ಮನುಷ್ಯರು ಬಲ್ಲರಸವಿದ್ಯೆ : ಓಶೋ ವ್ಯಾಖ್ಯಾನ

ಮೊಹೊಬ್ಬತ್ ಕೇವಲ ಮುಖವಾಡ ಆದರೆ ಇಷ್ಕ್ ಮನುಷ್ಯನ ಅಂತಃಶಕ್ತಿ, ಅವನ ತಿರುಳು, ಅವನ ಅಸ್ತಿತ್ವದ ಕೇಂದ್ರದಿಂದ ಹುಟ್ಟಿಕೊಂಡು ಅವನನ್ನು ಇಡಿಯಾಗಿ ಆವರಿಸಿಕೊಂಡಿರುವುದು… ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ನಿಜದ ಮನುಷ್ಯರು ಬಲ್ಲ
ರಸವಿದ್ಯೆಯ ಬಗ್ಗೆ ಗಮನ ಹರಿಸು.
ನಿನಗೆ ದಯಪಾಲಿಸಲಾಗಿರುವ ಕಷ್ಟಗಳನ್ನು
ಒಮ್ಮೆ ಒಪ್ಪಿಕೊಂಡುಬಿಟ್ಟೆಯಾದರೆ
ಹೊಸ ಬಾಗಿಲೊಂದು
ತೆರೆದುಕೊಳ್ಳುತ್ತದೆ ತಾನೇ ತಾನಾಗಿ .

ಕಠಿಣ ಪರಿಸ್ಥಿತಿಗಳನ್ನು,
ಪರಿಚಿತ ಗೆಳೆಯನೊಬ್ಬನನು ಅಪ್ಪಿಕೊಳ್ಳುವಂತೆ
ಸ್ವಾಗತಿಸು ತೋಳು ಚಾಚಿ,
ಅವನು ತನ್ನ ಜೊತೆಗೆ ತಂದ ಯಾತನೆಗಳ
ಪಕ್ಕೆ ಹಿಂಡಿ ತಮಾಷೆ ಮಾಡು.

ದುಃಖಗಳು,
ಚಿಂದಿ ಬಟ್ಟೆಯ ಕೌದಿಯ ಹಾಗೆ
ಕಳಚಿಟ್ಟು ಬಿಡಬೇಕು ಬೇಕಾದಾಗ ಹೊದ್ದು.

ಈ ಕಳಚುವಿಕೆ ಮತ್ತು
ಅದರ ಕೆಳಗಿನ ಬೆತ್ತಲೆ ದೇಹಗಳೇ
ಸಂಕಟದ ನಂತರ
ಒದಗಿ ಬರುವ ಅಮೃತದ ಹನಿಗಳು

~ ರೂಮಿ

ಸೂಫಿಯಿಸಂ ಗೆ ಜ್ಞಾನದ ಬಗ್ಗೆ ಅಷ್ಟಾಗಿ ಆಸ್ಥೆ ಇಲ್ಲ. ಅವರ ಪರಮ ಕಾಳಜಿ ಪ್ರೇಮ, ಗಾಢ ಉತ್ಕಟ ಪ್ರೇಮ ; ಸಮಸ್ತದೊಂದಿಗೆ ಪ್ರೇಮದಲ್ಲಿ ಒಂದಾಗುವುದು ಹೇಗೆ? ಇಡೀ ಬ್ರಹ್ಮಾಂಡದ ಶ್ರುತಿಯಲ್ಲಿ ತನ್ನ ಶ್ರುತಿಯನ್ನ ಸೇರಿಸುವುದು ಹೇಗೆ? ಸೃಷ್ಟಿ ಮತ್ತು ಸೃಷ್ಟಿಕರ್ತನ ನಡುವಿನ ಅಂತರವನ್ನು ಬ್ರಿಜ್ ಮಾಡುವುದು ಹೇಗೆ? ಇವು ಸೂಫಿಯ ಕಾಳಜಿಗಳು.

ಸೋ ಕಾಲ್ಡ್ ಸಂಘಟಿತ ಧರ್ಮಗಳು ದ್ವಂದ್ವವನ್ನ ಬೋಧಿಸುತ್ತವೆ. ಅವು ಸೃಷ್ಟಿ ಮತ್ತು ಸೃಷ್ಟಿಕರ್ತನನ್ನ ಬೇರೆ ಮಾಡಿ ನೋಡುತ್ತವೆ, ಸೃಷ್ಟಿಕರ್ತನನ್ನ ಸೃಷ್ಟಿಗಿಂತ ಶ್ರೇಷ್ಠ ಎಂದು ಸಾರುತ್ತವೆ. ಸೃಷ್ಟಿಯನ್ನ ತ್ಯಾಗ ಮಾಡಿ ಸೃಷ್ಟಿಕರ್ತನಲ್ಲಿ ನಂಬಿಕೆ ಇಡುವಂತೆ ಪಾಠ ಮಾಡುತ್ತವೆ. ಆದರೆ ಸೂಫಿಗಳಿಗೆ ಇಂಥ ತ್ಯಾಗದಲ್ಲಿ ನಂಬಿಕೆಯಿಲ್ಲ. ಅವರು ಸೃಷ್ಟಿಯನ್ನು ಸಂಭ್ರಮಿಸುತ್ತಾರೆ, ಆ ಮೂಲಕ ಸೃಷ್ಟಿಕರ್ತನೊಳಗೆ ಒಂದಾಗುವಲ್ಲಿ ಅವರಿಗೆ ಅಪಾರ ವಿಶ್ವಾಸ.

ಎಲ್ಲವನ್ನೂ ಪಣಕ್ಕಿಡುವ ಪ್ರೇಮದಲ್ಲಿ ಸೂಫಿಗಳಿಗೆ ನಂಬಿಕೆ. ಇಂಥ ಪ್ರೇಮಕ್ಕೆ ಇಷ್ಕ್ ಎನ್ನುವ ಹೆಸರು. ನಿಮಗೆ ಮೊಹೊಬ್ಬತ್ ಬಗ್ಗೆ ಗೊತ್ತು, ಇದು ಸಾಮಾನ್ಯ ಲೌಕಿಕ ಪ್ರೀತಿ. ಇದು ಕೇವಲ ಭಾವನೆಗಳ ಸಂತೆ. ಒಂದು ದಿನ ನೀವು ಪ್ರೀತಿ ಮಾಡುತ್ತಿದ್ದರೆ ಇನ್ನೊಂದು ದಿನ ದ್ವೇಷಕ್ಕೆ ಮುಂದಾಗಿರುತ್ತೀರಿ. ಒಂದು ದಿನ ನೀವು ಪ್ರೀತಿಗಾಗಿ ಪ್ರಾಣ ಕೊಡಲು ಸಿದ್ಧ, ಇನ್ನೊಂದು ದಿನ ನೀವು ಅದೇ ಪ್ರಿತಿಗಾಗಿ ಕೊಲ್ಲಲೂ ಹಿಂದೆ ಮುಂದೆ ನೋಡುವುದಿಲ್ಲ. ಒಂದು ಕ್ಷಣ ನಿಮಗೆ ಪರಮ ಸುಂದರವಾಗಿ ಕಂಡದ್ದು ಇನ್ನೊಂದು ಕ್ಷಣದಲ್ಲಿ ಮಹಾ ಕುರೂಪವಾಗಿ ಪರಿವರ್ತಿತವಾಗುತ್ತದೆ. ಇದು ಭಾವನೆಗಳ ಹೊಂಡ, ಸಮಯಕ್ಕೆ ತಕ್ಕಂತೆ ತನ್ನ ರೂಪ ಬದಲಿಸುವ ಸಂಗತಿ, ಇದು ಮೊಹೊಬ್ಬತ್ ನ ಸಮಸ್ಯೆ. ಆದರೆ ಇಷ್ಕ್ ಆಳವಾದದ್ದು, ದಟ್ಟವಾದದ್ದು, ಸಮಯದ ಹಂಗು ತೊರೆದಂಥದು.

ಮೊಹೊಬ್ಬತ್ ಕೇವಲ ಮುಖವಾಡ ಆದರೆ ಇಷ್ಕ್ ಮನುಷ್ಯನ ಅಂತಃಶಕ್ತಿ, ಅವನ ತಿರುಳು, ಅವನ ಅಸ್ತಿತ್ವದ ಕೇಂದ್ರದಿಂದ ಹುಟ್ಟಿಕೊಂಡು ಅವನನ್ನು ಇಡಿಯಾಗಿ ಆವರಿಸಿಕೊಂಡಿರುವುದು. ಇಷ್ಕ್ ನಿಮ್ಮ ನಿಯಂತ್ರಣದಲ್ಲಿ ಇಲ್ಲ ಬದಲಾಗಿ ನೀವು ಇಷ್ಕ್ ನ ಹತೋಟಿಯಲ್ಲಿರುವಿರಿ. ಹೇಗೆ ನಮ್ಮೊಳಗೆ ಇಷ್ಕ್ ನ ಹುಟ್ಟುಹಾಕುವುದು? ಹೇಗೆ ಇಷ್ಕ್ ನ ಉತ್ಕಟ ಅಲೆಗಳ ಮೇಲೆ ಸವಾರಿ ಮಾಡುತ್ತ ಆತ್ಯಂತಿಕವನ್ನ ಮುಟ್ಟುವುದು ಎನ್ನುವುದೇ ಸೂಫಿಗಳ ಪರಮ ಕಾಳಜಿ. ಸೂಫಿಗಳು ಈ ಇಷ್ಕ್ ನ ಸಾಧಿಸುವ ಹಲವಾರು ಮಾರ್ಗಗಳನ್ನ ಕಂಡುಕೊಂಡಿದ್ದಾರೆ, ಅದು ಅವರ ರಸವಿದ್ಯೆ.

Leave a Reply