ಕಷ್ಟಗಳ ಮೂಲಕ ಕಲಿಕೆ… । ಓಶೋ ವ್ಯಾಖ್ಯಾನ

ನಿಮಗೆ ಎದುರಾಗುವ ಎಲ್ಲ ಸಂಕಟಗಳು ನಿಮಗೆ ದುಃಖ ಕೊಡಲಿಕ್ಕಾಗಿಯೇ ಎನ್ನುವುದು ನಿಮ್ಮ ಅಭಿಪ್ರಾಯ ಹೌದೆ? ಹಾಗಾದರೆ ನಿಮ್ಮ ಅನಿಸಿಕೆ ತಪ್ಪು. ಏಕೆಂದರೆ ಈ ಸಂಕಟದ ಸಂಗತಿಗಳೇ ನಮಗೆ ಬದುಕಿನಲ್ಲಿ ಒಂದು ಹೊಸ ಕಲಿಕೆಯನ್ನ ಸಾಧ್ಯ ಮಾಡುತ್ತವೆ! ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ಒಮ್ಮೆ ಒಂದು ಹಳ್ಳಿಯನ್ನ ನದಿಯ ಪ್ರವಾಹ ಆಕ್ರಮಿಸಿಕೊಂಡಿತು. ಹಳ್ಳಿಯ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳನ್ನು ಖಾಲೀ ಮಾಡಿ ಸುರಕ್ಷಿತ ಜಾಗ ಹುಡುಕಿಕೊಂಡು ಹೊರಟರು. ಆದರೆ ಒಬ್ಬ ವ್ಯಕ್ತಿ ಮಾತ್ರ ತನ್ನ ಮನೆ ಬಿಟ್ಟು ಹೊರಡಲು ನಿರಾಕರಿಸಿದ. “ ನಾನು ಇಷ್ಟು ದಿನ ಬಹಳ ನಿಷ್ಠೆಯಿಂದ ಭಗವಂತನ ಪೂಜೆ, ಪ್ರಾರ್ಥನೆ ಮಾಡಿದ್ದೇನೆ, ಅವನು ಖಂಡಿತ ನನ್ನನ್ನು ಕಾಪಾಡುತ್ತಾನೆ.” ಎನ್ನುತ್ತ ತನ್ನ ಮನೆಯಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದ.

ಪ್ರವಾಹದ ಮಟ್ಟ ಜಾಸ್ತಿ ಆಗುತ್ತಿದ್ದಂತೆಯೇ, ಆ ವ್ಯಕ್ತಿಯನ್ನು ಅಲ್ಲಿಂದ ಕರೆದುಕೊಂಡು ಹೋಗಲು ಪೋಲೀಸರು ಬಂದರು. ಆದರೆ ಆ ವ್ಯಕ್ತಿ ಪೋಲೀಸರೊಂದಿಗೆ ಸಹಕರಿಸಲು ನಿರಾಕರಿಸಿದ. ದೇವರಲ್ಲಿ ನನಗೆ ವಿಶ್ವಾಸವಿದೆ, ದೇವರು ನನ್ನನ್ನು ಕಾಪಾಡುತ್ತಾನೆ, ನನಗೆ ಬೇರೆ ಯಾರ ಸಹಾಯ ಬೇಡ ಎಂದು ಹಟ ಹಿಡಿದ.

ಪ್ರವಾಹದ ಮಟ್ಟ ಇನ್ನೂ ಹೆಚ್ಚಾದಾಗ ಆ ವ್ಯಕ್ತಿ ಮನೆಯ ಎರಡನೇಯ ಮಹಡಿಗೆ ಹೋಗಿ ನಿಂತುಕೊಂಡ. ಸುರಕ್ಷತಾ ಕೆಲಸದಲ್ಲಿ ತೊಡಗಿಕೊಂಡಿದ್ದ ಜನ, ನಾವೆ ತೆಗೆದುಕೊಂಡು ಬಂದು ಆ ವ್ಯಕ್ತಿಯನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಆದರೂ ಆ ವ್ಯಕ್ತಿ ದೇವರ ಮೇಲಿನ ತನ್ನ ವಿಶ್ವಾಸದ ಕಾರಣವಾಗಿ ನಾವೆಯಲ್ಲಿ ಕುಳಿತು ಪ್ರವಾಹದಿಂದ ಹೊರಬರಲು ನಿರಾಕರಿಸಿದ.

ಪ್ರವಾಹದ ಮಟ್ಟ ಅಪಾಯದ ಮಟ್ಟ ತಲುಪಿದಾಗ ಆ ಮನುಷ್ಯ ಮನೆಯ ಮಾಳಿಗೆಯ ಮೇಲೆ ಹೋಗಿ ನಿಂತು ದೇವರ ಸಹಾಯಕ್ಕಾಗಿ ಕಾಯತೊಡಗಿದ. ಸುರಕ್ಷತಾ ಸಿಬ್ಬಂದಿ ಹೆಲಿಕಾಫ್ಟರ್ ಸಹಾಯದಿಂದ ಆ ವ್ಯಕ್ತಿಯನ್ನು ರಕ್ಷಿಸುವ ಪ್ರಯತ್ನ ಮಾಡತೊಡಗಿದರು. ಆದರೆ ಆ ವ್ಯಕ್ತಿ ತನ್ನ ಹಟ ಬಿಡಲಿಲ್ಲ. ದೇವರು ಸಹಾಯ ಮಾಡೇ ಮಾಡುತ್ತಾನೆ ಎಂದು ಬಲವಾಗಿ ನಂಬಿಕೊಂಡು ದೇವರಿಗಾಗಿ ಕಾಯತೊಡಗಿದ. ಪ್ರವಾಹ ಅಪಾಯದ ಮಟ್ಟ ಮೀರಿದಾಗ, ಆ ಮನುಷ್ಯ ಪ್ರವಾಹದಲ್ಲಿ ಕೊಚ್ಚಿಕೊಂಡು ಸತ್ತುಹೋದ.

ಸತ್ತ ಮೇಲೆ ಆ ವ್ಯಕ್ತಿ ಪರಲೋಕದಲ್ಲಿ ದೇವರನ್ನ ಭೇಟಿಯಾಗಿ ದೇವರನ್ನ ತರಾಟೆಗೆ ತೆಗೆದುಕೊಂಡ “ ನಾನು ಎಷ್ಟು ನಿಷ್ಠೆಯಿಂದ ನಿನ್ನ ಪ್ರಾರ್ಥನೆ ಮಾಡಿದೆ ಆದರೆ ನೀನು ನನ್ನ ಪೂಜೆಯನ್ನು ಗಣನೆಗೆ ತೆಗೆದುಕೊಳ್ಳದೇ ನನಗೆ ಮೋಸ ಮಾಡಿದೆ, ನಾನು ಪ್ರವಾಹದಲ್ಲಿ ಮುಳುಗಿ ಸಾಯಲು ಕಾರಣನಾದೆ. ನಿನಗೆ ಧಿಕ್ಕಾರ! “

ಆಗ ದೇವರು ಆ ವ್ಯಕ್ತಿಗೆ ಸಮಾಧಾನ ಮಾಡುವ ಪ್ರಯತ್ನ ಮಾಡಿದ, “ ಪ್ರವಾಹದಲ್ಲಿ ನೀನು ಸಿಕ್ಕಿಹಾಕಿಕೊಂಡಾಗ ನಿನಗಾಗಿ ಪೋಲೀಸರನ್ನ, ನಾವೆಯನ್ನ, ಹೆಲಿಕಾಪ್ಟರ್ ಕಳುಹಿಸಿದ್ದು ನಾನೇ ಅಲ್ಲವೇ? ಸ್ವತಃ ನಾನು ಬಂದು ನಿನ್ನ ಕಾಪಾಡುತ್ತೇನೆ ಎನ್ನುವ ನಿನ್ನ ನಂಬಿಕೆ ಹುಚ್ಚುತನದ್ದು. ನನ್ನ ಕೆಲಸ ನಾನು ಮಾಡಿದೆ ಆದರೆ ನೀನು ನನ್ನನ್ನು ಗುರುತಿಸುವಲ್ಲಿ ವಿಫಲನಾದೆ, ಅದು ನಿನ್ನ ತಪ್ಪು.”

ನಿಮಗೂ ಆ ವ್ಯಕ್ತಿಯ ಹಾಗೆ ಅನಿಸುತ್ತದೆಯೇ? ನಿಮಗೆ ಎದುರಾಗುವ ಎಲ್ಲ ಸಂಕಟಗಳು ನಿಮಗೆ ದುಃಖ ಕೊಡಲಿಕ್ಕಾಗಿಯೇ ಎನ್ನುವುದು ನಿಮ್ಮ ಅಭಿಪ್ರಾಯ ಕೂಡ ಹೌದೆ? ಹಾಗಾದರೆ ನಿಮ್ಮ ಅನಿಸಿಕೆ ತಪ್ಪು. ಏಕೆಂದರೆ ಈ ಸಂಕಟದ ಸಂಗತಿಗಳೇ ನಮಗೆ ಬದುಕಿನಲ್ಲಿ ಒಂದು ಹೊಸ ಕಲಿಕೆಯನ್ನ ಸಾಧ್ಯ ಮಾಡುತ್ತವೆ, ಇನ್ನೂ ದೊಡ್ಡ ಸಂಕಟದಿಂದ ನಮ್ಮನ್ನು ಪಾರು ಮಾಡಲು. ಆದರೆ ನೀವು ಈ ಕಲಿಕೆಯ ಮೇಲೆ ದೃಷ್ಟಿ ಹರಿಸದೇ ಕೇವಲ ನೀವು ಅನುಭವಿಸಿದ ತೊಂದರೆಯನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುವಿರಾದರೆ, ಅಮೃತವೊಂದರಿಂದ ವಂಚಿತರಾಗುತ್ತೀರಿ.

Leave a Reply