ಸಾವಿನ ಸತ್ಯ ನೀಡುವ ಸ್ವಾತಂತ್ರ್ಯ : ಓಶೋ ವ್ಯಾಖ್ಯಾನ

“ಜನ್ಮ ದಿನಗಳನ್ನು ಸಂಭ್ರಮಿಸುವುದರಲ್ಲಿ ಅರ್ಥವಿಲ್ಲ, ಹಾಗೆ ನೋಡಿದರೆ ಅವು ನಿಜವಾಗಿ ಸಾವನ್ನು ನೆನಪಿಸುವ ದಿನಗಳು” ಅನ್ನುತ್ತಾರೆ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಎಪ್ಪತ್ತು ವರ್ಷ ವಯಸ್ಸು ಆದ ಮೇಲೆ ಸಂಭವಿಸುವುದು ಮಾತ್ರ ಸಾವು ಅಲ್ಲ. ನಾವು ಪ್ರತಿನಿತ್ಯವೂ ಪ್ರತಿಕ್ಷಣವೂ ಸಾಯುತ್ತಿರುತ್ತೇವೆ, ಎಪ್ಪತ್ತು ವರ್ಷ ಆದ ಮೇಲೆ ಸಾಯಲಿಕ್ಕೆ ಏನೂ ಉಳಿದಿರುವುದಿಲ್ಲ ಆಗ ತೀರಿಕೊಳ್ಳುತ್ತೇವೆ ಅಷ್ಟೇ. ಬದುಕು ಹನಿ ಹನಿಯಾಗಿ ತೀರುತ್ತ ಹೋಗುತ್ತದೆ, ಅದನ್ನ ಬದುಕು ಎಂದು ಕರೆಯುವುದೇ ತಪ್ಪು, ಅದನ್ನ ನಿಧಾನ ಸಾವು ಎಂದು ಬೇಕಾದರೆ ಕರೆಯಬಹುದು.

ಜನ್ಮ ದಿನಗಳನ್ನು ಸಂಭ್ರಮಿಸುವುದರಲ್ಲಿ ಅರ್ಥವಿಲ್ಲ, ಹಾಗೆ ನೋಡಿದರೆ ಅವು ನಿಜವಾಗಿ ಸಾವನ್ನು ನೆನಪಿಸುವ ದಿನಗಳು. ನಿಮ್ಮ ಜನ್ಮದಿನದಂದು ನೀವು ಸಾವನ್ನು ನೋಡಬಲ್ಲಿರಾದರೆ, ಸಾವಿನ ಹೆಜ್ಜೆಯ ಸಪ್ಪಳವನ್ನು ಕೇಳಬಲ್ಲಿರಾದರೆ, ನೀವು ಸತ್ಯವನ್ನು ಗುರುತಿಸಿದ ಹಾಗೆ ಮತ್ತು ಆ ಸತ್ಯ ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡುತ್ತದೆ.

ಸಾವಿನ ಸತ್ಯ ನಿಮಗೆ ಕಂಡೊಡನೆ ನೀವು ಸ್ವತಂತ್ರರಾಗುತ್ತೀರಿ, ಹೊಸ ಹುಡುಕಾಟದಲ್ಲಿ ತೊಡಗಿಕೊಳ್ಳುತ್ತೀರಿ, ನಿಮ್ಮ ಸುಖದ ಕಲ್ಪನೆಯನ್ನ ಬದಲಿಸಿಕೊಳ್ಳುತ್ತೀರಿ, ನೀವು ಏನನ್ನು ಗಳಿಸುತ್ತಿದ್ದೀರಿ, ಯಾವುದನ್ನ ಸಂಭ್ರಮಿಸುತ್ತಿದ್ದೀರಿ? ಅದು ಹಣ, ರೂಪ ಯಾವುದೂ ಆಗಬಹುದು, ಆ ಎಲ್ಲವೂ ತಮ್ಮ ಅರ್ಥ ಕಳೆದುಕೊಂಡು ನಿಮ್ಮಲ್ಲಿ ಹೊಸ ಅರ್ಥಗಳನ್ನು ಹುಟ್ಟಿಸತೊಡಗುತ್ತವೆ. ಆದ್ದರಿಂದಲೇ ಸತ್ಯವನ್ನು ಅರಿತುಕೊಳ್ಳುವ ಮೊದಲು ಸುಳ್ಳನ್ನು ಸುಳ್ಳು ಎಂದು ಮಿಥ್ಯೆಯನ್ನು ಮಿಥ್ಯೆ ಎಂದು ಗುರುತಿಸಬೇಕು.

ಝೆನ್ ಮಾಸ್ಟರ್ ಸಾವಿನ ಹಾಸಿಗೆಯಲ್ಲಿದ್ದ.
ಅವನ ಪ್ರೀತಿ ಪಾತ್ರ ಮತ್ತು ವಾರಸುದಾರ ಶಿಷ್ಯ, ಮಾಸ್ಟರ್ ನ ಪ್ರಶ್ನೆ ಮಾಡಿದ.

ಮಾಸ್ಟರ್, ಝೆನ್ ಬಗ್ಗೆ ಇನ್ನೂ ಏನಾದರೂ ನಮಗೆ ಕಲಿಸುವುದು ಉಳಿದಿದೆಯೆ? ಹಾಗೇನಾದರೂ ಉಳಿದಿದ್ದರೆ ಸಾವಿಗೂ ಮುಂಚೆ ಆದಷ್ಟು ಬೇಗ ಹೇಳಿಕೊಡಿ.

ಮಾಸ್ಟರ್, ಒಂದು ಕ್ಷಣ ಧ್ಯಾನ ಮಗ್ನನಾಗಿ ಚಿಂತಿಸಿ ಮಾತನಾಡಿದ.

ನಿನ್ನ ಒಳನೋಟ ಅದ್ಭುತ, ನಿನ್ನ ಕಲಿಕೆ ಮತ್ತು ತರಬೇತಿ ಪರಿಪೂರ್ಣ, ಆದರೂ………

ಹೇಳಿ ಮಾಸ್ಟರ್, ಅದೇನಿದ್ದರೂ ನಾನು ಪರಿಹರಿಸಿಕೊಳ್ಳುವೆ.

ಏನಿಲ್ಲ, ನಿನ್ನ ಮೈ ಝೆನ್ ನಿಂದ ನಾರುತ್ತಿದೆ. ಝೆನ್ ಎಷ್ಟು ಸತ್ಯವೋ ಝೆನ್ ಬಗ್ಗೆ ಮಾತನಾಡುವುದು ಅಷ್ಟೇ ಸುಳ್ಳು.

Leave a Reply