ವಿರಹ : ಪ್ರೇಮದ ಅತ್ಯುನ್ನತ ಅಭಿವ್ಯಕ್ತಿ

ರಾಧೆಯ ಕತೆಯನ್ನು ಜಯದೇವ ಹೇಳುವಾಗ ಸಂಗಮದ ಸ್ವರೂಪದಲ್ಲಿ ಕಾಣುವ ಪ್ರೇಮದ ಅಭಿವ್ಯಕ್ತಿ ನಮಗೆ ಕಾಣಿಸಿತು. ಆದರೆ ಅಕ್ಕ, ಮೀರಾ ಮತ್ತು ರಾಬಿಯಾರ ವಿಷಯಕ್ಕೆ ಬಂದಾಗ ಅದರಲ್ಲಿ ಕಾಣಿಸುವ ಸಾಯುಜ್ಯ ಸ್ವರೂಪ ಬಹಳ ಸುಪ್ತ. ಈ ಮೂವರ ಅಭಿವ್ಯಕ್ತಿಯಲ್ಲೂ ಪ್ರೇಮದ ವಿರಹಾಭಿವ್ಯಕ್ತಿಗೇ ಸ್ವಲ್ಪ ತೂಕ ಹೆಚ್ಚು… | ಅಚಿಂತ್ಯ ಚೈತನ್ಯ

ಪ್ರೇಮವೆಂಬ ಅನುಭೂತಿ ಅತಿ ವಿಶಿಷ್ಟ. ಅದು ಬದುಕಿನೊಳಕ್ಕೆ ಪ್ರವೇಶ ಪಡೆದ ಮೇಲೆ ಮುಗಿಯಿತು. ಮತ್ತೆ ಅದರ ಪರಿಣಾಮವನ್ನು ಅನುಭವಿಸುವ ಹೊರತಾಗಿ ಬೇರೆ ಮಾರ್ಗವಿಲ್ಲ. ಈ ಹೇಳಿಕೆ ಒಗಟಿನಂತೆ ಕಾಣಿಸುತ್ತಿರಬಹುದು. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಈ ಮಾತಿನ ಹುರುಳು ನಮ್ಮೆದುರು ಅರಳಿ ನಿಲ್ಲುತ್ತದೆ. ಬಹಳ ಲೌಕಿಕವೆನಿಸುವ ಗಂಡು ಹೆಣ್ಣಿನನಡುವಿನ ಒಲವೇ ಆಗಿರಲಿ. ಅಲೌಕಿಕ ಆಯಾಮಗಳುಳ್ಳ ದೇವರೆಡಗಿನ ಒಲವೇ ಆಗಿರಲಿ ಅವುಗಳನ್ನು ಅಭಿವ್ಯಕ್ತಿಸಲು ಸಿಗುವ ರೂಪಕಗಳು ಒಂದೇ. ರಾಧೆ, ಅಕ್ಕ, ಮೀರಾ ಹಾಗೂ ಇವರೆಲ್ಲರ ಭೌಗೋಳಿಕ ಪರಿಧಿಯಿಂದ ಬಹುದೂರವಿದ್ದ ಇರಾಕಿನ ಬಸ್ರಾದ ರಾಬಿಯಾ ಎಲ್ಲರ ಹೃದಯದ ಪ್ರತಿ ಮಿಡಿತದಲ್ಲಿ ಇರುವ ಲಯ ಒಂದೇ. ರಾಧೆ ಅದನ್ನು ಮಾಧವನೆಂದು ಕರೆದಳು. ಅಕ್ಕ ಅದಕ್ಕೆ ಮಲ್ಲಿಕಾರ್ಜುನನೆಂದು ಹೆಸರಿಟ್ಟರೆ, ಮೀರಾಳಿಗೆ ಆ ಲಯದಲ್ಲಿ ಕಾಣಿಸಿದ್ದು ಗಿರಿಧರ. ಹಾಗೇ ರಾಬಿಯಾಳಿಗೆ ಅದು ನಿರಾಕಾರನಾದ ಅಲ್ಲಾಹು!

ರಾಧೆಯ ಧ್ವನಿಗೆ ಕೊರಳಾದದ್ದು ಜಯದೇವ ಎಂಬ ಮಾತಿದೆ. ವಾಸ್ತವದಲ್ಲಿ ಸಂಭವಿಸಿದ್ದು ಅದಕ್ಕೆ ವ್ಯತಿರಿಕ್ತವಾದದ್ದು. ಜಯದೇವ ಧ್ವನಿಯಾದದ್ದು ಕೃಷ್ಣನಿಗೆ. ಹೌದು, ರಾಧೆಗೆ ಹಾಡುವ ಅಗತ್ಯವೇ ಇರಲಿಲ್ಲ. ಮಾಧವನಿಗಾಗಿ ಅವಳು ಹಾತೊರೆಯತ್ತಿದ್ದಳೆಂದು ನಮಗನ್ನಿಸುತ್ತದೆ. ಆದರೆ ರಾಧೆಯ ಪ್ರಯತ್ನ ಬೇರೆಯೇ ಆಗಿತ್ತು. ರಾಜಕಾರ್ಯದ ಭಾರದಲ್ಲಿ ಕಳೆದು ಹೋಗಿರುವ ಮಾಧವನನ್ನು ಅಥವಾ ಮಾಧವಿಯ ಇನ್ನರ್ಧ ಭಾಗವನ್ನು ಶೋಧಿಸುವುದಾಗಿತ್ತು!

ಕೃಷ್ಣನಿಗೂ ಅಷ್ಟೇ. ಅವತಾರದ ರಹಸ್ಯವನ್ನು ಅವನನ್ನು ಹೊರತು ಪಡಿಸಿದರೆ ಅರಿತದ್ದು ರಾಧೆಯೇ! ವೇಣುವಿನ ನಾದಕ್ಕೆ ಗೋಪಿಕೆಯರೆಲ್ಲಾ ತಲ್ಲೀನರಾಗಿ ನೃತ್ಯ ನಿರತರಾದರೆರಾಧೆಯ ಮಟ್ಟಿಗೆ ಅವಳದೇ ಹಾಡು ಕೃಷ್ಣನ ಉಸಿರಾಗಿ ವೇಣುವಿನೊಳಗಿಂದ ಹರಿಯುತ್ತಿತ್ತು. ರಾಧಾ -ಕೃಷ್ಣರ ಸಂಬಂಧವೇ ಹೀಗೆ. ಮಾಧವ ಹಾಡಿದರೆ ರಾಧೆ ಹಾಡಾಗಿದ್ದ ಸಂಬಂಧ. ಅರ್ಥಾತ್ ಎರಡಲ್ಲದ ಸಂಬಂಧ.

ಪ್ರೇಮದ ಮೂಲಭೂತ ಗುಣವೇ ಅದು. ಎರಡಲ್ಲದ ಸಂಬಂಧವೊಂದನ್ನು ಸೃಷ್ಟಿಸುವುದು. ಚನ್ನ ಮಲ್ಲಿಕಾರ್ಜುನನೇ ತನ್ನ ಪತಿಯೆಂದ ಅಕ್ಕನ ಆಲಾಪವೂ ಹೇಳುತ್ತಿರುವುದು ಆ ಎರಡಲ್ಲದ ಸಂಬಂಧವನ್ನೇ. ತನ್ನ ಲೌಕಿಕವಾದ ವೈವಾಹಿಕ ಸಂಬಂಧಕ್ಕೆ ಇಲ್ಲದ ಆ ಉತ್ಕಟತೆಯೇ ಅವಳಲ್ಲಿ ವಿರಹದ ಭಾವವಾಗಿ ಚನ್ನ ಮಲ್ಲಿಕಾರ್ಜುನನಿಗಾಗಿ ಹಾತೊರೆಯುವಂತೆ ಮಾಡಿತು. ಗಿರಿಧರನನ್ನು ಪ್ರತೀ ಕ್ಷಣವೂ ಧ್ಯಾನಿಸುವ ಮೀರಾಳ ಭಾವವೂ ಇದುವೇ. ರಾಧಾಮಾಧವರು ಹೇಗೆ ಎರಡರಲ್ಲವೋ ಹಾಗೇಯೇ ಅಕ್ಕ ಮತ್ತು ಚನ್ನಮಲ್ಲಿಕಾರ್ಜನರೂ ಎರಡಲ್ಲ. ಮೀರಾ ಮತ್ತು ಗಿರಿಧರರೂ ಎರಡಲ್ಲ.

ಪ್ರೇಮದ ಇರವನ್ನು ಎಲ್ಲಿ ಕಾಣಬಹುದು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದರೆ ಈ ವಿಚಾರ ಇನ್ನಷ್ಟು ಸ್ಪಷ್ಟವಾಗುತ್ತೆ. ಇಲ್ಲಿಯೂ ನಮಗೆ ಸಿಗುವುದು ಎರಡಲ್ಲದ ಒಂದು ಉತ್ತರ! ಹೌದು, ಮಾಧವ ಜತೆಗಿರುವಾಗ ಪ್ರೇಮಾಭಿವ್ಯಕ್ತಿಯ ಉತ್ಕಟತೆ ಸಾಯುಜ್ಯ ರೂಪದಲ್ಲಿ ಕಾಣಸಿಗುತ್ತದೆ. ಹಾಗೆಯೇ ದೂರವಿರುವಾಗ ಆ ಉತ್ಕಟತೆ ವಿರಹ ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ. ಈ ಎರಡೂ ಸಂದರ್ಭದಲ್ಲಿ ಅದು ಕಾಣುವ ರೂಪವಷ್ಟೇ ಭಿನ್ನ. ಪ್ರೇಮವಲ್ಲದ ಮತ್ಯಾವುದಕ್ಕೂ ಈ ಎರಡಲ್ಲದ ಗುಣವೂ ಅಸಾಧ್ಯ.

ರಾಧೆಯ ಕತೆಯನ್ನು ಜಯದೇವ ಹೇಳುವಾಗ ಸಂಗಮದ ಸ್ವರೂಪದಲ್ಲಿ ಕಾಣುವ ಪ್ರೇಮದ ಅಭಿವ್ಯಕ್ತಿ ನಮಗೆ ಕಾಣಿಸಿತು. ಆದರೆ ಅಕ್ಕ, ಮೀರಾ ಮತ್ತು ರಾಬಿಯಾರ ವಿಷಯಕ್ಕೆ ಬಂದಾಗ ಅದರಲ್ಲಿ ಕಾಣಿಸುವ ಸಾಯುಜ್ಯ ಸ್ವರೂಪ ಬಹಳ ಸುಪ್ತ. ಈ ಮೂವರ ಅಭಿವ್ಯಕ್ತಿಯಲ್ಲೂ ಪ್ರೇಮದ ವಿರಹಾಭಿವ್ಯಕ್ತಿಗೇ ಸ್ವಲ್ಪ ತೂಕ ಹೆಚ್ಚು. ಆದರೆ ರಾಧೆಯಲ್ಲಿ ಇಣುಕುವ ಅಸೂಯಾ ಭಾವವನ್ನು ಈ ಮೂವರೂ ಮೀರಿ ನಿಲ್ಲುತ್ತಾರೆ ಎಂಬುದರಲ್ಲಿ ವಿರಹಾಭಿವ್ಯಕ್ತಿಯ ಔನ್ನತ್ಯವಿದೆ. ಕೃಷ್ಣನ ರಾಜಕಾರ್ಯಕ್ಕಾಗಿ ಅಥವಾ ಅವತಾರ ಅವನ ಮೇಲೆ ಹೇರಿದ ಜವಾಬ್ದಾರಿಯ ನಿರ್ವಹಣೆಗಾಗಿ ರಾಧೆ ತ್ಯಾಗ ಮಾಡುತ್ತಾಳೆ. ಮತ್ತೊಂದರ್ಥದಲ್ಲಿ ಇಲ್ಲಿಯೂ ಪ್ರೇಮ ಶಾಶ್ವತವಾಗುವುದು ಅದರ ವಿರಹ ರೂಪದಲ್ಲೇ.

ಪಾಶ್ಚಾತ್ಯ ಆಸ್ತಿಕ ತಾತ್ವಿಕತೆಯಲ್ಲಿ Unio Mystica ಎಂಬ ಪರಿಕಲ್ಪನೆಯಿದೆ. ಆತ್ಯಂತಿಕವಾದುದರ ಜೊತೆಗೆ ಒಂದಾಗುವುದು ಎಂದು ಇದನ್ನು ವಿವರಿಸಬಹುದು. ‘ಅನುಭಾವ ಸಾಯುಜ್ಯ’ ಎಂಬ ಪರಿಕಲ್ಪನೆಗೆ ಇದು ಹತ್ತಿರವಾಗಿದೆ. ಈ ಹಂತವನ್ನು ತಲುಪುವ ಪ್ರಕ್ರಿಯೆ ಸರಳ ರೇಖಾತ್ಮಕವಾದುದಲ್ಲ. ಅದು ಆವರ್ತಕವಾದ ಚಲನೆ. ಈ ಆವರ್ತನೆಗೆ ಮೂರು ಹಂತಗಳಿವೆ. ಒಂದಾಗುವುದು, ಅಗಲುವುದು ಹಾಗೂ ಮತ್ತೆ ಒಂದಾಗುವುದು. ಒಂದಾಗುವಿಕೆಯಿಂದ ಆಗಲುವಿಕೆಯೆಡೆಗಿನ ಚಲನೆಯು ಅವರೋಹಣಾತ್ಮಕವಾಗಿದ್ದರೆ ಅಲ್ಲಿಂದ ಮುಂದುವರೆಯುವ ಚಲನೆ, ಅರ್ಥಾತ್ ಮತ್ತೆ ಒಂದಾಗುವಿಕೆಯ ಪ್ರಕ್ರಿಯೆ ಆರೋಹಣಾತ್ಮಕವಾಗಿ ಇರುತ್ತದೆ.

ಈ ಆವರ್ತನೆಗಳು ನಿರಂತರ. ಇವುಗಳ ಒಂದೊಂದು ಸುತ್ತು ಮುಗಿದಾಗಲೂ ಪ್ರೇಮದ ಉತ್ಕಟತೆಯ ಕಡೆಗಿನ ಪ್ರಯಾಣ ಸಾಗುತ್ತಿರುತ್ತದೆ. ಪ್ರತೀ ಆವರ್ತನೆಯ ಅವರೋಹಣದಲ್ಲಿ ಆರಂಭವಾಗುವ ವಿರಹವು ಕೊನೆಗೊಳ್ಳುವುದು ಆರೋಹಣದ ಅಂತ್ಯದಲ್ಲಿ. ಅಂದರೆ ಮರು ಒಂದಾಗುವಿಕೆಯಲ್ಲಿ. ಆದರೆ ಆ ಕ್ಷಣವೇ ಮತ್ತೆ ಅವರೋಹಣವೂ ಆರಂಭವನಾಗಿಬಿಡುತ್ತದೆ. ಸಾಯುಜ್ಯದ ಸಂತೋಷವು ಶಾಶ್ವತವಾಗಿಬಿಟ್ದರೆ ಪ್ರೇಮಕ್ಕೆಲ್ಲಿದೆ ಅವಕಾಶ!

ಪ್ರೇಮದ ಅಭಿವ್ಯಕ್ತಿಯ ಅಸಂಖ್ಯ ಸಾಧ್ಯತೆಗಳನ್ನು ತೆರೆದದ್ದು ವಿರಹ ಕಾಲ. ಅನುಭಾವ ಸಾಯುಜ್ಯಕ್ಕೆ ಹಾದಿಯನ್ನು ತೆರದದ್ದೂ ವಿರಹಕಾಲವೇ! ಅದಕ್ಕೇ ಪ್ರೇಮವು ಎರಡಲ್ಲ. ವಿರಹ ಮತ್ತು ಸಾಯುಜ್ಯಗಳೆರಡೂ ಅಭಿವ್ಯಕ್ತಿಯ ಭಿನ್ನ ಮಾರ್ಗಗಳಷ್ಚೇ.

Leave a Reply