ಅಂತಃಕರಣ ಗೆಲ್ಲೋದು ಹೀಗೆ… : ಓಶೋ ವ್ಯಾಖ್ಯಾನ

ರಾಮಕೃಷ್ಣ ಒಬ್ಬ ಅಶಿಕ್ಷಿತ ವ್ಯಕ್ತಿಯಾಗಿದ್ದರೆ ಕೇಶವಚಂದ್ರ ಬಂಗಾಲ ಅಷ್ಟೇ ಅಲ್ಲ ಇಡೀ ಭಾರತ ಕಂಡ ಅತ್ಯಂತ ಪ್ರಖರ ಚಿಂತಕರು, ವಿದ್ವಾಂಸರೂ ಆಗಿದ್ದರು. ಕೇಶವಚಂದ್ರರ ತರ್ಕ ಸಾಮರ್ಥ್ಯ ಮತ್ತು ಪಾಂಡಿತ್ಯದ ಎದುರು ರಾಮಕೃಷ್ಣರು ಸೋಲುವುದು ಶತಸಿದ್ಧ ಎಂದೇ ಎಲ್ಲರ ಅಭಿಮತವಾಗಿತ್ತು. ಆದರೆ… ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ

ರಾಮಕೃಷ್ಣರಾಗಲೀ, ಚೈತನ್ಯರಾಗಲೀ ಅಥವಾ ಮೀರಾ ಆಗಲಿ ಇವರೆಲ್ಲ ತುಂಬು ಅಂತಃಕರಣದ ಭಾವಜೀವಿಗಳು. ಒಮ್ಮೆ ಬಂಗಾಲದ ಅತ್ಯಂತ ಪ್ರಖರ ಬುದ್ಧಿಜೀವಿಯಾಗಿದ್ದ ಕೇಶವ ಚಂದ್ರರು, ರಾಮಕೃಷ್ಣರನ್ನ ಭೇಟಿಯಾಗಲು ದಕ್ಷಿಣೇಶ್ವರಕ್ಕೆ ಬಂದರು. ಅವರ ಉದ್ದೇಶ ಕೇವಲ ರಾಮಕೃಷ್ಣರನ್ನು ಭೇಟಿಯಾಗುವುದಾಗಿರಲಿಲ್ಲ ಅವರ ಉದ್ದೇಶ ರಾಮಕೃಷ್ಣರನ್ನ ತಮ್ಮ ತರ್ಕದಿಂದ ಸೋಲಿಸುವುದಾಗಿತ್ತು. ರಾಮಕೃಷ್ಣ ಒಬ್ಬ ಅಶಿಕ್ಷಿತ ವ್ಯಕ್ತಿಯಾಗಿದ್ದರೆ ಕೇಶವಚಂದ್ರ ಬಂಗಾಲ ಅಷ್ಟೇ ಅಲ್ಲ ಇಡೀ ಭಾರತ ಕಂಡ ಅತ್ಯಂತ ಪ್ರಖರ ಚಿಂತಕರು, ವಿದ್ವಾಂಸರೂ ಆಗಿದ್ದರು. ಕೇಶವಚಂದ್ರರ ತರ್ಕ ಸಾಮರ್ಥ್ಯ ಮತ್ತು ಪಾಂಡಿತ್ಯದ ಎದುರು ರಾಮಕೃಷ್ಣರು ಸೋಲುವುದು ಶತಸಿದ್ಧ ಎಂದೇ ಎಲ್ಲರ ಅಭಿಮತವಾಗಿತ್ತು.

ಕೇಶವಚಂದ್ರರು ದಕ್ಷಿಣೇಶ್ವರಕ್ಕೆ ಬಂದಾಗ, ರಾಮಕೃಷ್ಣರು ವಾದದಲ್ಲಿ ಸೋಲುವುದನ್ನ ನೋಡಲು ಕಲಕತ್ತೆಯ ಘಟಾನುಘಟಿ ವಿದ್ವಾಂಸರೆಲ್ಲ ಅಲ್ಲಿ ಸೇರಿದ್ದರು. ಸಭೆಯಲ್ಲಿ ಕೇಶವಚಂದ್ರರು ಬಹಳ ಹುರುಪಿನಿಂದ ತಮ್ಮ ವಾದವನ್ನ ಆರಂಭಿಸಿದರು. ತಮ್ಮ ಅಸ್ಖಲಿತ ಭಾಷಾ ಪ್ರಾವೀಣ್ಯವನ್ನು ಬಳಸುತ್ತ, ತರ್ಕವನ್ನ ಉಪಯೋಗಿಸುತ್ತ ಅದ್ಭುತವಾಗಿ ವಾದ ಮಾಡಲು ಶುರು ಮಾಡಿದರು. ರಾಮಕೃಷ್ಣ ರು ಬಹಳ ಉಮೇದಿನಿಂದ, ಕುತುಹಲದಿಂದ, ಬಹಳ ಆಸಕ್ತಿಯಿಂದ ತಮ್ಮ ವಾದವನ್ನ ಆನಂದಿಸುತ್ತಿರುವುದನ್ನ ಕಂಡು ಸ್ವಲ್ಪ ಹೊತ್ತಿನಲ್ಲಿಯೇ ಕೇಶವಚಂದ್ರರಿಗೆ ಕಳವಳ ಶುರುವಾಯಿತು. ತಾವು ಯಾರನ್ನು ಸೋಲಿಸಲು ಬಂದಿದ್ದರೋ ಅವರೇ ತಮ್ಮ ವಾದವನ್ನು ಆನಂದಿಸುತ್ತಿರುವುದು ಕೇಶವಚಂದ್ರರಿಗೆ ವಿಚಿತ್ರವಾಗಿ ಕಾಣಿಸಿತು. ಕೆಲವೊಮ್ಮೆ ಕೇಶವಚಂದ್ರರು ತಮ್ಮ ವಾದದಲ್ಲಿ ಅದ್ಭುತ ತರ್ಕಗಳನ್ನು ಬಳಸಿದಾಗ ರಾಮಕೃಷ್ಣರು ತಮ್ಮ ಜಾಗದಲ್ಲಿಯೇ ಜಿಗಿದು ಕುಳಿತು ಚಪ್ಪಾಳೆ ಬಾರಿಸುತ್ತ ಕೇಶವಚಂದ್ರರಿಗೆ ಸ್ಪಂದಿಸುತ್ತಿದ್ದರು.

ರಾಮಕೃಷ್ಣರ ವರ್ತನೆಯಿಂದ ಗೊಂದಲಕ್ಕೊಳಗಾದ ಕೇಶವಚಂದ್ರರು, ರಾಮಕೃಷ್ಣರನ್ನು ಕುರಿತು ಮಾತನಾಡಿದರು, “ ನಿಮ್ಮ ವರ್ತನೆ ವಿಚಿತ್ರವಾಗಿದೆ, ನಾನು ನಿಮ್ಮ ನಂಬಿಕೆಗಳಿಗೆ ವಿರುದ್ಧವಾಗಿ ಮಾತನಾಡುತ್ತಿದ್ದೇನೆ, ಅವುಗಳನ್ನ ಖಂಡಿಸುತ್ತಿದ್ದೇನೆ. ಆದರೆ ನೀವು ನನ್ನ ವಾದವನ್ನು ಆನಂದಿಸುತ್ತಿದ್ದೀರಲ್ಲ, ಹಾಗಾದರೆ ನನ್ನ ವಾದವನ್ನ ನೀವು ಒಪ್ಪಿಕೊಳ್ಳುತ್ತೀರಾ ? ಇಲ್ಲವಾದರೆ ನನ್ನ ವಾದಕ್ಕೆ ವಿರುದ್ಧವಾಗಿ ನಿಮ್ಮ ವಾದವನ್ನು ಮಂಡಿಸುತ್ತೀರಾ?”

ರಾಮಕೃಷ್ಣರು ಮಾತನಾಡಿದರು, “ ನಿಮ್ಮ ಅದ್ಭುತ ವಾದವನ್ನು ಕೇಳಿದಾಗ, ನನ್ನ ನಂಬಿಕೆಯಲ್ಲಿ ನನಗೆ ಇನ್ನಷ್ಟು ವಿಶ್ವಾಸ ಮೂಡತೊಡಗಿದೆ. ದೇವರು ಇಲ್ಲದೇ ಇಂಥಹ ಬುದ್ಧಿಮತ್ತೆ ಸಾಧ್ಯವೇ ಇಲ್ಲ. ಇಂಥಹ ಒಂದು ಅದ್ಭುತ ಜ್ಞಾನವನ್ನ ದೇವರು ಮಾತ್ರ ಸೃಷ್ಟಿಸುವುದು ಸಾಧ್ಯ.” ಶುದ್ಧ ಅಂತಃಕರಣದ ಭಾವಜೀವಿಗಳು ಒಂದು ಸಂಗತಿಯನ್ನ ನೋಡುವುದು, ಅರ್ಥಮಾಡಿಕೊಳ್ಳುವುದು ಹೀಗೆ. ರಾಮಕೃಷ್ಣರು ತಮ್ಮ ಮಾತು ಮುಂದುವರೆಸಿದರು, “ ಕೇಶವಚಂದ್ರರೇ, ಬಹಳ ಬೇಗ ನೀವು ನನಗಿಂತಲೂ ದೊಡ್ಡ ಆಸ್ತಿಕರಾಗುತ್ತೀರಿ ಎನ್ನುವ ಬಲವಾದ ನಂಬಿಕೆ ನನ್ನದು. ಇಷ್ಟು ಅಪೂರ್ವವಾದ ಬುದ್ಧಿಮತ್ತೆ, ದೈವವನ್ನ ತಿರಸ್ಕರಿಸುವುದು ಹೇಗೆ ಸಾಧ್ಯ? ನನ್ನಂಥ ದಡ್ಡನಿಗೆ ದಿವ್ಯದ ಸಹವಾಸ ಸಾಧ್ಯವಿರುವಾಗ ನಿಮ್ಮಂಥ ಮೇಧಾವಿ ಈ ದಿವ್ಯದಿಂದ ಹೊರತಾಗುವುದು ಹೇಗೆ ಸಾಧ್ಯ?”

ರಾಮಕೃಷ್ಣರು ಉದ್ವಿಗ್ನರಾಗಲಿಲ್ಲ, ತರ್ಕಗಳನ್ನು ಬಳಸಲಿಲ್ಲ, ಪ್ರಖರ ವಾದ ಮಂಡನೆ ಮಾಡಲಿಲ್ಲ ಕೇವಲ ತಮ್ಮ ಶುದ್ಧ ಅಂತಃಕರಣದಿಂದ ಕೇಶವಚಂದ್ರರ ಮನಸ್ಸು ಗೆದ್ದರು. ರಾಮಕೃಷ್ಣರಿಗೆ ನಮಸ್ಕರಿಸುತ್ತ ಕೇಶವಚಂದ್ರರು ಮಾತನಾಡಿದರು, “ ನನ್ನ ಜೀವನದಲ್ಲಿ ಮೊದಲಬಾರಿಗೆ ನಿಜದ ಆಸ್ತಿಕ ಮನುಷ್ಯನೊಂದಿಗೆ ನನ್ನ ವಾದ ನಿರರ್ಥಕವೆನ್ನುವುದು ಸಾಬೀತಾಗಿದೆ. ನಿಮ್ಮನ್ನು ನೋಡಿದಾಗ, ನಿಮ್ಮ ಕಣ್ಣುಗಳನ್ನ ಗಮನಿಸಿದಾಗ, ನನ್ನೊಂದಿಗಿನ ನಿನ್ಮ ವರ್ತನೆಯನ್ನ ಅರ್ಥಮಾಡಿಕೊಂಡಾಗ ನನಗೆ ಮೊದಲ ಬಾರಿ ದಿವ್ಯದ ಅನುಭವವಾಯ್ತು. ನೀವು ದಿವ್ಯದ ಕುರಿತಾದ ಯಾವ ಸಾಕ್ಷಿಯನ್ನು ನನ್ನ ವಿರುದ್ಧ ಮಂಡಿಸಲಿಲ್ಲ, ಸ್ವತಃ ನೀವೇ ದಿವ್ಯಕ್ಕೆ ಸಾಕ್ಷಿ ಎನ್ನುವಂತೆ ನನಗೆ ಕಾಣಿಸಿದಿರಿ.”

ಹೌದು ರಾಮಕೃಷ್ಣರು ತಮ್ಮ ನಂಬಿಕೆಗಳಿಗೆ ಬೇರೆ ಯಾವ ಸಾಕ್ಷಿಯನ್ನೂ ಕೊಡಲಿಲ್ಲ, ಸ್ವತಃ ತಾವೇ ಸಾಕ್ಷಿಯಾಗಿ ತಮ್ಮನ್ನು ತಾವು ಪ್ರಸ್ತುತಪಡಿಸಿಕೊಂಡರು. ಅಂತಃಕರಣ ಗೆಲವು ಸಾಧಿಸುವುದು ಹೀಗೆ, ತಾನು ಸೋತು.”

Leave a Reply