ಓಶೋ ಹೇಳಿದ ಜುನೈದನ ಕತೆ

ಜುನೈದ್ ಅಲ್ಲಾಹ್ ನ ಭಕ್ತಿ ಮತ್ತು ಪ್ರೀತಿಯನ್ನ ಕಲಿತಿದ್ದು ಒಬ್ಬ ಕ್ಷೌರಿಕನಿಂದ. ಹೇಗೆ ಗೊತ್ತೇ? ಓಶೋ ಹೇಳಿದ ಕಥೆ ಓದಿ… | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಒಂದು ಪುಟ್ಟ ಕಥೆ ನೆನಪಾಗುತ್ತಿದೆ.

ಇದು ನಡೆದದ್ದು ಮೆಕ್ಕಾದಲ್ಲಿ. ಒಮ್ಮೆ ಸೂಫೀ ಫಕೀರ ಜುನೈದ್, ಮೆಕ್ಕಾ ಗೆ ಬಂದಿದ್ದ. ಅವನಿಗೆ ಕ್ಷೌರ ಮಾಡಿಸಿಕೊಳ್ಳಬೇಕಿತ್ತು ಆದರೆ ಕ್ಷೌರಿಕನಿಗೆ ಕೊಡಲು ಅವನ ಹತ್ತಿರ ಹಣ ಇರಲಿಲ್ಲ. ಅವನು ಕ್ಷೌರಿಕನ ಅಂಗಡಿಗೆ ಹೋದಾಗ ಅಲ್ಲಿ ಬಹಳಷ್ಟು ಜನ ತಮ್ಮ ಸರದಿಗಾಗಿ ಕಾಯುತ್ತಿದ್ದರು. ಜುನೈದ್, ಕ್ಷೌರಿಕನ ಹತ್ತಿರ ಹೋಗಿ ಮನವಿ ಮಾಡಿಕೊಂಡ, ಈಗ ತನ್ನ ಹತ್ತಿರ ಹಣ ಇಲ್ಲವೆಂದೂ , ಮುಂದಿನ ವಾರ ತನ್ನ ಹತ್ತಿರ ಹಣ ಇರುವಾಗ ಹಣ ಕೊಡುತ್ತೇನೆ, ಈಗ ದಯವಿಟ್ಟು ಕ್ಷೌರ ಮಾಡು ಎಂದು ಕೇಳಿಕೊಂಡ. ಆದರೆ ಕ್ಷೌರಿಕ, ಹಣ ಇಲ್ಲದೇ ತಾನು ಯಾರಿಗೂ ಕ್ಷೌರ ಮಾಡುವುದಿಲ್ಲವೆಂದು ಜುನೈದ್ ನ ಮನವಿಯನ್ನ ಸಾರಾಸಗಟಾಗಿ ತಿರಸ್ಕರಿಸಿಬಿಟ್ಟ. “ ಅಲ್ಲಾಹ್ ನ ಹೆಸರಿನಲ್ಲಿ ನನಗೆ ಕ್ಷೌರ ಮಾಡು, ಮುಂದಿನ ವಾರ ಖಂಡಿತ ಹಣ ಕೊಡುತ್ತೇನೆ.” ಜುನೈದ್ ಮತ್ತೆ ಮನವಿ ಮಾಡಿದ.

ಅಲ್ಲಾಹ್ ನ ಹೆಸರು ಕೇಳುತ್ತಲೇ ಆ ಕ್ಷೌರಿಕ, ತಾನು ಕ್ಷೌರ ಮಾಡುತ್ತಿದ್ದ ವ್ಯಕ್ತಿಗೆ ಮನವಿ ಮಾಡಿಕೊಂಡ, “ ನೀನು ದಯವಿಟ್ಟು ಸ್ವಲ್ಪ ಕಾಯಬೇಕು ಗೆಳೆಯ, ಅಲ್ಲಾಹ್ ನಿಗಾಗಿ ನಾನು ಈ ಫಕೀರನ ಕ್ಷೌರ ಮಾಡಬೇಕಿದೆ.” ಎನ್ನುತ್ತ, ಜುನೈದ್ ನ ಕ್ಷೌರವನ್ನು ಅತ್ಯಂತ ಪ್ರೀತಿ, ಭಕ್ತಿಯಿಂದ ಮಾಡಿ ಗೌರವದಿಂದ ಬೀಳ್ಕೊಟ್ಟ.

ಮುಂದಿನ ವಾರ ಜುನೈದ್ ನ ಬಳಿ ಒಂದಿಷ್ಟು ಹಣ ಸಂಗ್ರಹ ಆದಾಗ, ಅವನು ಕ್ಷೌರಿಕನ ಅಂಗಡಿಗೆ ಹೋಗಿ ಕ್ಷೌರಿಕನಿಗೆ ಹಣ ಕೊಡಲು ಮುಂದಾದ. ಜುನೈದ್ ಹಣ ಮುಂದೆ ಮಾಡಿದ್ದನ್ನ ಕಂಡು ಕ್ಷೌರಿಕ ಕೆಂಡಾಮಂಡಲನಾದ. “ ಅವತ್ತು ನೀನು ಕ್ಷೌರ ಮಾಡಲು ಕೇಳಿಕೊಂಡಿಕೊಂದ್ದು ಅಲ್ಲಾಹ್ ನಿಗಾಗಿ, ಆದರೆ ಇವತ್ತು ಹಣ ತೆಗೆದುಕೊಂಡು ಬಂದಿರುವೆಯಲ್ಲ ನಾಚಿಕೆಯಿಲ್ಲವಾ ನಿನಗೆ? ಕ್ಷೌರಿಕ, ಜುನೈದ್ ನ ಬಯ್ದು ಅಲ್ಲಿಂದ ಹೊರಗಟ್ಟಿಬಿಟ್ಟ.

ಮುಂದೆ ಜೀವನವಿಡೀ ಜುನೈದ್ ತನ್ನ ಶಿಷ್ಯರಿಗೆ ಹೇಳುತ್ತಿದ್ದ, ನಾನು ಅಲ್ಲಾಹ್ ನ ಭಕ್ತಿ ಮತ್ತು ಪ್ರೀತಿಯನ್ನ ಕಲಿತಿದ್ದು ಒಬ್ಬ ಕ್ಷೌರಿಕನಿಂದ ಎಂದು.

ಬದುಕಿನ ಸಣ್ಣ ಸಣ್ಣ ಸಂಗತಿಗಳಲ್ಲಿ, ದೊಡ್ಡ ದೊಡ್ಡ ತಿಳುವಳಿಕೆಗಳು ಅಡಕಗೊಂಡಿರುತ್ತವೆ. ಯಾರಿಗೆ ಅವನ್ನು ಗಮನಿಸುವುದು ಸಾಧ್ಯವಾಗುತ್ತದೋ ಅವರಿಗೆ ಬದುಕಿನ ಕುರಿತಾದ ತಿಳುವಳಿಕೆ ಲಭ್ಯವಾಗುತ್ತದೆ. ಸದಾ ಅರಿವಿನ ಸ್ಥಿತಿಯಲ್ಲಿದ್ದಾಗ, ಬದುಕಿನ ಪ್ರತಿ ಅನುಭವವೂ ನಮಗೆ ಒಂದೊಂದು ತಿಳುವಳಿಕೆಯನ್ನು ಸಾಧ್ಯ ಮಾಡುತ್ತದೆ. ಪ್ರಜ್ಞೆ ಇಲ್ಲದಿರುವಾಗ ಮನುಷ್ಯ, ಬೆಳಕು ಮನೆ ಬಾಗಿಲವರೆಗೂ ಬಂದರೂ, ಬಾಗಿಲು ಮುಚ್ಚಿಕೊಂಡುಬಿಡುತ್ತಾನೆ.

Leave a Reply