ಭಯವನ್ನು ಮುಟ್ಟು ಮಾತನಾಡಿಸುವಾಗ । ಜಿಡ್ಡು ಕಂಡ ಹಾಗೆ…

“ಭಯದಿಂದ ಹೇಗೆ ಮುಕ್ತರಾಗುವುದು?” ಎನ್ನುವುದು ಅಷ್ಟು ಮುಖ್ಯವಲ್ಲ. ಭಯದಿಂದ ಪಾರಾಗುವುದಕ್ಕೆ ನೀವು, ಒಂದು ವಿಧಾನವನ್ನ, ಒಂದು ತಂತ್ರವನ್ನ, ಒಂದು ದಾರಿಯನ್ನ ಹುಡುಕುತ್ತಿದ್ದೀರಾದರೆ, ನೀವು ಭಯದ ಸುಳಿಯಲ್ಲಿ ಇನ್ನಿಲ್ಲದಂತೆ ಸಿಕ್ಕಿಹಾಕಿಕೊಳ್ಳುತ್ತೀರಿ! ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ: ಚಿದಂಬರ ನರೇಂದ್ರ

ದೈಹಿಕವಾಗಿ, ಭೌತಿಕವಾಗಿ ನಾವು ಅನುಭವಿಸುವ ಹೆದರಿಕೆ ಒಂದು ಬಗೆಯದು. ಅಕಸ್ಮಾತ್ ಆಗಿ ನೀವು ಹಾವನ್ನು ನೋಡಿದಾಗ, ಅಥವಾ ಒಂದು ಕಾಡು ಪ್ರಾಣಿ ನಿಮಗೆ ಎದುರಾದಾಗ ನೀವು ಸಹಜವಾಗಿ ಅನುಭವಿಸುವ ತಲ್ಲಣ ಇದೆಯಲ್ಲ ಅದು ಸಾಮಾನ್ಯವಾದದ್ದು, ಆರೋಗ್ಯಕರವಾದದ್ದು ಮತ್ತು ನೈಸರ್ಗಿಕವಾದದ್ದು. ಹಾಗೆ ನೋಡಿದರೆ ಅದು ನಿಜವಾದ ಭಯ ಅಲ್ಲ, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮ್ಮೊಳಗೆ ಹುಟ್ಟಿಕೊಂಡಿರುವ ತೀವ್ರವಾದ ಬಯಕೆ, ಇದು ಪ್ರಾಣಿಗಳಲ್ಲಿ, ಮನುಷ್ಯರಲ್ಲಿ ಬಹಳ ಸಹಜ ರಕ್ಷಣಾತ್ಮಕ ಪ್ರಕ್ರಿಯೆ.

ಆದರೆ ಮಾನಸಿಕವಾಗಿ ನಾವು ಇತರರಿಂದ, ಅನೇಕ ಬಗೆಯ ಸವಾಲುಗಳಿಂದ ಬಯಸುವ ರಕ್ಷಣೆ, ಎಲ್ಲವೂ ನಾವು ಬಯಸುವ ರೀತಿಯಲ್ಲಿಯೇ ನಿರ್ದಿಷ್ಟವಾಗಿರಬೇಕು, ಖಚಿತವಾಗಿರಬೇಕು ಎನ್ನುವ ನಮ್ಮ ಬಯಕೆ ನಿಜವಾದ ಭಯವನ್ನು ಹುಟ್ಟಿಸುತ್ತದೆ. ಸದಾ ಖಚಿತತೆಯನ್ನೇ ಹುಡುಕುವ, ಬಯಸುವ ಮನಸ್ಸು ಜೀವವಿಲ್ಲದಂಥ ಮನಸ್ಸು, ಏಕೆಂದರೆ ಬದುಕಿನಲ್ಲಿ ಯಾವುದೂ ಖಚಿತವಲ್ಲ, ಯಾವುದೂ ಶಾಶ್ವತವಲ್ಲ.

ನೀವು ಭಯದೊಂದಿಗೆ ನೇರವಾಗಿ ಮುಖಾಮುಖಿಯಾದಾಗ, ನೀವು ನಿಜವಾದ ಭಯವನ್ನ ನೇರವಾಗಿ ಮುಟ್ಟಿದಾಗ, ನಿಮ್ಮ ದೇಹದ ನರಗಳು, ಇಂದ್ರಿಯಗಳು ಪ್ರತಿಕ್ರಿಯೆಗೆ ಮುಂದಾಗುತ್ತವೆ, ಆಗ ನಿಮ್ಮ ಮನಸ್ಸು ತನ್ನನ್ನು ತಾನು ಪದಗಳಲ್ಲಿ ಮುಚ್ಚಿಟ್ಟುಕೊಂಡು ರಕ್ಷಿಸಿಕೊಳ್ಳುವುದಿಲ್ಲ, ಬೇರೆ ಯಾವುದೋ ಕ್ರಿಯೆಯಲ್ಲಿ ತೊಡಗಿಸಿಕೊಂಡು ಪಲಾಯನ ಮಾಡುವುದಿಲ್ಲ, ನೇರವಾಗಿ ಅದು ಭಯವನ್ನು ಎದುರಿಸುತ್ತದೆ. ಆಗ ಅಲ್ಲಿ ಭಯವನ್ನು ಎದುರಿಸುವವ ಮತ್ತು ಭಯ ಎನ್ನುವ ಸಂಗತಿಯ ನಡುವೆ ಯಾವುದೇ ಪ್ರತ್ಯೇಕತೆ (division) ಇಲ್ಲ. ಪಲಾಯನ ಮಾಡಬಯಸುವ ಮನಸ್ಸು ಮಾತ್ರ ತನ್ನನ್ನು ಭಯದಿಂದ ಪ್ರತ್ಯೇಕಿಸಿಕೊಳ್ಳುತ್ತದೆ. ಭಯದೊಡನೆ ನೇರ ಸಂಪರ್ಕಕ್ಕೆ ಬಂದಾಗ, ನೇರವಾಗಿ ಮುಖಾಮುಖಿಯಾದಾಗ, ಭಯವನ್ನು ಗಮನಿಸುವವ ಮತ್ತು ನಾನು ಭಯಗ್ರಸ್ತನಾಗಿದ್ದೇನೆ ಎನ್ನುವ ಇಬ್ಬರು ವ್ಯಕ್ತಿಗಳು ಇರುವುದೇ ಇಲ್ಲ. ಹಾಗಾಗಿ ನೀವು ಬದುಕಿನ ಅಥವಾ ಇನ್ನಾವುದೇ ಸಂಗತಿಯ ಜೊತೆ ನೇರ ಸಂಪರ್ಕದಲ್ಲಿರುವಾಗ ಭಯ ಅಥವಾ ಇನ್ನಾವುದೇ ಸಮಸ್ಯೆಯನ್ನು ಪ್ರತ್ಯೇಕಮಾಡಿ ನೋಡುವುದು ಸಾಧ್ಯವಾಗುವುದೇ ಇಲ್ಲ. ಯಾವಾಗ ನಾವು ಸಮಸ್ಯೆಯ ಜೊತೆ ನೇರ ಸಂಪರ್ಕದಲ್ಲಿರದೇ, ಅದನ್ನು ಪ್ರತ್ಯೇಕಿಸಿ ನೋಡುತ್ತೇವೆಯೋ ಆಗ ಸ್ಪರ್ಧೆ, ಮಹತ್ವಾಕಾಂಕ್ಷೆ, ಭಯ ಮುಂತಾದವು ಹುಟ್ಟಿಕೊಳ್ಳುತ್ತವೆ.

ಹಾಗಾಗಿ “ ಭಯದಿಂದ ಹೇಗೆ ಮುಕ್ತರಾಗುವುದು?” ಎನ್ನುವುದು ಅಷ್ಟು ಮುಖ್ಯವಲ್ಲ. ಭಯದಿಂದ ಪಾರಾಗುವುದಕ್ಕೆ ನೀವು, ಒಂದು ವಿಧಾನವನ್ನ, ಒಂದು ತಂತ್ರವನ್ನ, ಒಂದು ದಾರಿಯನ್ನ ಹುಡುಕುತ್ತಿದ್ದೀರಾದರೆ, ನೀವು ಭಯದ ಸುಳಿಯಲ್ಲಿ ಇನ್ನಿಲ್ಲದಂತೆ ಸಿಕ್ಕಿಹಾಕಿಕೊಳ್ಳುತ್ತೀರಿ. ಆದರೆ ನೀವು ಹಸಿವೆಯನ್ನು ಎದುರಿಸುವ ಹಾಗೆ, ಕೆಲಸ ಕಳೆದುಕೊಳ್ಳುವ ಸ್ಥಿತಿಯನ್ನ ನೇರವಾಗಿ ಎದುರಿಸುವ ಹಾಗೆ, ನೇರವಾಗಿ ಭಯವನ್ನ ಮುಟ್ಟಿ ಮಾತನಾಡಿಸುವುದು ಸಾಧ್ಯವಾದರೆ, ಭಯದೊಡನೆ ನೇರ ಸಂಪರ್ಕ ಸಾಧ್ಯವಾಗುವುದಾದರೆ, ಆಗ ಭಯವನ್ನು ನಿವಾರಿಸಿಕೊಳ್ಳಲು ನೀವು ಏನೋ ಒಂದು ಮಾಡುತ್ತೀರಿ. ಈ ಏನೋ ಒಂದು ಮಾಡುವಾಗ ನೀವು, ಕೇವಲ ಒಂದು ನಿರ್ದಿಷ್ಟ ಭಯವನ್ನಷ್ಟೇ ಅಲ್ಲ, ಎಲ್ಲ ಭಯವನ್ನೂ ನಿವಾರಿಸಿಕೊಳ್ಳುತ್ತೀರಿ. ಭಯ ಕೇವಲ ನಿಮ್ಮ ಮನಸ್ಸಿನ ಸಂಗತಿ ಮಾತ್ರವಾಗಿರುವಾಗ, ಭಯದೊಡನೆ ನಿಮಗೆ ನೇರಸಂಪರ್ಕವಿಲ್ಲದಿರುವಾಗ ನೀವು ಹೊಸ ಹೊಸ ಭಯಗಳನ್ನು ಹುಟ್ಟಿಸಿಕೊಳ್ಳುತ್ತಲೇ ಇರುತ್ತೀರಿ.

Leave a Reply