ದಿವ್ಯ ಯೋಗದ ಮಾತು ಕಿವಿ ಇಲ್ಲದವ ಕೇಳಿದ…ಕಣ್ಣಿಲ್ಲದವ ಕಂಡ !

ಶ್ರೀ ಮಹಿಪತಿರಾಯರ ಒಂದು ಕೀರ್ತನೆಯನ್ನು ವ್ಯಾಖ್ಯಾನ ಮಾಡಿದ್ದಾರೆ, ಲೇಖಕರಾದ ನಾರಾಯಣ ಬಾಬಾನಗರ.

ವಿಜಯಪುರ ಜಿಲ್ಲೆಯ ಕಾಖಂಡಕಿ ಗ್ರಾಮವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಬಾಳಿ ಬೆಳಗಿದ ಅನನ್ಯ ದಾಸವರೇಣ್ಯರು ಶ್ರೀ ಮಹಿಪತಿರಾಯರು. ಅವರ ಕೀರ್ತನೆ:

ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು

ಬುದ್ಧಿವಂತರು ಬಲ್ಲರಧ್ಯಾತ್ಮಸುಖವು        ।। ಧ್ರುವ ।।

ಕಾಲಿಲ್ಲದಾಕಳವು ಬಾಲಮುಖದಲಿ ಬಂದು

ಕಾಳರೂಪದ ಹುಲಿಯನೆ ನುಂಗಿತು

ಮೇಲವರಿಯಲಿ ಬಂದು ಜಲದೊಳಗಿನ ಕಪ್ಪೆ

ಮೂಲ ಸರ್ಪದ ಹೆಡೆಯ ನುಂಗಿದುದು ನೋಡಿ  ।। 1 ।।

ಬಾಲ ಇಲ್ಲದ ಇಲಿಯು ಜಾಲಹಾಕುತ ಬಂದು

ಸ್ಥೂಲ ಬೆಕ್ಕಿನ ತಲೆಯನೆ ಮುರಿಯಿತು

ನಾಲಿಗಿಲ್ಲದ ಮೊಲವು ನಿಲುಕಿ ಜಪವ ಹಾಕಿ

ಭಲೆ ಶ್ವಾನನ ಗಂಟಲ್ಹಿಡದಿಹದು ನೋಡಿ         ।। 2 ।।

ದಿವ್ಯ ಯೋಗದ ಮಾತು ಕಿವಿ ಇಲ್ಲದವ ಕೇಳಿ

ಕಣ್ಣಿಲ್ಲದವ ಕಂಡು ಬೆರಗಾದನು

ಕೌತುಕವು ಕಂಡು ಮಹಿಪತಿಯು ತನ್ನೊಳು

ತಾನು ತ್ರಾಹಿ ತ್ರಾಹಿಯೆಂದ ಮನದೊಳು     ।। 3 ।।

ಭಾವಾರ್ಥ

ಇದು ಮುಂಡಿಗೆಯೆಂದು ಬೇರೆ ಹೇಳಬೇಕಾಗಿಲ್ಲ. ಇದ್ದ ಅಸ್ತಿತ್ವಗಳನ್ನು ಇಲ್ಲವಾಗಿಸುವ ಪ್ರಕ್ರಿಯೆಗಳ ರೂಪಕಗಳು ಢಾಳಾಗಿ ಎದ್ದು ಕಾಣುತ್ತವೆ.

ಈ ಕೀರ್ತನೆ ವಿಶೇಷದಲ್ಲಿಯೇ ವಿಶೇಷ. ನುಂಗುವಿಕೆಯ ಪ್ರಕ್ರಿಯೆಯನ್ನು ಹಲವು ಮುಂಡಿಗೆಗಳಲ್ಲಿ ಕಾಣಬಹುದು. ಆದರೆ ಇಲ್ಲಿ ನುಂಗುವಿಕೆಯ ಪ್ರಾಣಿಯ ಇನ್ನೊಂದು ಅಂಗವನ್ನು ಜೋಡಿಸಿರುವುದು ಬಹು ವಿಶೇಷ. ಉದಾಹರಣೆಗೆ ಕಾಲಿಲ್ಲದ ಆಕಳು, ಬಾಲವಿಲ್ಲದ ಇಲಿ ಇತ್ಯಾದಿ..

ಕೀರ್ತನೆಯುದ್ದಕ್ಕೂ ಅನೇಕ ಪ್ರಾಣಿಗಳು ಕಾಣಿಸಿಕೊಂಡಿವೆ. ಒಂದೊಂದು ಪ್ರಾಣಿಯೂ ಅದೇನನ್ನೊ ಹೇಳಹೊರಟಿದೆ ಎಂಬುದು ಒಂದೆಡೆಯಾದರೆ, ಬಳಕೆಯಾದ ಪ್ರಾಣಿಗಳು ವಾಸ್ತವದಲ್ಲಿ ಒಂದಕ್ಕೊಂದು ಆಹಾರವಾದರೆ ಕೀರ್ತನೆಯಲ್ಲಿ ವಾಸ್ತವಕ್ಕಿಂತ ಭಿನ್ನವಾಗಿರುವುದು ಬೆರಗು ಮೂಡಿಸುವ ವಿಷಯ. ಹುಲಿಯ ಆಹಾರ ಆಕಳು, ಸರ್ಪದ ಆಹಾರ ಕಪ್ಪೆ, ಬೆಕ್ಕಿನ ಆಹಾರ ಇಲಿ, ಶ್ವಾನ ಮೊಲವನ್ನು ಬೇಟೆಯಾಡುತ್ತದೆ. ಕೇಳಲು ಕಿವಿ ಬೇಕು, ಆದರೆ ಕಿವಿಯಿಲ್ಲದವನು ಕೇಳುತ್ತಿದ್ದಾನೆ. ಇನ್ನೂ ವಿಚಿತ್ರವೆಂದರೆ ಕಣ್ಣಿಲ್ಲದವನು ಕಾಣುತ್ತಿದ್ದಾನೆ ಜೊತೆಗೆ ಬೆರಗಾಗುತ್ತಿದ್ದಾನೆ !

            ಇದನ್ನು ಓದಿದ ನಾವೂ ಬೆರಗಾಗುತ್ತಿದ್ದೇವೆ. ನಾವು ಬೆರಗಾಗುತ್ತಿರುವುದು ಏನೂ ಅರ್ಥವಾಗದ್ದಕ್ಕೆ. ನಮ್ಮದು ಕಕ್ಕಾಬಿಕ್ಕಿಯ ಸ್ಥಿತಿ.

ಅದಿರಲಿ, ಕೀರ್ತನೆಯ ಸುದ್ದಿಗೆ ಬರೋಣ. ಕೀರ್ತನೆಯಲ್ಲಿ ಪಲ್ಲವಿಯನ್ನು ಧ್ರುವ ಎಂದು ಹೆಸರಿಸಲಾಗಿದೆ. ಧ್ರುವ ಇಡೀ ಕೀರ್ತನೆಯ ಸಾರದ ಸುಳಿವನ್ನು ಬಿಟ್ಟುಕೊಡುತ್ತಿದೆ, ಅದುವೇ ಅಧ್ಯಾತ್ಮಸುಖದ ತಿರುಳು ಇದರಲ್ಲಿದೆ ಎಂಬುದು. ಕೀರ್ತನೆ ಪ್ರಾರಂಭವಾಗುವುದೇ ‘’ಸಿದ್ಧಾಂತವಿದು..’’ ಎಂಬ ಪದದಿಂದ. ಸಿದ್ಧಾಂತವೆಂಬುದು ವಿದ್ಯಮಾನದ ಬಗ್ಗೆ ಆಲೋಚನಾತ್ಮಕ ಮತ್ತು ತರ್ಕಧಾರಿತ ಬಗೆಯ ಻ಅಮೂರ್ತ ಚಿಂತನೆ. ಬರೀ ಚಿಂತನೆಯಲ್ಲ, ದೊರಕಿದ ಫಲಿತಾಂಶದ ಬಗ್ಗೆಯೂ ಹೇಳುವುದು. 

       “ ಅಧ್ಯಾತ್ಮ ಎಂಬುದು ಆತ್ಮವನ್ನು ಕುರಿತು ಬೋಧಿಸುವ ತತ್ತ್ವ. ಜೀವಾತ್ಮ-ಪರಮಾತ್ಮ ಸಂಬಂಧವನ್ನು ವಿವೇಚಿಸುವ ತತ್ತ್ವ. ‘ ಆ – ಸಮಂತಾತ್ ’- ಸುತ್ತೆಲ್ಲ, ‘ ತನ್-ತತ್ವಾ’ – ವ್ಯಾಪಿಸಿ, ಮ್-ಸೃಷ್ಟಿತತ್ತ್ವಕ್ಕೆ ಸಿಲುಕಿ,

‘ ಅನ್ -> ಆನತ್ ’- ಚಲಿಸುತ್ತ – ಇರುವಂಥಾದ್ದು ; ಎಲ್ಲ ಕಡೆಗೂ, ಸುತ್ತೆಲ್ಲ ವ್ಯಾಪಿಸಿ ಚಲಿಸುತ್ತ ಇರುವಂಥಾದ್ದು ಆತ್ಮನ್ – ಆತ್ಮ. ಸೃಷ್ಟಿತತ್ತ್ವಕ್ಕೆ ಸಿಕ್ಕಿಕೊಂಡು ಪ್ರಕೃತಿಯು ಕೊಟ್ಟ ಪ್ರಾಣ ( ಜೀವ ) ದೊಂದಿಗೆ ಸೇರಿ ಜೀವಾತ್ಮವೆನಿಸಿ ಜನ್ಮದಿಂದ ಜನ್ಮಕ್ಕೆ ಚಲಿಸುವ ಅಣುಮಾತ್ರದ ತತ್ತ್ವ’’.

           ಜೀವಾತ್ಮದೊಂದಿಗೆ ಪರಮಾತ್ಮನೂ ಪಿಂಡಾಂಡದಲ್ಲಿದ್ದಾನೆ. ಪಿಂಡಾಂಡದಲ್ಲಿರುವ ಭಗವಂತನ ಕಾಣುವುದು ಬಿಂಬಾಪರೋಕ್ಷಾನುಭವ. ಻ಅದನ್ನು ಸಾಧಿಸುವ ವಿದ್ಯೆ ,ಅಧ್ಯಾತ್ಮವಿದ್ಯೆ. ಸೂಕ್ತ ಗುರುವು, ಗುರುವಿನ ಕಾರುಣ್ಯದಿಂದ ಈ ವಿದ್ಯೆ ದೊರಕೀತು..

               ಇದು ಎಲ್ಲರಿಗೂ ದೊರಕೀತಾ? ಉಹುಂ, ಕೋಟಿಯಲ್ಲೊಬ್ಬರು ಇದರ ದಾರಿ ತಿಳಿದಾರು. ಅವರು ಬುದ್ಧಿವಂತರೆನಿಸಿಕೊಳ್ಳುವರು. ಬಿಂಬಾಪರೋಕ್ಷವೂ ಸರಳವಾ ? ಮನಸ್ಸಿನ ಶುಚಿಯಾಗಬೇಕಲ್ಲ ? ಬಾಹ್ಯ ಜ್ಞಾನ ಻ಅಂತಿಮವಾದುದಲ್ಲ. ಒಳಗಿನ ಕಣ್ಣು ಕಾಣುವ ಜ್ಞಾನ ಬರಬೇಕಲ್ಲ !. ಸಾಕ್ಷಾತ್ಕಾರ ಜನನ-ಮರಣಗಳ ಚಕ್ರವನ್ನೇ ಕತ್ತರಿಸುತ್ತದೆ.  

ಆಕಳು –ಗೋವು-ಪ್ರಾಣವಾಯುವನ್ನು ಪ್ರತಿನಿಧಿಸುತ್ತದೆ. ಇದು ನಾಶವಿಲ್ಲದ್ದು ನಿಜ. ಆದರೆ ಜನನ-ಮರಣಗಳ ಚಕ್ರದಲ್ಲಿ ಸುತ್ತುತ್ತಿರುತ್ತದೆ. ಹುಲಿ-ಕಾಲವ್ಯಾಘ್ರ-ಜನನ,ಮರಣಗಳನ್ನು ಸಂಕೇತಿಸುತ್ತದೆ. ಆಕಳು ಹುಲಿಯನು ನುಂಗುವುದೆಂದರೆ ಜನನ,ಮರಣಗಳ ಚಕ್ರವನ್ನು ಜಯಿಸುವುದು ಎಂದರ್ಥ. ಇದೆಲ್ಲ ಸರಿ. ಆದರೆ ಕಾಲಿಲ್ಲದ್ದು ಎಂದರೆ? ಕಾಲುಗಳು- ಕಾಮ,ಕ್ರೋಧವನ್ನು ಸಂಕೇತಿಸುತ್ತವೆ. ಕಾಮ,ಕ್ರೋಧಾಧಿಗಳನ್ನು ಜೀವ ಕಳೆದುಕೊಂಡರೆ,ಆಗ ಭವದಿಂದ ಮುಕ್ತಿ. ಅದು ಯಾವಾಗ ಕಳೆಯುತ್ತದೊ ಆಗ ಸಾಧ್ಯ..ಬೇಗನೆ ಕಳೆದರೆ ಬೇಗ ಸಾಧ್ಯ. ಬೇಗನೆ ಎನ್ನುವುದು ಬಾಲಮುಖ ಎಂಬುದನ್ನು ಸಂಕೇತಿಸುತ್ತದೆ.

ಇದಿಷ್ಟರಿಂದಲೇ ಸಾಧ್ಯನಾ? ಉಹುಂ ಇದು ಒಂದು ಮೆಟ್ಟಿಲು.

ಮೇಲವರಿಯಲಿ ಬಂದು ಜಲದೊಳಗಿನ ಕಪ್ಪೆ

ಮೂಲ ಸರ್ಪದ ಹೆಡೆಯ ನುಂಗಿದುದು ನೋಡಿ

ನಮ್ಮೊಳಗಿನ ಮೋಹ ಅಡಗಬೇಕು. ಮೋಹ ಅಳಿಯದ ಹೊರತು ಇದು ಅಸಾಧ್ಯ. ಇದೇ ಸರ್ಪ. ಮೋಹದ ಜೊತೆಗೆನೆ ನಾನು,ನನ್ನದು ಎಂಬ ಗರ್ವಗುಣನೂ ಇರುತ್ತದೆ. ಸರ್ಪದ ಹೆಡೆ ಎಂಬುದು ಗರ್ವವನ್ನು ಪ್ರತಿನಿಧಿಸುತ್ತದೆ. ಇವುಗಳನ್ನು ನುಂಗುತ್ತಿರುವುದು ಕಪ್ಪೆ- ಅದರಲ್ಲಿಯೂ ಜಲದೊಳಗಿನ ಕಪ್ಪೆ. ಜಲವೆಂಬುದು ಜ್ಞಾನದ ಸಂಕೇತ. ಕಪ್ಪೆ- ಭಕ್ತಿಯ ಸಂಕೇತ. ಭಕ್ತಿ,ಜ್ಞಾನ, ವೈರಾಗ್ಯಗಳು ಮೂಲಾಧಾರ ಚಕ್ರದಲ್ಲಿನ ಶಕ್ತಿಯನ್ನು ಬಡಿದೆಬ್ಬಿಸಿ ಸಹಸ್ರಾರ ಚಕ್ರದಲ್ಲಿರುವ ಭಗವಂತನ ಸಾಕ್ಷಾತ್ಕಾರಕ್ಕೆ ಎಡೆಮಾಡಿಕೊಡಬಲ್ಲವು. ಇದುವೇ ‘’ ಮೇಲನರಿಯಲಿ ಬಂದು ಎಂಬುದಕ್ಕೆ ಅರ್ಥ. ಇದು ಅಧ್ಯಾತ್ಮ ಸುಖ! (ಆಧಾರ-ಗೀತಾಭಾಷ್ಯ-ಷಷ್ಠಾಧ್ಯಾಯ)

ಯತ್ರೋಪರಮತೇ ಚಿತ್ತಂ ನಿರುದ್ಧಂ ಯೋಗಸೇವಯಾ

ಯತ್ರ ಚೈವಾತ್ಮನಾssತ್ಮಾನಂ ಪಶ್ಯನ್ನಾತ್ಮನಿ ತುಷ್ಯತಿ

ಸುಖಮಾತ್ಯಂತಿಕಂ ಯತ್ತದ್ ಬುದ್ಧಿಗ್ರಾಹ್ಯಮತೀಂದ್ರಿಯಂ ।

ವೇತ್ತಿ ಯತ್ರ ನ ಚೈವಾಯಂ ಸ್ಥಿತಶ್ಚಲತಿ ತತ್ವತಃ

ಯಂ ಲಬ್ದ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ ।

ಯಸ್ಮಿನ್ ಸ್ಥಿತೋ ನ ದುಃಖೇನ ಗುರುಣಾಪಿ ವಿಚಾಲ್ಯತೇ

ತಂ ವಿದ್ಯಾದ್ ದುಃಖಸಂಯೋಗವಿಯೋಗಂ ಯೋಗಸಂಜ್ಞಿತಂ ।

ಸ ನಿಶ್ಚಯೇನ ಯೋಕ್ತವ್ಯೋ ಯೋಗೋ ನಿರ್ವಿಣ್ಣಚೇತಸಾ

ಅರ್ಥ – ಧ್ಯಾನಯೋಗದ ಅನುಷ್ಠಾನದಿಂದ ನಿಯಂತ್ರಿಸಲ್ಪಟ್ಟ ಮನಸ್ಸು ಯಾವ ಅವಸ್ಥೆಯಲ್ಲಿ ಬಾಹ್ಯಪದಾರ್ಥಗಳ ಕಡೆಗೆ ಹೋಗದೇ ಇರುತ್ತದೋ, ಯಾವ ಅವಸ್ಥೆಯಲ್ಲಿ ಯೋಗಿಯು ಮನಸ್ಸಿನಿಂದ ಪರಮಾತ್ಮನನ್ನು ಕಾಣುತ್ತ ಶರೀರದೊಳಗೇ ಆನಂದಿಸುವನೋ, ಯಾವ ಅವಸ್ಥೆಯಲ್ಲಿ ಯೋಗಿಯು ಅನುಭವೈಕ ವೇದ್ಯ ಅತೀಂದ್ರಿಯ ಮಹಾಸುಖವನ್ನು ಅನುಭವಿಸುವನೋ, ಯಾವ ಅವಸ್ಥೆಯಲ್ಲಿ ಯೋಗಿಯು ತನ್ನ ಧ್ಯೇಯವಾದ ಭಗವತ್ತತ್ವದಿಂದ ಬೇರೆಡೆ ಚಲಿಸುವುದಿಲ್ಲವೋ , ಯಾವ ಅವಸ್ಥೆಯನ್ನು ಹೊಂದಿದ ಮೇಲೆ ಬೇರೆ ಯಾವುದೇ ಲಾಭವನ್ನು ಹೆಚ್ಚಿನದೆಂದು ತಿಳಿಯುವುದಿಲ್ಲವೋ, ಯಾವ ಅವಸ್ಥೆಯಲ್ಲಿರುವಾಗ ಯೋಗಿಯು ಮಹಾದುಃಖದಿಂದಲೂ ವಿಚಲಿತನಾಗುವುದಿಲ್ಲವೋ ಆ ಅವಸ್ಥೆಯನ್ನು ಎಂದೂ ದುಃಖಬಾರದಂತೆ ಮಾಡುವ ಯೋಗವೆಂದು ತಿಳಿಯಬೇಕು. ಅಂಥ ಯೋಗವನ್ನು ವೈರಾಗ್ಯ ತುಂಬಿದ ಮನಸ್ಸಿನವನು,ಮುಮುಕ್ಷು ಅವಶ್ಯ ಅನುಷ್ಠಾನ ಮಾಡಲೇಬೇಕು.

ಮತ್ತೆ ಮುಂಡಿಗೆಗೆ ಬರೋಣ..

ಬರೀ ಕಾಮ,ಕ್ರೋಧ,ಮೋಹ,ಗರ್ವ ಅಳಿದರೆ ಅಪರೋಕ್ಷಾನುಭಾವ ಸಾಧ್ಯವೇ? ಉಹುಂ.

ಬಾಲ ಇಲ್ಲದ ಇಲಿಯು ಜಾಲಹಾಕುತ ಬಂದು / ಸ್ಥೂಲ ಬೆಕ್ಕಿನ ತಲೆಯನೆ ಮುರಿಯಿತು

ಮೊದಲು ಹರಿವಿಸ್ಮರಣೆಯನ್ನುಂಟುಮಾಡುವ ಮಾಯೆಯ ಪದರು ಹರಿಯಬೇಕು. ಪರಮಾಚ್ಛಾದಿತ ಮತ್ತು ಜೀವಾಚ್ಛಾದಿತ ಪದರುಗಳು ಅನಿರುದ್ಧ ದೇಹ ಮತ್ತು ಲಿಂಗದೇಹದ ಮಧ್ಯದಲ್ಲಿ ಹರಡಿಕೊಂಡಿವೆ. ಚೇತನ ಸ್ವರೂಪಿ ಶಕ್ತಿಯ ಚಲನೆಗೆ ಇವು ಅಡೆತಡೆಯನ್ನು ಒಡ್ಡುತ್ತವೆ. ಭಗವಂತನಲ್ಲಿ ಏಕಚಿತ್ ದಿಂದ ಧ್ಯಾನ ಮಾಡಿದರೆ ವಿಸ್ಮರಣೆ-ಸ್ಮರಣೆಯಾಗಬಲ್ಲದು. ಇದು ವಾಸನಾರಹಿತವಾಗಿರಬೇಕು.

ಇಲ್ಲಿ ಇಲಿ ಮನಸ್ಸನ್ನು ಪ್ರತಿನಿಧಿಸುತ್ತದೆ. ಬಾಲ ವಾಸನೆಯನ್ನು ರೂಪಕವಾಗಿಸಿದೆ. ಬೆಕ್ಕಿನ ತಲೆ ಮಾಯೆಯನ್ನು ಹೇಳುತ್ತದೆ. ಇದು ಸಾಧಕರಿಂದ ಮಾತ್ರ ಸಾಧ್ಯ.

ನಾಲಿಗಿಲ್ಲದ ಮೊಲವು ನಿಲುಕಿ ಜಪವ ಹಾಕಿ / ಭಲೆ ಶ್ವಾನವ ಗಂಟಲ್ಹಿಡದಿಹದು ನೋಡಿ

ಮುಂದಿನ ಹೆಜ್ಜೆ ಇಂದ್ರಿಯಗಳ ನಿಗ್ರಹ. ಶ್ವಾನ –ಇಂದ್ರಿಯಗಳಾಗಿವೆ. ಎಲ್ಲಿ ಬೇಕಂದಲ್ಲಿ ಚಲಿಸುತ್ತವೆ. ನಾಯಿಯ ಗಂಟಲು ಹಿಡಿದರೆ ಇದ್ದಲ್ಲಿಯೇ ಇರುತ್ತದೆ. ಅದನ್ನು ಹಿಡಿಯುವುದು ಧ್ರಡ ಏಕಾಗ್ರತೆ ಮತ್ತು  ವಿವೇಕ. ಹೀಗಾಗಿ ಇವೆರಡರಿಂದಲೂ ಇಂದ್ರಿಯ ನಿಗ್ರಹ ಸಾಧ್ಯ. ಮೊಲ ವಿವೇಕವನ್ನು ಸೂಚಿಸುತ್ತದೆ.ನಾಲಗೆ ಬಯಕೆಗಳನ್ನು,ಕಾಮನೆಗಳನ್ನು ಸೂಚಿಸುತ್ತದೆ.

ಆಧಾರ-ಕಾಠಕೋಪನಿಷದ್ಭಾಷ್ಯ

ಯಸ್ತ್ವವಿಜ್ಞಾನವಾನ್ ಭವತಿ ಅಯುಕ್ತೇನ ಮನಸಾ ಸದಾ / ತಸ್ಯೇಂದ್ರಿಯಾಣ್ಯವಶ್ಯಾನಿ ದುಷ್ಟಾಶ್ವಾ ಇವ ಸಾರಥೇಃ

ಯಾರು ಶಾಸ್ತ್ರಾದಿಗಳಿಂದ ಉಂಟಾಗುವ ವಿಶೇಷವಾದ ಬುದ್ಧಿ ಎಂಬ ಸಾರಥಿ ಇಲ್ಲದವನಾಗಿದ್ದು, ಹತೋಟಿ ತಪ್ಪಿದ ಮನಸ್ಸುಳ್ಳವನಾಗಿದ್ದಾನೆಯೋ ಅಂದರೆ ಮನಸ್ಸನ್ನು ಯಥೇಷ್ಟವಾಗಿ ವಿಷಯ ಪದಾರ್ಥಗಳೆಡೆಗೆ ಹರಿಬಿಟ್ಟಿದ್ದಾನೆಯೋ ಅವನ ಇಂದ್ರಿಯಗಳು, ಕೆಟ್ಟ ಕುದುರೆಗಳು ಹೇಗೆ ಸಾರಥಿಯ ಅಧೀನದಲ್ಲಿರುವುದಿಲ್ಲವೋ ಹಾಗೆ, ಅವನ ಅಧೀನದಲ್ಲಿರುವುದಿಲ್ಲ.

ದಿವ್ಯಯೋಗದ ಮಾತು ಕಿವಿ ಇಲ್ಲದವ ಕೇಳಿ / ಕಣ್ಣಿಲ್ಲದವ ಕಂಡು ಬೆರಗಾದನು

ಈ ಎಲ್ಲ ಸಾಧನೆಗಳು ಸಾಧ್ಯವಾದಾಗ ಜೀವಾತ್ಮನು ಷಟ್ ಚಕ್ರವೇರಿ ತೂರ್ಯಾವಸ್ಥೆಯಲ್ಲಿ ಪರಮಾತ್ಮನ ಬಿಂಬಾಪರೋಕ್ಷವನ್ನು ಮಾಡಿಕೊಳ್ಳಲು ಸಾಧ್ಯ. ಇದು ಯೋಗದ ಮಾತು. ಕಿವಿ ಇಲ್ಲದವ, ಕಣ್ಣಿಲ್ಲದವ ಎಂದರೆ ಜೀವಾತ್ಮನು. ಅದೆಂಥ ಕೌತುಕವಲ್ಲವೆ? ಸಾಮಾನ್ಯ ಅಜ್ಞಾನಿಗೆ ಇದು ಆಗದ ಮಾತು. ಸಾಧಕರಿಗೆ ಮಾತ್ರ ಸಾಧ್ಯ. ಸಾಧಕನನ್ನು ಸಾಧಕ ಮಾತ್ರ ಗುರುತಿಸಬಲ್ಲ.

ಆಧಾರ- ಕಾಠಕೋಪನಿಷದ್ಭಾಷ್ಯ

ಏಷ ಸರ್ವೇಷು ಭೂತೇಷು ಗೂಢೋತ್ಮಾನ ಪ್ರಕಾಶತೇ / ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯಾ ಸೂಕ್ಷ್ಮಯಾ ಸೂಕ್ಷ್ಮದರ್ಶಿಭಿಃ

ಅರ್ಥ: ಈ ಸರ್ವೋತ್ತಮನಾದ ಭಗವಂತನು ಸಮಸ್ತ ವಸ್ತುಗಳಲ್ಲಿ ಗೋಪ್ಯವಾಗಿ ಅಡಗಿದ್ದು,ಅಜ್ಞಾನಿಗಳಿಗೆ ಯಾರಿಗೂ ಕಾಣಿಸುವುದಿಲ್ಲ. ಶ್ರವಣ,ಮನನ, ನಿಧಿಧ್ಯಾಸನಗಳನ್ನು ಸಾಧಿಸಿಕೊಂಡು, ಭಗವಂತನ ಅನುಗ್ರಹದಿಂದ ಅತ್ಯಂತ ಸೂಕ್ಷ್ಮವಾದ ಪದಾರ್ಥವನ್ನು ನೋಡುವ ಸೂಕ್ಷ್ಮದೃಷ್ಟಿಯವರಿಗೆ ಭಗವಂತನು ಕಾಣುತ್ತಾನೆ.

ಕೌತುಕವು ಕಂಡು ಮಹಿಪತಿಯು ತನ್ನೊಳು / ತಾನು ತ್ರಾಹಿ ತ್ರಾಹಿಯೆಂದ ಮನದೊಳಗೆ ಇದನ್ನು ಶ್ರೀ ಮಹಿಪತಿರಾಯರು ಕಂಡು, ಇಡೀ ಸ್ವಾನಂದಕ್ಕೆ ಶರಣಾದರು.

Leave a Reply