ಗುರ್ಜೆಫ್ ಮತ್ತು ಬೆನೆಟ್ ವೃತ್ತಾಂತ: ಓಶೋ ವ್ಯಾಖ್ಯಾನ

ಗುರ್ಜೇಫ್, ಬೆನೆಟ್ ಗೆ ಏನು ಹೇಳಿದ? ಬೆನೆಟ್ ಏನು ಕೇಳಿಸಿಕೊಂಡ? ಗುರ್ಜೇಫ್ ಏನೂ ಹೇಳಲಿಲ್ಲ. ವಾಸ್ತವದಲ್ಲಿ ಪ್ರಶ್ನೆ, ಮಾಸ್ಟರ್ ಉತ್ತರಿಸಬೇಕು ಎನ್ನುವುದಾಗಿರಲೇ ಇಲ್ಲ! ~ ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

ಗುರ್ಜೇಫ್ ಪಶ್ಚಿಮದ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾಗ ಅವನನ್ನು ನೋಡಲು, ಅವನಿಂದ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಲು ಸಾಕಷ್ಟು ಜನ ಬುದ್ಧಿಜೀವಿಗಳು ಬರುತ್ತಿದ್ದರು. ತನ್ನ ಜೊತೆ ಚರ್ಚೆ ಮಾಡಲು ಬಂದವರಿಗೆಲ್ಲ ಗುರ್ಜೇಫ್, “ ಮೊದಲು ಈ ಹೊರಗಿನ ಬಯಲಲ್ಲಿ ಒಂದು ತೆಗ್ಗು ತೋಡಿ, ಚರ್ಚೆ ಏನಿದ್ದರೂ ಆಮೇಲೆ” ಎಂದು ಹೇಳುತ್ತಿದ್ದ. ನಾವು ಬೌದ್ಧಿಕ ಸಂವಾದಕ್ಕೆ ಬಂದವರು, ಆದರೆ ಈ ಮನುಷ್ಯ ನಮಗೆ ತೆಗ್ಗು ತೋಡಲು ಹೇಳುತ್ತಿದ್ದಾನಲ್ಲ ಎಂದು ಆ ಬುದ್ಧಿಜೀವಿಗಳೆಲ್ಲ ವಿಚಲಿತರಾಗುತ್ತಿದ್ದರು. ಆದರೆ ಗುರ್ಜೇಫ್ ತುಂಬ ಕಠಿಣ ಮನುಷ್ಯ, “ನನ್ನಿಂದ ಉತ್ತರ ಬೇಕಾದರೆ ನೀವು ತೆಗ್ಗು ತೋಡಲೇಬೇಕು” ಎಂದು ಪಟ್ಟು ಹಿಡಿಯುತ್ತಿದ್ದ.

ಒಮ್ಮೆ ಪಾಶ್ಚಿಮಾತ್ಯ ಜಗತ್ತಿನ ಖ್ಯಾತ ವಿದ್ವಾಂಸ ಬೆನೆಟ್, ಗುರ್ಜೇಫ್ ನ ನೋಡಲು ಬಂದ. ದೇವರ ಬಗ್ಗೆ, ಬದುಕಿನ ಅರ್ಥದ ಬಗ್ಗೆ ಬೆನೆಟ್ ಚರ್ಚೆ ಮಾಡಲು ಅಲ್ಲಿಗೆ ಬಂದಿದ್ದ. “ಅದನ್ನೆಲ್ಲ ಈ ಕ್ಷಣ ಮರೆತುಬಿಡು, ಬಯಲಲ್ಲಿ ಮೊದಲು ಒಂದು ತೆಗ್ಗು ತೋಡು, ಆಮೇಲೆ ಮಾತನಾಡೋಣ” ಎಂದು ಹೇಳಿ ಗುರ್ಜೇಫ್ ಹೋಗಿಬಿಟ್ಟ.

ಗುರ್ಜೇಫ್ ನ ಮಾತು ಕೇಳಿ ಬೆನೆಟ್ ಒಂದು ಗಳಿಗೆ ಹಿಂದೆ ಮುಂದೆ ನೋಡಿದನಾದರೂ, “ ಹೇಗೂ ಇಷ್ಟು ದೂರ ಬಂದಿದ್ದೇನೆ. ಗುರ್ಜೇಫ್ ಹೇಳಿದ್ದನ್ನ ಮಾಡಿ ನೋಡೋಣ, ನಾನಾದರೂ ಕಳೆದುಕೊಳ್ಳುವುದು ಏನಿದೆ” ಎಂದು ವಿಚಾರ ಮಾಡಿ ಬಯಲಲ್ಲಿ ತೆಗ್ಗು ತೋಡಲು ಶುರು ಮಾಡಿದ. ಸ್ವಲ್ಪ ಹೊತ್ತಿನ ನಂತರ ತನ್ನ ಸಿಗಾರ್ ಸೇದುತ್ತ ಅಲ್ಲಿಗೆ ಬಂದ ಗುರ್ಜೇಫ್, “ ಸಂಜೆಗೂ ಮೊದಲು ಇಷ್ಟು ಜಾಗಗಲ್ಲಿ ತೆಗ್ಗು ಮಾಡಬೇಕು” ಎಂದು ಬೆನೆಟ್ ಗೆ ಸೂಚನೆ ಕೊಟ್ಟ.

ಸಂಜೆಯ ಹೊತ್ತಿಗೆ ಬೆನೆಟ್ ಪೂರ್ತಿ ದಣಿದು ಹೋಗಿದ್ದ. ಬಹುಶ್ರುತ ವಿದ್ವಾಂಸನಾಗಿದ್ದ ಬೆನೆಟ್ ತನ್ನ ಇಡೀ ಬದುಕನ್ನ ಪುಸ್ತಕಗಳ ಜೊತೆ ಕಳೆದಿದ್ದ. ಅವನಿಗೆ ಯಾವ ಕಠಿಣ ಕೆಲಸ ಮಾಡಿದ ಅನುಭವ ಇರಲಿಲ್ಲ. ಅದರಲ್ಲೂ ತೆಗ್ಗು ತೋಡುವಂತ ಕೆಲಸವನ್ನು ಆತ ತನ್ನ ಕನಸುಮನಸಿನಲ್ಲೂ ಯೋಚಿಸಿರಲಿಲ್ಲ. ಸೂರ್ಯ ಮುಳುಗುತ್ತಿರುವುದನ್ನು ನೋಡಿ ಇನ್ನು ತನ್ನ ಕೆಲಸ ಮುಗಿಯಿತು ಎಂದು ಅವನಿಗೆ ಸಮಾಧಾನವಾಯಿತು.
ಇನ್ನಾದರೂ ತನಗೆ ಗುರ್ಜೇಫ್ ನ ಜೊತೆ ಮಾತನಾಡುವ ಅವಕಾಶ ಸಾಧ್ಯವಾಗುತ್ತದೆ ಎಂದು ಅವನು ನಿರಾಳನಾಗಿ, ದೂರದಲ್ಲಿ ಕುಳಿತು ಸಿಗಾರ್ ಸೇದುತ್ತಿದ್ದ ಗುರ್ಜೇಫ್ ನ ಕೂಗಿದ, “ ನೀನು ಹೇಳಿದ ಹಾಗೆ ತೆಗ್ಗು ತೋಡಿದ್ದೇನೆ, ಇನ್ನಾದರೂ ನನ್ನ ಪ್ರಶ್ನೆಗಳಿಗೆ ಉತ್ತರಿಸುವೆಯಾ?”

ಬೆನೆಟ್ ನ ದನಿ ಕೇಳಿ ಅಲ್ಲಿಗೆ ಬಂದ ಗುರ್ಜೇಫ್, “ ನೀನು ತೋಡಿರುವ ತೆಗ್ಗನ್ನ ಮಣ್ಣಿನಿಂದ ತುಂಬಿ ಮತ್ತೆ ಮೊದಲಿನಂತೆ ಮಾಡು.” ಎಂದು ಹೇಳಿ ಮತ್ತೆ ಸಿಗಾರ್ ಸೇದುವುದರಲ್ಲಿ ಮಗ್ನನಾದ.

ಆ ಹೊತ್ತಿಗಾಗಲೇ ಬೆನೆಟ್ ತುಂಬ ದಣಿದಿದ್ದನಾದರೂ ಅವನು ತನ್ನ ಛಲ ಬಿಡಲಿಲ್ಲ, ಗುರ್ಜೇಫ್ ಹೇಳಿದ ಕೆಲಸ ಮಾಡಲೇಬೇಕು ಎಂದು ನಿರ್ಧರಿಸಿ ಮತ್ತೆ ತನ್ನನ್ನು ತಾನು ಕೆಲಸದಲ್ಲಿ ತೊಡಗಿಸಿಕೊಂಡ. ಊಟ, ತಿಂಡಿ ವಿಶ್ರಾಂತಿ, ಕೊನೆಗೆ ಒಂದು ಕಾಫೀ ಬ್ರೇಕ್ ಕೂಡ ಇಲ್ಲದಂತೆ ಬೆನೆಟ್ ಕೆಲಸ ಮಾಡುತ್ತ ಗುರ್ಜೇಫ್ ಹೇಳಿದ ಹಾಗೆ ತಾನು ತೋಡಿದ ತೆಗ್ಗನ್ನ ಮತ್ತೆ ಅದೇ ಮುಣ್ಣಿನಿಂದ ತುಂಬಿ, ಆ ಜಾಗವನ್ನು ಮತ್ತೆ ಮೊದಲಿನಂತೆ ಮಾಡಿದ.

ಬೆನೆಟ್ ನ ಕೆಲಸವನ್ನು ಗುರ್ಜೇಫ್ ಸಿಗಾರ್ ಸೇದುತ್ತ ಅಲ್ಲಿಯೇ ನಿಂತ ಗಮನಿಸುತ್ತಿದ್ದ. ಅಷ್ಟರಲ್ಲಾಗಲೇ ಮಧ್ಯರಾತ್ರಿಯಾಗಿತ್ತು, ಚಂದ್ರ ತನ್ನ ಪೂರ್ಣ ಚೆಲುವಿನೊಂದಿಗೆ ಆಕಾಶದಲ್ಲಿ ತುಂಬಿಕೊಂಡಿದ್ದ. ಸುತ್ತಲೂ ಒಂದು ದಿವ್ಯಮೌನ ಆವರಿಸಿಕೊಂಡಿತ್ತು. ಈ ಅದ್ಭುತ ಸಮಯವನ್ನ ಬೆನೆಟ್ ತನ್ನ ಅಟೋಬಯಾಗ್ರಾಫಿಯಲ್ಲಿ ಹೀಗೆ ದಾಖಲು ಮಾಡುತ್ತಾನೆ……

“ನಾನು ತುಂಬ ದಣಿದಿದ್ದೆ, ನನಗೆ ಗೊತ್ತಿಲ್ಲ ಎಲಿಂದಲೋ ಬಂದ ಒಂದು ಶಕ್ತಿಶಾಲಿ ಮೌನ ನನ್ನನ್ನು ತುಂಬಿಕೊಂಡಿತು. ಆ ಮೌನ ನನ್ನೊಳಗೆ ಇಳಿಯುತ್ತಿದ್ದಂತೆಯೇ ನನಗೆ ದಿಗ್ಭ್ರಮೆಯಾಯಿತು. ದೂರದಲ್ಲಿ ನಿಂತಿದ್ದ ಗುರ್ಜೇಫ್ ನ ಮಾತು ಸ್ಪಷ್ಟವಾಗಿ ನನ್ನನ್ನು ಅಪ್ಪಳಿಸಿತು, ಗುರ್ಜೇಫ್ ಹೇಳುತ್ತಿದ್ದ, “ ಬೆನೆಟ್ ನನ್ನ ಉತ್ತರ ನಿನಗೆ ಕೇಳಿಸುತ್ತಿದೆಯಾ? ನಿನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಂಡೆಯಾ? ಈಗ ಹೋಗಿ ವಿಶ್ರಾಂತಿ ಮಾಡು.”

ಆದರೆ ಗುರ್ಜೇಫ್, ಬೆನೆಟ್ ಗೆ ಏನು ಹೇಳಿದ? ಬೆನೆಟ್ ಏನು ಕೇಳಿಸಿಕೊಂಡ? ಗುರ್ಜೇಫ್ ಏನೂ ಹೇಳಲಿಲ್ಲ. ವಾಸ್ತವದಲ್ಲಿ ಪ್ರಶ್ನೆ, ಮಾಸ್ಟರ್ ಉತ್ತರಿಸಬೇಕು ಎನ್ನುವುದಾಗಿರಲೇ ಇಲ್ಲ. ಪ್ರಶ್ನೆ ಶಿಷ್ಯ ಮೌನವನ್ನ ಹೇಗೆ ಸಾಧಿಸುವುದು ಎನ್ನುವುದಾಗಿತ್ತು…… ಬೆನೆಟ್ ತುಂಬ ದಣಿದಿದ್ದ, ಅವನಲ್ಲಿ ಥಿಂಕ್ ಮಾಡುವಷ್ಟು ಶಕ್ತಿಯೂ ಇರಲಿಲ್ಲ. ಅವನ ಮೈಂಡ್ ಸಂಪೂರ್ಣವಾಗಿ ಬರಿದಾಗಿತ್ತು. ಇಂಥ ಒಂದು ದಿವ್ಯಮೌನವನ್ನು ಧರಿಸಿದಾಗ ಬೆನೆಟ್ ಗೆ ಗುರ್ಜೇಫ್ ನ ಉತ್ತರದ ಅವಶ್ಯಕತೆಯೇ ಇರಲಿಲ್ಲ. ಬೆನೆಟ್ ಗೆ ಉತ್ತರಗಳು ತಾನೇ ತಾನಾಗಿ ದೊರಕುತ್ತ ಹೋದವು. ಹೀಗೆ ಒಂದು ಅಪರೂಪದ ಕಲಿಕಾ ಕಾರ್ಯಕ್ರಮ ಸರಳವಾಗಿ ಮುಗಿದುಹೋಗಿತ್ತು.

Leave a Reply