ನೀವು ಸಾಕಷ್ಟು ಸಂಗತಿಗಳನ್ನ ನಿಮ್ಮ ಚಕ್ಕಡಿಯಿಂದ ಕೆಳಗೆ ಇಳಿಸಬಹುದು. ನಿಮ್ಮ ಚಕ್ಕಡಿ ತುಂಬಿಕೊಂಡಿದೆ. ನಿಮ್ಮ ಮೈಂಡ್ ನ ನೀವು ಖಾಲೀ ಮಾಡುತ್ತಿದ್ದಂತೆಯೇ ನಿಮಗೆ ಹಾರುವುದು ಸಾಧ್ಯವಾಗುತ್ತದೆ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ
ಒಬ್ಬ ಸೂಫೀ ದಾಖಲು ಮಾಡಿರುವ ನೆನಪುಗಳನ್ನು ಓದುತ್ತಿದ್ದೆನೆ.
ಒಮ್ಮೆ ಸೂಫಿ ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದಾಗ ಒಂದು ನಿರ್ಜನ ರಸ್ತೆಯಲ್ಲಿ ಎತ್ತಿನ ಚಕ್ಕಡಿಯಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ರೈತನನ್ನು ನೋಡುತ್ತಾನೆ. ಚಕ್ಕಡಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ ಕೆಸರಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ.
ಆ ರೈತ ತನ್ನ ಚಕ್ಕಡಿಯಲ್ಲಿ ಸೇಬಿನ ಹಣ್ಣುಗಳ ಮೂಟೆಯನ್ನ ಸಾಗಿಸುತ್ತಿದ್ದ. ಅವನು ಪ್ರಯಾಣಿಸುತ್ತಿದ್ದ ದಾರಿ ಕಲ್ಲುಗಳಿಂದ ಕೂಡಿದ ಕಚ್ಚಾ ರಸ್ತೆಯಾದ್ದರಿಂದ ಬಹುಶಃ ನಡುವೆ ಎಲ್ಲೋ ಹಣ್ಣುಗಳ ಮೂಟೆ ಬಿಚ್ಚಿಕೊಂಡು ದಾರಿಯುದ್ದಕ್ಕೂ ಒಂದೊಂದಾಗಿ ಹಣ್ಣುಗಳನ್ನ ಬೀಳಿಸಿಕೊಂಡು ಬಂದಿದ್ದ. ಆದರೆ ಮೂಟೆ ಬಿಚ್ಚಿಕೊಂಡಿದ್ದು ಮತ್ತು ದಾರಿಯಲ್ಲಿ ಹಣ್ಣುಗಳು ಬಿದ್ದು ಹೋಗಿದ್ದರ ಬಗ್ಗೆ ಅವನಿಗೆ ಯಾವ ಅರಿವೂ ಇರಲಿಲ್ಲ.
ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ತನ್ನ ಚಕ್ಕಡಿಯನ್ನ ಹೊರತೆಗೆಯಲು ಹರಸಾಹಸ ಮಾಡಿ ವಿಫಲನಾದ ರೈತ, ಕೊನೆಗೆ ತನ್ನ ಚಕ್ಕಡಿಯಲ್ಲಿದ್ದ ಹಣ್ಣಿನ ಮೂಟೆಗಳನ್ನು ಕೆಳೆಗೆ ಇಳಿಸಿದರೆ, ಎತ್ತುಗಳಿಗೆ ಭಾರ ಕಡಿಮೆಯಾಗಿ ಅವು ಸುಲಭವಾಗಿ ಚಕ್ಕಡಿಯನ್ನ ಕೆಸರಿನಿಂದ ಹೊರಗೆ ಎಳೆಯಬಹುದೆಂದು ಯೋಚಿಸಿ, ಹಣ್ಣಿನ ಮೂಟೆಗಳನ್ನು ಇಳಿಸಲು ಚಕ್ಕಡಿಯ ಹಿಂಭಾಗಕ್ಕೆ ಬರುತ್ತಾನೆ. ರೈತನ ಆಶ್ಚರ್ಯಕ್ಕೆ ಚಕ್ಕಡಿಯಲ್ಲಿ ಕೆಲವೇ ಕೆಲವು ಹಣ್ಣುಗಳು ಉಳಿದುಕೊಂಡಿವೆ. ಹಣ್ಣಿನ ಮೂಟೆ ಬಿಚ್ಚಿಕೊಂಡು ಹಣ್ಣುಗಳು ದಾರಿಯಲ್ಲಿ ಬಿದ್ದು ಹೋಗಿದ್ದರ ಬಗ್ಗೆ ಆಗ ಅವನಿಗೆ ಗೊತ್ತಾಗುತ್ತದೆ.
ಚಕ್ಕಡಿಯ ಭಾರ ಕಡಿಮೆ ಮಾಡಿದರೆ ಚಕ್ಕಡಿಯನ್ನ ಕೆಸರಿನಿಂದ ಹೊರಗೆ ಎಳೆಯಬಹುದು ಎನ್ನುವ ಅವನ ಕೊನೆಯ ಉಪಾಯವೂ ವಿಫಲವಾದಾಗ ರೈತ ಬಹಳ ನಿರಾಶೆಯಿಂದ ಕೂಗುತ್ತಾನೆ, “ ಅಯ್ಯೋ! ಇಳಿಸಲು ಇಲ್ಲಿ ಯಾವ ಭಾರವೂ ಇಲ್ಲ, ಇನ್ನೂ ನಾನು ಚಕ್ಕಡಿಯ ಭಾಗಗಳನ್ನೇ ಒಂದೊಂದಾಗಿ ಕಳಚಬೇಕು ! “
ಅದೃಷ್ಟಕ್ಕೆ ನೀವು ಇಂಥ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿಲ್ಲ. ನೀವು ಸಾಕಷ್ಟು ಸಂಗತಿಗಳನ್ನ ನಿಮ್ಮ ಚಕ್ಕಡಿಯಿಂದ ಕೆಳಗೆ ಇಳಿಸಬಹುದು. ನಿಮ್ಮ ಚಕ್ಕಡಿ ತುಂಬಿಕೊಂಡಿದೆ. ನಿಮ್ಮ ಮೈಂಡ್ ನ ನೀವು ಖಾಲಿ ಮಾಡುತ್ತಿದ್ದಂತೆಯೇ ನಿಮಗೆ ಹಾರುವುದು ಸಾಧ್ಯವಾಗುತ್ತದೆ.
ಮಾಸ್ಟರ್ ಜೋಶು ಝೆನ್ ಕಲಿಯಲು ಶುರು ಮಾಡಿದ್ದು ಅರವತ್ತನೇ ವಯಸ್ಸಿನಲ್ಲಿ. ಜ್ಞಾನೋದಯವಾದಾಗ ಅವನಿಗೆ ಬರೊಬ್ಬರಿ ಎಂಭತ್ತು ವರ್ಷ ವಯಸ್ಸು. ತನ್ನ ನೂರಾ ಇಪ್ಪತ್ತನೇ ವಯಸ್ಸಿನವರೆಗೆ ಆತ ಝೆನ್ ಪಾಠ ಮಾಡಿದ.
ಒಮ್ಮೆ ಒಬ್ಬ ಶಿಷ್ಯ, ಜೋಶುನಿಗೆ ಪ್ರಶ್ನೆ ಮಾಡಿದ.
“ ನನ್ನ ಮನಸ್ಸು ಖಾಲಿಯಾಗಿದೆಯಲ್ಲ, ಏನು ತಾನೇ ಮಾಡಲಿ ಇನ್ನು? “
“ಮನಸ್ಸಲ್ಲಿರೋದನ್ನ ಹೊರ ಹಾಕು “ ಜೋಶು ಉತ್ತರಿಸಿದ.
“ ಆದರೆ ನನ್ನ ಮನಸ್ಸು ಖಾಲಿ, ಏನನ್ನ ಹೊರ ಹಾಕಲಿ? “ ಶಿಷ್ಯ ಮತ್ತೆ ಪ್ರಶ್ನೆ ಮಾಡಿದ.
“ ಹೌದಾ, ಹಾಗಾದರೆ ಅದನ್ನೇ ಹೊತ್ತು ನಡೆ “
ಜೋಶು ಕಣ್ಣು ಮಿಟುಕಿಸಿದ.