು ನಿರಾಂತಕವಾಗಿ, ಎಷ್ಟು ಪ್ರಸನ್ನತೆಯಿಂದ, ಕನಸುಗಳನ್ನ ಎಂಜಾಯ್ ಮಾಡುತ್ತ ನಿದ್ದೆ ಮಾಡುತ್ತಿರುತ್ತದೆ ಗಮನಿಸಿದ್ದೀರಾ? ಮಗುವಾಗಿದ್ದಾಗ ನಮ್ಮಲ್ಲಿ ಇದ್ದ ಇಷ್ಟು ಚೈತನ್ಯ ನಾವು ಬೆಳೆಯುತ್ತ ಹೋದಂತೆ ಯಾಕೆ ಮಾಯವಾಗಿ ಹೋಯಿತು? ~ ಓಶೋ । ಚಿದಂಬರ ನರೇಂದ್ರ

ಒಬ್ಬ ಮನೋವಿಶ್ಲೇಷಕ ಒಂದು ಪ್ರಯೋಗದ ತಯಾರಿ ನಡೆಸಿದ್ದ. ಈ ಪ್ರಯೋಗದ ಸಿದ್ಧತೆಗಾಗಿ ಅವನು ಪತ್ರಿಕೆಯಲ್ಲಿ ಒಂದು ಸವಾಲು ಹಾಕಿದ, ಯಾರು ತನ್ನ ಮನೆಗೆ ಬಂದು ಒಂದು ಇಡೀ ದಿನ ತನ್ನ ಮಗು ಮಾಡಿದ್ದನ್ನೆಲ್ಲ ರಿಪೀಟ್ ಮಾಡುತ್ತಾರೋ ಅವರಿಗೆ ಕೈತುಂಬ ಹಣ ಕೊಡುತ್ತೇನೆಂದು. ಒಂದು ಪೂರ್ತಿ ದಿನ ಮಗು ಮಾಡುವ ಪ್ರತಿಯೊಂದನ್ನೂ ಅದೇ ಭಾವದಲ್ಲಿ ಸವಾಲು ಸ್ವೀಕರಿಸುವವರು ರಿಪೀಟ್ ಮಾಡಬೇಕು ಎನ್ನುವುದಷ್ಟೇ ಸವಾಲಿನ ವಿಷಯವಾಗಿತ್ತು.

ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸವಾಲನ್ನು ಸ್ವೀಕರಿಸಲು ಹರೆಯದ ಒಬ್ಬ ಸಾಹಸಿ ಕುಸ್ತಿಪಟು ಸಿದ್ಧನಾದ. ಅವನು ಮನೋವಿಶ್ಲೇಷಕನ ಮನೆಗೆ ಬಂದು “ ಎಲ್ಲಿ ನಿನ್ನ ಮಗು? ನಾನು ನಿನ್ನ ಸವಾಲನ್ನು ಸ್ವೀಕರಿಸಲು ಸಿದ್ಧ “ ಎಂದು ಸವಾಲಿಗೆ ಸಿದ್ಧನಾದ.

ಪಂದ್ಯ ಶುರುವಾಯಿತು, ಮಧ್ಯಾಹ್ನವಾಗುತ್ತಿದ್ದಂತೆಯೇ ಕುಸ್ತಿಪಟು ಸುಸ್ತಾಗಿ ಹೋದ, ಆಗಲೇ ಅವನು ಎರಡು ಮೂರು ಕಡೆ ಕೈ ಕಾಲಿಗೆ ಗಾಯ ಮಾಡಿಕೊಂಡಿದ್ದ. ಮಗು ಖುಶಿಯಿಂದ ಮನೆ ತುಂಬ ಓಡಾಡುತ್ತಿತ್ತು, ಸುಂಸುಮ್ನೆ ನಗುತ್ತಿತ್ತು, ಟೇಬಲ್ ಹತ್ತಿ ಜಿಗಿಯುತ್ತಿತ್ತು, ಪಲ್ಟಿ ಹೊಡೆಯುತ್ತಿತ್ತು, ಡಾನ್ಸ್ ಮಾಡುತ್ತಿತ್ತು, ಒಂದೇ ಸವನೇ ಏನೋ ಒಂದು ಮಾಡುತ್ತಲೇ ಇತ್ತು. ಮಗು ಮಾಡಿದ ಎಲ್ಲವನ್ನೂ ರಿಪೀಟ್ ಮಾಡುತ್ತಿದ್ದ ಕುಸ್ತಿಪಟು ಸ್ವಲ್ಪ ಹೊತ್ತಿನ ನಂತರ ಹೈರಾಣಾದ, ಅವನಿಗೆ ಇದು ಇನ್ನು ಮುಂದೆ ಸಾಧ್ಯವಿಲ್ಲ ಅನಿಸಿತು. “ ನನ್ನಿಂದ ಇನ್ನು ಸಾಧ್ಯವಿಲ್ಲ. ಹೀಗೇ ಮುಂದುವರೆದರೆ, ಈ ಮಗು ನನ್ನನ್ನು ಕೊಂದು ಬಿಡುತ್ತದೆ. ಬಹಳ ಅಪಾಯಕಾರಿ ಮಗು ಇದು. ನನಗೆ ನಿನ್ನ ಹಣ ಯಾವುದೂ ಬೇಡ, ನಾನು ಸೋಲೊಪ್ಪಿಕೊಂಡೆ.” ಕುಸ್ತಿಪಟು ಸ್ಪರ್ಧೆಯಿಂದ ಹಿಂದೆ ಸರಿದ.

ಮಕ್ಕಳನ್ನು ಗಮನಿಸಿದ್ದೀರಾ? ಎಲ್ಲಿಂದ ಬರುತ್ತದೆ ಅವುಗಳಲ್ಲಿ ಅಷ್ಟು ಶಕ್ತಿ? ಅವು ತಿನ್ನುವ ಆಹಾರವಾದರೂ ಎಷ್ಟು ? ಆದರೂ ಇಷ್ಟು ಲವಲವಿಕೆ ಇಷ್ಟು ಶಕ್ತಿ ಎಲ್ಲಿಂದ ಬರುತ್ತದೆ ಮಕ್ಕಳಿಗೆ. ಇಷ್ಟೆಲ್ಲ ಮಾಡುತ್ತಿರುವಾಗಲೂ ಮಕ್ಕಳು ಟೆನ್ಸ್ ಆಗಿರುವುದನ್ನ ಎಂದಾದರೂ ಗಮನಿಸಿದ್ದೀರಾ? ಊಟ ತಿಂಡಿಯ ಚಿಂತೆಯಿಲ್ಲದೇ ದಿನವಿಡೀ ತನ್ನ ಆಟಗಳಲ್ಲೇ ಮುಳುಗಿ ಹೋಗಿರುವ ಮಗು ರಾತ್ರಿ ನಿದ್ದೆ ಮಾಡುವಾಗ ಎಷ್ಟು ನಿರಾಂತಕವಾಗಿ, ಎಷ್ಟು ಪ್ರಸನ್ನತೆಯಿಂದ, ಕನಸುಗಳನ್ನ ಎಂಜಾಯ್ ಮಾಡುತ್ತ ನಿದ್ದೆ ಮಾಡುತ್ತಿರುತ್ತದೆ ಗಮನಿಸಿದ್ದೀರಾ? ಮಗುವಾಗಿದ್ದಾಗ ನಮ್ಮಲ್ಲಿ ಇದ್ದ ಇಷ್ಟು ಚೈತನ್ಯ ನಾವು ಬೆಳೆಯುತ್ತ ಹೋದಂತೆ ಯಾಕೆ ಮಾಯವಾಗಿ ಹೋಯಿತು? ಆದ್ದರಿಂದಲೇ ಅಲ್ಲವೇ ಎಲ್ಲ ಅಧ್ಯಾತ್ಮಿಕ ಸಾಧನೆಗಳ ಗುರಿ ಮತ್ತೆ ಮಗುವಿನಂತಾಗುವುದು, ಮತ್ತೆ ಮರಳಿ ಮಗುವಿನ ಚೈತನ್ಯವನ್ನು ಹೊಂದುವುದು.

ಒಮ್ಮೆ ಝೆನ್ ಮಾಸ್ಟರ್ ಜೋಶು ನ ಆಶ್ರಮಕ್ಕೆ ಒಬ್ಬ ಅತಿಥಿ ಮೊದಲ ಬಾರಿ ಆಗಮಿಸಿದ್ದ. ಆಶ್ರಮದ ಉದ್ಯಾನವನದಲ್ಲಿ ಪ್ರಖರ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಒಬ್ಬ ವೃದ್ಧ ಸನ್ಯಾಸಿ ಧ್ಯಾನ ಮಾಡುತ್ತ ಕುಳಿತಿರುವುದನ್ನ ಆ ಅತಿಥಿ ಗಮನಿಸಿದ. ಆ ವೃದ್ಧನ ಬಗ್ಗೆ ಅತಿಥಿಗೆ ಕುತೂಹಲ ಬೆಳೆಯಿತು.

ಉದ್ಯಾನವನದ ಬಾಗಿಲಲ್ಲೇ ಹಾಡು ಹಾಡುತ್ತ, ಮಕ್ಕಳ ಜೊತೆ ಆಟ ಆಡುತ್ತ ಕುಳಿತಿದ್ದ ಕೆಲಸಗಾರನನ್ನು ಅತಿಥಿ ಪ್ರಶ್ನೆ ಮಾಡಿದ. “ ಯಾರು ಆ ತೇಜಸ್ವಿ ಸನ್ಯಾಸಿ? ಅವನೇನಾ ಝೆನ್ ಮಾಸ್ಟರ್ ಜೋಶೋ?

“ ಅಲ್ಲ, ಅಲ್ಲ ನಾನು ಜೋಶು, ಅವ ನನ್ನ ನೆಚ್ಚಿನ ಶಿಷ್ಯ” ಕೆಲಸಗಾರ ಮುದುಕ ಉತ್ತರಿಸಿದ.

Leave a Reply