ಝೆನ್ ಕಲಿಸುವುದು ಏನೂ ಇಲ್ಲ! : ಓಶೋ ವ್ಯಾಖ್ಯಾನ

ಝೆನ್ ನಲ್ಲಿ ಕಲಿಸುವುದು ಏನೂ ಇಲ್ಲ, ಯಾವ ಸಿದ್ಧಾಂತವೂ ಇಲ್ಲ. ಝೆನ್ ಗೆ ಯಾವ ಗುರಿಯೂ ಇಲ್ಲ ಹಾಗಾಗಿ ಝೆನ್ ಯಾವ ಮಾರ್ಗದರ್ಶನ ಕೂಡ ಮಾಡುವುದಿಲ್ಲ. ಇದೇ ದಿಕ್ಕಿನಲ್ಲಿ ಪ್ರಯಾಣ ಮಾಡು ಅಂತ ಝೆನ್ ಹೇಳೋದಿಲ್ಲ. ಪ್ರಶ್ನೆಗಳನ್ನು ಕಳೆದುಕೊಂಡಾಗ ಉತ್ತರಗಳು ಸಿಗುತ್ತ ಹೋಗುತ್ತವೆ…। ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಝೆನ್ ಮಾಸ್ಟರ್ : ನನ್ನ ಹತ್ತಿರ ಒಂದು ಕೋಲು ಇದೆ ಆದರೂ ನನ್ನ ಹತ್ತಿರ ಯಾವ ಕೋಲೂ ಇಲ್ಲ. ಇದನ್ನ ಹೇಗೆ ವಿವರಸ್ತೀಯ?

ಶಿಷ್ಯ : ನನಗೆ ಸಾಧ್ಯವಿಲ್ಲ.

ಝೆನ್ ಮಾಸ್ಟರ್ : ಇಷ್ಟು ಬೇಗ ಹತಾಶನಾಗಬೇಡ. ಕೈ ಚೆಲ್ಲಬೇಡ. ಜ್ಞಾನೋದಯ ಬೇಕು ಅಂತ ತಾನೇ ನೀನು ಇಲ್ಲಿ ಬಂದಿರೋದು, ಹಾಗಾದರೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಎಲ್ಲ ಪ್ರಯತ್ನ ಮಾಡು.

ಶಿಷ್ಯ : ಬಹುಶಃ ಒಂದು ರೀತಿಯಿಂದ ನೋಡಿದರೆ ನಿನ್ನ ಹತ್ತಿರ ಕೋಲು ಇರಬಹುದು ಇನ್ನೊಂದು ರೀತಿಯಿಂದ ನೋಡಿದರೆ ಇಲ್ಲ, ಅಲ್ಲವೆ?

ಝೆನ್ ಮಾಸ್ಟರ್ : ನಾನು ಹೇಳಿದ್ದು ಹಾಗಲ್ಲ. ಯಾವ ರೀತಿಯಲ್ಲಿ ನೋಡಿದರೂ ನನ್ನ ಹತ್ತಿರ ಕೋಲು ಇದೆ ಆದರೂ ನನ್ನ ಹತ್ತಿರ ಕೋಲು ಇಲ್ಲ. ಇದನ್ನ ವಿವರಿಸು.

ಶಿಷ್ಯ : ಸೋತೆ. ನನಗೆ ಸಾಧ್ಯವಿಲ್ಲ.

ಝೆನ್ ಮಾಸ್ಟರ್ : ಹಾಗೆಲ್ಲ ಇಷ್ಟು ಸುಲಭವಾಗಿ ಬಿಟ್ಟು ಕೊಡುವ ಹಾಗಿಲ್ಲ. ನಿನ್ನ ಅಸ್ತಿತ್ವದ ಪ್ರತಿ ಅಣುವಿನ ಮೇಲೆ ಒತ್ತಡ ಹಾಕಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡು.

ಶಿಷ್ಯ : ನಿನ್ನೊಡನೆ ವಾದ ಸಾಧ್ಯವಿಲ್ಲ.

ಝೆನ್ ಮಾಸ್ಟರ್ : ನಿನಗೆ ಜ್ಞಾನೋದಯ ಬೇಡವೆ?

ಶಿಷ್ಯ : ಜ್ಞಾನೋದಯ ಅಂದ್ರೆ ಇಂಥ ಹುಚ್ಚು ಪ್ರಶ್ನೆಗೆಲ್ಲ ಉತ್ತರ ಕಂಡುಕೊಳೋದು ಆದ್ರೆ ಅದನ್ನ ನೀನೇ ಇಟ್ಟುಕೋ. ಗುಡ್ ಬೈ , ನಾನು ಇಲ್ಲಿಂದ ಹೊರಡ್ತಾ ಇದ್ದೀನಿ.

ಹನ್ನೆರಡು ವರ್ಷಗಳ ನಂತರ………

ಶಿಷ್ಯ : ಮತ್ತೆ ನಾನು ನಿನ್ನ ಹತ್ತಿರ ವಾಪಸ್ ಬರಬೇಕಾಯ್ತು. ನನಗೆ ಪಶ್ಚಾತಾಪ ಆಗಿದೆ. ಹನ್ನೆರಡು ವರ್ಷ ನಿನ್ನ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನ ಮಾಡದೇ ಇಲ್ಲಿಂದ ಓಡಿಹೋದ ನನ್ನ ಹೇಡಿತನ ಮತ್ತು ಅಸಹನೆಗಾಗಿ ನನಗೆ ನನ್ನ ಮೇಲೆಯೇ ನಾಚಿಕೆ ಆಗ್ತಿದೆ. ಬದುಕಿನ ಪ್ರಶ್ನೆಗಳಿಂದ ಓಡಿ ಹೋಗೋದು ಇನ್ನು ನನ್ನಿಂದ ಸಾಧ್ಯವಿಲ್ಲ. ಒಮ್ಮಿಲ್ಲ ಒಮ್ಮೆ ಬದುಕಿನ ಆತ್ಯಂತಿಕ ಪ್ರಶ್ನೆಗಳಿಗೆ ನಾನು ಮುಖಾಮುಖಿಯಾಗಲೇ ಬೇಕು. ಈಗ ನಾನು ನಿನ್ನ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲು ಸಿದ್ಧನಾಗಿರುವೆ.

ಝೆನ್ ಮಾಸ್ಟರ್ : ಪ್ರಶ್ನೆ ? ಯಾವ ಪ್ರಶ್ನೆ ಅದು ?

ಶಿಷ್ಯ : ನಿನ್ನ ಹತ್ತಿರ ಒಂದು ಕೋಲು ಇದೆ ಆದರೂ ನಿನ್ನ ಹತ್ತಿರ ಕೋಲು ಇಲ್ಲ . ಇದು ಹೇಗೆ ವಿವರಿಸು ಅಂತ ಪ್ರಶ್ನೆ ಕೇಳಿದ್ದಿರಿ ಮಾಸ್ಟರ್.

ಝೆನ್ ಮಾಸ್ಟರ್ : ಇಂಥ ದಡ್ಡ ಪ್ರಶ್ನೆನಾ ನಾನು ಕೇಳಿದ್ದು? ಎಂಥ ಮೂರ್ಖ ನಾನು.

ಝೆನ್ ದು ದ್ವಂದ್ವಾತ್ಮಕ ತಾರ್ಕಿಕತೆ, ಬಾಟಲಿಯಲ್ಲಿ ಹಾಕಲಾಗಿರುವ ಬಾತುಕೋಳಿಯನ್ನ, ಬಾಟಲಿ ಒಡೆಯದೇ ಹೊರ ತೆಗೆಯುವುದು ಹೇಗೆ ಎನ್ನುವ ಪ್ರಶ್ನೆಗೆ, ಝೆನ್ ಯಾವ ತರ್ಕವನ್ನೂ ಬಳಸುವುದಿಲ್ಲ. “ನೋಡು ನೋಡು ಬಾತುಕೋಳಿ ಬಾಟಲಿಯಿಂದ ಹೊರಬಂತು” ಎಂದು ಉತ್ತರಿಸುತ್ತದೆ. ಬಾತುಕೋಳಿಯನ್ನು ಬಾಟಲಿಯಲ್ಲಿ ಹಾಕಿದ್ದು ನಮ್ಮ ಮೈಂಡ್ ತಾನೆ, ಅದೇ ಮೈಂಡ್ ಬಳಸಿ ಬಾತುಕೋಳಿಯನ್ನ ಹೊರತೆಗೆದರಾಯ್ತು. ಎಲ್ಲ ಪ್ರಶ್ನೆಗಳಿಗೂ ತರ್ಕದಿಂದ ಉತ್ತರ ಸಾಧ್ಯವಿಲ್ಲ.

ಝೆನ್ ನಲ್ಲಿ ಕಲಿಸುವುದು ಏನೂ ಇಲ್ಲ, ಯಾವ ಸಿದ್ಧಾಂತವೂ ಇಲ್ಲ. ಝೆನ್ ಗೆ ಯಾವ ಗುರಿಯೂ ಇಲ್ಲ ಹಾಗಾಗಿ ಝೆನ್ ಯಾವ ಮಾರ್ಗದರ್ಶನ ಕೂಡ ಮಾಡುವುದಿಲ್ಲ. ಇದೇ ದಿಕ್ಕಿನಲ್ಲಿ ಪ್ರಯಾಣ ಮಾಡು ಅಂತ ಝೆನ್ ಹೇಳೋದಿಲ್ಲ. ಪ್ರಶ್ನೆಗಳನ್ನು ಕಳೆದುಕೊಂಡಾಗ ಉತ್ತರಗಳು ಸಿಗುತ್ತ ಹೋಗುತ್ತವೆ. ನೀನು ಈಗಾಗಲೇ ಅಲ್ಲಿರುವೆ, ಅಲ್ಲಿ ತಲುಪಲು ನೀನು ಹೆಚ್ಚು ಹೆಚ್ಚು ಪ್ರಯತ್ನ ಮಾಡಿದಂತೆಲ್ಲ ನೀನು ಅಲ್ಲಿಂದ ದೂರ ಆಗ್ತಾ ಹೋಗ್ತೀಯ. ಹುಡುಕುವುದು, ಬಯಸುವುದು ಎಂದರೆ ಅದನ್ನ ಕಳೆದುಕೊಳ್ಳುವ ಒಂದು ಖಚಿತ ದಾರಿ.

ನೀನು ಮಾಡಬೇಕಾದ್ದು ಏನೂ ಇಲ್ಲ. ನೀನು ಈಗಾಗಲೇ ಅಲ್ಲಿರುವೆ. ಜ್ಞಾನೋದಯ ಹೊಂದಿರುವ ಮನುಷ್ಯ ನೀನು. ಈಗ ಅದು ನಿನಗೆ ಗೊತ್ತಾಗಬೇಕಷ್ಟೆ, ಅಥವಾ ಅದು ನಿನಗೆ ಗೊತ್ತಾಗಬೇಕಿಲ್ಲ ಕೂಡ.


Source: Osho – As told in ‘Take it easy’

Leave a Reply