ಕೆಲವೊಮ್ಮೆ ಸಿಟ್ಟು ತೀವ್ರವಾದಾಗ ನಾವು ಇನ್ನೊಬ್ಬರಿಗೆ ನೋವು ಮಾಡುವ ಪ್ರಯತ್ನ ಮಾಡುತ್ತೇವೆ ಆದರೆ ಕೊನೆಗ ನೋಡಿದಾಗ ಸ್ವತಃ ನಾವೇ ನೋವಿಗೆ ಒಳಗಾಗಿರುತ್ತೇವೆ. ಒಂದು ಸುಖೀ ಬದುಕಿಗಾಗಿ ಕೆಲವು ಘಟನೆಗಳನ್ನು, ಕೆಲವು ಸಂಗತಿಗಳನ್ನು, ಕೆಲವು ಜನರನ್ನ, ಕೆಲವು ಸಂಬಂಧಗಳನ್ನ, ಕೆಲವು ವಿಷಯಗಳನ್ನ ನಿರ್ಲಕ್ಷ ಮಾಡಿಬಿಡುವುದೇ ಒಳ್ಳೆಯದು… । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ನಿಮ್ಮೊಳಗಿರುವ ಕೋಪ ಇನ್ನೊಬ್ಬರನ್ನು ಘಾಸಿ ಮಾಡುವುದಕ್ಕಿಂತ ಹೆಚ್ಚಾಗಿ ನಿಮಗೇ ನೋವನ್ನುಂಟು ಮಾಡುವುದು ಜಾಸ್ತಿ.
ಒಂದು ಸಂಜೆ ಒಬ್ಬ ಕಾರ್ಪೆಂಟರ್ ತನ್ನ ದಿನದ ಕೆಲಸ ಮುಗಿಸಿ ವರ್ಕಶಾಪ್ ನ ಬಾಗಿಲು ಹಾಕಿಕೊಂಡು ಮನೆಗೆ ಹೋದ. ಸ್ವಲ್ಪ ಸಮಯದ ನಂತರ ಒಂದು ಹಸಿದ ವಿಷಸರ್ಪ ಅವನ ವರ್ಕಶಾಪ್ ಪ್ರವೇಶಿಸಿತು. ಅದು ವರ್ಕಶಾಪ್ ನ ಉದ್ದಗಲಕ್ಕೂ ಓಡಾಡುತ್ತ ಆಹಾರಕ್ಕಾಗಿ ಹುಡುಕಾಡತೊಗಿತು.
ಹಸಿವೆಯಿಂದ ಕಂಗಾಲಾಗಿದ್ದ ಸರ್ಪಕ್ಕೆ ಸಿಟ್ಟು ಕೂಡ ತೀವ್ರವಾಗಿತ್ತು. ಆಹಾರ ಹುಡುಕಾಡುವಾಗ ಸರ್ಪ ಎರಡು ಅಲುಗಿನ ಗರಗಸವೊಂದಕ್ಕೆ ಮೈ ತಾಗಿಸಿಕೊಂಡು ಸ್ವಲ್ಪ ಗಾಯ ಮಾಡಿಕೊಂಡಿತು. ಇದರಿಂದಾಗಿ ಮೊದಲೇ ಹಸಿವೆಯಿಂದ ಬಳಲುತ್ತಿದ್ದ ಸರ್ಪಕ್ಕೆ ಸಿಟ್ಟು ಇನ್ನೂ ಹೆಚ್ಚಾಯಿತು. ಸರ್ಪ ಸಿಟ್ಟಿನಿಂದ ಗರಗಸವನ್ನು ಒಮ್ಮೆ ಜೋರಾಗಿ ಕಚ್ಚಿತು. ಸರ್ಪದ ಬಾಯಿಯಿಂದ ರಕ್ತ ಹರಿಯಲಾರಂಭಿಸಿತು. ಸರ್ಪದಲ್ಲಿ ಸೇಡು ತೀರಿಸಿಕೊಳ್ಳುವ ಭಾವನೆ ಇನ್ನೂ ತೀವ್ರವಾಯಿತು. ಗರಗಸವನ್ನು ಕೊಂದುಬಿಡಬೇಕೆಂದು ಸರ್ಪ , ಸಿಟ್ಟಿನಿಂದ ಗರಗಸವನ್ನು ಬಲವಾಗಿ ಸುತ್ತಿಕೊಂಡಿತು.
ಮರುದಿನ ಕಾರ್ಪೆಂಟರ್ ತನ್ನ ವರ್ಕಶಾಪ್ ನ ಬಾಗಿಲು ತೆರೆದಾಗ ಅವನಿಗೆ ಅಲ್ಲಿ, ಗರಗಸಕ್ಕೆ ಸುತ್ತಿಕೊಂಡಿದ್ದ ಒಂದು ರಕ್ತಸಿಕ್ತ ಸತ್ತ ವಿಷಸರ್ಪ ಕಾಣಿಸಿತು.
ಸರ್ಪವನ್ನು ಕೊಂದದ್ದು ಬೇರೆ ಯಾರೂ ಅಲ್ಲ, ಅದರ ಕೋಪವೇ ಅದರ ಸಾವಿಗೆ ಕಾರಣವಾಯ್ತು. ಕೆಲವೊಮ್ಮೆ ಸಿಟ್ಟು ತೀವ್ರವಾದಾಗ ನಾವು ಇನ್ನೊಬ್ಬರಿಗೆ ನೋವು ಮಾಡುವ ಪ್ರಯತ್ನ ಮಾಡುತ್ತೇವೆ ಆದರೆ ಕೊನೆಗ ನೋಡಿದಾಗ ಸ್ವತಃ ನಾವೇ ನೋವಿಗೆ ಒಳಗಾಗಿರುತ್ತೇವೆ.
ಒಂದು ಸುಖೀ ಬದುಕಿಗಾಗಿ ಕೆಲವು ಘಟನೆಗಳನ್ನು, ಕೆಲವು ಸಂಗತಿಗಳನ್ನು, ಕೆಲವು ಜನರನ್ನ, ಕೆಲವು ಸಂಬಂಧಗಳನ್ನ, ಕೆಲವು ವಿಷಯಗಳನ್ನ ನಿರ್ಲಕ್ಷ ಮಾಡಿಬಿಡುವುದೇ ಒಳ್ಳೆಯದು.
ಎಲ್ಲ ಘಟನೆಗಳಿಗೂ, ಎಲ್ಲ ಸಂಗತಿಗಳಿಗೂ ನಾವು ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಇಂಥದೊಂದು ಪ್ರಸಂಗ ಎದುರಾದಾಗ, ಒಂದು ಹೆಜ್ಜೆ ಹಿಂದೆ ಸರಿದು ಈ ಪ್ರಸಂಗಕ್ಕೆ ನಮ್ಮ ಪ್ರತಿಕ್ರಿಯೆ ಎಷ್ಟು ಅವಶ್ಯಕ ಎನ್ನುವುದನ್ನ ಒಮ್ಮೆ ಗಾಢವಾಗಿ ಯೋಚಿಸಬೇಕು.
ಜನ ನಮಗೆ ನೋವನ್ನುಂಟು ಮಾಡಿದರೂ, ಅವರನ್ನು ನಾವು ಅಂತಃಕರಣದಿಂದ ಗಮನಿಸುವುದು ಹೆಚ್ಚು ಉತ್ತಮ.
ಬದಲಾಗಲು ನಿರಾಕರಿಸುವ ಜನರನ್ನ ನಮ್ಮ ಮೌನ ಮತ್ತು ಪ್ರಾರ್ಥನೆಯಿಂದ ನಿಭಾಯಿಸುವುದು ನಮಗೆ ಶ್ರೇಯಸ್ಕರ.
ಓ ದೇವರೇ, ನನ್ನಿಂದ ಯಾರಿಗಾದರೂ ನೋವಾದರೆ, ಅವರ ಕ್ಷಮೆ ಕೇಳುವ ಧೈರ್ಯವನ್ನೂ, ವಿನಯವನ್ನೂ ನನಗೆ ದಯಪಾಲಿಸು.