ಸುಮ್ಮನೆ ಬದುಕುವುದು… ಅದೆಷ್ಟು ಅದ್ಭುತ ಸಂಗತಿ! : ಫುಕುವೊಕ ಸಂದರ್ಶನ

‘ನೈಸರ್ಗಿಕ ಕೃಷಿ’ಯ ಮೂಲಕ ವಿಶ್ವಾದ್ಯಂತ ಪರಿಚಿತರಾದ ಮಸನೊಬು ಫುಕುವೊಕರ ಚಿಂತನೆ ಅಧ್ಯಾತ್ಮವಲ್ಲದೆ ಮತ್ತೇನೂ ಅಲ್ಲ. ಅವರ ಮಾತುಗಳನ್ನು ಕೇಳಿದರೆ, ಅವರೊಬ್ಬ ‘ಕೃಷಿ ಸಂತ’ ಅನ್ನುವುದರಲ್ಲಿ ಅನುಮಾನವೇ ಉಳಿಯುವುದಿಲ್ಲ. ಫುಕುವೊಕರ ಈ ಸಂದರ್ಶನ, ಅವರ ಕಾಣ್ಕೆಯ ಸೂಕ್ಷ್ಮ ಪರಿಚಯ ಮಾಡಿಸುತ್ತದೆ. ಇದನ್ನು ಇಂಗ್ಲಿಶ್’ನಿಂದ ಕನ್ನಡಕ್ಕೆ ತಂದವರು ಎನ್.ಎ.ಎಮ್.ಇಸ್ಮಾಯಿಲ್.

ಮಸನೊಬು ಫುಕುವೊಕ ಹುಟ್ಟಿದ್ದು 1913ರಲ್ಲಿ. ಜಪಾನಿನ ಶಿಕೊಕು ದ್ವೀಪದ ಕೃಷಿಕರೊಬ್ಬರ ಮಗನಾಗಿದ್ದ ಇವರು ಕಲಿತದ್ದು ಮೈಕ್ರೋಬಯಾಲಜಿ. ಶಿಕ್ಷಣ ಮುಗಿಸಿದ ನಂತರ ಕೆಲಕಾಲ ಅಗ್ರಿಕಲ್ಚರ್‌ ಕಸ್ಟಮ್ ಇನ್ಸ್‌ಪೆಕ್ಟರ್‌ ಆಗಿ ಕೆಲಸ ಮಾಡಿದರು. ತಮ್ಮ 25ನೇ ವಯಸ್ಸಿನಲ್ಲಿ `ವೈಜ್ಞಾನಿಕ ಕೃಷಿ’ಯ ಭ್ರಮೆ ಕಳಚಿಕೊಂಡರು. ಮಾನವ ಸೃಜಿಸಿರುವ ಪ್ರತಿಯೊಂದೂ ಪ್ರಕೃತಿಯೆದುರು ಏನೇನೂ ಅಲ್ಲ ಎಂದು ಪ್ರತಿಪಾದಿಸ ತೊಡಗಿದರು. ಇದನ್ನು ಪ್ರಾಯೋಗಿಕವಾಗಿ ಸಾಬೀತು ಮಾಡಲು ತಮ್ಮ ಕೆಲಸವನ್ನು ಬಿಟ್ಟು ನೈಸರ್ಗಿಕ ಕೃಷಿ ಎಂಬ ಹೊಸ ಕೃಷಿ ವಿಧಾನವನ್ನು ಹುಟ್ಟು ಹಾಕಿ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನೈಸರ್ಗಿಕ ಕೃಷಿ ಅಥವಾ do nothing ಕೃಷಿ ಕೇವಲ ಒಂದು ಕೃಷಿ ತಂತ್ರ ಅಲ್ಲ. ಇದು ಒಂದು ಹೊಸ ತತ್ವ ಶಾಸ್ತ್ರ, ಒಂದು ಚಿಂತನೆಯ ವಿಧಾನ. ಪ್ರತಿಯೊಂದನ್ನೂ ತುಂಡರಿಸಿ ಅರ್ಥ ಮಾಡಿಕೊಳ್ಳುವ ವಿಶ್ಲೇಷಣಾತ್ಮಕ ಚಿಂತನಾಕ್ರಮಕ್ಕೆ ಪರ್ಯಾಯವಾಗಿ ಎಲ್ಲವನ್ನೂ ಸಮಗ್ರವಾಗಿ ಗ್ರಹಿಸುವ ಸಂಶ್ಲೇಷಣಾತ್ಮಕ ಚಿಂತನಾಕ್ರಮ ಇದು. `ಒಂದು ಹುಲ್ಲಿನ ಕ್ರಾಂತಿ’ಯ ಮೂಲಕ ಫುಕುವೊಕ ಕನ್ನಡಿಗರಿಗೂ ಪರಿಚಿತರು. ತಮ್ಮ ಜಪಾನೀ ಪ್ರಕಾಶಕರೊಂದಿಗೆ ನಡೆಸಿದ ಸಂವಾದದ ಸಂಗ್ರಹ ರೂಪ ಇಲ್ಲಿದೆ. ವಿಜ್ಞಾನ ಕಲಿಸಿದ ವಿಶ್ಲೇಷಣಾತ್ಮಕ ಕ್ರಮದೊಂದಿಗೆ ಬದುಕನ್ನು ರೂಪಿಸಿಕೊಂಡಿರುವ ಆಧುನಿಕ ಮಾನವನ ಅನೇಕ ಆದ್ಯಾತ್ಮಕ ಸಮಸ್ಯೆಗಳಿಗೆ ಫುಕುಪೊಕ ಅವರು ಪ್ರಕೃತಿಯಲ್ಲೇ ಉತ್ತರ ಕಂಡುಕೊಂಡಿದ್ದಾರೆ. ಈ ಉತ್ತರದ ನಿರೂಪಣೆ ಈ ಸಂವಾದದಲ್ಲಿದೆ | N A M ಇಸ್ಮಾಯಿಲ್.

ಅತಿ ವೇಗದ ವೈಜ್ಞಾನಿಕ ಬೆಳವಣಿಗೆ ಮನುಕುಲದ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸುವುದರ ಬಗ್ಗೆ ಕಳೆದ ಮೂರ್ನಾಲ್ಕು ದಶಕಗಳಿಂದ ಮಾತನಾಡುತ್ತಿದ್ದೇವೆ. ಆದರೆ ಈ ಅವಧಿಯ ಬೆಳವಣಿಗೆಗಳನ್ನು ನೋಡುವಾಗ ನಮ್ಮ ಊಹೆಗಳೆಲ್ಲಾ ಸುಳ್ಳು ಎನಿಸುತ್ತಿದೆ. ವಿಶ್ವದ ವಿವಿಧ ಭಾಗಗಳಲ್ಲಿ ಕ್ಷಾಮ ಮತ್ತು ಬಡತನ ಹೆಚ್ಚುತ್ತಿದೆ. ಇದರ ಜೊತೆಯಲ್ಲೇ ಅಣ್ವಸ್ತ್ರಗಳ ಭೀತಿಯೂ! ಇವೆಲ್ಲವನ್ನೂ ಒಟ್ಟಿಗೆ ನೋಡುವಾಗ ಮನುಕುಲ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುವಂತೆ ಕಾಣುತ್ತಿದೆ.

ನೀವು ಹೇಳುತ್ತಿರುವುದು ಸರಿ. ಮನುಷ್ಯ ಯಾಕೆ ಬದುಕಬೇಕಾಗಿದೆ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಿದೆ. `ಮನುಷ್ಯ ಕೇವಲ ರೊಟ್ಟಿಯಿಂದಷ್ಟೇ ಬದುಕಲಾರ’ ಎಂದು ಕ್ರಿಸ್ತ ಹೇಳಿದ್ದ. ಈ ಮಾತನ್ನು ನಾನು ಮನುಕುಲದ ಭವಿಷ್ಯದ ಕೈಮರ ಎಂದುಕೊಂಡಿದ್ದೇನೆ.

ಕೇವಲ ಆಹಾರ ಮತ್ತು ಇಂಧನ ಮೂಲಗಳನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಾಧ್ಯವಾದರೆ ಭವಿಷ್ಯ ಸುರಕ್ಷಿತ ಎಂಬ ಭಾವನೆ ಅತಿ ಆಶಾವಾದವಾದವೇ?

ಮನುಷ್ಯನಿಗೆ ತಾನು ಏನನ್ನು ಬಳಸಿ ಬದುಕುತ್ತೇನೆ ಎಂಬುದರ ಅರಿವಿಲ್ಲ. ಏನನ್ನು ತಿನ್ನಬೇಕು, ಯಾವುದನ್ನು ಆಶ್ರಯಿಸಿದರೆ ತನಗೆ ಬದುಕಲು ಸಾಧ್ಯ ಎಂಬುದೂ ಅವನಿಗೆ ತಿಳಿಯುತ್ತಿಲ್ಲ. 

ಹಾಗಾದರೆ ಮನುಷ್ಯ ಹೇಗೆ ಬದುಕುತ್ತಿದ್ದಾನೆ ಎಂಬುದನ್ನು ವಿಜ್ಞಾನ ಈವರೆಗೆ ವಿವರಿಸಲು ಸಮರ್ಥವಾಗಿಲ್ಲವೇ?

ವಿಜ್ಞಾನದ ಮೂಲಕ ಅವನಿಗೆ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆಯೇ? ಮನುಷ್ಯನ ನಿಜವಾದ ಆಹಾರ ಯಾವುದು ಎಂಬುದರ ಬಗ್ಗೆ ವಿಜ್ಞಾನಕ್ಕೆ ಒಂದು ಅಸ್ಪಷ್ಟ ಕಲ್ಪನೆ ಕೂಡಾ ಇಲ್ಲ. ಮನುಷ್ಯ ಯಾವುದನ್ನು,ಯಾಕೆ ಮತ್ತು ಹೇಗೆ ತಿನ್ನುತ್ತಾನೆ ಎಂಬುದನ್ನು ವಿಜ್ಞಾನ ವಿವರಿಸಲಾರದು. ಇರುವಿಕೆಯ ನೆಲೆಗಟ್ಟು ಮತ್ತು ಕಾರಣಗಳನ್ನು ತೋರಿಸಿಕೊಡಲು ಅದಕ್ಕೆ ಸಾಧ್ಯವಿಲ್ಲ. ಬದುಕಿನ ನಿಜವಾದ ಮೂಲ, ಅರ್ಥ ಮತ್ತು ಉದ್ದೇಶಗಳ ಕುರಿತು ವಿವರಿಸುವುದು ಹಾಗಿರಲಿ, ಇವುಗಳ ಸಾಮಾನ್ಯ ಲಕ್ಷಣಗಳನ್ನು ಹೇಳಲೂ ವಿಜ್ಞಾನಕ್ಕೆ ಸಾಧ್ಯವಾಗಿಲ್ಲ. ನಿಮ್ಮ ಬದುಕಿನ ಶೈಲಿ, ಅದನ್ನು ರೂಢಿಸಿಕೊಳ್ಳುವಲ್ಲಿ ಅನುಸರಿಸಿದ ಪ್ರಕ್ರಿಯೆಗಳು ಸರಿ ಎಂದು ನಿಮಗನ್ನಿಸುತ್ತಿದೆಯೇ? ಅದೆಲ್ಲಾ ಬಿಡಿ, ನೀವು ಇನ್ನೂ ಏಕೆ ಬದುಕುವುದನ್ನು ಅಥವಾ ಇರುವಿಕೆಯನ್ನು ಮುಂದುವರಿಸಬೇಕು ಎನ್ನುವುದಕ್ಕೆ ನಿಮ್ಮಲ್ಲಿ ಸ್ಪಷ್ಟ ಕಾರಣಗಳಿವೆಯೇ?

ಬದುಕಿನ ಸಮಸ್ತ ಆಯಾಮಗಳು ತಿಳಿದಿದೆ ಎಂದು ಹೇಳುತ್ತಿಲ್ಲ. ಆದರೆ, ಇತರ ಪ್ರಾಣಿಗಳಿಗೆ ಮನುಷ್ಯನಷ್ಟು ಬುದ್ಧಿಯಿಲ್ಲ. ಅಥವಾ ಅವು ಮನುಷ್ಯನಂತೆ ಬದುಕುತ್ತಿಲ್ಲ ಎಂದು ಹೇಳುವುದರಲ್ಲಿ ತಪ್ಪಿದೆಯೇ?

ಇದೇ ವಾದವನ್ನು ಸ್ವಲ್ಪ ಮುಂದುವರಿಸಿ ನೋಡಿದರೆ ಒಂದು ನರಿಗೆ ಅಥವಾ ಹಕ್ಕಿಗೆ ಏನು ತಿನ್ನಬೇಕು, ಯಾವುದರ ಬೇಸಾಯ ಮಾಡಬೇಕು ಎಂಬುದರ ಅರಿವೇ ಇಲ್ಲ. ಮನುಷ್ಯನ ದೃಷ್ಟಿಯಲ್ಲಿ ಈ ಜೀವಿಗಳ ಬದುಕು ಬಹಳ ನಗಣ್ಯ. ಆದರೆ ವಾಸ್ತವ ಈ ನಿಲುವಿಗೆ ವ್ಯತಿರಿಕ್ತವಾಗಿಲ್ಲವೇ? ಪ್ರಕೃತಿಯನ್ನುಚೆನ್ನಾಗಿ ಅರಿತ ಹಾಗೂ ನಂಬಿಕೆಗೆ ಅರ್ಹ ಎನಿಸಿ ಬದುಕುವ ವಿಧಾನವನ್ನು ಹೊಂದಿರುವವು ಪ್ರಾಣಿಗಳು ಮಾತ್ರ.

ಯಾವ ಅರ್ಥದಲ್ಲಿ?

ಅವು ಅಂದರೆ ಪ್ರಾಣಿಗಳು ಸೋಮಾರಿತನ ಅಥವಾ ಅನಿಶ್ಚಿತತೆಗಳಿಲ್ಲದ ಬದುಕನ್ನು ನಡೆಸುತ್ತವೆ.

ಆದರೆ ಮನುಷ್ಯ ಒಂದು ಹುಳು ಅಥವಾ ಕೀಟವಲ್ಲ. ಈ ಅನಿಶ್ಚಿತತೆ ತುಂಬಿದ ಬದುಕು ಒಂದು ರೀತಿಯಲ್ಲಿ ಸರಿ. ಅಷ್ಟೇ ಏಕೆ, ಮನುಷ್ಯ ತನ್ನ ಬದುಕಿಗಾಗಿ ನಡೆಸಿದ ಆಕ್ರಮಣಗಳಿಗೆ ಆತ ಹೆಮ್ಮೆ ಪಡುತ್ತಿದ್ದಾನೆ. ಮನುಕುಲದ ಕ್ಷೇಮವನ್ನು ಶಾಶ್ವತಗೊಳಿಸುವ ಹಾದಿಯಲ್ಲಿ ತನ್ನ ಆಯಸ್ಸನ್ನು ಹೆಚ್ಚಿಸುವ ಅವಕಾಶವನ್ನು ಆತನೇ ಸೃಷ್ಟಿಸಿಕೊಳ್ಳಲು ಸಾಧ್ಯ ಎಂಬ ವಾದವೂ ಇದೆ. ಇದು ಇನ್ಯಾವ ಜೀವಿಗೆ ಸಾಧ್ಯ?

ಹಾಗೆ ಯೋಚಿಸುವವರಿಗೆ ಮೇ ಪತಂಗದ ಮೂರು ದಿನಗಳ ಸುಂದರ ಬದುಕು ಎಂಬುದು ಅರ್ಥವಿಲ್ಲದ್ದಾಗಿ ಕಾಣಬಹುದು. ಅವರ ದೃಷ್ಟಿಯಲ್ಲಿ ಸಂತೋಷದೊಂದಿಗೆ ಸಾಕಷ್ಟು ವಿಷಾದವೂ ತುಂಬಿರುವ ಮನುಷ್ಯನ ಬದುಕಿಗೆ ಹೆಚ್ಚು ಅರ್ಥವಿದೆ. ಇದೊಂದು ರೀತಿಯಲ್ಲಿ ಪ್ರಕ್ಷುಬ್ದ ನರಕ, ಶಾಂತಿ ನೆಮ್ಮದಿಗಳಿರುವ ಸ್ವರ್ಗಕ್ಕಿಂತ ಸುಂದರವಾದದ್ದು ಎಂದು ಹೇಳಿದಂತಿರುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಬದುಕಿನ ಪ್ರಾಮುಖ್ಯತೆಯನ್ನು ಅದರ ಆಯಸ್ಸಿನ ಪ್ರಮಾಣವನ್ನು ಇಟ್ಟುಕೊಂದು ನಿರ್ಧರಿಸಲು ಸಾಧ್ಯವಿಲ್ಲ.

ಆಯಸ್ಸಿನ ಪ್ರಮಾಣದ ವಿಷಯ ನೀವು ಹೇಳುವಷ್ಟು ಅಮುಖ್ಯವಲ್ಲ. ಭೂಮಿಯ ಮೇಲೆ ಮನುಷ್ಯ ಹುಟ್ಟಿದಂದಿನಿಂದ ಆತ ಚಿರಯೌವ್ವನಕ್ಕಾಗಿ, ಚಿರಂಜೀವಿತ್ವಕ್ಕಾಗಿ ನಡೆಸಿದ ಸಂಶೋಧನೆಯಂತೆ ಬೇರೆ ಯಾವ ಸಂಶೋಧನೆಯನ್ನೂ ಮಾಡಿಲ್ಲ. ಇದಕ್ಕಾಗಿಯೇ ಆತ ಪ್ರಾರ್ಥಿಸಿದ, ಬೇಡಿಕೊಂಡ. ಈ ಪ್ರಯತ್ನಗಳು ಮನುಷ್ಯನ ಮೆದುಳನ್ನು ಪ್ರಚೋದಿಸಿದ್ದರ ಪರಿಣಾಮವಾಗಿಯೇ ಮನುಕುಲದ ಪ್ರಗತಿ ಸಾಧ್ಯವಾಯಿತು. ಇದನ್ನು ಮನುಷ್ಯರಾಶಿಯ ಪ್ರಗತಿಯ ಸ್ಫೂರ್ತಿ ಎಂದು ಭಾವಿಸಕೂಡದೆ?

ಜೀವನ ಅಥವಾ ಯೌವ್ವನದ ಅವಧಿಯನ್ನು ಹೆಚ್ಚಿಸುವ ಅಥವಾ ಚಿರಂಜೀವಿತ್ವದ ಈ ದಯನೀಯ ಆಸೆಯನ್ನು ನಾನು ದುರಂತದ ದಾಹ ಎಂದು ಕರೆಯುತ್ತೇನೆ. ಸಾವಿಗೆ ಹೆದರುವ ಹಾಗೆಯೇ ಬದುಕಿನ ದೀರ್ಘತೆಗೆ ಪ್ರಾರ್ಥನೆಗಳನ್ನು ನಡೆಸುವ ಮೊದಲು ಮನುಷ್ಯ ಬೇರೊಂದು ಕೆಲಸ ಮಾಡಬೇಕಿತ್ತು. ಅದೇನೆಂದರೆ `ನಾನೇಕೆ ಸಾವಿಗೆ ಹೆದರುತ್ತಿದ್ದೇನೆ?’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು. ಹಕ್ಕಿಗಳಿಗೆ ಸಾವಿನ ಭಯವಿಲ್ಲ. ಮನುಷ್ಯ ದಿನನಿತ್ಯ ಮರಣದ ಮಾಯಾರೂಪಗಳನ್ನು ಎದುರಿಸುತ್ತಾನೆ. ಸಾವಿನ ಕುರಿತ ಈ ಉತ್ಕಟ ಭೀತಿಯಲ್ಲಿ ಮನುಷ್ಯ ಬದುಕು ಕೊಚ್ಚಿ ಹೋಗುತ್ತಿರುವುದೇಕೆ? ಇದು ಆರಂಭವಾದದ್ದು ಯಾವಾಗ?. ಮೊದಲನೆಯದಾಗಿ ಮನುಷ್ಯನ ಬದುಕು ಎಂಬುದು ಸಾವಿನಿಂದ ಬಂದದ್ದಲ್ಲ. ಅಥವಾ ಮನುಷ್ಯನ ಬದುಕನ್ನು ನಿಯಂತ್ರಿಸುತ್ತಿರುವುದು ಸಾವಲ್ಲ. ಸಾವು ಎಂಬುದು ಬದುಕಿನೊಂದಿಗೆ ಯಾವ ರೀತಿಯ ಸಂಬಂಧವನ್ನೂ ಹೊಂದಿಲ್ಲ ಎಂಬುದು ವಾಸ್ತವ. ಭತ್ತದ ಸಸಿ ಪ್ರತೀ ವರ್ಷ ನಶಿಸುತ್ತದೆ. ಆದರೆ, ಭತ್ತದ ಕಾಳುಗಳು ಬದುಕನ್ನು ಮುಂದುವರಿಸುತ್ತವೆ. ಬದುಕು ಎನ್ನುವುದು ತಲೆಮಾರುಗಳಿಂದ ತಲೆಮಾರುಗಳಿಗೆ ಮುಂದುವರಿಯುತ್ತಲೇ ಇರುತ್ತದೆ. ಪ್ರತೀಸಾರಿಯೂ ಅದು ಹೊಸತಾಗಿ ಹುಟ್ಟುತ್ತದೆ. ಇಂದಿನ ಬದುಕು ಇಂದೇ ಕೊನೆಗೊಳ್ಳುತ್ತದೆ. ಇಂದಿನ ನಾನು ಇಂದೇ ಸಾಯುತ್ತೇನೆ. ನಾಳೆಯ ನಾನು ಇಂದಿನ ನಾನಲ್ಲ. ಇಂದಿನ ಬದುಕನ್ನು ಇಂದೇ ಸರಿಪಡಿಸಬೇಕು. ಬದುಕಿರುವುದು ಎಂದರೆ ಇಂದಿನ ದಿನ ಸಂಪೂರ್ಣವಾಗಿ ಬದುಕುವುದು ಎಂದರ್ಥ. ಇದು ಬದುಕುವುದಕ್ಕೆ ಇರುವ ಒಂದೇ ಒಂದು ದಾರಿ.

ಬದುಕೆಂಬುದು ವಿಚ್ಛಿನ್ನವಾದುದು ಅಥವಾ ಅದಕ್ಕೆ ತದ್ವಿರುದ್ಧವಾಗಿ ಅವಿಚ್ಛಿನ್ನವಾದುದು ಎಂದು ಹೇಳುತ್ತಿದ್ದಾರಾ?

ನಾನು ಮೇಲೆ ಹೇಳಿದ್ದು `ಬದುಕು’ ಎಂಬುದರ ಒಂದು ವಿವರಣೆ ಅಷ್ಟೇ. ಬದುಕು ಎಂಬುದು ಏಕಕಾಲದಲ್ಲಿ ಅವಿಚ್ಛಿನ್ನವಾದ ವಿಚ್ಛಿನ್ನತೆ ಹಾಗೆಯೇ ವಿಚ್ಛಿನ್ನವಾದ ಅವಿಚ್ಛಿನ್ನತೆಯೂ ಆಗಿದೆ. ಒಂದೊಂದು ದಿನವೂ ಹೊಸ ಆರಂಭ. ಅದರ ಜೊತೆಗೇ ಒಂದು ನಾಳೆಯೂ ಆರಂಭವಾಗಿರುತ್ತದೆ. ಆದರೆ ಈ `ನನಗೆ’ ನಾಳೆ ಎಂಬುದೊಂದಿಲ್ಲ.

ಈ ಮನೋಭಾವ ಬದುಕನ್ನು ಶೂನ್ಯ ಅಥವಾ ಅರ್ಥಹೀನಗೊಳಿಸುವುದಿಲ್ಲವೇ?

ಅಲ್ಲ. ಇದು ನೀವು ಹೇಳಿದ್ದಕ್ಕೆ ವಿರುದ್ಧವಾಗಿ ಸಂಭವಿಸುತ್ತದೆ. ನಾಳೆಯ ಸಾವಿಗಾಗಿ ಪ್ರತಿದಿನವೂ ವಿಷಾದಿಸುತ್ತಾ ಪ್ರಾರ್ಥನೆಗಳಲ್ಲಿ ನನಗೊಂದು `ನಾಳೆ’ ದೊರೆಯಬಹುದೆಂದು ನಿರೀಕ್ಷಿಸಿ ಮುಗಿಯದ ಆಸೆಗಳೊಂದಿಗೆ ಬದುಕುವುದು ನಾನು ಹೇಳಿದ್ದಕ್ಕಿಂತ ಕಷ್ಟವಲ್ಲವೇ?

ಜಗತ್ತಿಗೆ ಕಪ್ಪು ಮತ್ತು ಬಿಳುಪಿನಂಥ ಎರಡು ಆಯಾಮಗಳಿವೆ. ಕೆಲವರು ಹೊರಗೆ ಆಯಾಸರಹಿತರಾಗಿ ಯಾವುದೇ ತೊಂದರೆಗಳಿಲ್ಲದೆ ಬದುಕುತ್ತಿದ್ದಾರೆ. ಹಾಗೆಯೇ ಉಳಿದವರು ಬಹಳ ಕೆಳಮಟ್ಟದಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ನಂಬಬಹುದಲ್ಲವೇ?

ಜನರು ಎರಡು ತಪ್ಪು ದಾರಿಗಳಲ್ಲಿ ಸಿಕ್ಕಿಬಿದ್ದಿರುವ ವಿಷಯವನ್ನು ನೀವು ಹೇಳುತ್ತಿದ್ದೀರಿ ಎಂದು ಭಾವಿಸುತ್ತೇನೆ. ಯಾವುದಾದರೊಂದು ಹಾದಿಯನ್ನು ಆಯ್ದುಕೊಳ್ಳಲಾಗದೆ ಅದು ಸರಿಯೇ ಅಥವಾ ಇದು ಸರಿಯೇ ಎಂಬುದರ ಮಧ್ಯೆ ಉಯ್ಯಾಲೆಯಾಡುತ್ತಾರೆ. `ಮನುಷ್ಯ ರೊಟ್ಟಿಯಿಂದಷ್ಟೇ ಬದುಕುವುದಿಲ್ಲ’ ಎಂದು ಹೇಳುವಾಗ ಕ್ರಿಸ್ತ `ನಾವು ಕೇವಲ ರೊಟ್ಟಿಯಿಂದ ಬದುಕುತ್ತಿದ್ದೇವೆ’ ಎಂದು ಟೀಕಿಸುತ್ತಿರುವುದನ್ನು ಜನರು ಅರ್ಥ ಮಾಡಿಕೊಳ್ಳಲಿಲ್ಲ. ರೊಟ್ಟಿಯಿಲ್ಲದೆಯೂ ಬದುಕಬಹುದು ಎಂಬ ಆತ್ಮವಿಶ್ವಾಸ ಇಲ್ಲದವರಿಗೆ ರೊಟ್ಟಿಯಿದ್ದರೂ ಬದುಕಲು ಸಾಧ್ಯವಿಲ್ಲ. ಇಂಥವರು ರೊಟ್ಟಿಯೇ ಇಲ್ಲದ ಸ್ಥಿತಿ ಬಂದಾಗ ಆರ್ತನಾದಗಳಲ್ಲಿ ನರಳುವಿಕೆಗಳಲ್ಲಿ ಮುಳುಗಿಬಿಡುತ್ತಾರೆ.

ನಮ್ಮನ್ನು ನಾವೇ ಪರಿತ್ಯಜಿಸಲು ತಯಾರಾಗಬೇಕಾದ ಆ ದಿನ ಒಂದು ದುರಂತದ ದಿನವಾಗಬಹುದು ಎಂಬುದು ನಿಮ್ಮ ಅಭಿಪ್ರಾಯವೇ?

ನೀವು ಹೇಳುತ್ತಿರುವ ಈ ದುರಂತದ ಪರಿಕಲ್ಪನೆ ಸ್ವಾರ್ಥ ಮತ್ತು ಅಹಂಕಾರಗಳ ಒಂದು ಮೆಟ್ಟಿಲು. ಮಧ್ಯಾಹ್ನದ ಹೊತ್ತು ಸ್ವಲ್ಪ ನಿದ್ರಿಸುವುದು ಒಳ್ಳೆಯದು. ಸ್ವಲ್ಪ ತೂಕಡಿಸಿದರೂ ಆಧ್ಯಾತ್ಮಿಕ ಬೆಳವಣಿಗೆ ಸಾಧ್ಯವಿಲ್ಲ. ಅದರ ಪರಿಣಾಮವಾಗಿ ನಾವು ತಪ್ಪು ಹಾದಿಗೆ ಬಿದ್ದು ಬಿಡುತ್ತೇವೆಂಬ ಸಂಶಯ ನಮ್ಮದು.

ನಿಜ ಹೇಳಬೇಕೆಂದರೆ ನೀವು ಹೇಳುವುದಕ್ಕೆ ಗಮನಕೊಟ್ಟಷ್ಟೂ ಗ್ರಹಿಸಲು ಕಷ್ಟವಾಗುತ್ತಿದೆ.

ನೀವು ಎಷ್ಟು ಹೆಚ್ಚು ಚಿಂತಿಸುತ್ತೀರೋ ಅಷ್ಟು ಕಡಿಮೆ ಅರ್ಥವಾಗುತ್ತದೆ.

ಹಾಗೆಂದರೆ…?

ಚಿಂತನೆಗೆ ವಿರಾಮ ಹಾಕಿದರೆ ನಿಮಗೆ ಎಲ್ಲವೂ ಅರ್ಥವಾಗತೊಡಗುತ್ತದೆ.

ನೀವು ಹೇಳಿದ್ದು ಅರ್ಥವಾಯಿತೆಂದು ನಾನು ಭಾವಿಸುತ್ತೇನೆ

ಅರ್ಥವಾಯಿತು ಎಂದು ಭಾವಿಸುವುದು ಮತ್ತು ನಿಜವಾಗಿಯೂ ಅರ್ಥವಾಗುವುದರ ಮಧ್ಯೆ ಬಹಳ ವ್ಯತ್ಯಾಸವಿದೆ.

ಒಂದು ಉದಾಹರಣೆಯೊಂದಿಗೆ ವಿವರಿಸುವುದಾದರೆ ಕ್ಷಾಮ ಬಾಧಿಸಿರುವ ಆಫ್ರಿಕಾ ಖಂಡದ ರಾಷ್ಟ್ರದ ಹಸಿವಿನಿಂದ ನರಳುತ್ತಿರುವ ಮಗುವಿಗೆ ಒಂದು ತುಂಡು ರೊಟ್ಟಿ ಗಳಿಸುವುದರ ತೊಂದರೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಐಷಾರಾಮಕ್ಕೆ ಬೇಕಾದ ಎಲ್ಲವನ್ನೂ ತುಂಬಿಕೊಂಡಿರುವ ಆಧುನಿಕ ಸಮುದಾಯಗಳಲ್ಲಿ ಬದುಕುವ ನಾವು ನಮ್ಮ ಆಹಾರದ ಮೂಲಗಳನ್ನೇ ಮರೆತಿರುವಂತೆ ಕಾಣುತ್ತಿದೆ. ಇದಕ್ಕಿರುವ ಒಂದು ಪರಿಹಾರಮಾರ್ಗವೆಂದರೆ ಪ್ರಾಚೀನ ಯುಗಗಳತ್ತ ಹಿಂತಿರುಗಿ ನೋಡಿ ಮನುಷ್ಯ ಮೊದಲಿಗೆ ತಿನ್ನಲು ಆರಂಭಿಸಿದ್ದು ಯಾಕೆ ಎಂಬುದು ಕಂಡುಕೊಳ್ಳಬೇಕಿದೆ.

ಇದು ವಿಜ್ಞಾನದ ದೃಷ್ಟಿಯಲ್ಲಿ ಒಂದು ಒಳ್ಳೆಯ ಮಾರ್ಗವಾಗಿರಬಹುದು. ಆದರೆ, ಮನುಷ್ಯ ಏನನ್ನು ಬಳಸಿ ಬದುಕುತ್ತಾನೆ ಎಂಬುದನ್ನುತೋರಿಸಿಕೊಡಲು ಅದಕ್ಕೆ ಸಾಧ್ಯವಿಲ್ಲ. ಪ್ರಕೃತಿ ಎಂಬುದು ನಿರಂತರವಾದುದು. ಭೂತವೆಂಬುದು ಭೂತವೇ. ಈ ಹಾದಿಯ ಸಂಶೋಧನೆ ಅಜ್ಞಾತ ಭವಿಷ್ಯದ ಮಟ್ಟಿಗೆ ಅರ್ಥಹೀನ.

ಹಾಗಾದರೆ ಮಾರ್ಗದರ್ಶನಕ್ಕಾಗಿ ನಾವು ಏನನ್ನು ಬಳಸಬೇಕು?

ಬದುಕುವುದು, ಅಷ್ಟೇ. ನಾನು ಚಿಕ್ಕವನಿರುವಾಗ ನನಗಿದು ಅರ್ಥವಾಯಿತು. ನಾನು ಬದುಕಿರುವುದರ ಬಗ್ಗೆ ಅರಿತೆ ಎಂದು ನೀವು ಇದನ್ನು ವಿವರಿಸಬಹುದು. ಬದುಕಿರಬೇಕು, ಮಾಡಲಿಕ್ಕಿರುವುದು ಇಷ್ಟೇ ಎಂಬುದು ಅರ್ಥವಾಯಿತು. ಸುಮ್ಮನೆ ಬದುಕುವುದು… ಅದೆಷ್ಟು ಅದ್ಭುತ ಸಂಗತಿ! ಸೃಷ್ಟಿ ನಡೆದು ಕೋಟ್ಯಂತರ ವರ್ಷಗಳು ಉರುಳಿವೆ. ಈ ಭೂಮಿಯ ಮೇಲೆ ಮೊದಲಿಗೆ ಬ್ಯಾಕ್ಟೀರಿಯ ಹುಟ್ಟಿತು, ಮತ್ತೆ ಸಸ್ಯ ಜಾಲ ಚಿಗಿಯಿತು; ಆಮೇಲೆ ಪ್ರಾಣಿಗಳು ಮತ್ತು ಮನುಷ್ಯರ ಆಗಮನವಾಯಿತು. ಎಲ್ಲವೂ ನೈಸರ್ಗಿಕವಾಗಿ ಹುಟ್ಟಿದವು ಮತ್ತು ಬೆಳೆದವು. ಪ್ರಪಂಚದ ಎಲ್ಲವೂ ನಿರಂತರವಾಗಿ ಬದಲಾಗುತ್ತಿವೆ. ಯಾವುದೂ ಇದಕ್ಕೆ ಹೊರತಲ್ಲ. ನಾನು ದೇವರ ಉದಾತ್ತ ಸೃಷ್ಟಿ. ದೇವರ ಪ್ರತಿರೂಪ ಎಂದು ಮನುಕುಲ ತನಗೆ ತಾನೇ ಕೆಸರೆರಚಿಕೊಂಡಿತು. ಆದರೆ ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯ ಜೀವಜಾಲದಲ್ಲಿ ಹೆಚ್ಚು ವಿಕಾಸಗೊಂಡಿದ್ದ ಕೋತಿ ತಾನು ಸೃಷ್ಟಿಯ ಮುಕುಟ ಅಥವಾ ದೇವರ ಪ್ರತಿರೂಪ ಎಂದುಕೊಂಡಿರಲಿಲ್ಲ. ಅದು ಈ ಪ್ರಕೃತಿಯಲ್ಲಿ `ಸುಮ್ಮನೆ ಬದುಕಿತು’. ಇಂದು ಮನುಷ್ಯ ಏನು ತಿನ್ನಬೇಕು, ಹೇಗೆ ಬದುಕಬೇಕು ಎಂದು ಚಿಂತಿಸಿ ಬೇಸರ ಪಡುತ್ತಿದ್ದಾನೆ. ನಾಳೆಯ ಕುರಿತು ಯೋಚಿಸಿ ದುಃಖಿಸುವವರು ಮನುಷ್ಯರು ಮಾತ್ರ. ಈ ಪ್ರಕೃತಿಯಲ್ಲಿ ಭೂತ, ವರ್ತಮಾನಗಳನ್ನು ಕಳೆಯುವ ಮನುಷ್ಯ ಭವಿಷ್ಯವನ್ನೂ ಪ್ರಕೃತಿಗೇಕೆ ಬಿಡಲು ಏಕೆ ಇಷ್ಟು ಕಷ್ಟಪಡುತ್ತಿದ್ದಾನೆ ಎಂಬುದರ ಕುರಿತು ಮೊದಲು ಯೋಚಿಸಬೇಕಿದೆ. 

ಈ ಬುದ್ಧಿವಂತ ಮನುಷ್ಯ ಬದುಕನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಅವನು ಸಾವಿನ ಕುರಿತು ಯೋಚಿಸಿ ನೋವಿಗೀಡಾಗುತ್ತಿದ್ದಾನೆ. `ನಾನು ಏನು ತಿನ್ನಬೇಕು?’ ಎಂದು ಹುಡುಕುತ್ತಾನೆ. ಮನುಷ್ಯನ ಬದುಕಿನ ಕುರಿತು ಮಾತನಾಡುವಾಗ ಯಾವ ಪದಗಳನ್ನು ಬಳಸಬೇಕು ಎಂಬುದು ನನಗೆ ಗೊತ್ತಿಲ್ಲ. ಮರಣದ ಪರಿಕಲ್ಪನೆಯನ್ನು ವಿವರಿಸುವ ಕಷ್ಟವೇ ಇಲ್ಲಿಯೂ ಇದೆ. ಯಾಕಾಗಿ `ಬದುಕಬೇಕು’, ಏನು ತಿಂದು ಬದುಕಬೇಕು ಎಂಬುದನ್ನು ಮೂರ್ತವಾಗಿ ವಿವರಿಸುವಾಗ ನಾನು ಹೇಳುವುದನ್ನು ಅತ್ಯಂತ ಸಂಕುಚಿತ ಅರ್ಥಗಳಲ್ಲಿ ಇತರರು ಗ್ರಹಿಸುತ್ತಾರೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತದೆ. ಅದರಿಂದಾಗಿಯೇ `ಬದುಕಬೇಕು’ ಎಂದಷ್ಟೇ ಹೇಳುವುದು ಇದಕ್ಕೆಲ್ಲಾ ಪರಿಹಾರ ಎಂದು ತೋರುತ್ತದೆ.

ಮೊದಲಿಗೆ ಪ್ರಕೃತಿ ಇತ್ತು, ಆಹಾರವಿತ್ತು. ಅದರ ನಡುವೆ ಮನುಷ್ಯ ಬದುಕುತ್ತಿದ್ದ- ಇದು ಆದಿಯಲ್ಲಿದ್ದ ಸ್ಥಿತಿ. ಆದರೆ, ಮನುಷ್ಯನಿಗೆ ಜೀವಿಗಳಲ್ಲಿ ಮೊದಲ ಸ್ಥಾನ, ತನಗಿಷ್ಟ ಬಂದುದನ್ನು ಆತ ಬೆಳೆದು ತಿನ್ನುತ್ತಾನೆ ಎಂಬ ದೃಷ್ಟಿಕೋನದ ಹುಟ್ಟಿನೊಂದಿಗೆ ಪ್ರಕೃತಿಗೆ ಆದೇಶ ನೀಡುವ ಯಜಮಾನನಂತೆ ಮನುಕುಲ ವರ್ತಿಸತೊಡಗಿತು. ತಾನು ನಿಸರ್ಗದ ಬಗ್ಗೆ ದಯೆ ತೋರಿದೆ. ಅದನ್ನು ಬುದ್ಧಿವಂತಿಕೆಯಿಂದ ನನಗಾಗಿ ಬಳಸಿಕೊಂಡೆ ಎಂದು ಮನುಷ್ಯ ತಿಳಿದುಕೊಂಡಿದ್ದಾನೆ. ಮನುಷ್ಯನ ಬುದ್ಧಿ ಪ್ರಕೃತಿಗಿಂತ ಶಕ್ತಿಶಾಲಿ ಎಂದು ಆತ ಭಾವಿಸುತ್ತಿದ್ದಾನೆ. ಪ್ರಕೃತಿಯಿಂದ ಕಲಿಯಲು ಸಾಧ್ಯವಿದೆಯೇ ಹೊರತು ಅದನ್ನು ನಿಯಂತ್ರಿಸಲು ಅಥವಾ ಅದರ ಹಾದಿಯನ್ನು ಬದಲಾಯಿಸಲು ಮನುಷ್ಯನಿಗೆ ಸಾಧ್ಯವಿಲ್ಲ.

‘ರೋಡ್ ಬ್ಯಾಕ್ ಟು ನೇಚರ್’ ಕೃತಿಯ ಜಪಾನಿ ಆವೃತ್ತಿಯ ಪ್ರಕಾಶಕರ ಜೊತೆ ಶುಂಜು-ಶಾದಲ್ಲಿ ನಡೆಸಿದ ಮಾತುಕತೆ ಇದು. (ಕೃತಿಯಲ್ಲಿ ಸಂದರ್ಶಕರ ಹೆಸರನ್ನು ನಮೂದಿಸಲಾಗಿಲ್ಲ)

Leave a Reply