ಝೆನ್ ಮಾಸ್ಟರ್ ರಿಂಝೈ ಕಲಿಸಿದ ಪಾಠ : ಓಶೋ ವ್ಯಾಖ್ಯಾನ

ರಿಂಝೈನ ದನಿ ಮತ್ತು ಅಲ್ಲಿ ಕುಳಿತಿದ್ದ ಜನರ ಮೌನ ಆ ವ್ಯಕ್ತಿಯ ಮೇಲೆ ಮಿಂಚಿನಂತೆ ಪ್ರಭಾವ ಬೀರಿತು. ಆ ಕ್ಷಣದಲ್ಲಿ ಅವನಿಗೆ ರಿಂಝೈನ ಮಾತಿನೊಳಗಿನ ಅಂತಃಕರಣ ಸ್ಪಷ್ಟವಾಗಿ ಅರ್ಥವಾಯಿತು. ಎಷ್ಟು ನಿಜ ಇದು, ನಾನು ಬಾಗಿಲು ಶೂಗಳ ಮೇಲೆ ಕೋಪಿಸಿಕೊಳ್ಳಬಹುದಾದರೆ ಯಾಕೆ ಅವುಗಳನ್ನ ಪ್ರೀತಿಸುವುದು ಸಾಧ್ಯವಿಲ್ಲ? ಅವನು ಬಾಗಿಲ ಬಳಿ ಹೋಗಿ ತಲೆ ತಗ್ಗಿಸಿ ಕುಳಿತುಕೊಂಡ ~ ಓಶೋ | ಅನುವಾದ : ಚಿದಂಬರ ನರೇಂದ್ರ

ಒಮ್ಮೆ ಒಬ್ಬ ವ್ಯಕ್ತಿ ಝೆನ್ ಮಾಸ್ಟರ್ ರಿಂಝೈ ನನ್ನು ಕಾಣಲು ಬಂದ. ಬಹುಶಃ ಅವತ್ತು ಆ ವ್ಯಕ್ತಿ ಕೆಟ್ಟ ಮೂಡ್ ನಲ್ಲಿದ್ದ, ಆ ಮನುಷ್ಯ ರಿಂಝೈನ ಮನೆಗೆ ಬರುತ್ತಿದ್ದಂತೆಯೇ ತನ್ನ ಶೂ ಗಳನ್ನು ತೆಗೆದು ಬಿಸಾಡಿದ, ರಿಂಝೈನ ಮನೆಯ ಬಾಗಿಲನ್ನ ಜೋರಾಗಿ ಮುಚ್ಚಿದ. ಇದನ್ನು ಗಮನಿಸಿದ ಝೆನ್ ಮಾಸ್ಟರ್ ಆ ವ್ಯಕ್ತಿಯನ್ನ ಬಾಗಿಲಲ್ಲೇ ತಡೆದ, “ ಮನೆಯ ಒಳಗೆ ಬರಬೇಡ, ಮೊದಲು ನಿನ್ನ ಶೂ ಮತ್ತು ಆ ಬಾಗಿಲಿನಿಂದ ಕ್ಷಮೆ ಕೇಳು.”

“ ಏನು ಹೇಳುತ್ತಿದ್ದೀಯ ನೀನು? ಝೆನ್ ಮಾಸ್ಟರ್ ಗಳು ಹುಚ್ಚರೆಂಬ ವಿಷಯ ಕೇಳಿದ್ದೆ. ಅದು ವದಂತಿ ಅಲ್ಲ ನಿಜ ಎಂದು ಈಗ ಗೊತ್ತಾಗುತ್ತಿದೆ. ನಾನ್ಯಾಕೆ ಬಾಗಿಲು ಮತ್ತು ಶೂ ಗಳ ಕ್ಷಮೆ ಕೇಳಬೇಕು? ಕೇಳಿದರೂ ಕೂಡ ಏನು ಪ್ರಯೋಜನ? ಅದು ಮೂರ್ಖತನ “ ಆ ವ್ಯಕ್ತಿ ಝೆನ್ ಮಾಸ್ಟರ್ ರಿಂಝೈ ಮೇಲೆ ಹರಿಹಾಯ್ದ.

“ ಮನೆಯ ಒಳಗೆ ಕಾಲಿಡಬೇಡ. ಹೊರಟು ಹೋಗು ಇಲ್ಲಿಂದ. ನೀನು ಬಾಗಿಲು ಮತ್ತು ಶೂ ಗಳ ಮೇಲೆ ನಿನ್ನ ಸಿಟ್ಟು ತೋರಿಸಬಹುದಾದರೆ, ಅವುಗಳ ಕ್ಷಮೆ ಕೇಳುವುದರಲ್ಲಿ ಏನು ಸಮಸ್ಯೆ? ನಿನಗೆ ಸಿಟ್ಟು ಬಂದಿರಬಹುದು ಆದರೆ ಆ ಸಿಟ್ಟನ್ನು ಬಾಗಿಲು ಮತ್ತು ಶೂ ಗಳ ಮೇಲೆ ತೋರಿಸುವುದು ಮೂರ್ಖತನ ಎಂದು ನಿನಗೆ ಗೊತ್ತಾಗಲಿಲ್ಲವೆ? ನೀನು ನಿನ್ನ ಸಿಟ್ಟನ್ನ ಬಾಗಿಲಿನೊಂದಿಗೆ, ಶೂ ಗಳೊಂದಿಗೆ ರಿಲೇಟ್ ಮಾಡಿಕೊಳ್ಳಬಹುದಾದರೆ ಯಾಕೆ ಪ್ರೀತಿ, ಕರುಣೆ, ಕ್ಷಮೆಗಳನ್ನ ಅವುಗಳೊಂದಿಗೆ ರಿಲೇಟ್ ಮಾಡಿಕೊಳ್ಳುವುದು ಸಾಧ್ಯವಿಲ್ಲ? ಎಲ್ಲವೂ ಸಂಬಂಧಗಳೇ ಅಲ್ಲವೆ? ಸಿಟ್ಟು ಕೂಡ ಒಂದು ಬಗೆಯ ಸಂಬಂಧ. ನಿನಗೆ ಸಿಟ್ಟು ಬಂದಾಗ ನೀನು ನಿನ್ನ ಸಿಟ್ಟನ್ನ ಬಾಗಿಲಿನೊಂದಿಗೆ ಹಂಚಿಕೊಂಡು ಸಂಬಂಧವೊಂದನ್ನು ಕಟ್ಟಿಕೊಂಡೆ. ಈಗ ಅದೇ ಸಂಬಂಧ ಕಾರಣವಾಗಿ ಕ್ಷಮೆ ಯಾಕೆ ಕೇಳಬಾರದು? ನೀನು ಕ್ಷಮೆ ಕೇಳುವುದರಿಂದ ಬಾಗಿಲು ಮತ್ತು ಶೂ ಗಳಿಗೆ ಪ್ರಯೋಜನವಾಗದೇ ಇರಬಹುದು ಆದರೆ ನಿನಗೆ ಖಂಡಿತ ಪ್ರಯೋಜನವಾಗುತ್ತದೆ. ನೀನು ಬಾಗಿಲಿನೊಂದಿಗೆ ವ್ಯವಹರಿಸಿದ್ದು ತಪ್ಪುರೀತಿ, ಅನೈತಿಕ, ಅಮಾನವೀಯ. ಹೋಗು ಮೊದಲು ಕ್ಷಮೆ ಕೇಳು. ಇಲ್ಲವಾದರೆ ನನ್ನ ಮನೆಯೊಳಗೆ ಕಾಲಿಡಲೇ ಬೇಡ.” ಝೆನ್ ಮಾಸ್ಟರ್ ರಿಂಝೈ ಗರ್ಜಿಸಿದ.

ರಿಂಝೈನ ದನಿ ಮತ್ತು ಅಲ್ಲಿ ಕುಳಿತಿದ್ದ ಜನರ ಮೌನ ಆ ವ್ಯಕ್ತಿಯ ಮೇಲೆ ಮಿಂಚಿನಂತೆ ಪ್ರಭಾವ ಬೀರಿತು. ಆ ಕ್ಷಣದಲ್ಲಿ ಅವನಿಗೆ ರಿಂಝೈನ ಮಾತಿನೊಳಗಿನ ಅಂತಃಕರಣ ಸ್ಪಷ್ಟವಾಗಿ ಅರ್ಥವಾಯಿತು. ಎಷ್ಟು ನಿಜ ಇದು, ನಾನು ಬಾಗಿಲು ಶೂಗಳ ಮೇಲೆ ಕೋಪಿಸಿಕೊಳ್ಳಬಹುದಾದರೆ ಯಾಕೆ ಅವುಗಳನ್ನ ಪ್ರೀತಿಸುವುದು ಸಾಧ್ಯವಿಲ್ಲ? ಅವನು ಬಾಗಿಲ ಬಳಿ ಹೋಗಿ ತಲೆ ತಗ್ಗಿಸಿ ಕುಳಿತುಕೊಂಡ. ಅವನ ಕಣ್ಣುಗಳಿಂದ ಕಣ್ಣಿರು ಧಾರಾಕಾರವಾಗಿ ಹರಿಯತೊಡಗಿತು. ಅವನು ತನ್ನ ಶೂಗಳನ್ನು ಎದೆಗೆ ಒತ್ತಿಕೊಂಡಾಗ ಅವನಿಗೆ ಜ್ಞಾನೋದಯವಾಯಿತು. ಝೆನ್ ಮಾಸ್ಟರ್ ರಿಂಝೈ ಆ ವ್ಯಕ್ತಿಯನ್ನು ಬಲವಾಗಿ ಅಪ್ಪಿಕೊಂಡ. ಇಬ್ಬರ ಕಣ್ಣಲ್ಲೂ ಕಣ್ಣೀರು ಹರಿಯುತ್ತಲೇ ಇತ್ತು.

ಇದು ಸಾಮರಸ್ಯ, ಸಮನ್ವಯ. ಸಾಮರಸ್ಯ ಇಲ್ಲದೇ ಪ್ರಾರ್ಥನೆ ಹೇಗೆ ಸಾಧ್ಯ? ಅಸ್ತಿತ್ವದೊಂದಿಗೆ ಸಾಮರಸ್ಯ ಇಲ್ಲದಿರುವಾಗ ಝೆನ್ ಸಾಧ್ಯವಾಗುವುದಾದರೂ ಹೇಗೆ?

Leave a Reply