ಜನರು ತಾವು ಶಾಶ್ವತರೇನೋ ಅನ್ನುವಂತೆ ತಮ್ಮ ಹೆಸರಿನ ಕಾಳಜಿ ಮಾಡುವುದು, ತಮ್ಮ ಕುಟುಂಬವನ್ನು ಪ್ರೀತಿಸುವುದು, ಆಸ್ತಿಪಾಸ್ತಿ ಮಾಡುವುದು ಸಿದ್ಧಾರ್ಥನಿಗೆ ಮತ್ಸರ ಹುಟ್ಟಿಸುತ್ತಿತ್ತು. ಎಷ್ಟು ಪ್ರಯತ್ನ ಪಟ್ಟರೂ ಅವನಿಗೆ ಇಂಥ ಆಲೋಚನೆ ಬೆಳೆಸಿಕೊಳ್ಳಲು ಸಾಧ್ಯವಾಗಲೇ ಇಲ್ಲ! ಬದುಕಿನ ನಶ್ವರತೆ ಅರಿತಿದ್ದ ಸಮಣ, ಅರಿವನ್ನು ಮರೆಯುವುದಾದರೂ ಹೇಗೆ ಸಾಧ್ಯವಿತ್ತು!? ಆದರೆ… । ಹರ್ಮನ್ ಹೆಸ್ಸ್; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ಸಿದ್ಧಾರ್ಥ ಈ ಕಾಮ ಮೋಹಗಳ ಜಗತ್ತಿನಲ್ಲಿ ಸಾಕಷ್ಟು ವಸಂತ ಕಳೆದ, ಅದನ್ನು ತನ್ನೊಳಗೆ ಬಿಟ್ಟುಕೊಳ್ಳದೇ. ಅವನು ಸಮಣನಾಗಿದ್ದಾಗ ಯಾವೆಲ್ಲದನ್ನೂ ಒತ್ತಾಯದಿಂದ ದೂರವಿಟ್ಟಿದ್ದನೋ ಅವೆಲ್ಲದರ ರುಚಿ ನೋಡಿದ. ಹಣ, ಅಧಿಕಾರ, ಕಾಮ – ಪ್ರತಿಯೊಂದನ್ನೂ ಮನಃಪೂರ್ತಿ ಅನುಭವಿಸಿದ. ಆದರೆ ಸಮಣನ ಶಿಸ್ತು, ಸಮಣನ ಅರಿವು ಅವನಿಂದ ದೂರವಾಗಿರಲಿಲ್ಲ. ಆದ್ದರಿಂದ ಅದ್ಯಾವುದೂ ಅವನನ್ನು ಬಾಧಿಸುವ ಅವಕಾಶವೇ ಇರಲಿಲ್ಲ. ಇದನ್ನು ಕಮಲಾ ಸೂಕ್ಷ್ಮವಾಗಿ ಗಮನಿಸಿದ್ದಳು. ಈ ದಿನಕ್ಕೂ ಸಿದ್ಧಾರ್ಥ ಬದುಕು ನಡೆಸ್ತಿರೋದು ತನ್ನ “ಧ್ಯಾನಿಸುವ, ಕಾಯುವ, ಉಪವಾಸವಿರುವ” ಕೌಶಲ್ಯದಿಂದಲೇ ಹೊರತು ಪ್ರಾಪಂಚಿಕ ಸೊತ್ತಿನಿಂದಲ್ಲ ಅನ್ನೋದು ಅವಳಿಗೆ ಗೊತ್ತಿತ್ತು. ಅಷ್ಟು ವರ್ಷಗಳಾದರೂ ಅವನ ಸುತ್ತಲಿನ ಜನ ಅವನ ಪಾಲಿಗೆ ಅರಿಯದ ಮಕ್ಕಳಂತೇ ಬಾಲಿಶವಾಗಿ ತೋರುತ್ತಿದ್ದರು.
ಮತ್ತಷ್ಟು ಕಾಲ ಕಳೆಯಿತು. ಸಿದ್ಧಾರ್ಥನೀಗ ಶ್ರೀಮಂತ ವರ್ತಕನಾಗಿದ್ದ. ನಗರದಲ್ಲಿ ತನ್ನದೇ ಮನೆ, ನದೀ ತೀರದಲ್ಲೊಂದು ಉದ್ಯಾನವನ, ತನ್ನದೇ ಆಳು-ಕಾಳುಗಳನ್ನೂ ಹೊಂದಿದ್ದ. ನಗರದ ಜನ ಅವನನ್ನು ಮೆಚ್ಚಿಕೊಂಡಿದ್ದರು, ತಮ್ಮ ಕಷ್ಟ-ಸುಖಕ್ಕೆ ನೆಚ್ಚಿಕೊಂಡಿದ್ದರು. ಸಾಲ ಕೇಳಲು, ಸಲಹೆ ಕೇಳಲು ಅವನ ಬಳಿ ಬರುತ್ತಿದ್ದರು. ಸಿದ್ಧಾರ್ಥ ಎಲ್ಲರಿಗೂ ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದ. ಅಷ್ಟಾದರೂ ಯಾರೊಬ್ಬರೂ ಅವನಿಗೆ ಆಪ್ತರಾಗಿರಲಿಲ್ಲ, ಸಿದ್ಧಾರ್ಥ ಯಾರನ್ನೂ ತನ್ನ ಅಂತರಂಗಕ್ಕೆ ಬಿಟ್ಟುಕೊಂಡಿರಲಿಲ್ಲ. ಅಂದಿನಿಂದ ಈ ಹೊತ್ತಿನವರೆಗೂ ಅವನ ಆಪ್ತ ಸಂಗಾತಿ ಒಬ್ಬಳೇ, ಕಮಲಾ.
**
ಸಿದ್ಧಾರ್ಥ ಬಯಸಿದ್ದೆಲ್ಲವನ್ನೂ ಪಡೆದಾಗಿತ್ತು. ಆದರೂ ಒಂದು ಬಾಕಿ ಉಳಿದಿತ್ತು. ಅದು, ಬಾಲಿಶ ಜನರ ಬದುಕಿನ ಉತ್ಕಟತೆಯನ್ನು ಅನುಭವಿಸುವುದು! ಅವರಂತೆ ಅಳುವುದು, ನಗುವುದು, ಸಿಡುಕುವುದು, ನೋಯುವುದು! ಅವನು ಯಾವೆಲ್ಲವನ್ನು ದೂರವಿಟ್ಟಿದ್ದನ್ನೋ ಅವೆಲ್ಲದರ ರುಚಿ ನೋಡಿದ್ದ ಅಂದ ಮೇಲೆ, ದೂರವಿಟ್ಟಿದ್ದ ಬಾಲಿಶತನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿತ್ತೆ?
ತಾನು ಶಾಶ್ವತ ಸುಖದ ಹುಡುಕಾಟದಲ್ಲಿ ಮನೆ ಬಿಟ್ಟು ಹೊರಟಿದ್ದು, ಸಮಣರ ಸಂಗ, ಗೋವಿಂದನ ಅಗಲಿಕೆ, ಗೌತಮ ಬುದ್ಧನ ಜೊತೆ ಮಾತಾಡಿದ್ದು, ಬುದ್ಧನ ಸಲಹೆ, ತನ್ನ ತಂದೆಯ ವೇದ ಮಂತ್ರೋಪದೇಶ, ಯಾವ ಗುರುವಿನ – ಶಾಸ್ತ್ರ ನಿರ್ದೇಶನದ ಸಹಾಯವೂ ಇಲ್ಲದೆ ತನಗೆ ತಾನೇ ಗುರುವಾಗುವ ತನ್ನ ನಿರ್ಧಾರ, ತನ್ನ ಅಂತರಂಗದ ದೈವ ವಾಣಿಯನ್ನು ಕೇಳಿಸಿಕೊಳ್ಳಲು ನಡೆಸಿದ ಪ್ರಯತ್ನ – ಇವೆಲ್ಲವೂ ಕ್ರಮೇಣ ಅವನ ಪಾಲಿಗೆ ಕೇವಲ ನೆನಪಿನ ಚಿತ್ರಗಳಾಗಿ ಕಾಣತೊಡಗಿದವು. ಒಂದಾನೊಂದು ಕಾಲದ ಪ್ರಖರ ಚಿಂತನೆಯ ಸಿದ್ಧಾರ್ಥ ಈಗ ಪ್ರಾಪಂಚಿಕತೆಯ ಕತ್ತಲಲ್ಲಿ ನಿಧಾನವಾಗಿ ಕರಗತೊಡಗಿದ್ದ.
ಬಹಳ ಕಾಲದವರೆಗೆ ಸಿದ್ಧಾರ್ಥ ಪ್ರತಿಯೊಂದನ್ನೂ ಅಣಕು ನೋಟದಲ್ಲೇ ನೋಡುತ್ತಿದ್ದ. ಆದರೆ, ಜಗತ್ತಿನ ಜೊತೆ ಒಡನಾಡುತ್ತಾ ಪ್ರತಿಕ್ರಿಯೆ ನೀಡುತ್ತಾ ಒಂದಲ್ಲ ಒಂದು ಸಂದರ್ಭದಲ್ಲಿ ಅವನೂ ಅವರಂತೇ ಆಗಬೇಕಾಗುತ್ತಿತ್ತು. ಈ ಬದಲಾವಣೆಯ ಕತ್ತಲು ಸಿದ್ಧಾರ್ಥನ ಬೆಳಕನ್ನು ನುಂಗುತ್ತಾ ಅವನ ಎಚ್ಚರದ ಚೇತನವನ್ನೇ ತೂಕಡಿಕೆ ದೂಡಿಬಿಟ್ಟಿತು.
ಕ್ರಮೇಣ ಸಿದ್ಧಾರ್ಥ ವ್ಯಾಪಾರಬುದ್ಧಿ ಬೆಳೆಸಿಕೊಳ್ಳತೊಡಗಿದ. ಜನರ ಮೇಲೆ ತನ್ನ ಅಧಿಕಾರ ಪ್ರಯೋಗಿಸ ತೊಡಗಿದ. ಅವನೀಗ ಕಮಲೆ ಮಾತ್ರವಲ್ಲ, ಇತರ ಹೆಣ್ಣುಗಳನ್ನೂ ಸುಖಿಸಲು ಶುರು ಮಾಡಿದ್ದ. ಸುಂದರ ರೇಷ್ಮೆ ಬಟ್ಟೆಗಳನ್ನು ತಾನೇ ಆಯ್ಕೆ ಮಾಡಿ, ಹೊಲಿಸಿ ತೊಡುತ್ತಿದ್ದ. ಸೇವಕರಿಗೆ ಆದೇಶ ನೀಡಲು ಕಲಿತ. ಸುಗಂಧ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದು, ಕ್ರೀಡೆಯಾಡುವುದು, ಕುಡಿಯುವುದು, ಹಿತವಾಗಿ – ಹದವಾಗಿ ಬೇಯಿಸಿದ ಮಾಂಸ ತಿನ್ನುವುದು ಎಲ್ಲವನ್ನೂ ಮಾಡತೊಡಗಿದ. ಚದುರಂಗ – ಪಗಡೆಯ ಜೂಜಾಡಲು ಕಲಿತ. ಕೋಠಿಗಳಲ್ಲಿ ವೇಶ್ಯೆಯರ ನೃತ್ಯ ನೋಡುತ್ತಾ, ಮುಂಗೈಗೆ ಮಲ್ಲಿಗೆ ಕಟ್ಟಿಕೊಂಡು ಮೂಸುತ್ತಾ ಮೋಹಗೊಳ್ಳೋದನ್ನೂ ಕಲಿತ! ಅವನೀಗ ಪಲ್ಲಕ್ಕಿಯಲ್ಲಿ ಓಡಾಡುತ್ತಿದ್ದ. ಅವನನ್ನು ಹೊತ್ತೊಯ್ಯಲೆಂದೇ ಕಟ್ಟುಮಸ್ತಾದ ಆಳುಗಳು ಸದಾ ಸಿದ್ಧವಿರುತ್ತಿದ್ದರು. ಅವನೀಗ ಮೆತ್ತನೆ ಹಾಸಿಗೆಯಿಲ್ಲದೆ ಮಲಗುತ್ತಿರಲಿಲ್ಲ. ಪ್ರತಿ ರಾತ್ರಿ ಅವನಿಗೋಸ್ಕರ ಹೂ ಹಾಸಿನ ಸಜ್ಜೆ ತಯಾರಾಗುತ್ತಿತ್ತು.
**
ಅಷ್ಟಾದರೂ, ತಾನು ತನ್ನ ಸುತ್ತಲಿನ ಜನರಂತೇ ಇರತೊಡಗಿದ್ದರೂ, ಸಿದ್ಧಾರ್ಥನಿಗೆ ತಾನು ಅವರಿಗಿಂತ ಭಿನ್ನವೆಂದೇ ಅನಿಸುತ್ತಿತ್ತು. ಅವನು ಜನರ ಚಟುವಟಿಕೆಯನ್ನು, ಆತಂಕವನ್ನು ಈಗಲೂ ಅಷ್ಟೇ ಮೋಜಿನಿಂದ ನೋಡುತ್ತಿದ್ದ, ಆಟದಂತೆ ಕಾಣುತ್ತಿದ್ದ. ಬಹಳ ಕಾಲದವರೆಗೂ ಅವನೊಳಗಿನ ಸಮಣ, ಜನರ ಬಗ್ಗೆ ಸಹಾನುಭೂತಿ ತೋರುತ್ತಿದ್ದ. ಕಾಮಸ್ವಾಮಿ ತನಗೆ ನಷ್ಟವಾಯ್ತೆಂದು ಗೋಳಾಡುವಾಗೆಲ್ಲ, ಮೋಸ ಹೋದೆನೆಂದು ಅಲವತ್ತುಕೊಳ್ಳುವಾಗೆಲ್ಲ, ಅವಮಾನವಾಯ್ತೆಂದು ಸಿಟ್ಟುಕೊಂಡಾಗೆಲ್ಲ ಸಿದ್ಧಾರ್ಥ ಹಿಂದಿನಂತೆಯೇ ಅಣಕು ನೋಟದಿಂದ ನೋಡುತ್ತಿದ್ದ.
ಬರಬರುತ್ತಾ ಈ ಅಣಕದ ನೋಟವೂ ಮಂದವಾಗುತ್ತ ಹೋಯ್ತು. ಇನ್ನಷ್ಟು ಮಳೆಗಾಲ ಕಳೆಯಿತು. ಸಿದ್ಧಾರ್ಥನಿಗೆ ಈಗ ಜನರ ಬದುಕನ್ನು ಆಟದಂತೆ ನೋಡಲಾಗುತ್ತಿಲ್ಲ. ಅವನಿಗೀಗ ಅನ್ನು ತಮಾಷೆ ಮಾಡಲಾಗುತ್ತಿಲ್ಲ. ಆ ಬಾಲಿಶ ಜನರ ಮೇಲಿದ್ದ ಸಹಾನುಭೂತಿಯೂ ಮರೆಯಾಗುತ್ತಿದೆ. ಬದಲಿಗೆ ಅವರ ಜೀವನ ಪ್ರೀತಿ, ಬದುಕಿನ ಉತ್ಕಟ ಅಭೀಪ್ಸೆ, ಅಭಿವ್ಯಕ್ತಿ ಇವೆಲ್ಲವೂ ಅವನಲ್ಲಿ ಮತ್ಸರ ಹುಟ್ಟಿಸುತ್ತಿವೆ! ಅವನೀಗ ತಾನೂ ಅವರಂತೇ ಆಗಲು ಬಯಸುತ್ತಿದ್ದಾನೆ, ಆದರೆ ಸಾಧ್ಯವಾಗುತ್ತಿಲ್ಲ.
ಜನರು ತಾವು ಶಾಶ್ವತರೇನೋ ಅನ್ನುವಂತೆ ತಮ್ಮ ಹೆಸರಿನ ಕಾಳಜಿ ಮಾಡುವುದು, ತಮ್ಮ ಕುಟುಂಬವನ್ನು ಪ್ರೀತಿಸುವುದು, ಆಸ್ತಿಪಾಸ್ತಿ ಮಾಡುವುದು ಸಿದ್ಧಾರ್ಥನಿಗೆ ಮತ್ಸರ ಹುಟ್ಟಿಸುತ್ತಿತ್ತು. ಎಷ್ಟು ಪ್ರಯತ್ನ ಪಟ್ಟರೂ ಅವನಿಗೆ ಇಂಥ ಆಲೋಚನೆ ಬೆಳೆಸಿಕೊಳ್ಳಲು ಸಾಧ್ಯವಾಗಲೇ ಇಲ್ಲ! ಬದುಕಿನ ನಶ್ವರತೆ ಅರಿತಿದ್ದ ಸಮಣ, ಅರಿವನ್ನು ಮರೆಯುವುದಾದರೂ ಹೇಗೆ ಸಾಧ್ಯವಿತ್ತು!?
ಆದರೆ ಸಿದ್ಧಾರ್ಥ ಅದನ್ನು ಮರೆತು ಮೂಢನಾಗಲು ಸಾಕಷ್ಟು ಪ್ರಯತ್ನ ಪಟ್ಟ. ಸಾಧ್ಯವಾಗದೇ ಸೋತುಹೋದ. ಆದರೂ ಪ್ರಯತ್ನ ಮುಂದುವರೆದಿತ್ತು. ಎಷ್ಟೋ ಸಲ ತಡ ರಾತ್ರಿಯವರೆಗೂ ವೇಶ್ಯೆಯರ ಸಹವಾಸದಲ್ಲಿದ್ದು ಮನೆಗೆ ಬರುತ್ತಿದ್ದ. ಬೆಳಗ್ಗೆ ಸೂರ್ಯ ನಡುನೆತ್ತಿಗೆ ಬರುವವರೆಗೂ ಮಲಗಿರುತ್ತಿದ್ದ. ಅವನಿಗೀಗ ಏಕಾಗ್ರತೆಯಿಂದ ಧ್ಯಾನಿಸಲು, ಆಲೋಚಿಸಲು ಸಾಧ್ಯವಾಗುತ್ತಿರಲಿಲ್ಲ. ಯೋಚನೆಗೆ ತೊಡಗಿದರೆ ಒಂದು ಬಗೆಯ ಸುಸ್ತು ಅವನನ್ನು ಮುತ್ತಿಕೊಳ್ಳುತ್ತಿತ್ತು. ಹಾಗೇ ನಿದ್ರೆಗೆ ಜಾರಿಬಿಡುತ್ತಿದ್ದ. ಸಿದ್ಧಾರ್ಥ ಈಗ ಕೋಪಿಸಿಕೊಳ್ಳಲೂ ಶುರು ಮಾಡಿದ್ದ. ಕಾಮಸ್ವಾಮಿ ತನ್ನ ಗೋಳಾಟ ಹೇಳಿಕೊಂಡು ತಲೆ ತಿನ್ನತೊಡಗಿದರೆ ಸಿದ್ದಾರ್ಥ ರೇಗಿಬಿಡುತ್ತಿದ್ದ. ಜೂಜಿನಲ್ಲಿ ಅವನನ್ನು ಸೋಲಿಸಿ ಅಟ್ಟಹಾಸದ ನಗೆ ನಗುತ್ತಿದ್ದ.
ಆದರೂ, ಅಷ್ಟಾದರೂ ಅವನ ಮುಖದಲ್ಲಿ ಅರಿವಿನ, ಅಧ್ಯಾತ್ಮದ ಭಿನ್ನ ಕಳೆ ಮಚ್ಚೆಯಷ್ಟು ಗಾತ್ರದಲ್ಲಿ ಉಳಿದೇ ಇತ್ತು. ಸಿದ್ಧಾರ್ಥ ಅದನ್ನೂ ಕಳೆದುಕೊಳ್ಳಲು ಹೆಣಗಿದ. ಅಪರೂಪದ ನಗು, ದರ್ಪ, ಕೋಪ, ಅಸಹನೆ, ಪ್ರೇಮದ ಕೊರತೆಯೇ ಮೊದಲಾದ ಹಣವಂತರ ಲಕ್ಷಣಗಳನ್ನು ಮೈಗೂಡಿಸಿಕೊಂಡ.
ಕ್ರಮೇಣ ದಣಿವಿನ ಪರದೆ ಅವನನ್ನು ಮುಸುಕಲಾರಂಭಿಸಿತು. ಕಾಲ ಸರಿದಂತೆಲ್ಲಾ ಅದು ದಟ್ಟೈಸತೊಡಗಿತು, ಭಾರವಾಗತೊಡಗಿತು. ಹೇಗೆ ಹೊಸ ಬಟ್ಟೆ ದಿನ ಕಳೆದಂತೆ ಹಳತಾಗಿ ಜಾಳಾಗುತ್ತದೆಯೋ, ಬಣ್ಣ ಕಳೆದು ಹೊಲಿಗೆ ಬಿಟ್ಟು, ಹರಿದು ಹೋಗುತ್ತದೆಯೋ; ಹಾಗೇ ಗೋವಿಂದನಿಂದ ಬೇರ್ಪಟ್ಟ ನಂತರದ ಸಿದ್ಧಾರ್ಥನ ಹೊಸ ಬದುಕು ಜಾಳಾಗಿ, ಬಣ್ಣಗೆಟ್ಟು, ಚಿಂದಿಯಾಗತೊಡಗಿತ್ತು, ಸಿದ್ಧಾರ್ಥನನ್ನು ಕುರೂಪವಾಗಿ ತೋರತೊಡಗಿತ್ತು. ಇದು ಸಿದ್ಧಾರ್ಥನ ಗಮನಕ್ಕೆ ಬರಲೇ ಇಲ್ಲ. ಆದರೆ ಅವನು ಬೇರೊಂದು ಸಂಗತಿ ಗಮನಿಸಿದ್ದ. ಬಹಳ ಕಾಲದವರೆಗೆ ತನ್ನನ್ನು ಕಾಯುತ್ತಿದ್ದ, ದಾರಿ ತೋರುತ್ತಿದ್ದ ತನ್ನ ಅಂತರಂಗದ ಧ್ವನಿ ಇತ್ತೀಚಿನ ವರ್ಷಗಳಲ್ಲಿ ಮೌನವಾಗಿಬಿಟ್ಟಿತ್ತು.
‘ಸಿದ್ಧಾರ್ಥ’ ಕೃತಿಯ ಸಂಪೂರ್ಣ ಕನ್ನಡಾನುವಾದ – ಕನ್ನಡ ನಿರೂಪಣೆ ಸದ್ಯದಲ್ಲೇ ಪ್ರಕಟವಾಗಿ ಮಾರುಕಟ್ಟೆಗೆ ಬರಲಿದೆ. ಆಸಕ್ತರು aralimara123@gmail ಗೆ ಅಥವಾ 7829743661 – ಈ ಸಂಖ್ಯೆಗೆ ವಾಟ್ಸ ಸಂದೇಶ ಕಳುಹಿಸಿ ಪ್ರತಿಗಳಿಗಾಗಿ ವಿಚಾರಿಸಬಹುದು.