ಜಬ್ಬಾರ ಹುಟ್ಟುಹಾಕಿದ ‘ಜಿಬ್ರಿಶ್’ : ಓಶೋ ವ್ಯಾಖ್ಯಾನ

ಜಬ್ಬಾರನ ಮಾತು ಎಲ್ಲರಿಗೂ ಒಪ್ಪಿತವಾಗುವ ಮಾತು ಯಾಕೆ ಗೊತ್ತಾ!? ~ ಓಶೋಕನ್ನಡಕ್ಕೆ: ಚಿದಂಬರ ನರೇಂದ್ರ

ಜಿಬ್ರಿಶ್ ಪದ ಹುಟ್ಟಿದ್ದು ಹೇಗೆ ನಿಮಗೇನಾದರೂ ಗೊತ್ತಾ? ಸೂಫಿ ಸಂತ ಜಬ್ಬಾರ್ ನಿಂದಾಗಿ ಈ ಪದ ಹುಟ್ಟಿಕೊಂಡಿದೆ. ನಾವು ಮಾತನಾಡುವುದೆಲ್ಲ ನಾನ್ಸೆನ್ಸ್ ಎನ್ನುವುದು ಜಬ್ಬಾರ್ ನ ತಿಳುವಳಿಕೆಯಾಗಿತ್ತು, ಆದ್ದರಿಂದ ಅವನು ಯಾಕೆ ಸುಮ್ಮನೇ ಅರ್ಥವತ್ತಾಗಿ ಮಾತನಾಡುವ ನಾಟಕ ಮಾಡಬೇಕೆಂದು, ಬೇಕೆಂದೇ ನಾನ್ಸೆನ್ಸ್ ಮಾತನಾಡುತ್ತಿದ್ದ.

ನಮ್ಮ ಮಾತುಗಳಲ್ಲಿ ಯಾವುದೇ ಅರ್ಥವಿಲ್ಲವೆನ್ನುವುದು ಜಬ್ಬಾರ್ ನ ಖಚಿತ ನಿಲುವಾಗಿದ್ದರಿಂದ, ಅವನು ತನ್ನ ಮಾತಿನಲ್ಲಿ ಯಾರಿಗೂ ಅರ್ಥವಾಗದ ಪದಗಳನ್ನ, ಧ್ವನಿಗಳನ್ನ ಬಳಸುತ್ತಿದ್ದ. ಅವನ ಮಾತುಗಳನ್ನ ಕೇಳಿದವರು, ಆ ಮಾತುಗಳನ್ನ ತಮಗೆ ಬೇಕಾದ ಹಾಗೆ ಅರ್ಥಮಾಡಿಕೊಳ್ಳಲು ಸ್ವತಂತ್ರರಾಗಿದ್ದರು. ಇಂಥ ಜಬ್ಬಾರನಿಗೆ ಸಾಕಷ್ಟು ಜನ ಶಿಷ್ಯರಿರುವುದು ಸಹಜವಾಗಿತ್ತು. ಗುರುವಿನ ಮಾತಿಗಳು ಯಾರಿಗೂ ಅರ್ಥಆಗದ ಕಾರಣ ಶಿಷ್ಯರು ಅವನ ಮಾತುಗಳಿಗೆ ತಮ್ಮದೇ ಅರ್ಥ ಹೇಳುತ್ತಿದ್ದರು.

ಉದಾಹರಣೆಗೆ, ಯಾರಾದರೂ ಜಬ್ಬಾರ್ ನನ್ನು “ ನೀನು ದೇವರನ್ನು ನಂಬುತ್ತೀಯಾ? “ ಎಂದು ಪ್ರಶ್ನೆ ಮಾಡಿದರೆ, ಅವನು ಹೂಹೂ ಎಂದು ಸೌಂಡ್ ಮಾಡುತ್ತಿದ್ದ. ಪ್ರಶ್ನೆ ಕೇಳಿದವರು ಧಾರ್ಮಿಕರಾಗಿದ್ದರೆ, ಅವರು “ಹೂಹೂ” ಎನ್ನುವ ಉತ್ತರವನ್ನ “ಅಲ್ಲಾಹೂ” ಎಂದು ಅರ್ಥ ಮಾಡಿಕೊಳ್ಳುತ್ತಿದ್ದರು. ಹೀಗೇ ಮುಂತಾಗಿ ಜನ ತಮ್ಮ ಮನಸ್ಸಿಗೆ ಒಪ್ಪುವಂಥ ಉತ್ತರಗಳನ್ನ ಕಂಡುಕೊಳ್ಳುತ್ತಿದ್ದರು.

ಅಥವಾ ಒಮ್ಮೊಮ್ಮೆ ಜಬ್ಬಾರ್ ಅಸಂಗತವಾಗಿ ವರ್ತನೆ ಮಾಡುತ್ತಿದ್ದ. “ ದೇವರು ಎಂದರೇನು?” ಎನ್ನುವುದು ನಿಮ್ಮ ಪ್ರಶ್ನೆಯಾಗಿದ್ದರೆ, ಉತ್ತರವಾಗಿ ಜಬ್ಬಾರ್, ಥಟ್ಚನೇ ತಲೆ ಕೆಳಗಾಗಿ ನಿಲ್ಲುತ್ತಿದ್ದ. ಜಬ್ಬಾರ್ ನ ಈ ಉತ್ತರವನ್ನು ಅರ್ಥ ಮಾಡಿಕೊಳ್ಳುವುದು ಈಗ ನಿಮ್ಮ ಜವಾಬ್ದಾರಿ. ಮತ್ತು ಪ್ರತಿಯೊಬ್ಬರೂ ತಮಗೆ ಅನುಕೂಲಕರವಾದ ಉತ್ತರಗಳನ್ನು ಅರ್ಥೈಸುವುದರಲ್ಲಿ ಜಾಣರಾಗಿದ್ದರು. ಜಬ್ಬಾರನ ಈ ಉತ್ತರವನ್ನ ಕೆಲವರು ಜಗತ್ತಿನಲ್ಲಿ ನಡೆಯುವುದೆಲ್ಲವನ್ನ ಜಬ್ಬಾರ್ ಉಲ್ಟಾ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳುತ್ತಿದ್ದಾನೆ ಎಂದು ಗ್ರಹಿಸಿ, ಇದುವರೆಗಿನ ತಮ್ಮ ತಿಳಿವಳಿಕೆಗೆ ಸಂಪೂರ್ಣ ವಿರುದ್ಧವಾಗಿ ಅರ್ಥ ರೂಪಿಸಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಶಾಸ್ತ್ರದ ಗ್ರಂಥಗಳನ್ನು ತಿರುಗು ಮುರುಗಾಗಿ ಓದಲು ಶುರು ಮಾಡುತ್ತಿದ್ದರು.

ಈ ಸಂಗತಿ ಕಾರಣವಾಗಿ ಒಂದಂತೂ ಒಳ್ಳೆಯದಾಗಿತ್ತು, ಜಬ್ಬಾರ್ ಬಹುಶಃ ಇದನ್ನೆಲ್ಲ ಬಹಳಷ್ಟು ಎಂಜಾಯ್ ಮಾಡುತ್ತಿದ್ದಿರಬಹುದು. ಒಂದು ಉತ್ತರ ಎಷ್ಟು ಉತ್ತರಗಳನ್ನ ಹುಟ್ಟಿಸುತ್ತದೆ ಎನ್ನುವುದು ಜಬ್ಬಾರ ನಿಗೆ ಬಹಳಷ್ಟು ಕುತೂಹಲ ಹುಟ್ಟಿಸುತ್ತಿತ್ತು.

Leave a Reply