ಪ್ರೀತಿಯಿಂದ ಮಾಡುವ ಕೆಲಸದಲ್ಲಿ ದಣಿವಿಲ್ಲ. ಎಲ್ಲಿ ನಿರೀಕ್ಷೆ ಇರೋದಿಲ್ವೋ ಅಲ್ಲಿ ನಿರಾಶೆಯೂ ಇರೋದಿಲ್ಲ! ~ ಜಿಡ್ಡು ಕೃಷ್ಣಮೂರ್ತಿ । ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ಸಂದರ್ಶಕ: ಮಾತನಾಡೋದು ನಿಮ್ಮ ಹವ್ಯಾಸವೇ? ಮಾತಾಡೀ ಆಡೀ ನಿಮಗೆ ದಣಿವಾಗೋದಿಲ್ವೇ? ನೀವು ಯಾಕೆ ಇದನ್ನು ಮಾಡ್ತಿದ್ದೀರಿ?
ಜಿಡ್ಡು ಕೃಷ್ಣಮೂರ್ತಿ: ನೀವು ಈ ಪ್ರಶ್ನೆ ಕೇಳಿದ್ದು ಒಳ್ಳೇದಾಯ್ತು. ನಿಮಗೂ ಗೊತ್ತಿರಬೇಕು, ನಾವು ಯಾವುದನ್ನ ಪ್ರೀತಿಸ್ತೀವೋ ಆ ಕೆಲಸದಿಂದ ನಮಗೆ ದಣಿವಾಗೋದಿಲ್ಲ. ನಾವು ಪ್ರೀತಿಯಿಂದ ಯಾವುದಾದರೊಂದು ಕೆಲಸ ಮಾಡಿದರೆ, ಆ ಕೆಲಸದಿಂದ ಯಾವ ಫಲಿತಾಂಶವನ್ನೂ ನಾವು ಬಯಸೋದಿಲ್ಲ. ನಮಗೆ ಆ ಕೆಲಸ ಮಾಡೊದಷ್ಟೇ ಬೇಕಾಗಿರುತ್ತೆ. ಅದರಿಂದ ಸಿಗುವ ಖುಷಿ ಅನುಭವಿಸ್ತೀವಿ ಹೊರತು, ಅದರಿಂದ ಲಾಭವಾಗಲಿ ಅಂತಲ್ಲ. ನಮ್ಮ ಅಗತ್ಯ ಪೂರೈಸಲಿ ಅಂತಲ್ಲ. ಹಾಗೆ ನಿರೀಕ್ಷೆ ಇಟ್ಕೊಂಡು ಕೆಲಸ ಮಾಡಿದ್ರೆ ಅದು ಪ್ರೀತಿಯಿಂದ ಮಾಡಿದ ಹಾಗೆ ಆಗೋದಿಲ್ಲ. ಯಾವುದೋ ಒಂದನ್ನು ಪೂರೈಸಿಕೊಳ್ಳೋದಕ್ಕೆ ಮಾಡುವ ಕೆಲಸ ನಮ್ಮಲ್ಲಿ ಒಂದು ಥರದ ಉದ್ವಿಗ್ನತೆಯನ್ನ ಹುಟ್ಟು ಹಾಕಿರುತ್ತೆ. ಫಲಿತಾಂಶ ಪಡೆದೇ ತೀರುವ ತುರ್ತು, ಲಾಭದ ಅನಿವಾರ್ಯತೆಯ ಹೊರೆ ನಮ್ಮ ಹೆಗಲ ಮೇಲಿರುತ್ತೆ. ಆಗ ನಮಗೆ ದಣಿವಾಗುತ್ತೆ,
ಆದರೆ ಪ್ರೀತಿಯಿಂದ ಮಾಡುವ ಕೆಲಸ ಹಾಗಲ್ಲ. ಎಲ್ಲಿ ನಿರೀಕ್ಷೆ ಇರೋದಿಲ್ವೋ ಅಲ್ಲಿ ನಿರಾಶೆಯೂ ಇರೋದಿಲ್ಲ!
ನಾನು ಒಂದಷ್ಟು ದಿನ ಮಾತಾಡೋದನ್ನು ನಿಲ್ಲಿಸಿ ನೋಡಿದೆ. ಅದರಿಂದ ಯಾವ ನಷ್ಟವೂ ಆಗಲಿಲ್ಲ. ನಿಮಗೆ ಅರ್ಥವಾಯ್ತೇ? ನಾನು ಮಾತಾಡೋದು ನನ್ನ ಖುಷಿಗಾಗಿ, ಪ್ರೀತಿಯಿಂದ; ಲಾಭಕ್ಕಾಗಿ, ನಿರೀಕ್ಷೆಯಿಂದ ಅಲ್ಲ. ಪ್ರೀತಿಯಿಂದ ಕೆಲಸ ಮಾಡುವಾಗ ಹೃದಯ ಹೇಳಿದಂತೆ ಕೇಳ್ತೀವಿ ಹೊರತು ಮನಸ್ಸು ಮುಂದಿಡುವ ಅಗತ್ಯ ಪಟ್ಟಿಯನ್ನಲ್ಲ! ಆದ್ದರಿಂದ್ಲೇ ನನಗೆ ಮಾತು ಹವ್ಯಾಸವೂ ಅಲ್ಲ, ಅದರಿಂದ ದಣಿವಾಗೋದೂ ಇಲ್ಲ! ಮಾತು ನನ್ನ ಪ್ರೀತಿ; ಮತ್ತು ಸಂತಸಕ್ಕೆ ದಾರಿ.