ನಿಮ್ಮೊಂದಿಗೆ ನೀವು ಹಲವಾರು ತತ್ವ ಸಿದ್ಧಾಂತಗಳನ್ನು ಬೆಳೆಸಿಕೊಂಡು ಬಂದಿದ್ದೀರಿ. ಎಲ್ಲವನ್ನೂ ಕಳಚಿ ಬಿಡಿ. ಅವುಗಳಿಂದ ನಿಮಗೆ ಯಾವ ಸಹಾಯವೂ ಸಾಧ್ಯವಿಲ್ಲ. ಇವನ್ನೆಲ್ಲ ಒಂದೊಂದಾಗಿ ಬಿಡಬೇಡಿ, ಒಮ್ಮೆಲೆ ಬಿಟ್ಟುಬಿಡಿ! ~ ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಹೀಗಾಯಿತು, ಬೋಧಿಧರ್ಮನ ಶಿಷ್ಯ ಅವನ ಬಳಿ ಬಂದು ಪ್ರಶ್ನೆ ಮಾಡಿದ, “ ಮಾಸ್ಟರ್, ನಾನು ಖಾಲಿಯಾಗಬೇಕು ಎಂದು ನೀವು ಹೇಳಿದ್ದಿರಿ, ಈಗ ನಾನು ಖಾಲೀ ಆಗಿದ್ದೇನೆ. ಮುಂದೇನು ಮಾಡಬೇಕು?”
ಬೋಧಿಧರ್ಮ ತನ್ನ ಕೋಲಿನಿಂದ ಶಿಷ್ಯನ ತಲೆಗೆ ಜೋರಾಗಿ ಒಂದು ಏಟು ಕೊಟ್ಟು ಹೇಳಿದ, “ ಆ ಖಾಲಿಯನ್ನು ಈಗ ಹೊರಗೆ ಹಾಕಿ ಬಾ.”
“ ನಾನು ಖಾಲಿ ಆಗಿದ್ದೇನೆ” ಎಂದು ನೀವು ಹೇಳುವಿರಾದರೆ, ನಿಮ್ಮ ಹೇಳಿಕೆಯಲ್ಲಿ “ನಾನು” ಎನ್ನುವ ಶಬ್ದವಿದೆ, ಮತ್ತು ಈ “ನಾನು” ಎನ್ನುವುದು ಎಂದೂ ಖಾಲಿಯಾದ ಉದಾಹರಣೆಗಳಿಲ್ಲ. ಹಾಗಾಗಿ ಖಾಲೀತನವನ್ನ, ಶೂನ್ಯವನ್ನ ಎಂದೂ ಕ್ಲೇಮ್ ಮಾಡಲಿಕ್ಕಾಗುವುದಿಲ್ಲ. “ನಾನು ವಿನೀತ” ಎಂದು ಒಬ್ಬರು ಹೇಳುವುದು ಹೇಗೆ ಸುಳ್ಳಾಗುತ್ತದೆಯೋ ಹಾಗೆಯೇ “ನಾನು ಖಾಲಿಯಾಗಿದ್ದೇನೆ “ ಎಂದು ಹೇಳುವುದು ಕೂಡ ಸುಳ್ಳಾಗುತ್ತದೆ.
“ನಾನು ವಿನೀತ” ಎಂದು ನೀವು ಹೇಳುವಿರಾದರೆ, ನೀವು ವಿನೀತರಲ್ಲ ಎನ್ನುವುದೇ ಅದರ ಅರ್ಥ. ಯಾರು ತಾನೇ ವಿನೀತತೆಯನ್ನ ಕ್ಲೇಮ್ ಮಾಡುವುದು ಸಾಧ್ಯ? ಇದು ಸಾಧ್ಯವೇ ಇಲ್ಲದ ಸಂಗತಿ. ನೀವು ವಿನೀತರಾಗಿದ್ದರೆ, ನೀವು ವಿನೀತರಾಗಿದ್ದೀರಿ ಅಷ್ಟೇ. ನಾನು ವಿನೀತ ಎಂದು ನೀವು ಅದನ್ನ ಕ್ಲೇಮ್ ಮಾಡುವ ಹಾಗಿಲ್ಲ, ಅಷ್ಟೇ ಅಲ್ಲ ಈ ವಿನೀತತೆಯನ್ನ ನೀವು ಫೀಲ್ ಕೂಡ ಮಾಡುವ ಹಾಗಿಲ್ಲ. ಒಂದು ಪಕ್ಷ ನೀವು ನಿಮ್ಮ ವಿನೀತತೆಯನ್ನ ಫೀಲ್ ಮಾಡುವಿರಾದರೆ, ಅದು ನಿಮ್ಮೊಳಗೆ ಅಹಂನ ಹುಟ್ಟಿಗೆ ಕಾರಣವಾಗುತ್ತದೆ. ಖಾಲೀಯಾಗಿ, ಆದರೆ ಹಾಗೆ ಹೇಳಬೇಡಿ, ಹಾಗೆ ಫೀಲ್ ಮಾಡಿಕೊಳ್ಳಬೇಡಿ. ಹಾಗೇನಾದರೂ ಮಾಡಿಕೊಳ್ಳುವಿರಾದರೆ ನಿಮ್ಮನ್ನೇ ನೀವು ಮೋಸ ಮಾಡಿಕೊಳ್ಳುತ್ತೀರಿ. ನಾವು ಮಾಡುವ ಪ್ರತಿಯೊಂದೂ ನಮ್ಮ ಅವಶ್ಯಕತೆಯನ್ನು ಪೂರೈಸಿಕೊಳ್ಳುವುದಕ್ಕಾಗಿಯೇ, ಹಾಗಾಗಿ ಯಾರಿಂದಲೂ ದೈನ್ಯತೆಯನ್ನ, ಕೃತಜ್ಞತೆಯನ್ನ ಬಯಸಬೇಡಿ.
ನಿಮ್ಮೊಂದಿಗೆ ನೀವು ಹಲವಾರು ತತ್ವ ಸಿದ್ಧಾಂತಗಳನ್ನು ಬೆಳೆಸಿಕೊಂಡು ಬಂದಿದ್ದೀರಿ. ಎಲ್ಲವನ್ನೂ ಕಳಚಿ ಬಿಡಿ. ಅವುಗಳಿಂದ ನಿಮಗೆ ಯಾವ ಸಹಾಯವೂ ಸಾಧ್ಯವಿಲ್ಲ. ಇವನ್ನೆಲ್ಲ ಒಂದೊಂದಾಗಿ ಬಿಡಬೇಡಿ, ಒಮ್ಮೆಲೆ ಬಿಟ್ಟುಬಿಡಿ.
ಒಬ್ಬ ಝೆನ್ ಮಾಸ್ಟರ್ ನ ಶಾಲೆಯಲ್ಲಿ ವಿದ್ಯಾರ್ಥಿಗಳು ತುಂಬ ಜಾಸ್ತಿ ಆಗಿ ಶಾಲೆಯ ಜಾಗ ತುಂಬ ಇಕ್ಕಟ್ಟಾಗತೊಡಗಿತು. ಇದನ್ನು ಗಮನಿಸಿದ ಆ ಊರಿನ ವ್ಯಾಪಾರಿ ಶಾಲೆಯ ಕಟ್ಟಡವನ್ನು ವಿಸ್ತರಿಸುವ ಸಲುವಾಗಿ 500 ಬಂಗಾರದ ನಾಣ್ಯಗಳನ್ನು ಶಾಲೆಗೆ ದಾನ ನೀಡಲು ನಿರ್ಧರಿಸಿದ.
ಒಂದು ದಿನ ಶಾಲೆಗೆ ಆಗಮಿಸಿದ ವ್ಯಾಪಾರಿ, 500 ಬಂಗಾರದ ನಾಣ್ಯಗಳ ಚೀಲವನ್ನು ಝೆನ್ ಮಾಸ್ಟರ್ ಕೈಗಿತ್ತ.
“ಆಯಿತು, ಈ ನಾಣ್ಯಗಳನ್ನು ಸ್ವೀಕರಿಸುತ್ತ್ತೇನೆ “ ಎಂದ ಮಾಸ್ಟರ್.
ಮಾಸ್ಟರ್ ನ ನಿರ್ಲಿಪ್ತ ಉತ್ತರ ಕೇಳಿ ವ್ಯಾಪಾರಿಗೆ ಸಿಟ್ಟು ಬಂತು.
ವ್ಯಾಪಾರಿ : ಈ ಚೀಲದಲ್ಲಿ 500 ಬಂಗಾರದ ನಾಣ್ಯಗಳಿವೆ.
ಮಾಸ್ಟರ್ : ಆಗಲೇ ಹೇಳಿದೆಯಲ್ಲ.
ವ್ಯಾಪಾರಿ : ನಾನು ಶ್ರೀಮಂತನಿರಬಹುದು ಆದರೆ 500 ಬಂಗಾರದ ನಾಣ್ಯಗಳು ನನಗೂ ದೊಡ್ಡ ಮೊತ್ತವೇ.
ಮಾಸ್ಟರ್ : ನನ್ನಿಂದ ಕೃತಜ್ಞತೆ ಏನಾದರೂ ಬಯಸುತ್ತಿರುವೆಯಾ?
ವ್ಯಾಪಾರಿ : ತಪ್ಪಾ?
ಮಾಸ್ಟರ್ : ಖಂಡಿತ ತಪ್ಪು. ಕೊಡುವುದು ಯಾವಾಗಲೂ ಕೊಡುವವನ ಅವಶ್ಯಕತೆ ಆಗಿರುವುದರಿಂದ, ಕೃತಜ್ಞತೆ ಹೇಳಬೇಕಾದವನು ಕೊಡುವವನೇ.