ತಗ್ಗುವುದು ಬಗ್ಗುವುದು ಸೋಲೇ ಆಗಿರಬೇಕೆಂದಿಲ್ಲ. ಅದು ಸೌಹಾರ್ದವೂ, ಸೌಜನ್ಯವೂ, ಸಹಜೀವನ ಪಾಠವೂ ಯಾಕಾಗಬಾರದು? ಅದು ನಿಸ್ವಾರ್ಥ ಪ್ರೇಮ ಯಾಕಾಗಿರಬಾರದು? ಈ ಎಲ್ಲದರ ತೀವ್ರ ಹಂಬಲಕ್ಕಾಗಿ ನಾವು ಹುಲ್ಲಾಗುವುದಾದರೂ ಸರಿಯೇ, ನಾವೇಕೆ ಹುಲ್ಲಾಗಬಾರದು!? । ಚೇತನಾ ತೀರ್ಥಹಳ್ಳಿ
“ತೃಣೀಕರೋತಿ ತೃಷ್ಣೈಕಾ….” ಒಂದೇ ಒಂದು ತೀವ್ರ ಹಂಬಲ, ಕೇವಲ ಒಂದು ತೀವ್ರ ಹಂಬಲ ನಮ್ಮನ್ನು ಹುಲ್ಲಿಗೆ ಸಮನಾಗಿ ಮಾಡಿಬಿಡುತ್ತದೆ.
ನಾವು ಯಾವ ದೊಡ್ಡ ಸ್ಥಾನದಲ್ಲಿದ್ದೀವೋ, ಬಹು’ಮಾನ’ ಪಡೆದವರೋ ಅವೆಲ್ಲ ತೀವ್ರಹಂಬಲದ ಮುಂದೆ ಹುಲ್ಲೇ ಸರಿ. ನಮ್ಮ ಸ್ಥಾನಮಾನ ಎಲ್ಲವನ್ನೂ ಮರೆತು ಅದರ ಹಿಂದೆ ಬೀಳ್ತೀವಲ್ಲ, ಆಗ ನಮ್ಮ ಯೋಗ್ಯತೆ ಕವಡೆ ಕಿಮ್ಮತ್ತಾಗಿಬಿಡುತ್ತದೆ ಅನ್ನೋದು ಈ ಸಾಲಿನ ಒಳಾರ್ಥ.
ಯೋಗವಾಸಿಷ್ಠ ಹೇಳುವುದು ಹೀಗೆ:
ಅಪಿ ಮೇರುಸಮಂ ಪ್ರಾಜ್ಞಮಪಿ ಶೂರಮಪಿ ಸ್ಥಿರಂ
ತೃಣೀಕರೋತಿ ತೃಷ್ಣೈಕಾ ನಿಮೇಷೇಣ ನರೋತ್ತಮಮ್ || 1.17.50||
“ಮೇರು ಪರ್ವತದ ಹಾಗೆ ಸ್ಥಿರವಾದವರು, ಅದರ ಎತ್ತರದಷ್ಟು ಜ್ಞಾನವಿದರೂ (ಅಷ್ಟು ಹಿರಿಮೆಯುಳ್ಳವರೂ) ಶೂರರೂ ಆಗಿರುವಂಥವರು ಕೂಡಾ ಒಂದು ತೀವ್ರ ಹಂಬಲದ ಸುಳಿಗೆ ಸಿಕ್ಕುಬಿಟ್ಟರೆ ಕ್ಷಣ ಮಾತ್ರದಲ್ಲಿ ಹಿರಿಮೆಗರಿಮೆಗಳನೆಲ್ಲ ಕಳೆದುಕೊಂಡು ಹುಲ್ಲಿನ ಮಟ್ಟಕ್ಕೆ ಇಳಿದುಬಿಡುತ್ತಾರೆ. ಹಂಬಲದ ಪಾಶ ಹೀಗಿರುತ್ತದೆ”
ತೃಷ್ಣಾ ಅನ್ನುವ ಪದದ ಅರ್ಥವನ್ನು ಕನ್ನಡದಲ್ಲಿ ಹೇಳುವುದು ಹೇಗೆ?
ತೃಷ್ಣಾ ಅಂದರೆ ಬಾಯಾರಿಕೆ. ಯಶಸ್ಸಿನ ಬಾಯಾರಿಕೆ. ಕಾಮಾದಿಗಳ ಹಪಾಹಪಿ. ಕೀರ್ತಿಯ ಬಯಕೆ. ಹಾಗೆಂದು ಈ ಪದವನ್ನು ನಕಾರಾತ್ಮಕವಾಗೇ ನೋಡಬೇಕಿಲ್ಲ. ತೃಷ್ಣಾ ಅಂದರೆ ತೀವ್ರ ಹಂಬಲ ಎಂದು ಕೂಡಾ.
ಹಾಗೇ ಇಲ್ಲೊಂದು ಪ್ರಶ್ನೆಯಿದೆ; ಮನುಷ್ಯ ಬೆಟ್ಟದಂತೆಯೇ ಯಾಕಿರಬೇಕು? ತಗ್ಗಲಾರೆ, ಬಾಗಲಾರೆ, ಎದೆ ಸೆಟೆಸಿಕೊಂಡೇ ನಿಲ್ಲುವೆ ಅನ್ನುವ ಹಮ್ಮು ಯಾಕೆ ಬೇಕು?
ನನಗನಿಸುತ್ತೆ, ‘ದೃಢವಾಗಿರುವುದೂ ಒಂದು ಅಹಂಕಾರವೇ’
ತಗ್ಗುವುದು ಬಗ್ಗುವುದು ಸೋಲೇ ಆಗಿರಬೇಕೆಂದಿಲ್ಲ. ಅದು ಸೌಹಾರ್ದವೂ, ಸೌಜನ್ಯವೂ, ಸಹಜೀವನ ಪಾಠವೂ ಯಾಕಾಗಬಾರದು? ಅದು ನಿಸ್ವಾರ್ಥ ಪ್ರೇಮ ಯಾಕಾಗಿರಬಾರದು? ಈ ಎಲ್ಲದರ ತೀವ್ರ ಹಂಬಲಕ್ಕಾಗಿ ನಾವು ಹುಲ್ಲಾಗುವುದಾದರೂ ಸರಿಯೇ, ನಾವೇಕೆ ಹುಲ್ಲಾಗಬಾರದು!?
ತೃಣೀಕರೋತಿ ತೃಷ್ಣೈಕಾ….
ವಿನಯದಿಂದ ಬಾಗುವ, ಸ್ವೀಕರಿಸುವ, ತೊನೆಯುವ, ಅಲ್ಪಕಾಲವೇ ಇದ್ದರೂ ನಲಿದು ಬಾಡಿ ಮುಗಿದುಹೋಗುವ ಹುಲ್ಲು, ಮೈಬಿಗಿದು ನಿಂತ ಮೇರುಗಿರಿಗಿಂತ ಮೇಲಲ್ಲವೆ?
ಅಂಥ ಬಿಗುವನ್ನು, ಹಮ್ಮನ್ನು ಕಳೆದು ಹುಲ್ಲಾಗಿಸಬಲ್ಲ ತೀವ್ರ ಹಂಬಲವೊಂದು ಯಾಕಿರಬಾರದು?
ತೀವ್ರ ಹಂಬಲದ ಮುಂದೆ ಅಹಮಿಕೆಯನ್ನೆಲ್ಲ ಹುಡಿಯೆಬ್ಬಿಸಿ ಸೆಡವು ಕಳೆದು ನಾವೇಕೆ ನಯವಾಗಬಾರದು?
ಅಂತಲೇ,
ಅಭದ್ರತೆಯ, ಕಳೆದುಕೊಳ್ಳುವ, ಮುಗಿದುಹೋಗುವ ಭಯವೆಲ್ಲ ಅಳಿಯಲಿ. ಕ್ಷಣಕ್ಷಣವೂ ತುಯ್ದಾಡುತ್ತ ಹುಡಿಯಾಗಿಸುವ ಹಂಬಲ ದಕ್ಕಲಿ. ನಮ್ಮೆಲ್ಲ ಅಹಂಕಾರದ ಹೆಗ್ಗಲ್ಲನ್ನು ಕುಟ್ಟಿ ಪುಡಿ ಮಾಡಿ ಪಳಗಿಸಿ, ಬಳಕುವ ಬಾಗುವ ಹುಲ್ಲಾಗಿ ಮಾಡುವಂಥ – ಅಂಥದೊಂದು ತೀವ್ರ ಹಂಬಲ ನಮ್ಮೊಳಗಲ್ಲಿ ಬೆಳೆಯಲಿ.