ತಿಲೋಪ ಏನು ಹೇಳುತ್ತಿದ್ದಾನೆಂದರೆ, ಬಂಧನಗಳಿಂದ, ಸಂಬಂಧಗಳಿಂದ ದೈಹಿಕವಾಗಿ ದೂರವಾದ ಮಾತ್ರಕ್ಕೆ ಅವುಗಳಿಂದ ಬಿಡಿಸಿಕೊಳ್ಳುವುದು ಸಾಧ್ಯವಿಲ್ಲ. ನಿಮ್ಮ ಬುದ್ದಿ-ಮನಸ್ಸು (mind) ಗಳನ್ನ ನಿನಗೆ ಬೇಕಾದಾಗ ನೀವು ದೂರ ಇಡಬಲ್ಲಿರಾದರೆ, ಆ ಹೊತ್ತಿಗೆ ತ್ಯಜಿಸಬಲ್ಲಿರಾದರೆ, ಆ ಕ್ಷಣದಲ್ಲಿಯೇ ನೀವು ಕಾಡಿನ ಆಳದಲ್ಲಿ ಏಕಾಂಗಿ. ಆಗ ನೀವು ದೈಹಿಕವಾಗಿ ಮಾರ್ಕೆಟ್ ನಲ್ಲಿದ್ದರೂ ಮಾರ್ಕೆಟ್ ನಿಮ್ಮ ಜಗತ್ತಿನಿಂದ ಮಾಯವಾಗಿರುತ್ತದೆ. ನೀವು ನಿಮ್ಮ ಮನೆಯಲ್ಲಿಯೇ ಕುಳಿತಿದ್ದರೂ, ಮನೆ ನಿಮ್ಮ ಜಗತ್ತಿನಿಂದ ಮಾಯವಾಗಿರುತ್ತದೆ. ಕೂಡಲೇ ನೀವು ಕಾಡಿನ ಏಕಾಂತದಲ್ಲಿರುತ್ತೀರಿ ಒಬ್ಬರೇ… ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ
ನೀನು
ದಾರಿಯ ಮೇಲೆ
ಕಾಲಿಡುತ್ತ ಹೋದಂತೆ
ದಾರಿ ತೆರೆದುಕೊಳ್ಳುತ್ತ ಹೋಗುತ್ತದೆ.
ನೀನು
ನಾಶವಾಗುತ್ತ ಹೋದಂತೆ
ಬದುಕು ಹುಟ್ಟುತ್ತ ಹೋಗುತ್ತದೆ.
ನೀನು
ಕಿರಿದಾಗುತ್ತ ಹೋದಂತೆ
ಜಗತ್ತಿಗೆ ನಿನ್ನ ತುಂಬಿಕೊಳ್ಳುವುದು
ಅಸಾಧ್ಯವಾಗುತ್ತ ಹೋಗುತ್ತದೆ.
ಆಗ ಜನ
ನಿನ್ನ ಇರುವನ್ನು ನೋಡುತ್ತಾರೆ
ಆದರೆ ಅಲ್ಲಿ ಇರುವುದಿಲ್ಲ
“ನೀನು”
- ರೂಮಿ
ಒಮ್ಮೆ ಒಬ್ಬ ಮನುಷ್ಯ ತನ್ನ ಹೆಂಡತಿ, ಮಕ್ಕಳು, ಕುಟುಂಬ ಎಲ್ಲವನ್ನೂ ತ್ಯಜಿಸಿ ತಿಲೋಪ ನ ಹತ್ತಿರ ಬಂದ. ಅವನಿಗೆ ತಿಲೋಪನಿಂದ ಸನ್ಯಾಸದ ದಿಕ್ಷೆ ಸ್ವೀಕರಿಸಿ ಅವನ ಶಿಷ್ಯನಾಗುವ ಆಸೆ. ತಿಲೋಪನ ಆಶ್ರಮ ಊರ ಹೊರಗೆ ಇತ್ತು. ಆ ಮನುಷ್ಯ ತಿಲೋಪನ ಆಶ್ರಮಕ್ಕೆ ಒಬ್ಬನೇ ಬಂದಾಗ, ಆಶ್ರಮದಲ್ಲಿ ತಿಲೋಪನೂ ಒಬ್ಬನೇ ಇದ್ದ.
“ ನೀನು ಬಂದದ್ದು ಒಳ್ಳೆಯದು ಆದರೆ ಯಾಕೆ ನಿನ್ನ ಜೊತೆ ಇಷ್ಟೊಂದು ದೊಡ್ಡ ಗುಂಪು?” ಆಶ್ರಮದಲ್ಲಿ ಆ ಮನುಷ್ಯನನ್ನು ನೋಡಿದ ಕೂಡಲೇ ತಿಲೋಪ ಮಾತನಾಡಿದ.
ತಿಲೋಪನ ಮಾತು ಕೇಳಿ ಆಶ್ಚರ್ಯಚಕಿತನಾದ ಆ ವ್ಯಕ್ತಿ ತನ್ನ ಹಿಂದೆ ತಿರುಗಿ ನೋಡಿಕೊಂಡ, ತನ್ನ ಹಿಂದೆ ಯಾವ ಗುಂಪೂ ಇಲ್ಲದಿರುವುದನ್ನ ಖಾತ್ರಿ ಪಡಿಸಿಕೊಂಡ.
“ ಹಿಂದೆ ನೋಡಬೇಡ ನಿನ್ನೊಳಗೆ ನೋಡಿಕೋ, ನಿನ್ನ ಜೊತೆ ಬಂದಿರುವ ಗುಂಪು ಇರುವುದು ಅಲ್ಲಿ, ನಿನ್ನೊಳಗೆ.” ತಿಲೋಪ ಆ ಮನುಷ್ಯನಿಗೆ ತಿಳಿ ಹೇಳಿದ.
ಆಗ ಆ ವ್ಯಕ್ತಿ ಕಣ್ಣು ಮುಚ್ಚಿಕೊಂಡು ಒಮ್ಮೆ ತನ್ನ ಅಂತರಂಗವನ್ನು ಗಮನಿಸಿದ. ಅವನ ಹೆಂಡತಿ ಇನ್ನೂ ಅಲ್ಲೇ ಅಳುತ್ತ ಕೂತಿದ್ದಳು, ಮಕ್ಕಳು ದುಃಖಿತರಾಗಿದ್ದರು, ಕುಟುಂಬದ ಜನ, ಸ್ನೇಹಿತರು, ಎಲ್ಲರೂ ಊರಿನ ಗಡಿಯಲ್ಲಿ ಅವನನ್ನು ಕಳುಹಿಸಿಕೊಡಲು ಬಂದಿದ್ದರು. ಎಲ್ಲರ ಮುಖದಲ್ಲೂ ವಿಷಾದ ಎದ್ದು ಕಾಣುತ್ತಿತ್ತು.
“ ಹೋಗಿ ನಿನ್ನೊಳಗಿರುವ ಆ ಗುಂಪನ್ನೆಲ್ಲ ಬಿಟ್ಟು ಬಾ, ನಾನು ಒಬ್ಬನಿಗೆ ಮಾತ್ರ ದೀಕ್ಷೆ ಕೊಡಬಲ್ಲೆ ಇಡೀ ಗುಂಪಿಗಲ್ಲ.” ತಿಲೋಪ ಮತ್ತೆ ಮಾತನಾಡಿದ.
ಇಲ್ಲ, ತಿಲೋಪನನ್ನು ತಪ್ಪು ತಿಳಿಯಬೇಡಿ, ತಿಲೋಪ ಹೇಳಿದ್ದು ಹಾಗಲ್ಲ, ತಿಲೋಪ ಆ ಮನುಷ್ಯನಿಗೆ ತನ್ನ ಇಡೀ ಜಗತ್ತನ್ನು ತ್ಯಜಿಸಿ ಒಬ್ಬನೇ ಬರಲು ಹೇಳುತ್ತಿಲ್ಲ. ಅವನು ಅಂಥ ಮೂರ್ಖನಲ್ಲ. ತಿಲೋಪ ಎಚ್ಚರದ ಸ್ಥಿತಿಯಲ್ಲಿರುವ ಮನುಷ್ಯ. ತಿಲೋಪ ಏನು ಹೇಳುತ್ತಿದ್ದಾನೆಂದರೆ, ಬಂಧನಗಳಿಂದ, ಸಂಬಂಧಗಳಿಂದ ದೈಹಿಕವಾಗಿ ದೂರವಾದ ಮಾತ್ರಕ್ಕೆ ಅವುಗಳಿಂದ ಬಿಡಿಸಿಕೊಳ್ಳುವುದು ಸಾಧ್ಯವಿಲ್ಲ. ನಿಮ್ಮ ಬುದ್ದಿ-ಮನಸ್ಸು (mind) ಗಳನ್ನ ನಿನಗೆ ಬೇಕಾದಾಗ ನೀವು ದೂರ ಇಡಬಲ್ಲಿರಾದರೆ, ಆ ಹೊತ್ತಿಗೆ ತ್ಯಜಿಸಬಲ್ಲಿರಾದರೆ, ಆ ಕ್ಷಣದಲ್ಲಿಯೇ ನೀವು ಕಾಡಿನ ಆಳದಲ್ಲಿ ಏಕಾಂಗಿ. ಆಗ ನೀವು ದೈಹಿಕವಾಗಿ ಮಾರ್ಕೆಟ್ ನಲ್ಲಿದ್ದರೂ ಮಾರ್ಕೆಟ್ ನಿಮ್ಮ ಜಗತ್ತಿನಿಂದ ಮಾಯವಾಗಿರುತ್ತದೆ. ನೀವು ನಿಮ್ಮ ಮನೆಯಲ್ಲಿಯೇ ಕುಳಿತಿದ್ದರೂ, ಮನೆ ನಿಮ್ಮ ಜಗತ್ತಿನಿಂದ ಮಾಯವಾಗಿರುತ್ತದೆ. ಕೂಡಲೇ ನೀವು ಕಾಡಿನ ಏಕಾಂತದಲ್ಲಿರುತ್ತೀರಿ ಒಬ್ಬರೇ.
ಇದು ಒಳಗಿನ ವಿದ್ಯಮಾನ. ಅಲ್ಲಿಯೂ ಪರ್ವತಗಳಿವೆ, ನದಿಗಳಿವೆ, ಸಾಗರಗಳಿವೆ, ದಟ್ಟ ಕಾಡುಗಳಿವೆ. ತಿಲೋಪ ಬಿಟ್ಟು ಬರಲು ಹೇಳುತ್ತಿರುವುದು ಹೊರಗಿನ ಪರ್ವತಗಳನ್ನ, ಕಾಡುಗಳನ್ನ ಏಕೆಂದರೆ ಅವೆಲ್ಲವೂ ನಿಮ್ಮ ಕನಸಿನ ಭಾಗ. ಹಿಮಾಲಯ ಹೇಗೆ ಒಂದು ಕನಸೋ ಹಾಗೆಯೇ ಪೂನಾದ ಮಾರ್ಕೆಟ್ ಕೂಡ. ನೀವು ಪೂನಾದ ಮಾರ್ಕೆಟ್ ಬಿಟ್ಟು ಹಿಮಾಲಯಕ್ಕೆ ಏಕಾಂತ ಹುಡುಕಿಕೊಂಡು ಬಂದರೆ ಏನೂ ಪ್ರಯೋಜನವಿಲ್ಲ. ಎರಡೂ ನಿಮ್ಮನ್ನು ಕಟ್ಟಿ ಹಾಕುವ ಜಾಗಗಳೇ, ಎರಡೂ ನಿಮ್ಮ ಕನಸಿನ ಭಾಗಗಳೇ.
ನೀವು ಪ್ರವೇಶ ಮಾಡಬೇಕಾದದ್ದು ನಿಮ್ಮ ಒಳಗಿನ ಹಿಮಾಲಯದಲ್ಲಿ, ನೀವು ಹುಡುಕಬೇಕಾಗಿರುವುದು ಅಲ್ಲಿನ ದಟ್ಟ ಕಾಡುಗಳ ಆಳದಲ್ಲಿ, ನಿಜ ಇರುವುದು ಇಲ್ಲಿ, ನಿಮ್ಮ ಅಂತರಾಳದಲ್ಲಿ. ಇದು ನಿಮ್ಮ ನಿಜದ ಹಿಮಾಲಯ ಆ ಹೊರಗಿನದಲ್ಲ. ಈ ಅಂತರಾಳವನ್ನು ಪ್ರವೇಶ ಮಾಡಿದಾಗಲೇ ನಿಮಗೆ ನಿಮ್ಮ ಅಸ್ತಿತ್ವದ ಆಳ ಅಗಲಗಳ, ಎತ್ತರಗಳ ಪರಿಚಯವಾಗುತ್ತದೆ.