ಅಣ್ಣ – ತಮ್ಮನ ಪರಸ್ಪರ ಕಾಳಜಿಯ ಕತೆ… ~ ಮೂಲ: ಇದ್ರಿಶ್ ಶಾಹ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಂದಾನೊಂದು ಕಾಲದಲ್ಲಿ ಇಬ್ಬರು ಅಣ್ಣತಮ್ಮಂದಿರಿದ್ದರು. ಇಬ್ಬರೂ ತಮಗಿದ್ದ ಒಂದೇ ಹೊಲವನ್ನೂ ಕೂಡಿ ಸಾಗುವಳಿ ಮಾಡಿತ್ತಿದ್ದರು. ಹೊಲದಲ್ಲಿ ಬೆಳೆದ ಫಸಲನ್ನು ಸಮವಾಗಿ ಹಂಚಿಕೊಳ್ಳುತ್ತಿದ್ದರು.
ಒಂದು ರಾತ್ರಿ ತಮ್ಮನಿಗೆ ನಿದ್ರೆಯಿಂದ ಎಚ್ಚರವಾದಾಗ ಒಂದು ವಿಷಯ ಕಾಡತೊಡಗಿತು. ‘ ನನ್ನ ಅಣ್ಣನಿಗೆ ಮದುವೆಯಾಗಿದೆ, ಇಬ್ಬರು ಮಕ್ಕಳಿದ್ದಾರೆ, ಅವನ ಸಂಸಾರ ದೊಡ್ಡದು, ಅವನ ಅವಶ್ಯಕತೆಗಳು ನನಗಿಂತ ಹೆಚ್ಚು, ಆದ್ದರಿಂದ ನಾವು ಬೆಳೆದ ಫಸಲನ್ನು ಸಮವಾಗಿ ಹಂಚಿಕೊಳ್ಳುವುದು ಅಷ್ಟು ಸರಿ ಅಲ್ಲ.’ ಆದರೆ ತನಗೆ ಕಡಿಮೆ ಪಾಲು ಕೊಡು ಎಂದರೆ ಅಣ್ಣ ಒಪ್ಪಲಿಕ್ಕಿಲ್ಲ, ಅವ ಬಹಳ ಉದಾರಿ ಮತ್ತು ನ್ಯಾಯದ ಮನುಷ್ಯ. ಹೀಗೆ ಯೋಚನೆ ಬಂದದ್ದೆ ತಡ, ತಮ್ಮ ತಾನು ಪಾಲಿನ ಸಂಗ್ರಹದ ಒಂದು ಮೂಟೆ ಕಾಳನ್ನು ಅಣ್ಣನ ಉಗ್ರಾಣಕ್ಕೆ ಯಾರಿಗೂ ಗೊತ್ತಾಗದ ಹಾಗೆ ಸಾಗಿಸಿ ಮತ್ತೆ ಬಂದು ಮಲಗಿಕೊಂಡ.
ಅದೇ ರಾತ್ರಿ ಸ್ವಲ್ಪ ಹೊತ್ತಿನ ನಂತರ ಅಣ್ಣನೂ ನಿದ್ದೆಯಿಂದ ಎದ್ದ. ಅವನ ಮನಸ್ಸಿನಲ್ಲಿ ತಮ್ಮನ ಕುರಿತಾದ ಕಾಳಜಿಯ ವಿಷಯಗಳು ಮೂಡತೊಡಗಿದವು. ‘ ನನಗೇನು ಮದುವೆಯಾಗಿದೆ, ಮಕ್ಕಳಿದ್ದಾರೆ, ನಾನು ಸಂಸಾರ ಸುಖವನ್ನು ಅನುಭವಿಸುತ್ತಿದ್ದೇನೆ. ಆದರೆ ನನ್ನ ತಮ್ಮನಿಗೆ ಇನ್ನೂ ಮದುವೆಯಾಗಬೇಕಿದೆ. ಭವಿಷ್ಯದಲ್ಲಿ ಅವನ ಸಂಸಾರ ಬೆಳೆದಾಗ, ಅವನ ಖರ್ಚುಗಳು ಹೆಚ್ಚಾಗುತ್ತವೆ. ಆದ್ದರಿಂದ ಅವನು ತನ್ನ ಭವಿಷ್ಯಕ್ಕಾಗಿ ಈಗಿಂದಲೇ ಕೂಡಿಡಬೇಕು. ಅಣ್ಣನಾಗಿ ನಾನು ಅವನ ಭವಿಷ್ಯಕ್ಕಾಗಿ ಏನಾದರೂ ಮಾಡಬೇಕು.’ ಅಣ್ಣನ ಮನಸ್ಸಿನಲ್ಲಿ ಈ ವಿಚಾರ ಬಂದದ್ದೆ ತಡ, ಅವನು ತನ್ನ ಸಂಗ್ರಹದ ಒಂದು ಮೂಟೆ ಕಾಳನ್ನು ತಮ್ಮನ ಸಂಗ್ರಹಕ್ಕೆ ಯಾರಿಗೂ ಗೊತ್ತಾಗದ ಹಾಗೆ ಸಾಗಿಸಿ, ಮತ್ತೆ ನಿದ್ದೆ ಹೋದ.
ಮರುದಿನ ಬೆಳಿಗ್ಗೆ, ತಾವು ಒಂದು ಒಂದು ಮೂಟೆ ಕಾಳನ್ನು ಬೇರೆಡೆಗೆ ಸಾಗಿಸಿದ್ದರೂ, ತಮ್ಮ ಸಂಗ್ರಹದಲ್ಲಿನ ಕಾಳಿನ ಮೂಟೆಗಳ ಸಂಖ್ಯೆ ಕಡಿಮೆಯಾಗದಿದ್ದದ್ದನ್ನು ಕಂಡು ಅಣ್ಣ ತಮ್ಮ ಇಬ್ಬರಿಗೂ ಆಶ್ಚರ್ಯವಾಯಿತು. ಆದರೆ ಹೀಗೆಕಾಯಿತು ಎನ್ನುವುದು ಇಬ್ಬರಿಗೂ ಗೊತ್ತಾಗಲಿಲ್ಲ. ಅಣ್ಣ ತಮ್ಮ ಇಬ್ಬರೂ ಪ್ರತಿ ವರ್ಷ ಹೀಗೆ ಮಾಡುತ್ತ ಮುಂದುವರೆದರು. ಅವರ ಕಣಜದಲ್ಲಿ ಕಾಳಿನ ಮೂಟೆಗಳ ಸಂಖ್ಯೆ ಯಾವತ್ತೂ ಕಡಿಮೆ ಆಗಲೇ ಇಲ್ಲ. ಮತ್ತು ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅವರಿಬ್ಬರೂ ತಮಗೆ ಸರಿ ಅನಿಸಿದ್ದನ್ನು ಮಾಡುತ್ತ ಕೂಡಿ ಬಾಳಿದರು.