ಲಾವೋತ್ಸೆ ಹೇಳಿದ, ಹೇಳಲಾಗದ ಸತ್ಯ! : ಓಶೋ ವ್ಯಾಖ್ಯಾನ

ಜನರಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಲಾವೋತ್ಸೇಯನ್ನು ಒಂದು ಗಡಿಯಲ್ಲಿ ಬಂಧಿಸಿ, ಅವನಿಗೆ ರಾಜಾಜ್ಞೆಯನ್ನು ತಿಳಿಸಲಾಯಿತು. ಹೀಗೆ ರಾಜನ ಒತ್ತಾಯದಲ್ಲಿ, ಸೈನಿಕರ ಬಂದೂಕಿನ ತುದಿಯಲ್ಲಿ ಲಾವೋತ್ಸೇ ಬರೆದ ಜಗತ್ತಿನ ಅತ್ಯಂತ ಅಪರೂಪದ ಕೃತಿಯೇ ದಾವ್ ದ ಜಿಂಗ್. ಲಾವೋತ್ಸೇ ಬರೆದ ಮೊದಲ ಸಾಲೇ ಹೀಗಿತ್ತು, “ ಸತ್ಯವನ್ನು ಹೇಳುವುದು ಸಾಧ್ಯವಿಲ್ಲ, ಮತ್ತು ಯಾವುದನ್ನ ಹೇಳಬಹುದೋ ಅದು ಸತ್ಯವಾಗಿ ಉಳಿಯುವುದಿಲ್ಲ” ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ತನ್ನ ಬದುಕಿನುದ್ದಕ್ಕೂ ಲಾವೋತ್ಸೇ, ಸತ್ಯದ ಕುರಿತು ಏನೂ ಬರೆಯಲಾರೆ ಎಂದು ಪಟ್ಟು ಹಿಡಿದಿದ್ದ. ಕೊನೊಗೊಮ್ಮೆ, ಸತ್ಯದ ಕುರಿತು ಬರೆಯಲೇಬೇಕು ಎಂದು ಅವನನ್ನು ಬಂದೂಕಿನ ತುದಿಯಲ್ಲಿ ಒತ್ತಾಯಿಸಲಾದಾಗ ಸೃಷ್ಟಿಯಾದದ್ದೇ ಜಗತ್ತಿನ ಅಪರೂಪದ ಕೃತಿ ದಾವ್ ದ ಜಿಂಗ್.

ತನ್ನ ಮುಪ್ಪಿನ ಕಾಲದಲ್ಲಿ ಲಾವೋತ್ಸೇ ಚೈನಾ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದ. ಒಂದು ಕಥೆಯ ಪ್ರಕಾರ ಅವನು ಹುಟ್ಟಿದಾಗಲೇ ಅವನಿಗೆ ಎಂಭತ್ತೆರಡು ವರ್ಷ ವಯಸ್ಸಾಗಿತ್ತಂತೆ. ಹಾಗಿದ್ದಾಗ ಮುಪ್ಪಿನಲ್ಲಿ ಅವನಿಗೆ ಎಷ್ಟು ವಯಸ್ಸಾಗಿರಬಹುದು ನೀವೇ ಕಲ್ಪನೆ ಮಾಡಿಕೊಳ್ಳಿ. ಹುಟ್ಟಿದಾಗಲೇ ಲಾವೋತ್ಸೇ ಅತ್ಯಂತ ಪ್ರಬುದ್ಧನಾಗಿದ್ದನಂತೆ, ಹುಟ್ಟಿದ್ದಾಗ ಅವನು ಚೈಲ್ಡ್ ಏನೋ ಹೌದು ಆದರೆ ಚೈಲ್ಡಿಶ್ ಆಗಿರಲಿಲ್ಲ. ಚೈಲ್ಡ್ ಮತ್ತು ಚೈಲ್ಡಿಶ್ ಗಳ ನಡುವಿನ ಅಂತರವನ್ನೂ ವ್ಯತ್ಯಾಸವನ್ನೂ ಅರ್ಥ ಮಾಡಿಕೊಳ್ಳಿ.

“Those who are like children…” ಎಂದು ಜೀಸಸ್ ಹೇಳುವಾಗ, ಅವನು ಚೈಲ್ಡಿಶ್ ಜನರ ಬಗ್ಗೆ ಮಾತನಾಡುತ್ತಿಲ್ಲ, ಅವನು ಅತ್ಯಂತ ಮುಗ್ಧ ಜನರ ಬಗ್ಗೆ ಮಾತನಾಡುತ್ತಿದ್ದಾನೆ. ಲಾವೋತ್ಸೇ ಹುಟ್ಟಿದಾಗ ಅವನು ಅತ್ಯಂತ ಮುಗ್ಧ ಮಗುವಾಗಿದ್ದ, ಅವನ ಮುಗ್ಧತೆ ಎಷ್ಟು ಆಳವಾಗಿತ್ತೆಂದರೆ, ಎಷ್ಟು ಪ್ರಬುದ್ಧವಾಗಿತ್ತೆಂದರೆ, ಅವನ ಬಗ್ಗೆ ಬರೆದವರು, ಈ ಮುಗ್ಧತೆ ಕೇವಲ ಒಂಭತ್ತು ತಿಂಗಳ ಮಗುವಿಗೆ ಸಾಧ್ಯವಿಲ್ಲ, ಕೊನೆಪಕ್ಷ ಈ ಮಗುವಿಗೆ ಎಂಭತ್ತೆರಡು ವರ್ಷ ವಯಸ್ಸಾಗಿರಬಹುದು ಎಂದು ತೀರ್ಮಾನಿಸಿದರು. ಇದಕ್ಕೆ ಪೂರಕವೆಂಬಂತೆ ಹುಟ್ಟಿದಾಗಲೇ ಲಾವೋತ್ತೇ ನ ತಲೆಗೂದಲೂ ಬಿಳಿಯಾಗಿದ್ದವಂತೆ.

ಹಾಗಾಗಿ ಜನರು ಲಾವೋತ್ಸೇ ನ ವಯಸ್ಸಿನ ಲೆಕ್ಕಾಚಾರವನ್ನೇ ಮರೆತುಬಿಟ್ಟರು. ತನ್ನ ಕೊನೆಗಾಲ ಹತ್ತಿರವಾಗುತ್ತಿದೆ, ತಾನು ಇನ್ನು ಸಾಯುವವನಿದ್ದೇನೆ ಎಂದು ಲಾವೋತ್ಸೇ ಗೆ ಗೊತ್ತಾದಾಗ ಅವನು ಹಿಮಾಲಯಕ್ಕೆ ಹೋಗುವ ಮನಸ್ಸು ಮಾಡಿದ. ಪ್ರಕೃತಿಯೊಂದಿಗೆ ಒಂದಾಗಲು ಹಿಮಾಲಯಕ್ಕಿಂತ ಸುಂದರ ಜಾಗ ಇನ್ನೊಂದಿಲ್ಲ ಎನ್ನುವುದು ಅವನ ಈ ನಿರ್ಧಾರಕ್ಕೆ ಕಾರಣವಾಗಿತ್ತು.

ಸಾವು ಸಂಭ್ರಮಕ್ಕೆ ಕಾರಣವಾಗಬೇಕು! ತನ್ನ ಬದುಕಿನುದ್ದಕ್ಕೂ ಜನರೊಂದಿಗೆ ಬದುಕಿದ ಲಾವೋತ್ಸೇ, ನಿಸರ್ಗದ ಮಡಿಲಲ್ಲಿ, ಗಿಡ ಮರಗಳ ಕೆಳಗೆ, ಸೂರ್ಯ ಚಂದ್ರ ನಕ್ಷತ್ರಗಳ ಸಾಕ್ಷಿಯಾಗಿ ಮತ್ತೆ ಪ್ರಕೃತಿಯನ್ನು ಸೇರುವ ನಿರ್ಧಾರಕ್ಕೆ ಬಂದು ಹಿಮಾಲಯಕ್ಕೆ ಹೋಗುವ ಮನಸ್ಸು ಮಾಡಿದ್ದು ಜನರ ಕಳವಳಕ್ಕೆ ಕಾರಣವಾಗಿತ್ತು. ಲಾವೋತ್ಸೇಯ ಚಾಲಾಕಿತನದ ಬಗ್ಗೆ ಗೊತ್ತಿದ್ದ ರಾಜ, ಅವನು ಎಲ್ಲೇ ಕಾಣಿಸಿಕೊಂಡರೂ ಅವನನ್ನು ಬಂಧಿಸಲು ತನ್ನ ಸೈನಿಕರಿಗೆ ಆಜ್ಞೆ ಮಾಡಿದ. ಲಾವೋತ್ಸೇ ತನ್ನ ಅನುಭವಗಳ ಬಗ್ಗೆ ಬರೆಯುವ ತನಕ ಅವನನ್ನು ಬಿಡುಗಡೆ ಮಾಡಬಾರದೆಂದು ಸೈನಿಕರಿಗೆ ತಾಕೀತು ಮಾಡಿದ.

ಜನರಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಲಾವೋತ್ಸೇಯನ್ನು ಒಂದು ಗಡಿಯಲ್ಲಿ ಬಂಧಿಸಿ, ಅವನಿಗೆ ರಾಜಾಜ್ಞೆಯನ್ನು ತಿಳಿಸಲಾಯಿತು. ಹೀಗೆ ರಾಜನ ಒತ್ತಾಯದಲ್ಲಿ, ಸೈನಿಕರ ಬಂದೂಕಿನ ತುದಿಯಲ್ಲಿ ಲಾವೋತ್ಸೇ ಬರೆದ ಜಗತ್ತಿನ ಅತ್ಯಂತ ಅಪರೂಪದ ಕೃತಿಯೇ ದಾವ್ ದ ಜಿಂಗ್. ಲಾವೋತ್ಸೇ ಬರೆದ ಮೊದಲ ಸಾಲೇ ಹೀಗಿತ್ತು,

“ ಸತ್ಯವನ್ನು ಹೇಳುವುದು ಸಾಧ್ಯವಿಲ್ಲ, ಮತ್ತು ಯಾವುದನ್ನ ಹೇಳಬಹುದೋ ಅದು ಸತ್ಯವಾಗಿ ಉಳಿಯುವುದಿಲ್ಲ.”

ಯಾವ scripture ಕೂಡ ಇಂಥದೊಂದು ಸುಂದರ ಸಾಲಿನಿಂದ ಶುರುವಾದ ಉದಾಹರಣೆಯಿಲ್ಲ. ಲಾವೋತ್ಸೇ ಏನು ಹೇಳುತ್ತಿದ್ದಾನೆಂದರೆ “ ಈ ಒಂದು ಸಾಲನ್ನು ನೀವು ಅರ್ಥ ಮಾಡಿಕೊಳ್ಳುವಿರಾದರೆ, ಮುಂದೆ ಈ ಪುಸ್ತಕವನ್ನ ಓದುವ ಅವಶ್ಯಕತೆಯಿಲ್ಲ.” ಈ ಒಂದು ಸಾಲನ್ನು ಅರ್ಥ ಮಾಡಿಕೊಂಡರೆ ಎಲ್ಲವನ್ನೂ ಅರ್ಥಮಾಡಿಕೊಂಡಂತೆ ಎಂದು ಹೇಳಿ, ಏನನ್ನೂ ಹೇಳದೆ ಎಲ್ಲವನ್ನೂ ಹೇಳಿದ ಲಾವೋತ್ಸೇ.

“ ತಾವೋ ನ್ನ ಹೇಳಬಹುದಾದರೆ, ಅದು ತಾವೋ ಅಲ್ಲ” ತಾವೋ ನ್ನ ಹೇಳಿದ ಕ್ಷಣದಲ್ಲಿಯೇ ನೀವು ಅದನ್ನ ಸುಳ್ಳಾಗಿಸುತ್ತಿದ್ದೀರಿ. ಏಕೆಂದರೆ ತಾವೋ ಬಹಳ ಸರಳವಾದದ್ದು ಮತ್ತು ನಾವು ಅದನ್ನು ಹೇಳಲು ಬಳಸುತ್ತಿರುವ ಭಾಷೆ ಬಹಳ ಸಂಕೀರ್ಣವಾದದ್ದು. ಆದ್ದರಿಂದಲೇ ನಾವು ಸತ್ಯದ ಬಗ್ಗೆ ಮಾತನಾಡಿದ ಕ್ಷಣದಲ್ಲಿಯೇ ಅದು ಸುಳ್ಳಾಗಿ ಹೋಗಿರುತ್ತದೆ. ಸತ್ಯ ಎಷ್ಟು ಸರಳವೆಂದರೆ ಅದರ ಕುರಿತಾಗಿ ನೇರವಾಗಿ ಏನು ಹೇಳುವುದೂ ಸಾಧ್ಯವಿಲ್ಲ, ಕೇವಲ ಅದನ್ನು ಹಲವು ಬಗೆಯಲ್ಲಿ ಸೂಚಿಸಬಹುದು. ಆದ್ದರಿಂದಲೇ ನಾನು ಸತ್ಯವನ್ನು ಹೇಳಲಾರೆ ಕೇವಲ ಆ ದಾರಿಯನ್ನು ಸೂಚಿಸುತ್ತೇನೆ ಎಂದು ಬುದ್ಧ ಹೇಳಿದ್ದು. “ನಮ್ಮ ಪದಗಳಿಗೆ ಅಂಟಿಕೊಳ್ಳಬೇಡಿ, ಅದು ಚಂದ್ರನನ್ನು ತೋರಿಸುವ ಬೆರಳು ಅಷ್ಟೇ” ಎಂದು ಝೆನ್ ಮಾಸ್ಟರ್ ಹೇಳುವುದೂ ಇದನ್ನೇ. ನೆನಪಿರಲಿ, ಬೆರಳು ಚಂದ್ರನನ್ನು ತೋರಿಸುತ್ತಿದೆಯೆನೋ ಹೌದು ಆದರೆ ಆ ಬೆರಳೇ ಚಂದ್ರ ಅಲ್ಲ, ಚಂದ್ರನಿಗೂ ಬೆರಳಿಗೂ ಯಾವ ಸಂಬಂಧವೂ ಇಲ್ಲ. ಬೆರಳು ಚಂದ್ರನೂರಿನ ದಾರಿಯನ್ನು ಸೂಚಿಸುವ ದಿಕ್ಸೂಚಿ ಮಾತ್ರ. ಚಂದ್ರನನ್ನು ನಾವೇ ಕಾಣಬೇಕು.

Leave a Reply