ಕರ್ಮ ಮತ್ತು ಕರ್ಮ ಯೋಗ; ರಮಣ ಮಹರ್ಷಿಗಳ ಒಂದು ದೃಷ್ಟಾಂತ ಕಥೆ

ಕರ್ಮದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಅದನ್ನೊಂದು ಯೋಗವನ್ನಾಗಿ ಮಾಡಿಕೊಂಡರೆ, ಕರ್ಮದ ಬವಣೆಗಳಿಗೆ ದುಃಖಿಸುವುದು ತಪ್ಪುತ್ತದೆ ಅನ್ನುತ್ತಾರೆ ಶ್ರೀ ರಮಣ ಮಹರ್ಷಿಗಳು.

ಒಮ್ಮೆ ವಿದೇಶಿ ಯಾತ್ರಿಕರೊಬ್ಬರು ರಮಣ ಮಹರ್ಷಿಗಳ ಬಳಿ ಬಂದು, “ನೆನ್ನೆ ನೀವು ಉಪನ್ಯಾಸದಲ್ಲಿ ಕರ್ಮ ಮತ್ತು ಕರ್ಮಯೋಗದ ಕುರಿತಾಗಿ ಹೇಳಿದಿರಿ. ಇದರ ಅರ್ಥ ಏನು?” ಎಂದು ಕೇಳಿದರು. ಆಗ ಮಹರ್ಷಿಗಳು ನನ್ನ ಜೊತೆ ಬೆಟ್ಟ ಹತ್ತಿ, ನಿಮಗೇ ಗೊತ್ತಾಗುತ್ತದೆ ಎಂದರು.

ಸರಿ ಯಾತ್ರಿಕರು ಅವರೊಟ್ಟಿಗೆ ಬೆಟ್ಟ ಹತ್ತುತ್ತಿದ್ದರು. ಸುಮಾರು ಅರ್ಧ-ಮುಕ್ಕಾಲು ದಾರಿ ಹೋಗಿದ್ದರು. ಆಗ ಅಲ್ಲೊಬ್ಬಳು ಅಜ್ಜಿ ಕಟ್ಟಿಗೆ ಆರಿಸಲು ಕಾಡಿಗೆ ಬಂದಿದ್ದಳು. ಅಜ್ಜಿಗೆ ವಯಸ್ಸಾಗಿದೆ, ಮೈಯಲ್ಲಿ ಶಕ್ತಿ ಇಲ್ಲ. ಹಾಗಾಗಿ ಕಟ್ಟಿಗೆಗಳನ್ನು ಕಡಿಯುವುದಾಗಲಿ, ಮುರಿಯುವುದಾಗಲಿ ಮಾಡದೆ ಒಣಗಿ ಬಿದ್ದಿರುವ ಸಣ್ಣ ಪುರಲೆಯಂಥ ಕಟ್ಟಿಗೆಗಳ ತುಂಡುಗಳನ್ನೆ ಆರಿಸಿಕೊಂಡು ಎಲ್ಲವನ್ನು ಒಟ್ಟು ಮಾಡಿ, ಬರುವಾಗಲೇ ತಂದಿದ್ದ ಸಣ್ಣ ಸಣ್ಣ ತುಂಡಾದ ಹಗ್ಗಗಳನ್ನು ಸೇರಿಸಿ ಗಂಟುಕಟ್ಟಿ ಕಟ್ಟಿಗೆಯ ಹೊರೆ ಮಾಡಿದಳು.

ಆ ಕಟ್ಟಿಗೆ ಹೊರೆಯನ್ನು ತಲೆಯ ಮೇಲೆ ಇಟ್ಟುಕೊಳ್ಳಲು ತುಂಬಾ ಪ್ರಯತ್ನ ಪಡುತ್ತಿದ್ದಳು. ಸರಿಯಾಗಿ ತಲೆ ಮೇಲೆ ಇಟ್ಟುಕೊಳ್ಳಲಾಗದೆ, ಮತ್ತೆ ಕೆಳಗಿಡುತ್ತಿದ್ದಳು. ದೂರದಲ್ಲಿ ನಿಂತ ರಮಣ ಮಹರ್ಷಿಗಳು, ಯಾತ್ರಿಕರು ನೋಡುತ್ತಲೇ ಇದ್ದರು. ಇದೇ ರೀತಿ ಹರಸಾಹಸ ಮಾಡಿ ಅಂತೂ ತಲೆಯಮೇಲೆ ಇಟ್ಟುಕೊಂಡಳು. ಅಲ್ಲಿಂದ ಇನ್ನೂ ಮೇಲೆ ಹೋಗಬೇಕು. ಆದರೆ ಅಜ್ಜಿಗೆ ತಾನು ಬರಿಗೈಯಲ್ಲಿ ಹತ್ತುವುದೇ ಕಷ್ಟವಾಗಿತ್ತು, ಹೀಗಿರುವಾಗ ಕಟ್ಟಿಗೆ ಹೊರೆಯನ್ನು ತಲೆಯಮೇಲೆ ಇಟ್ಟುಕೊಂಡು ಬೆಟ್ಟ ಹತ್ತುವುದು ಎಂದರೆ ಇನ್ನೆಷ್ಟು ಕಷ್ಟವಾಗಬೇಡ!

ಆ ಅಜ್ಜಿ ಕಷ್ಟಪಟ್ಟು ಹೆಜ್ಜೆ ಇಡುತ್ತಾ ಬೆಟ್ಟ ಹತ್ತುವುದನ್ನು ನೋಡುತ್ತಿದ್ದ ಮಹರ್ಷಿಗಳು ಆಕೆಯನ್ನು ಕೂಗಿ ಒಂದು ನಿಮಿಷ ನಿಲ್ಲಿ ಎಂದು ತಡೆದರು. ಹತ್ತಿರ ಹೋಗಿ ಅವಳು ಹೊತ್ತಿದ್ದ ಕಟ್ಟಿಗೆ ಹೊರೆಯೊಳಗಿಂದ ಒಂದು ಉದ್ದನೆಯ ಕಟ್ಟಿಗೆಯನ್ನು ತೆಗೆದು ಅಜ್ಜಿಯ ಕೈಗೆ ಕೊಟ್ಟು, “ನೋಡು ತಾಯಿ ಈ ಕಟ್ಟಿಗೆಯನ್ನು ಊರುಗೋಲು ಮಾಡಿಕೊಂಡು ಬೆಟ್ಟ ಹತ್ತು, ಸ್ವಲ್ಪ ಸುಲಭ ಆಗುತ್ತದೆ” ಎಂದರು. ಅಜ್ಜಿ ಅವರು ಹೇಳಿದಂತೆ ಕಟ್ಟಿಗೆಯನ್ನು ನೆಲದ ಮೇಲೆ ಊರಿ ನೋಡಿದಳು, ಅವಳಿಗೆ ನಿಜಕ್ಕೂ ಅರಾಮೆನಿಸಿತು. ಆಕೆ ಮಹರ್ಷಿಗಳಿಗೆ ಧನ್ಯವಾದ ಹೇಳಿ, ಸಂತೋಷದಿಂದ ಮುಂದೆ ಸಾಗಿದಳು.

ಮಹರ್ಷಿಗಳು ಯಾತ್ರಿಕರಿಗೆ, “ಈಗ ನಿಮಗೆ ಕರ್ಮ, ಕರ್ಮಯೋಗದ ಅರ್ಥವಾಯಿತೇ?” ಎಂದರು. ಆದರೆ ಆತ ತಲೆಯಾಡಿಸುತ್ತಾ, “ನನಗೆ ಅರ್ಥ ಆಗಿಲ್ಲ” ಅಂದರು. ಮಹರ್ಷಿಗಳು ಮೆಲುನಗುತ್ತಾ, “ಅಜ್ಜಿ ಬದುಕಿಗಾಗಿ ಕಟ್ಟಿಗೆಯನ್ನು ಹೊರಲೇಬೇಕು ಅದು ಕರ್ಮ ಹಾಗೂ ಅನಿವಾರ್ಯ. ಆದರೆ ನಾನು ಆ ಕರ್ಮದ ಕಟ್ಟಿಗೆ ಹೊರೆಯಿಂದ, ಒಂದು ಕಟ್ಟಿಗೆ ತೆಗೆದು ಅವಳಿಗೆ ಊರುಗೋಲು ಮಾಡಿಕೊಟ್ಟೆ. ಹೀಗಾಗಿ ಹೆಚ್ಚು ಕಷ್ಟಪಡದೆ ಕರ್ಮ ಮಾಡಿದಳು. ಕಟ್ಟಿಗೆ ಹೊರುವುದು ಕರ್ಮ, ಆದರೆ ಆ ಕಟ್ಟಿಗೆ ಹೊರೆಯೊಳಗಿಂದ ಒಂದು ಕಟ್ಟಿಗೆ ತೆಗೆದು ಊರುಗೋಲು ಮಾಡಿಕೊಂಡು ಸಂತೋಷದಿಂದ ಕರ್ಮ ಮಾಡುವುದು ಕರ್ಮಯೋಗ” ಎಂದು ವಿವರಿಸಿದರು.

ಕರ್ಮದಿಂದ ಯಾರೂ ಯಾವ ರಿತಿಯಲ್ಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕರ್ಮಕ್ಕೆ ಹೆದರಿ, “ಅಯ್ಯೋ ಕಷ್ಟ!” ಎಂದು ಹಲುಬುವುದಕ್ಕಿಂತ ಅದನ್ನೇ ಊರುಗೋಲಿನಂತೆ ಮಾಡಿಕೊಂಡು ಕರ್ಮ ನಡೆಸಿದರೆ ಅದೇ ಕರ್ಮಯೋಗ. ಇದು ರಮಣರ ಈ ಜ್ವಲಂತ ದೃಷ್ಟಾಂತದ ಸಾರ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.